ಬೆಂಗಳೂರು, ಜ. 04 : ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ ಬಳಕೆದಾರರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರಿಗೆ ಶಹಬ್ಬಾಸ್ ಗಿರಿ ಕೊಟ್ಟಿದ್ದಾರೆ. 2022 ರ ಯುಪಿಐ ವಹಿವಾಟು ವರ್ಷದಲ್ಲಿ ರೂ 12.82 ಟ್ರಿಲಿಯನ್ ತಲುಪಿದ್ದು, ಡಿಸೆಂಬರ್ ಒಂದೇ ತಿಂಗಳಲ್ಲಿ ದಾಖಲೆಯ 7.82 ಶತಕೋಟಿಯನ್ನು ತಲುಪಿದೆ. ಈ ಬಗ್ಗೆ ವ್ಯಕ್ತಿಯೊಬ್ಬರು ಟೀಟ್ ಮಾಡಿದ್ದಾರೆ. ಟ್ವೀಟ್ ಅನ್ನು ಗಮನಿಸಿರುವ ಪ್ರಧಾನಿ ಮೋದಿ ಅವರು ಯುಪಿಐ ವಹಿವಾಟು ಹೆಚ್ಚಳವನ್ನು ಶ್ಲಾಘಿಸಿದ್ದು, ದೇಶದ ಜನತೆಯನ್ನು ಅಭಿನಂದಿಸಿದ್ದಾರೆ. ಡಿಜಿಟಲ್ ಪಾವತಿ ಮಾಡಲು ಉತ್ಸಾಹ ತೋರುತ್ತಿರುವುದಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ನವೆಂಬರ್‌ಗೆ ಹೋಲಿಸಿದರೆ ಡಿಸೆಂಬರ್‌ನಲ್ಲಿನ ವಹಿವಾಟಿನ ಪ್ರಮಾಣವು ಶೇಕಡಾ 7.12 ರಷ್ಟು ಹೆಚ್ಚಾಗಿದೆ. ಅದೇ ಅವಧಿಯಲ್ಲಿ ವಹಿವಾಟಿನ ಮೌಲ್ಯವು ಶೇಕಡಾ 7.73 ರಷ್ಟು ಹೆಚ್ಚಾಗಿದೆ ಎಂದು ದೇಶದ ನಿಯಂತ್ರಣ ಪ್ರಾಧಿಕಾರವಾದ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಮಾಹಿತಿ ನೀಡಿದೆ. NPCI ದತ್ತಾಂಶದ ಪ್ರಕಾರ, 2022 ರಲ್ಲಿ UPI ಬಳಸಿ ಸುಮಾರು 74 ಶತಕೋಟಿ ಮೌಲ್ಯದ 125.94 ಟ್ರಿಲಿಯನ್ ವಹಿವಾಟುಗಳನ್ನು ನಡೆಸಲಾಗಿದೆ. 2021 ರಲ್ಲಿ ಪ್ಲಾಟ್‌ಫಾರ್ಮ್ 38 ಶತಕೋಟಿ ವಹಿವಾಟು ನಡೆದಿದ್ದು, ಒಟ್ಟು 71.54 ಟ್ರಿಲಿಯನ್ ರೂ. ಟ್ರಾನ್ಸ್ಯಾಕ್ಷನ್ ನಡೆದಿದೆ. ಅವುಗಳ ಸರಾಸರಿ ಮೌಲ್ಯವು 76 ಪ್ರತಿಶತದಷ್ಟು ಹೆಚ್ಚಾಗಿದೆ.
2016ರಲಿ ಯುಪಿಐ ಬಳಕೆದಾರರು ಇದ್ದದ್ದಕ್ಕಿಂತಲೂ ಮೂರು ಹೆಚ್ಚು 2019ರಲ್ಲಿ ಏರಿಕೆ ಕಂಡಿತ್ತು. 2020ರಲ್ಲಿ ಯುಪಿಐ ಬಳಕೆದಾರರ ಸಂಖ್ಯೆ ಹೆಚ್ಚಾಗಿತ್ತು. 2022ರಲ್ಲಿ ಡಿಜಿಟಲ್ ಪಾವತಿದಾರರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ. ಎಲ್ಲರೂ ಡಿಜಿಟಲೀಕರಣಕ್ಕೆ ಮಾರು ಹೋಗುತ್ತಿದ್ದು, ಸುಲಭವಾಗಿ ಹಣ ವರ್ಗಾವಣೆ ಮಾಡಲು ಬಯಸುತ್ತಿದ್ದಾರೆ. ಹೀಗಾಗಿ ದಿನ ದಿನಕ್ಕೂ ಡಿಜಿಟಲ್ ಪಾವತಿಗಳು ಹೆಚ್ಚಾಗುತ್ತಿವೆ. ಕ್ಯಾಶ್ ಲೆಸ್ ವಹಿವಾಟು ಹೆಚ್ಚಾಗುತ್ತಿದ್ದು, 381 ಬ್ಯಾಂಕ್ ಗಳು ಈ ಯುಪಿಐ ಮೂಲಕ ಹಣ ವರ್ಗಾವಣೆ ಅವಕಾಶ ಮಾಡಿಕೊಟ್ಟಿವೆ. ಇನ್ನು ಯುಪಿಐ ಮೂಲಕ ವಹಿವಾಟುಗಳು ಹೆಚ್ಚಾಗಲು ಹಲವು ಕಾರಣಗಳಿವೆ. ಸುರಕ್ಷಿತವಾಗಿ ಹಣವನ್ನು ಒಂದು ಅಕೌಂಟ್ ನಿಂದ ಮತ್ತೊಂದು ಖಾತೆಗೆ ವರ್ಗಾಯಿಸಬಹುದು. ಇದಕ್ಕಾಗಿ ಬ್ಯಾಂಕ್ ಗೆ ಹೋಗಬೇಕು, ಬೇರೆ ಬೇರೆಯವರಿಗೆ ಹಣ ವರ್ಗಾಯಿಸಲು ಬೇರೆ ಬೇರೆ ಚಲನ್ ತುಂಬಬೇಕು, ಕ್ಯೂನಲ್ಲಿ ನಿಲ್ಲಬೇಕು ಎಂಬ ತಲೆನೋವೇ ಇಲ್ಲ. ಯುಪಿಐ ಮೂಲಕ ಹಣ ಕಳಿಸಬೇಕಾದವರಿಗೆ ಸುಲಭವಾಗಿ ಹಣ ಕಳಿಸಬಹುದು. ಒಂದೇ ಕ್ಷಣದಲ್ಲಿ ಹಣ ವರ್ಗಾವಣೆಯಾಗುತ್ತದೆ. ಸುರಕ್ಷಿತವಾಗಿಯೂ ಇರುತ್ತದೆ. ಹಾಗಾಗಿ ದಿನ ದಿನಕ್ಕೂ ಯುಪಿಐ ಬಳಕೆ ಹೆಚ್ಚಾಗುತ್ತಿದೆ.
ಯುಪಿಐ ಮೂಲಕ ಹಣ ವರ್ಗಾಯಿಸಲು ಕೇಂದ್ರ ಸರ್ಕಾರವೇ ಭೀಮ್ ಆಪ್ ಅನ್ನು ಅಭಿವೃದ್ಧಿ ಪಡಿಸಿದೆ. ಇದನ್ನು ಹೊರತು ಪಡಿಸಿ ಖಾಸಗಿ ಕ್ಷೇತ್ರದಲ್ಲೂ ಸಾಕಷ್ಟು ಆಪ್ ಗಳು ಚಾಲ್ತಿಯಲ್ಲಿವೆ. ಗೂಗಲ್ ಪೇ, ಫೋನ್ ಪೇ, ವಾಟ್ಸ್ ಅಪ್ ಪೇ ಸೇರಿದಂತೆ ಸಾಕಷ್ಟು ಆಪ್ ಗಳ ಮೂಲಕ ಯುಪಿಐ ಬಳಸಿ ಹಣ ವರ್ಗಾವಣೆ ಮಾಡಬಹುದು. ಇದು ಕ್ಯಾಶ್ ಲೆಸ್ ವ್ಯವಹಾರ ಮತ್ತು ಡಿಜಿಟಲೀಕರಣಕ್ಕೆ ಸಹಾಯವಾಗುತ್ತದೆ. ಕೇಂದ್ರ ಸರ್ಕಾರವೂ ಕೂಡ ಡಿಜಿಟಲ್ ಪಾವತಿಗಳಿಗೆ ಉತ್ತೇಜನ ನೀಡುತ್ತಿದೆ. ಈಗ ಜನರು ಕೂಡ ಡಿಜಿಟಲ್ ಪಾವತಿ ಮಾಡುವುದನ್ನು ಹೆಚ್ಚಿಸುತ್ತಿದ್ದಾರೆ.