ಕನ್ನಡಿ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ. ಬೆಳಗೆದ್ದರೆ ತಮ್ಮ ಮುಖ ನೋಡಿಕೊಳ್ಳುವುದು ಕೆಲವರಿಗೆ ಎಲ್ಲಿಲ್ಲದ ಖುಷಿ ನೀಡುವ ಕೆಲಸ. ಹೀಗೆ ಪ್ರತಿಯೊಬ್ಬರ ದೈನಂದಿನ ಜೀವನದ ಭಾಗವಾಗಿರುವ ಕನ್ನಡಿ ಮನೆಯ ಪ್ರಮುಖ ಗೃಹೋಪಯೋಗಿ ವಸ್ತುಗಳಲ್ಲಿ ಒಂದಾಗಿದೆ. ಹಾಗೇ ವಾಸ್ತುಶಾಸ್ತ್ರದಲ್ಲಿಯೂ ಸಹ ಕನ್ನಡಿಗೆ ಮಹತ್ವ ಇದೆ. ಆದ್ದರಿಂದ ವಾಸ್ತು ಪದ್ಧತಿಯ ಪ್ರಕಾರ ಮನೆಯಲ್ಲಿ ಕನ್ನಡಿಯನ್ನು ಸರಿಯಾದ ರೀತಿಯಲ್ಲಿ ಇಡುವುದೂ ಸಹ ಅತ್ಯಗತ್ಯ.
ಮನೆಯಲ್ಲಿ ಸಂಗ್ರಹಿಸಿ ಇಡುವಂತಹ ಸೌಂದರ್ಯದ ವಸ್ತುಗಳಲ್ಲಿ ಕನ್ನಡಿಯೂ ಸಹ ಒಂದು. ಇದು ಮನೆಯ ಅಲಂಕಾರವನ್ನೂ ಹೆಚ್ಚಿಸುತ್ತದೆ. ಅದರಲ್ಲೂ ಬಹು ವಿನ್ಯಾಸದ ಕನ್ನಡಿಗಳು ಮನೆಗೆ ಮೆರುಗು ತರುತ್ತವೆ. ಮನೆಯಲ್ಲಿರುವವರು ಮತ್ತು ಮನೆಗೆ ಬಂದವರು ನಿಯಮಿತವಾಗಿ ಕನ್ನಡಿಯಲ್ಲಿ ತಮ್ಮ ಮುಖ ನೋಡಿಕೊಂಡೇ ಓಡಾಡುತ್ತಾರೆ.
ವಾಸ್ತು ಶಾಸ್ತ್ರದ ಪ್ರಕಾರ, ನಮ್ಮ ಮನೆಯಲ್ಲಿ ಕನ್ನಡಿಗಳನ್ನು ಇಡುವ ಸ್ಥಳ ನಿಮ್ಮ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಶಕ್ತಿ ಮತ್ತು ಕಾರ್ಯಚಟುವಟಿಕೆಗಳ ಕಾರ್ಯಕ್ಷಮತೆಯ ಮೇಲೆ ಇದು ನೇರ ಪರಿಣಾಮ ಉಂಟು ಮಾಡುತ್ತದೆ. ವಾಸ್ತು ತಜ್ಞ ಡಾ. ಶೆಫಾಲಿ ಗುಪ್ತಾ ಅವರ ಪ್ರಕಾರ, ನೀವು ಮನೆಯಲ್ಲಿ ಕನ್ನಡಿಗಳನ್ನು ಇರಿಸಲು ಕೆಲವು ಉತ್ತಮ ಸಲಹೆಗಳನ್ನು ನೀಡಿದ್ದಾರೆ.
* ನಿಮ್ಮ ಕನ್ನಡಿಗಳನ್ನು ಉತ್ತರ / ಪೂರ್ವ / ಈಶಾನ್ಯ ದಿಕ್ಕಿನಲ್ಲಿ ಇರಿಸಿ ಏಕೆಂದರೆ ಇವುಗಳು ಸಂಪತ್ತಿನ ಅಧಿಪತಿಯಾದ ಕುಬೇರನ ವಾಸಸ್ಥಾನಗಳಾಗಿವೆ. ಈ ಮಂಗಳಕರ ದಿಕ್ಕುಗಳಲ್ಲಿ ಕನ್ನಡಿಯನ್ನು ಇರಿಸಿದಾಗ ಅದು ಯಾವಾಗಲೂ ನಮ್ಮ ಮನೆಗೆ ಧನಾತ್ಮಕ ಶಕ್ತಿಯನ್ನು ತರುತ್ತದೆ.
* ಒಡೆದ ಅಥವಾ ಸೀಳಿದ ಕನ್ನಡಿಯನ್ನು ಮನೆಯಲ್ಲಿ ಇಡಲೇಬೇಡಿ. ಏಕೆಂದರೆ ಅದು ಸಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡುತ್ತದೆ ಮತ್ತು ನಕಾರಾತ್ಮಕ ಶಕ್ತಿಗೆ ಬಲ ತುಂಬುತ್ತದೆ. ಒಡೆದ ಕನ್ನಡಿಯ ಮೇಲೆ ಬೀಳುವ ಬೆಳಕು ನಕಾರಾತ್ಮಕ ಶಕ್ತಿಯನ್ನು ರವಾನಿಸುತ್ತದೆ ಎಂದು ನಂಬಲಾಗಿದೆ. ಇದು ಮನೆಯಲ್ಲಿ ವಾಸಿಸುವ ಸದಸ್ಯರ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.
* ದಕ್ಷಿಣ ಗೋಡೆಯಲ್ಲಿ ಕನ್ನಡಿ ಇಡಬೇಡಿ ಏಕೆಂದರೆ ಇದು ಹಠಾತ್ ಅಪಘಾತಗಳು, ಆರ್ಥಿಕ ನಷ್ಟಗಳು ಮತ್ತು ಗಂಭೀರ ಜೀರ್ಣಕಾರಿ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.
* ಕನ್ನಡಿಯ ಮುಂದೆ ಮಲಗಿದರೆ ಇದು ನಿದ್ರಾಹೀನತೆಯ ಸಾಮಾನ್ಯ ಕಾರಣಗಳಲ್ಲಿ ಒಂದೆಂದು ನಂಬಲಾಗಿದೆ. ಹಾಸಿಗೆಯಲ್ಲಿರುವಾಗ ನಿಮ್ಮ ಚಲನೆಗಳು ಅಥವಾ ಇತರೆ ಯಾರಾದರೂ ಆ ಕನ್ನಡಿಯ ಮುಂದೆ ಓಡಾಡಿದಾಗ ಅದರ ಪ್ರತಿಬಿಂಬ ಬಿದ್ದರೆ ಅದು ನಿಮ್ಮ ಮೆದುಳಿಗೆ ಸಂದೇಶ ರವಾನಿಸುತ್ತದೆ. ಆಗ ನೀವು ನೆಮ್ಮದಿಯಾಗಿ ನಿದ್ರೆ ಮಾಡಲು ಕಷ್ಟವಾಗುತ್ತದೆ ಎಂಬುದನ್ನು ಸೂಚಿಸುತ್ತದೆ.
* ವಕ್ರ ಆಕಾರಗಳ ಕನ್ನಡಿಗಳನ್ನು ಬಳಸಬೇಡಿ. ಏಕೆಂದರೆ ಇದು ಅಸಮತೋಲನದ ವಸ್ತು ಎಂದು ಪರಿಗಣಿಸಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಆಕಾರ ಅಥವಾ ರೂಪದಲ್ಲಿ ಸಮತೋಲನ ಹೊಂದಿರದ ಕನ್ನಡಿಗಳು ನಿಮ್ಮ ಜೀವನದಲ್ಲಿ ಏರುಪೇರು ಉಂಟುಮಾಡಬಹುದು.
* ಎರಡು ಕನ್ನಡಿಗಳನ್ನು ಪರಸ್ಪರರ ಮುಂದೆ ಇಟ್ಟುಕೊಳ್ಳಬೇಡಿ, ಏಕೆಂದರೆ ಅವುಗಳ ನಡುವೆ ಶಕ್ತಿಯು ಹಿಂದಕ್ಕೆ ಮತ್ತು ಮುಂದಕ್ಕೆ ಹರಿಯುತ್ತದೆ ಎಂದು ನಂಬಲಾಗಿದೆ, ಅದು ವಿಶ್ರಾಂತಿ ಅಥವಾ ಶಾಂತಿಯುತ ಜಾಗಕ್ಕೆ ಉತ್ತಮವಲ್ಲ.
* ಕೊಳಕು ನಕಾರಾತ್ಮಕತೆಯನ್ನು ಆಕರ್ಷಿಸುತ್ತದೆ. ಆದ ಕಾರಣ ನಿಮ್ಮ ಮನೆಯ ಕನ್ನಡಿಗಳನ್ನು ಯಾವಾಗಲೂ ಹೊಳೆಯುವಂತೆ ಸ್ವಚ್ಛವಾಗಿಡಿ. ವಾಸ್ತು ಶಾಸ್ತ್ರದ ಪ್ರಕಾರ, ಸಂಪತ್ತನ್ನು ಆಕರ್ಷಿಸಲು ಕನ್ನಡಿಯು ಸ್ಪಷ್ಟವಾದ ಪ್ರತಿಬಿಂಬವನ್ನು ಹೊಂದಿರಬೇಕು.