ಬೆಂಗಳೂರು, ಅ. 29:
ಯಾವುದೇ ನಿವೇಶನ, ಜಮೀನು ಸೇರಿದಂತೆ ಸ್ಥಿರಾಸ್ತಿ ಖರೀದಿಸಿ ಸಾಕಷ್ಟು ಮಂದಿ ಮೋಸ ಹೋಗುತ್ತಾರೆ. ಆಸ್ತಿ ಖರೀದಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ವಿಧದದಲ್ಲಿ ಜನರಿಗೆ ಟೋಪಿ ಹಾಕಿ ಜೀವನ ಪರ್ಯಂತ ಪರದಾಡುವಂತೆ ಮಾಡುತ್ತಾರೆ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಜನರಿಗೆ ವಂಚಕರು ಮಾತ್ರವಲ್ಲ ವಂಚಕ ಕಂಪನಿಗಳು ಕೂಡ ಹುಟ್ಟಿಕೊಂಡಿವೆ. ಅಂದಹಾಗೆ ನಿವೇಶನ, ಕೃಷಿ ಭೂಮಿ, ವಾಣಿಜ್ಯ ಭೂಮಿ ಯಾವುದೇ ಸ್ಥಿರಾಸ್ತಿ ಖರೀದಿ ಮಾಡುವ ಸಂದರ್ಭದಲ್ಲಿ ನಾನಾ ರೀತಿಯಲ್ಲಿ ಮೋಸ ಮಾಡುತ್ತಾರೆ. ಮೋಸದ ಮಾದರಿಗಳನ್ನು ಇಲ್ಲಿ ವಿವರಿಸಲಾಗಿದೆ.
ಒತ್ತುವರಿ ಜಮೀನು ಮಾರಾಟ:
ಯಾರಿಗೂ ಸೇರಿದ ಭೂಮಿಯನ್ನು ಒತ್ತುವರಿ ಮಾಡಿಕೊಂಡು, ಆ ಆಸ್ತಿಗೆ ನಕಲಿ ದಾಖಲೆ ಸೃಷ್ಟಿಸಿ ವಂಚನೆ ಮಾಡುತ್ತಾರೆ. ಸಾಮಾನ್ಯವಾಗಿ ಯಾರಿಗೂ ಸೇರಿದ ಅಥವಾ ಊರಿನಲ್ಲಿ ಇರದವರ ಜಾಗಕ್ಕೆ ಸಂಬಂಧಿಸಿದಂತೆ ಕಾಂಪೌಂಡ್ ಹಾಕಿರುತ್ತಾರೆ. ಆ ಆಸ್ತಿಗೆ ಸಂಬಂಧಿಸಿದಂತೆ ನಕಲಿ ಅಗ್ರಿಮೆಂಟ್, ಜಿಪಿಎ ಅಥವಾ ಸೇಲ್ ಡೀಡ್ ಮಾಡಿಕೊಂಡು ನನ್ನದೇ ಆಸ್ತಿ ಎಂದು ಬಿಂಬಿಸಿ ಮಾರಾಟ ಮಾಡುತ್ತಾರೆ.
ಸರ್ಕಾರ ಸ್ವಾಧೀನ ಭೂಮಿ ಮಾರಾಟ:
ಸರ್ಕಾರ ಸಾರ್ವಜನಿಕ ಉದ್ದೇಶಕ್ಕಾಗಿ ಸ್ವಾಧೀನ ಪಡಿಸಿಕೊಂಡಿರುವ ಭೂಮಿಗೆ ಪರಿಹಾರ ನೀಡುತ್ತದೆ. ಆಸ್ತಿಯನ್ನು ಭೂ ಸ್ವಾಧೀನಕ್ಕೆ ಒಳಪಟ್ಟಿರುವ ಮಾಹಿತಿಯನ್ನು ಮರೆಮಾಚಿ ಆಸ್ತಿಯ ಮಾಲೀಕ ಜಮೀನನ್ನು ಬೇರೆಯವರಿಗೆ ಮಾರಾಟ ಮಾಡಿ ಹಣ ಸಂಗ್ರಹಿಸಿ ಮೋಸ ಮಾಡುತ್ತಾರೆ. ಇಂತಹ ಸರ್ಕಾರದ ಸ್ವಾಧೀನಕ್ಕೆ ಒಳಪಟ್ಟಿರುವ ಜಮೀನನ್ನು ಯಾವತ್ತಿಗೂ ಯಾರಿಂದಲೂ ಖರೀದಿ ಮಾಡಬಾರದು. ಒಂದು ವೇಳೆ ಸ್ವಾಧೀನಕ್ಕೆ ಒಳಪಟ್ಟ ಜಮೀನು ಸರ್ಕಾರದಿಂದ ಡಿ ನೋಟಿಫಿಕೇಷನ್ ಮಾಡಿ ಅದರ ದಾಖಲೆಗಳು ಕ್ರಮ ಬದ್ಧವಾಗಿದ್ದರೆ ಮಾತ್ರ ಖರೀದಿ ಮಾಡಬೇಕು. ಕೆಲವೊಮ್ಮೆ ಆಸ್ತಿ ಡಿನೋಟಿಫಿಕೇಷನ್ ಗೆ ಸಂಬಂಧಸಿದ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುವ ಸಾಧ್ಯತೆ ಇರುತ್ತದೆ, ಸರ್ಕಾರದ ಭೂ ಸ್ವಾಧೀನ, ಡೀ ನೋಟಿಫಿಕೇಷನ್ ಬಗ್ಗೆ ನೈಜ ದಾಖಲೆಗಳನ್ನು ಪರಿಶೀಲಿಸಬೇಕು.
ಜಂಟಿ ಮಾಲಿಕತ್ವದ ಆಸ್ತಿ ಮಾರಾಟದಲ್ಲಿ ದೋಖಾ: ಸಾಮಾನ್ಯವಾಗಿ ಕೆಲವು ಆಸ್ತಿಗಳು ಇಬ್ಬರ ಹೆಸರಿನಲ್ಲಿ ಇರುತ್ತವೆ. ಇಂತಹ ಸಂದರ್ಭದಲ್ಲಿ ಒಬ್ಬ ಮಾಲೀಕ ಇನ್ನೊಬ್ಬರಿಗೆ ಗೊತ್ತಿಲ್ಲದಂತೆ ನಕಲಿ ವ್ಯಕ್ತಿಯನ್ನು ಬಳಿಸಿಕೊಂಡು ಜಂಟಿ ಮಾಲೀಕತ್ವದ ಆಸ್ತಿಯನ್ನು ಮಾರಾಟ ಮಾಡಿಬಿಡುತ್ತಾರೆ. ಈ ವಿಷಯ ಅರಿತ ಮತ್ತೊಬ್ಬ ಪಾಲುದಾರ ದಾವೆ ಹೂಡಿದರೆ ಜಮೀನು ಖರೀದಿ ಮಾಡಿದವರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಳ್ಳಬೇಕು. ಯಾಕೆಂದರೆ ಆಸ್ತಿಯ ಮಾಲೀಕತ್ವ ಹೋಗಿ ಬಿಡುತ್ತದೆ. ಇಲ್ಲವೇ ಕಾನೂನು ಸಮರ ಮಾಡಬೇಕು. ಕಾನೂನು ಸಮರ ಮಾಡಿ ಅರ್ಧ ಆಸ್ತಿ ಗಳಿಸಿದರೂ ಕೋರ್ಟ್, ವಕೀಲರ ವೆಚ್ಚ ಎಲ್ಲಾ ಸೇರಿಸಿದ್ರೆ ಪಾಲಿಗೆ ಬಂದಿದ್ದು ಮಾರಾಟ ಮಾಡಿದ್ರೂ ಕೊಟ್ಟ ಗಾಸು ಗಿಟ್ಟುವುದಿಲ್ಲ.
ವಿವಾದಿತ ಭೂಮಿ ಮಾರಾಟ:
ಒಂದು ಆಸ್ತಿಗೆ ಸಂಬಂಧಿಸಿದಂತೆ ವಿವಾದ ಇರುತ್ತದೆ. ಲಿಟಿಗೇಷನ್ ಪ್ರಾಪರ್ಟಿ ಅಂತ ಕರೆಯಲ್ಪಡುವ ವಿವಾದಿತ ಜಮೀನು ಅಥವಾ ನಿವೇಶನವನ್ನು ಕಡಿಮೆ ಬೆಲೆಗೆ ಆಫರ್ ನೀಡುವ ಸೋಗಿನಲ್ಲಿ ಮಾರಾಟ ಮಾಡುತ್ತಾರೆ. ಇಂತಹ ವಿವಾದಿತ ಭೂಮಿ ಕೋರ್ಟ್ ನಲ್ಲಿ ನನಗೆ ಆಗಿದೆ ಎಂದು ನಕಲಿ ದಾಖಲೆ ತೋರಿಸಿ ನಂಬಿಸಿ ಟೋಪಿ ಹಾಕುತ್ತಾರೆ.
ಜಮೀನು ತೋರಿಸಿ ಅಡ್ವಾಸ್ ಪಡೆದು ದೋಖಾ :
ರಿಯಲ್ ಎಸ್ಟೇಟ್ ಹೆಸರಿನಲ್ಲಿ ಹುಟ್ಟಿಕೊಂಡಿರುವ ಕೆಲವು ಕಂಪನಿಗಳು ರೈತರ ಬಳಿ ಜಮೀನು ಖರೀದಿ ಸಂಬಂಧ ಬಿಡಿಗಾಸು ಅಡ್ವಾನ್ಸ್ ಕೊಟ್ಟು ಅಗ್ರಿಮೆಂಟ್ ಮಾಡಿಕೊಳ್ಳುತ್ತಾರೆ. ಇಲ್ಲಿ ಲೇಔಟ್ ನಿರ್ಮಾಣ ಮಾಡುತ್ತಿರುವುದಾಗಿ ಪತ್ರಿಕೆಗಳಲ್ಲಿ ದೊಡ್ಡ ದೊಡ್ಡ ಜಾಹೀರಾತು ನೀಡುತ್ತಾರೆ. ಜಾಹೀರಾತು ನಂಬಿ ಹೋಗುವರಿಗೆ ರೈತರ ಜಮೀನು ತೋರಿಸಿ ಮುಂದಿನ ಮೂರು ತಿಂಗಳಲ್ಲಿ ನಿವೇಶನ ನೋಂದಣಿ ಮಾಡಿಕೊಡುತ್ತೇವೆ. ಈಗ ಕೇವಲ ಅಡ್ವಾನ್ಸ್ ಮಾಡಿದರೆ ಸಾಕು. ಉಳಿದ ಹಣ ನೋಂದಣಿ ವೇಳೆ ಕೊಡಿ ಎಂದು ಯಾಮಾರಿಸಿ ನೂರಾರು ಜನರಿಂದ ಲಕ್ಷ ಲಕ್ಷ ಮುಂಗಡ ಹಣ ಪಡೆದುಕೊಂಡು ರಾತ್ರೋ ರಾತ್ರಿ ಪರಾರಿಯಾಗುತ್ತಾರೆ.
ಸುಳ್ಳು ವಿಸ್ತೀರ್ಣ ತೋರಿಸಿ ಮೋಸ : ಒಂದು ನಿವೇಶನದ ವಿಸ್ತೀರ್ಣ ಕೇವಲ 1100 ಚದರಡಿ ಇರುತ್ತದೆ ಅಂದಿಟ್ಟುಕೊಳ್ಳಿ. ಇಲ್ಲವೇ ಕೃಷಿ ಜಮೀನು ಎರಡು ಎಕರೆ ಇತ್ತು ಎಂದಿಟ್ಟುಕೊಳ್ಳೋಣ. ಇದರ ಅಸಲಿ ಮಾಲೀಕ ನಿವೇಶನ 1600 ಚದರಡಿ ಇದೆ ಎಂದು ದಾಖಲೆಗಳಲ್ಲಿ ತೋರಿಸಿ ನೋಂದಣಿ ಮಾಡಿಸಿಕೊಟ್ಟು ಬಿಡುತ್ತಾನೆ.. ದಾಖಲೆಗಳನ್ನು ನೋಡಿ ಜನ ಹಿಂದೆ ಮುಂದೆ ನೋಡದೇ ಖರೀದಿ ಮಾಡುತ್ತಾರೆ. ವಾಸ್ತವದಲ್ಲಿ ಖರೀದಿ ಮಾಡಿದ ಬಳಿಕ ಲೆಕ್ಕ ಹಾಕಿದಾಗ ನಿವೇಶನ ವಿಸ್ತೀರ್ಣ ಇಲ್ಲವೇ ಜಮೀನಿನ ವಿಸ್ತೀರ್ಣ ಕಡಿಮೆ ಇರುತ್ತದೆ. ಈಗಾಗಲೇ ಹಣದ ವಹಿವಾಟು ಮುಗಿದು ಹೋಗಿರುವ ಕಾರಣ ಮತ್ತೆ ಹಣ ವಾಪಸು ಪಡೆಯಲಾಗದು. ಈಗೂ ಸಹ ಮೋಸ ಮಾಡುತ್ತಾರೆ. ಅದರಲ್ಲೂ ಬೆಂಗಳೂರಿನ ಹೊರ ವಲಯದಲ್ಲಿ ಈ ರೀತಿಯ ಮೋಸ ಹೆಚ್ಚಾಗಿದೆ.
ರಾಜಕಾಲುವೆ, ಸರ್ಕಾರಿ ಭೂಮಿ ಮಾರಾಟ: ಸರ್ಕಾರಿ ಗೋಮಾಳ, ರಾಜಕಾಲುವೆ ಸೇರಿದಂತೆ ಸರ್ಕಾರಕ್ಕೆ ಸೇರಿದ ಆಸ್ತಿಗೆ ನಕಲಿ ಮಂಜೂರಾತಿ ದಾಖಲೆಗಳನ್ನು ಸೃಷ್ಟಿಸಿ ಅಂತಹ ಆಸ್ತಿಗಳನ್ನು ಮಾರಾಟ ಮಾಡಿ ಮೋಸ ಮಾಡುತ್ತಾರೆ. ಒಮ್ಮೆ ಸರ್ಕಾರ ತನ್ನ ಆಸ್ತಿ ವಾಪಸು ಪಡೆದಾಗ ಈ ಅಕ್ರಮಗಳು ಬಯಲಿಗೆ ಬರುತ್ತವೆ. ಇಂತಹ ಸಂದರ್ಭದಲ್ಲಿ ಸಂಪೂರ್ಣ ಆಸ್ತಿ ಕಳೆದುಕೊಳ್ಳಬೇಕಾಗುತ್ತದೆ.
ಕೋರ್ಟ್ ವಶಪಡಿಸಿಕೊಂಡ ಆಸ್ತಿ ಮಾರಾಟ:
ಸಾಲ ಮರು ಪಾವತಿ ಮಾಡದೇ, ಅಥವಾ ಇನ್ಯಾವುದೇ ಕಾರಣಕ್ಕೆ ಒಂದು ಆಸ್ತಿಯನ್ನು ನ್ಯಾಯಾಲಯ ಮುಟ್ಟುಗೋಲು ಹಾಕಿಕೊಮಡು ಆದೇಶ ಮಾಡಿರುತ್ತದೆ. ಇಂತಹ ಸಂದರ್ಭದಲ್ಲಿ ನ್ಯಾಯಾಲಯದ ಆದೇಶ, ಪ್ರಕರಣಗಳ ವಿವರವನ್ನು ಮರೆ ಮಾಚಿ ಕೋರ್ಟ್ ಆದೇಶಕ್ಕೆ ಒಳಪಟ್ಟಿರುವ ಜಾಗಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ ಮೋಸ ಮಾಡುತ್ತಾರೆ. ಜನರು ಕಡಿಮೆ ಬೆಲೆಗೆ ಜಮೀನು ಸಿಗುತ್ತಿದೆ ಎಂಬ ಆಸೆಗೆ ಬಿದ್ದು ಮೋಸ ಹೋಗುತ್ತಾರೆ.
ಕೃಷಿ ಜಮೀನು ವಸತಿ ಉದ್ದೇಶಕ್ಕೆ ಮಾರಾಟ:
ಕೆಲವು ವಂಚಕರು ರಿಯಲ್ ಎಸ್ಟೇಟ್ ಹೆಸರಿನಲ್ಲಿ ಕೃಷಿ ಭೂಮಿಯನ್ನು ವಸತಿ ಸೌಲಭ್ಯಕ್ಕೆಂದು ಮಾರಿ ಮೋಸ ಮಾಡುತ್ತಾರೆ. ಭೂ ಪರಿವರ್ತನೆಯ ಆದೇಶಗಳನ್ನು ಸೃಷ್ಟಿಸಿ ಈ ರೀತಿಯ ಮೋಸ ಕೃತ್ಯ ಮಾಡಿ ಜನರಿಗೆ ಮೋಸ ಮಾಡುತ್ತಾರೆ. ಕೃಷಿ ಭೂಮಿಯನ್ನು ವಸತಿ ಉದ್ದೇಶಕ್ಕಾಗಿ ಬಳಸಬೇಕಾದರೆ ಸರ್ಕಾರದಿಂದ ಭೂ ಪರಿವರ್ತನೆ ಮಾಡಬೇಕು. ಜತೆಗೆ ಕೃಷಿ ಭೂಮಿ ಕೃಷಿಯೇತರ ಚಟುವಟಿಕೆಗೆ ಬಳಕೆ ಮಾಡಲು ಸರ್ಕಾರ ಅನುಮತಿ ನಿಡಬೇಕು. ಇದ್ಯಾವ ಪ್ರಕ್ರಿಯೆ ಮಾಡದೇ ಕೃಷಿ ಭೂಮಿಯನ್ನೇ ಕನ್ವರ್ಷನ್ ಭೂಮಿ ಎಂದು ನಂಬಿಸಿ ಮೋಸ ಮಾಡುತ್ತಾರೆ.
ಮಾರ್ಟ್ ಗೇಜ್ ಆಸ್ತಿಗಳ ಮಾರಾಟ:
ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದು, ಅಥವಾ ಯಾರಿಗಾದರೂ ಖಾಸಗಿ ಹಣಕಾಸು ಲೇವಾದೇವಿದಾರರಿಂದ ಅಡಮಾನ ಸಾಲ ಪಡೆದು ಆ ಜಮೀನಿನ ಮೇಲೆ ಹಕ್ಕನ್ನೇ ಕಳೆದುಕೊಂಡಿರುತ್ತಾರೆ. ಅಂತಹ ಜಮೀನನ್ನು ಆಸ್ತಿ ಮಾಲೀಕರು ಇಲ್ಲವೇ ಬ್ರೋಕರ್ ಗಳು ಮಾರಾಟ ಮಾಡಿ ದೋಖಾ ಮಾಡುತ್ತಾರೆ.