22.9 C
Bengaluru
Friday, July 5, 2024

ಉತ್ತರ ಪ್ರದೇಶದಲ್ಲಿ ಶೇ.31ರಷ್ಟು ‘ಶತ್ರುಗಳ ಆಸ್ತಿ’: ಹೀಗೆಂದರೇನು ಗೊತ್ತಾ?

ನವದೆಹಲಿ: ಉತ್ತರ ಪ್ರದೇಶದಲ್ಲಿರುವ ಮೂರನೇ ಒಂದು ಭಾಗದಷ್ಟು ʼಶತ್ರು ಆಸ್ತಿಗಳುʼ ಅಕ್ರಮ ವಶದಲ್ಲಿದ್ದು ಆ ಆಸ್ತಿಗಳ ಅತಿಕ್ರಮಣವನ್ನು ತೆರವುಗೊಳಿಸಲು ಸರ್ಕಾರವು ರಾಜ್ಯದಾದ್ಯಂತ ಕ್ರಮ ಕೈಗೊಳ್ಳಲಿದೆ ಎಂದು ‘ದ ಹಿಂದು’ ವರದಿ ಮಾಡಿದೆ.

ದೇಶ ವಿಭಜನೆ ಸಂದರ್ಭದಲ್ಲಿ ಹಾಗೂ ನಂತರ ಭಾರತ ತೊರೆದು ಪಾಕಿಸ್ತಾನ ಅಥವಾ ಇನ್ನಿತರೆ ದೇಶಗಳಿಗೆ ತೆರಳಿ ಅಲ್ಲಿಯ ಪೌರತ್ವ ಪಡೆದವರ ಆಸ್ತಿ ಭಾರತದಲ್ಲಿದೆ. ಈ ಆಸ್ತಿಗಳನ್ನು ಸರ್ಕಾರ “ಶತ್ರುಗಳ ಆಸ್ತಿ” ಎಂದು ಕರೆಯಲಾಗುತ್ತದೆ. ಇಂಥ ಆಸ್ತಿಗಳ ಮಾಲೀಕತ್ವವನ್ನು ಸರ್ಕಾರಕ್ಕೆ ವರ್ಗಾಯಿಸಲಾಗುತ್ತದೆ. “ಶತ್ರು ಆಸ್ತಿ” (ತಿದ್ದುಪಡಿ ಮತ್ತು ಮೌಲ್ಯೀಕರಣ) ಕಾಯಿದೆ, 2017ರ ಅಡಿಯಲ್ಲಿ ಅವುಗಳನ್ನು ಗುರುತಿಸುವ, ಸಂರಕ್ಷಿಸುವ ಹಾಗೂ ನಿರ್ವಹಿಸುವ ಜವಾಬ್ದಾರಿ ಸರ್ಕಾರದ್ದು.

ಉತ್ತರ ಪ್ರದೇಶ ಸರ್ಕಾರವು ರಾಜ್ಯದಾದ್ಯಂತ ಹರಡಿರುವ ಇಂಥ 5,936 ಆಸ್ತಿಗಳನ್ನು ʼಶತ್ರು ಆಸ್ತಿʼ ಎಂದು ಗುರುತಿಸಿದೆ. ಇದರಲ್ಲಿ 2,250ರಷ್ಟು ಆಸ್ತಿಯನ್ನು ಈಗಾಗಲೇ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡಿರುವ ಆಸ್ತಿಗಳಲ್ಲಿ 1467 ಆಸ್ತಿಗಳು ಮಾಫಿಯಾ ಹಾಗೂ ಇತರರ ವಶದಲ್ಲಿವೆ. ಆದರೆ ಸುಮಾರು 396 ಆಸ್ತಿಗಳು ಸಹ ಆಕ್ರಮಿತರ ಸ್ವಾಧೀನದಲ್ಲಿದೆ. ಈ ಎರಡನ್ನೂ ಸೇರಿಸಿ ಅಂದಾಜು ಶೇ 31ರಷ್ಟು ʼಶತ್ರುಗಳ ಆಸ್ತಿʼ ಅಕ್ರಮ ಅತಿಕ್ರಮಣವಾಗಿದೆ. ಸರ್ಕಾರದ ಮಾಹಿತಿಯ ಪ್ರಕಾರ ಇನ್ನುಳಿದ 424 ಆಸ್ತಿಗಳು ಬಾಡಿಗೆದಾರರ ವಶದಲ್ಲಿದ್ದು, ಹಿಂದಿನ ರಾಜ್ಯ ಸರ್ಕಾರಗಳ ಕಾಲದಿಂದಲೂ ಅತ್ಯಲ್ಪ ದರದಲ್ಲಿ ಬಾಡಿಗೆಗೆ ನೀಡುತ್ತಾ ಬಂದಿದ್ದಾರೆ.

ಶಮಾಲಿ ಜಿಲ್ಲೆಯಲ್ಲಿರುವ 482 ಆಸ್ತಿಗಳಲ್ಲಿ 268 ಆಸ್ತಿಗಳು ಅಕ್ರಮ ವಶದಲ್ಲಿವೆ. ಕೌಶಂಬಿಯಲ್ಲಿ 456 ಶತ್ರು ಆಸ್ತಿಗಳಿದ್ದು ಅದರಲ್ಲಿ 197 ಹಾಗೂ ಸೀತಾಪುರದಲ್ಲಿರುವ 378 ಶತ್ರು ಆಸ್ತಿಗಳಲ್ಲಿ 111 ಆಸ್ತಿಗಳನ್ನು ಅಕ್ರಮವಾಗಿ ಆಕ್ರಮಿಸಿಕೊಳ್ಳಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಉತ್ತರ ಪ್ರದೇಶದ ಮುಖ್ಯ ಮಂತ್ರಿಗಳಾದ ಯೋಗಿ ಆದಿತ್ಯನಾಥ್‌ ಅವರು ಇತ್ತೀಚೆಗೆ ಈ ಕುರಿತು ಗೃಹ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಹಾಗೂ ಅತಿಕ್ರಮಣವಾದ ಪ್ರದೇಶಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಶೀಘ್ರದಲ್ಲೇ ಚಾಲನೆ ನೀಡುವಂತೆ ಸೂಚಿಸಿದ್ದಾರೆ. ತೆರವು ಕಾರ್ಯದ ನಂತರ ನವೀಕರಿಸಿದ ಸ್ಥಿತಿ ಕುರಿತು ವರದಿಯನ್ನು ಸಿದ್ಧಪಡಿಸುವಂತೆಯೂ ತಿಳಿಸಿದ್ದಾರೆ. ಈ ಪ್ರಕ್ರಿಯೆಯ ಮೇಲ್ವಿಚಾರಣೆಗೆ ಪ್ರಧಾನ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳನ್ನು ನೋಡಲ್‌ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.

ರಾಜ್ಯ ಸರ್ಕಾರದ ಪ್ರಕಾರ, ಶತ್ರು ಆಸ್ತಿಗಳಲ್ಲಿ ಬಾಡಿಗೆದಾರರಾಗಿ ದಶಕಗಳಿಂದ ವಾಸವಿರುವವರು ನಾಮ ಮಾತ್ರದ ಅಂದರೆ ಕಡಿಮೆ ಬಾಡಿಗೆಯನ್ನು ಮಾತ್ರ ಪಾವತಿಸುತ್ತಿದ್ದಾರೆ. ಹೀಗಾಗಿ ಅಂತಹ ಆಸ್ತಿಗಳ ಮರುಮೌಲ್ಯಮಾಪನವನ್ನು ನಡೆಸುವುದು ಅನಿವಾರ್ಯವಾಗಿದ್ದು, ಪ್ರಸ್ತುತ ಮಾರುಕಟ್ಟೆ ದರಗಳ ಪ್ರಕಾರ ಈ ಆಸ್ತಿಗಳ ಮರುಮೌಲ್ಯಮಾಪನ ಮಾಡಲು ರಾಜ್ಯ ಸರ್ಕಾರ ನಿರ್ಧಾರವನ್ನು ಕೈಗೊಂಡಿದೆ.

Related News

spot_img

Revenue Alerts

spot_img

News

spot_img