ಬೆಂಗಳೂರು, ಡಿ. 14: ವಾಸ್ತು ಪ್ರಕಾರ ಬುದ್ಧನ ಮೂರ್ತಿಯನ್ನು ಮನೆಯ ಯಾವ ದಿಕ್ಕಿನಲ್ಲಿ ಇಡಬೇಕು. ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಶಾಂತಿ ನೆಲೆಸಬೇಕು ಎಂದು ಬಯಸುತ್ತಾರೆ. ವಾಸ್ತು ಪ್ರಕಾರ ಮನೆಕಟ್ಟಿ, ಮನೆಯ ಸುಖ, ಶಾಂತಿ, ನೆಮ್ಮದಿಗೆ ಏನೇನು ಬೇಕೋ ಎಲ್ಲವನ್ನೂ ಮಾಡುತ್ತಾರೆ. ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿ ಬುದ್ಧನ ಮೂರ್ತಿ ಇದ್ದೇ ಇರುತ್ತದೆ. ಬುದ್ಧನು ಶಾಂತಿಯ ಸಂಕೇತ. ಧನಾತ್ಮಕ ಮತ್ತು ಸಾಮರಸ್ಯದ ಕಂಪನ್ನು ಕಾಪಾಡಿಕೊಳ್ಳಲು ಬುದ್ಧನನ್ನು ಮನೆಯಲ್ಲಿ ಇರಿಸಲು ಬಯಸುತ್ತಾರೆ. ವಾಸ್ತು ತಜ್ಞರು ಕೂಡ ಬುದ್ಧನ ವಿಗ್ರಹವನ್ನು ಮನೆಯಲ್ಲಿ ಇರಿಸಲು ಸಲಹೆ ನೀಡುತ್ತಾರೆ. ಸುಂದರವಾದ ಮನೆಗಳಲ್ಲಿ ನಾಜೂಕಾಗಿ ಇರಿಸಲಾಗಿರುವ ಬಹುಮುಖ ಬುದ್ಧನ ಪ್ರತಿಮೆಗಳನ್ನು ನಾವೆಲ್ಲರೂ ನೋಡುತ್ತೇವೆ.
ವಾಸ್ತು ಪ್ರಕಾರ, ಬುದ್ಧನನ್ನು ನಿಮ್ಮ ಮನೆಯ ವಿವಿಧ ಸ್ಥಳಗಳಲ್ಲಿ ಇರಿಸುವುದರಿಂದ ನಿಮ್ಮ ಮಾನಸಿಕ ಆರೋಗ್ಯ ಮತ್ತು ಶಾಂತಿಯ ಮೇಲೆ ಪರಿಣಾಮ ಬೀರುತ್ತದೆ. ಮನಸ್ಸಿನ ಶಾಂತಿ ಎಂಬುದು ನಾವು ವಾಸಿಸುವ ಜಾಗದ ಶಕ್ತಿಗೆ ನೇರವಾಗಿ ಸಂಬಂಧಿಸಿರುತ್ತದೆ. ಮನೆಗೆ ಬುದ್ಧನ ಪ್ರತಿಮೆಯು ಶಾಂತಿ ಮತ್ತು ಸಾಮರಸ್ಯವನ್ನು ತರಲು ಸಹಾಯ ಮಾಡುವ ಅತ್ಯಂತ ವಿಶ್ವಾಸಾರ್ಹ ಐಕಾನ್‌ಗಳಲ್ಲಿ ಒಂದಾಗಿದೆ. ಅಲಂಕಾರ ಮತ್ತು ನಿಯೋಜನೆಯ ವಿಷಯಕ್ಕೆ ಬಂದಾಗ ಉದ್ಭವಿಸುವ ಪ್ರಶ್ನೆಯೆಂದರೆ ಮನೆಯಲ್ಲಿ ಬುದ್ಧನ ಪ್ರತಿಮೆಯನ್ನು ಎಲ್ಲಿ ಇಡಬೇಕು ಮತ್ತು ಏಕೆ? ಈ ನಿಮ್ಮ ಪ್ರಶ್ನೆಗಳಿಗೆ ನಮ್ಮಲ್ಲಿ ಉತ್ತರವಿದೆ.
ನೀವು ಬುದ್ಧನ ಮೂರ್ತಿಯನ್ನು ಹೊಂದಿದ್ದರೆ, ಅದನ್ನು ನಿಮ್ಮ ಮನೆಯ ಈಶಾನ್ಯ ದಿಕ್ಕಿನಲ್ಲಿ ಇರಿಸಿ. ಭಗವಾನ್ ಬುದ್ಧನ ಪ್ರತಿಮೆಯನ್ನು ನೀವು ನಿಮ್ಮ ಮನೆಯಲ್ಲಿ ಇರಿಸಿದಾಗ, ಅದು ನಿಮ್ಮ ಮನೆಗೆ ಶಾಂತಿಯನ್ನು ತರುತ್ತದೆ. ಇದರಿಂದ ನಿಮ್ಮ ಸಂಬಂಧಗಳು, ಮನಸ್ಥಿತಿ ಎಲ್ಲವೂ ಉತ್ತಮವಾಗಿರುತ್ತದೆ.
ಭಗವಾನ್ ಬುದ್ಧನ ಪ್ರತಿಮೆಯನ್ನು ನೆಲದ ಮೇಲೆ ಇಡಬೇಡಿ. ಪ್ರತಿಮೆಯನ್ನು ಯಾವಾಗಲೂ ನಿಮ್ಮ ಕಣ್ಣಿನ ಮಟ್ಟಕ್ಕಿಂತ ಮೇಲಿರಿಸಿ.
ಭಗವಾನ್ ಬುದ್ಧನ ಪ್ರತಿಮೆಯನ್ನು ರೆಫ್ರಿಜರೇಟರ್ ಮೇಲಂತೂ ಎಂದೂ ಇಡಬೇಡಿ. ಅಷ್ಟೇ ಅಲ್ಲದೇ, ದೊಡ್ಡ ಉಪಕರಣಗಳ ಮೇಲೆ ಬುದ್ಧನ ಪ್ರತಿಮೆಯನ್ನು ಇಡುವುದು ಒಳ್ಳೆಯದಲ್ಲ. ದೊಡ್ಡ ವಸ್ತುಗಳು ಧನಾತ್ಮಕ ಕಂಪನಗಳನ್ನು ನಿರ್ಬಂಧಿಸುತ್ತವೆ.
ಪ್ರತಿಮೆಯು ಯಾವಾಗಲೂ ಪೂರ್ವ ದಿಕ್ಕಿಗೆ ಮುಖ ಮಾಡುವಂತೆ ಇಡಿ. ಮೂಲೆಯ ಶಕ್ತಿಯನ್ನು ಉತ್ತೇಜಿಸಲು ನೀವು ಅದನ್ನು ಈಶಾನ್ಯ ದಿಕ್ಕಿನಲ್ಲಿ ಇರಿಸಬಹುದು.
ಬುದ್ಧನ ಪ್ರತಿಮೆಯನ್ನು ಸ್ನಾನಗೃಹ, ಸ್ಟೋರ್ ರೂಂ ಮತ್ತು ಲಾಂಡ್ರಿ ಕೋಣೆಯಲ್ಲಿ ಇಡಬಾರದು. ಪ್ರತಿಮೆಯನ್ನು ಯಾವಾಗಲೂ ಸ್ವಚ್ಛವಾಗಿರುವ ಸ್ಥಳದಲ್ಲಿ ಇರಿಸಿ.
ಬುದ್ಧನ ಪ್ರತಿಮೆ ಮೇಲೆ ಧೂಳು, ಕೊಳಕು ನೆಲೆಸಲು ಬಿಡಬೇಡಿ. ವಾರಕ್ಕೊಮ್ಮೆಯಾದರೂ ಸ್ವಚ್ಛಗೊಳಿಸಿ.
ಭಗವಾನ್ ಬುದ್ಧನ ಪ್ರತಿಮೆಯನ್ನು ರೂಮಿನ ಒಳಭಾಗಕ್ಕೆ ಮುಖ ಮಾಡುವಂತೆ ಇಟ್ಟರೆ, ಅದು ಅದೃಷ್ಟ ಎಂದು ಹೇಳಲಾಗಿದೆ.
ಬುದ್ಧನ ಪ್ರತಿಮೆಯ ಕೆಳಗೆ ಕೆಂಪು ಕಾಗಗದ ತುಂಡನ್ನು ಇಟ್ಟರೆ ಅದೃಷ್ಟ ಒಲಿಯುತ್ತದೆ.
ಅಲಂಕಾರಿಕ ಬುದ್ಧನ ಮೂರ್ತಿಯನ್ನು ಶೋಕೇಸ್ ಗಳಲ್ಲೂ ಇಟ್ಟು, ಬಾಗಿಲನ್ನು ಮುಚ್ಚಬಹುದು.
ನೀವು ಲಿವಿಂಗ್ ರೂಮಿನಲ್ಲಿ ಬುದ್ಧನ ಪ್ರತಿಮೆಗಳನ್ನು ಇರಿಸುವುದಾದರೆ, ಮನೆಯ ಮುಂಬಾಗಿಲನ್ನು ನೋಡುವಂತೆ ಇಡಿ.
ಬುದ್ಧನ ಪ್ರತಿಮೆಯು ನೀವು ಓದುವ ಅಥವಾ ಕಚೇರಿಯಲ್ಲಿ ಇಡುವುದಾದರೆ ಟೇಬಲ್ ಮೇಲೆ ಇಡುವುದು ಸೂಕ್ತ.
ನಿಮ್ಮ ಮನೆಯ ಗಾರ್ಡೆನ್ ಏರಿಯಾದಲ್ಲಿ ಇಡುವುದಾದರೆ, ಮನೆಯನ್ನು ನೋಡುವಂತೆ ಇಡಿ.
ಇನ್ನು ನೀವು ಯೋಗ ಮಾಡುವ ರೂಮಿನಲ್ಲಿ ಅಥವಾ ಮನೆಯ ಯಾವ ಸ್ಥಳದಲ್ಲಿ ಯೋಗ ಅಭ್ಯಾಸ ಮಾಡುತ್ತೀರೋ ಅಲ್ಲಿ ಇರಿಸುವುದು ಒಳ್ಳೆಯದು.
ನಿಮ್ಮ ಕಾರಿನಲ್ಲಿ ಅಲಂಕಾರಿಕ ಬುದ್ಧನ ಆಕೃತಿಯನ್ನು ಇಡುವುದಾದರೆ, ನಿಮ್ಮನ್ನು ಬುದ್ಧ ನೋಡುವಂತೆ ಇಡಿ.
ಕೇವಲ ಪ್ರತಿಮೆಗಳಷ್ಟೇ ಅಲ್ಲದೇ, ಬುದ್ಧನ ಪೇಂಟಿಂಗ್ ಅನ್ನು ಕೂಡ ಮನೆಯ ಗೋಡೆಗೆ ಹಾಕಿಡಬಹುದು.