ಬೆಂಗಳೂರು, ಮಾ. 09 : ಗೃಹ ಸಾಲ ಪಡೆಯುವವರಿಗೆ ಸಾಲದ ಪ್ರಯೋಜನಗಳನ್ನು ಪಡೆಯುವ ಬಗ್ಗೆ ಸಾಕಷ್ಟು ಗೊಂದಲಗಳಿರುತ್ತವೆ. ಇನ್ನು ಮೊದಲ ಬಾರಿ ಅಫರ್ಡೆಬಲ್ ವಸತಿ ಖರೀದಿಸುವವರಿಗೆ ಆದಾಯ ತೆರಿಗೆ ಕಡಿತ ಪ್ರಯೋಜನ ಪಡೆಯಲು ಎರಡು ಸೆಕ್ಷನ್ ಗಳಿವೆ. ಅದರಲ್ಲಿ 80ಇಇ ಮತ್ತು 80ಇಇಎ ಸೆಕ್ಷನ್ಗಳ ಮೂಲಕ ಪ್ರಯೋಜನಗಳನ್ನು ಪಡೆಯಬಹುದು. 80ಇಇಎ ಸೆಕ್ಷನ್ ಮೂಲಕ ಪ್ರತಿ ವರ್ಷ ಪ್ರಯೋಜನವನ್ನು ಪಡೆಯಬಹುದು. 2019ರಲ್ಲಿ 80ಇಇಎ ಸೆಕ್ಷನ್ ಅನ್ನು ಪರಿಚಯಿಸಲಾಯ್ತು. ಈ ಸೆಕ್ಷನ್ ಮೂಲಕ ಗೃಹಸಾಲದ ಮೇಲೆ ಪಾವತಿಸುವ ಬಡ್ಡಿದರದ ಮೇಲೆ ಹಣ ಉಳಿತಾಯ ಮಾಡಬಹುದು.
ಸೆಕ್ಷನ್ 80ಇಇಎ ಅಡಿಯಲ್ಲಿ ಪ್ರತಿವರ್ಷ 1.50 ಲಕ್ಷ ರೂ.ವರೆಗೆ ತೆರಿಗೆ ಕಡಿತದ ಪ್ರಯೋಜನವನ್ನು ಪಡೆಯಬಹುದು. ಇದನ್ನು ಸೆಕ್ಷನ್ 24(ಬಿ) ಅಡಿಯಲ್ಲಿ 2 ಲಕ್ಷ ರೂ. ವಿನಾಯಿತಿ ಅನ್ನು ಪಡೆದ ಬಳಿಕವಷ್ಟೇ ಈ ಸೌಲಭ್ಯವನ್ನು ಪಡೆಯಬಹುದಾಗಿದೆ. ಮೊದಲ ಬಾರಿಗೆ 45 ಲಕ್ಷ ರೂ.ಗಿಂತಲೂ ಕಡಿಮೆ ಮೊತ್ತದ ಅಫರ್ಡೆಬಲ್ ಮೆನೆಯನ್ನು ಖರೀದಿಸುತ್ತಿರುವವರಿಗೆ ಆದಾಯ ತೆರಿಗೆ ಪ್ರಯೋಜನ ದೊರೆಯುತ್ತದೆ. ಈ ಪ್ರಯೋಜನವನ್ನು ಪಡೆಯಲು ಆ ವ್ಯಕ್ತಿ ಮತ್ಯಾವುದೇ ರೆಸಿಡೆನ್ಶಿಯಲ್ ಪ್ರಾಪರ್ಟಿಯನ್ನು ಕೂಡ ಹೊಂದಿರಬಾರದು. ಆದರೆ ಈ ಅಫರ್ಡೆಬಲ್ ಮನೆ ಎಂದರೇನು ಎಂದು ಮೊದಲು ನೋಡೋಣ ಬನ್ನಿ.
50 ಲಕ್ಷ ರೂ.ವರೆಗೂ ಬೆಲೆ ಬಾಳುವ ಮನೆಗಳನ್ನು ಅಫರ್ಡೆಬಲ್ ಹೌಸ್ ಎಂದು ಪರಿಗಣಿಸಲಾಗುತ್ತದೆ. ಆದರೆ, 80ಇಇಎ ಸೆಕ್ಷನ್ ಅನ್ನು ಜಾರಿಗೆ ತಂದ ಮೇಲೆ 45 ಲಕ್ಷ ರೂ. ಒಳಗೆ ಬೆಲೆ ಬಾಳುವ ಅಫರ್ಡೆಬಲ್ ಮನೆಗಳು ಎಂದು ಪರಿಗಣಿಸಲಾಗಿದೆ. ಇನ್ನು ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವಾತನ ಹೆಸರಲ್ಲಿ ಯಾವುದೇ ಮನೆ, ಆಸ್ತಿ ಇರಬಾರದು. ಇವರು ಮೊದಲ ಬಾರಿಗೆ ಮನೆಯನ್ನು ಖರೀದಿಸುತ್ತಿರಬೇಕು. ಆದಾಯ ತೆರಿಗೆ ಲೆಕ್ಕಾಚಾರದ ಪ್ರಕಾರ ಮದುವೆಯಾಗದ ಉದ್ಯೋಗಿಗಳನ್ನು ಪ್ರತ್ಯೇಕ ವ್ಯಕ್ತಿ ಎಂದು ಪರಿಗಣಿಸಲಾಗುತ್ತೆ. ಹೀಗೆ ಮದುವೆಯಾಗದ ವ್ಯಕ್ತಿಯ ಪೋಷಕರು ಪ್ರಾಪರ್ಟಿಯನ್ನು ಹೊಂದಿದ್ದರೆ ಅದನ್ನು ವ್ಯಕ್ತಿಯದ್ದು ಎಂದು ಪರಿಗಣಿಸಲು ಸಾಧ್ಯವಿಲ್ಲ.
ಆಗ ಆ ವ್ಯಕ್ತಿ ಖರೀದಿಸುತ್ತಿರುವುದು ಮೊದಲ ಮನೆ ಎಂದು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಇನ್ನು ಗೃಹಸಾಲದ ಬಡ್ಡಿದರದ ಪಾವತಿಗೆ ಪ್ರತಿಯಾಗಿ ಮಾತ್ರವೇ ಕ್ಲೇಮ್ ಮಾಡಲು ಅವಕಾಶವನ್ನು ನೀಡಲಾಗುತ್ತದೆ. ವೈಯಕ್ತಿಕವಾಗಿ ಖರೀದಿಸುವ ವ್ಯಕ್ತಿಗೆ ಮಾತ್ರ ಈ ಸೆಕ್ಷನ್‌ನಡಿ ತೆರಿಗೆ ಕಡಿತದ ಪ್ರಯೋಜನವನ್ನು ನೀಡಲಾಗಿದೆ. ಇನ್ನು ಇದು ಸ್ನೇಹಿತರಿಂದ, ಕುಟುಂಬ ಸದಸ್ಯರಿಂದ ಪಡೆದುಕೊಳ್ಳುವ ಸಾಲವು ಲೆಕ್ಕಕ್ಕೆ ಬರುವುದಿಲ್ಲ. ಬ್ಯಾಂಕ್ ನಿಂದ ಪಡೆದ ಸಾಲಕ್ಕೆ ಮಾತ್ರವೇ ಈ ಸೆಕ್ಷನ್ ಅಡಿಯಲ್ಲಿ ಪ್ರಯೋಜನವನ್ನು ಪಡೆಯಬಹುದು.