ಮೂರು ಕಡೆಯ ರಸ್ತೆಗಳು ಸಂದಿಸುವ ಜಾಗಕ್ಕೆ ಎದುರು ನಿವೇಶನ ಅಥವಾ ಮನೆ ಇದ್ದರೆ ಅದನ್ನು ಟಿ ಆಕಾರದ ರಸ್ತೆ ಕುತ್ತು ಎಂದು ಕರೆಯುತ್ತೇವೆ. ಟಿ ಆಕಾರದ ರಸ್ತೆ ಕುತ್ತು ಇರುವ ನಿವೇಶನವನ್ನು ಸಾಮಾನ್ಯವಾಗಿ ಯಾರೂ ಖರೀದಿ ಮಾಡಲ್ಲ. ಒಂದು ವೇಳೆ ಖರೀದಿ ಮಾಡಿ ಮನೆ ಕಟ್ಟಿದರೂ ಅವರು ಸರ್ವತೋಮುಖ ಅಭಿವೃದ್ಧಿ ಕಾಣುವುದಿಲ್ಲ. ಮನೆಯಲ್ಲಿ ಒಂದಲ್ಲಾ ಒಂದು ಸಮಸ್ಯೆ ಎದುರಿಸುತ್ತಲೇ ಇರುತ್ತಾರೆ. ವೇದಿಕ್ ವಾಸ್ತು ಶಾಸ್ತ್ರದ ಪ್ರಕಾರ ಟಿ- ಕುತ್ತು ನಿವೇಶನಕ್ಕೆ ಇರುವ ಪರಿಹಾರ ಕುರಿತು ವಾಸ್ತುತಜ್ಞ ನಯನ್ ಕುಮಾರ್ ಇಲ್ಲಿ ವಿವರಿಸಿದ್ದಾರೆ.
ಟಿ- ಆಕಾರದ ರಸ್ತೆ ಕುತ್ತು:
ಒಂದು ನಿವೇಶನ ಅಥವಾ ಮನೆಗೆ ಮೂರು ದಿಕ್ಕಿನ ರಸ್ತೆಗಳು ಸಂದಿಸುವ ಎದುರಿನಲ್ಲಿ ನಿವೇಶನ ಇದ್ದರೆ ಅದನ್ನು ಟಿ -ಆಕಾರದ ರಸ್ತೆ ಕುತ್ತು ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಬೆಂಗಳೂರಿನ ಲೇಔಟ್ ಗಳಲ್ಲಿ ಗಮನಿಸಿದ್ರೆ ಟಿ- ಆಕಾರದ ರಸ್ತೆ ಕುತ್ತು ಇರುವ ನಿವೇಶನಗಳು ಬಹುತೇಕ ಖಾಲಿ ಇರುತ್ತವೆ. ಒಂದು ವೇಳೆ ಮನೆ ಕಟ್ಟಿದರೂ ಅಲ್ಲಿ ಯಾರೂ ವಾಸ ಮಾಡಿರುವುದಿಲ್ಲ.
ಟಿ- ಆಕಾರದ ರಸ್ತೆ ಕುತ್ತಿನಿಂದ ಆಗುವ ಸಮಸ್ಯೆ:
ಟಿ- ಆಕಾರದ ರಸ್ತೆ ಕುತ್ತು ಇರುವ ನಿವೇಶನ ಅಥವಾ ಮನೆಗೆ ಸದಾ ಋಣಾತ್ಮಕ ಶಕ್ತಿ ಎಂಟ್ರಿ ಕೊಡುತ್ತಿರುತ್ತದೆ. ರಸ್ತೆ ಉದ್ದ ಉರುವಷ್ಟು ಋಣಾತ್ಮಕ ಘಟನೆಗಳು ಘಟಿಸುತ್ತಲೇ ಇರುತ್ತವೆ. ವೇದಿಕ್ ವಾಸ್ತು ಶಾಸ್ತ್ರ ಪ್ರಕಾರ ಟಿ -ಆಕಾರದ ರಸ್ತೆ ಕುತ್ತು ಇರುವ ನಿವೇಶನಕ್ಕೆಅಥವಾ ಮನೆಗೆ ಸದಾ ಋಣಾತ್ಮಕ ಶಕ್ತಿಗಳು ಆವರಿಸಿಕೊಳ್ಳುತ್ತವೆ. ಹೀಗಾಗಿ ಬಹುತೇಕರು ಟಿ- ಆಕಾರದ ರಸ್ತೆ ಕುತ್ತು ಇರುವ ಜಾಗದಲ್ಲಿ ಮನೆ ನಿರ್ಮಿಸುವುದಿಲ್ಲ. ನಿವೇಶನವನ್ನೂ ಖರೀದಿ ಮಾಡಲ್ಲ. ಯಾಕೆಂದರೆ ಇಂತಹ ನಿವೇಶನದಲ್ಲಿ ಪ್ರಾಣ, ಶಕ್ತಿ, ಚೈತನ್ಯ ನಿರಂತರವಾಗಿ ಕುಂಠಿತವಾಗಿರುತ್ತದೆ.
ಟಿ- ಆಕಾರದ ರಸ್ತೆ ಕುತ್ತಿನ ಮನೆಯಲ್ಲಿ ಈ ಸಮಸ್ಯೆ ಪಕ್ಕಾ:
ಟಿ- ಆಕಾರದ ರಸ್ತೆ ಕುತ್ತು ಇರುವ ನಿವೇಶನದಲ್ಲಿ ಕಟ್ಟಡ ನಿರ್ಮಿಸಿದರೆ, ಅಂತಹ ಮನೆಯಲ್ಲಿ ನೆಮ್ಮದಿ ಇರಲ್ಲ. ಅಷ್ಟೈಶ್ವರ್ಯಗಳ ಜತೆಗೆ ಆರೋಗ್ಯ ಕೂಡ ಕುಂಠಿತವಾಗುತ್ತದೆ. ಮನೆಯಲ್ಲಿ ಸಂಬಂಧಗಳು ಹಾಳಾಗಿ ಯಾವಾಗಲೂ ಗಲಾಟೆ ಆಗುತ್ತಿರುತ್ತದೆ. ಯಾರಾದರೂ ಇಂತಹ ಮನೆಗಳಿಗೆ ಬಂದರೆ ಜಾಸ್ತಿ ದಿನ ಉಳಿದುಕೊಳ್ಳುವುದಿಲ್ಲ.
ಟಿ- ಆಕಾರದ ರಸ್ತೆ ಕುತ್ತು ಯಾವ ಕಡೆ ಇದ್ರೆ ಸೇಫ್:
ಟಿ- ಆಕಾರದ ರಸ್ತೆ ಕುತ್ತು ಇರುವ ನಿವೇಶನದಲ್ಲಿ ವಾಸ್ತು ಸರಿಪಡಿಸಿ ಮನೆ ನಿರ್ಮಿಸಬಹುದು. ಶೇ. 100 ರಷ್ಟು ಪರಿಹಾರ ಸಿಗದಿದ್ದರೂ ತಕ್ಕ ಮಟ್ಟಿಗೆ ಅನುಕೂಲವಾಗಲಿದೆ.
ಪೂರ್ವ ಈಶಾನ್ಯ ದಿಕ್ಕಿಗೆ ಟಿ ಆಕಾರದ ರಸ್ತೆ ಕುತ್ತು ಇದ್ರೆ ಸಮಸ್ಯೆ ಎದುರಾಗುವುದಿಲ್ಲ.
ಉತ್ತರ ಈಶಾನ್ಯ ದಿಕ್ಕಿಗೆ ಟಿ- ಆಕಾರದ ರಸ್ತೆ ಕುತ್ತು ಇದ್ದರೂ ಯಾವುದೇ ತೊಂದರೆ ಆಗಲ್ಲ.
ದಕ್ಷಿಣ ಆಗ್ನೇಯ ದಿಕ್ಕಿನ ಕಡೆ ರಸ್ತೆ ಟಿ- ಆಕಾರದ ರಸ್ತೆ ಕುತ್ತು ಇದ್ದರೂ ಏನೂ ಸಮಸ್ಯೆ ಆಗಲ್ಲ.
ಪಶ್ಚಿಮ ವಾಯುವ್ಯ ದಿಕ್ಕಿನಲ್ಲಿ ಟಿ -ಆಕಾರದ ರಸ್ತೆ ಕುತ್ತು ಇದ್ರೆ ತೊಂದರೆ ಇಲ್ಲ.
ಇವುಗಳನ್ನು ಹೊರತು ಪಡಿಸಿ ಬೇರೆ ಯಾವ ದಿಕ್ಕಿಗೆ ರಸ್ತೆ ಕುತ್ತು ಹೊಡೆದರೂ ಸಮಸ್ಯೆ ಆಗುತ್ತದೆ ಎನ್ನುತ್ತದೆ ವಾಸ್ತುಶಾಸ್ತ್ರ.
ಟಿ ಆಕಾರದ ರಸ್ತೆ ಕುತ್ತು ಇದ್ರೆ ಪರಿಹಾರ :
ಯಾವುದೇ ಒಂದು ನಿವೇಶನ ಅಥವಾ ಕಟ್ಟಡಕ್ಕೆ ಟಿ ಆಕಾರದ ರಸ್ತೆ ಕುತ್ತು ಇದ್ರೆ ಅದರಲ್ಲಿ ಈಗಾಗಲೇ ವಾಸ ಮಾಡುತ್ತಿದ್ದರೆ, ಪರಿಹಾರ ಕಾರ್ಯ ಮಾಡಿ ಕಟ್ಟಡಕ್ಕೆ ಎದುರಾಗಿರುವ ಋಣಾತ್ಮಕ ಶಕ್ತಿಗಳನ್ನು ತಡೆಯಬಹುದು. ಅದರ ಪ್ರಕಾರ ಟಿ ಆಕಾರದ ರಸ್ತೆ ಕುತ್ತು ಹೊಡೆಯುವ ಜಾಗದಲ್ಲಿ ಗಣೇಶ ವಿಗ್ರಹ ಪ್ರತ್ಯೇಕವಾಗಿ ಸ್ಥಾಪಿಸಿ ಪ್ರತಿದಿನ ನೈವೇದ್ಯ ಅರ್ಪಣೆ ಮಾಡಿ ಪೂಜೆ ಸಲ್ಲಿಸಬೇಕು. ಇಲ್ಲವೇ ಟಿ ಕುತ್ತು ಇರುವ ಜಾಗದಲ್ಲಿ ಸದಾ ಹಸಿರಾಗಿರುವ ಗಿಡಗಳನ್ನು ನೆಟ್ಟು ಪರಿಹಾರ ಕ್ರಮ ಕೈಗೊಳ್ಳಬಹುದು. ರಸ್ತೆ ಕುತ್ತು ಹೊಡೆಯುವ ಭಾಗದಲ್ಲಿ ಕಾಂಪೌಂಡ್ ಗೋಡೆಯನ್ನು ಉಗುರು ಆಕಾರದಲ್ಲಿ ಕಟ್ಟುವ ಮೂಲಕ ನಿವೇಶನಕ್ಕೆ ಎದುರಾಗುವ ರಸ್ತೆ ಕುತ್ತು ನಕಾರಾತ್ಮಕ ಶಕ್ತಿ ತಡೆಯಬಹುದು. ಇಲ್ಲವೇ ಮನೆ ಕಟ್ಟುವಾಗಲೇ ರಸ್ತೆ ಕುತ್ತು ಇರುವ ಭಾಗದಲ್ಲಿ ಡಂಬಲ್ ಆಕಾರದ ಕಟ್ಟಡ ನಿರ್ಮಾಣ ಮಾಡಿದರೂ ರಸ್ತೆ ಕುತ್ತಿನಿಂದ ಸಮಸ್ಯೆಗಳು ಎದುರಾಗುವುದಿಲ್ಲ ಎಂದು ವಾಸ್ತುತಜ್ಞ ನಯನ್ ಕುಮಾರ್ ತಿಳಿಸಿದ್ದಾರೆ.