#Bribe, #Karnataka Lokayuktha, #BBMP
ಬೆಂಗಳೂರು;ಸ್ಥಿರಾಸ್ತಿಯೊಂದರ ಖಾತೆ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸಲು 1 ಲಕ್ಷದ 25 ಸಾವಿರ ಲಂಚ ಪಡೆದ ಬಿಬಿಎಂಪಿಯ ಕರಿಸಂದ್ರ ವಾರ್ಡ್ 764 ಕಚೇರಿಯ ಇಬ್ಬರು ಸಿಬ್ಬಂದಿಯನ್ನು ಲೋಕಾಯುಕ್ತ ಪೊಲೀಸರು ಬುಧವಾರ ಬಂಧಿಸಿದ್ದು, ಮುಖ್ಯ ಆರೋಪಿಯಾಗಿರುವ ಕಂದಾಯ ನಿರೀಕ್ಷಕ ರಾಜಗೋಪಾಲ್ ಎಂಬುವರು ತಲೆಮರೆಸಿಕೊಂಡಿದ್ದಾರೆ.
ದೂರುದಾರರಿಂದ ಲಂಚದ ಹಣ ಪಡೆದ ಕರಿಸಂದ್ರ ವಾರ್ಡ್ ಕಚೇರಿಯ ಪ್ರಥಮ ದರ್ಜೆ ಸಹಾಯಕ ರಾಘವೇಂದ್ರ ಮತ್ತು ಡೇಟಾ ಎಂಟ್ರಿ ಆಪರೇಟರ್ ಸುರೇಶ್ ಅವರನ್ನು ಲೋಕಾಯುಕ್ತದ ಬೆಂಗಳೂರು ನಗರ ಘಟಕದ ಪೊಲೀಸರು ಬಂಧಿಸಿದ್ದಾರೆ.
ಮೊದಲನೇ ಆರೋಪಿ ರಾಜಗೋಪಾಲ್ ಪತ್ತೆಗೆ ಶೋಧ ಮುಂದುವರಿಸಿದ್ದಾರೆ.ರೋಹಿಣಿ ಎಂಬುವವರು ಕರಿಸಂದ್ರ ವಾರ್ಡ್ ವ್ಯಾಪ್ತಿಯಲ್ಲಿ ಸ್ಥಿರಾಸ್ತಿ ಖರೀದಿಸಿದ್ದರು. ಖಾತೆ ವರ್ಗಾವಣೆ ಪ್ರಕ್ರಿಯೆ ನಡೆಸಲು ಅರುಣ್ ಕುಮಾರ್ ಎಂಬ ವಕೀಲರಿಗೆ ಅಧಿಕಾರ ನೀಡಿದ್ದರು. ವಕೀಲರು ಅವರ ಪರವಾಗಿ ಬಿಬಿಎಂಪಿ ಕಚೇರಿಗೆ ಅರ್ಜಿ ಸಲ್ಲಿಸಿದ್ದರು.ಪ್ರಕ್ರಿಯೆ ಪೂರ್ಣಗೊಳಿಸಲು ₹ 1.25 ಲಕ್ಷ ಲಂಚ ನೀಡುವಂತೆ ಆರೋಪಿಗಳು ಬೇಡಿಕೆ ಇಟ್ಟಿದ್ದರು. ನಂತರ ಭೇಟಿಮಾಡಿ ಮಾತುಕತೆ ನಡೆಸಿದಾಗ ₹ 1 ಲಕ್ಷ ಕೊಡುವಂತೆ ಸೂಚಿಸಿದ್ದರು. ಮಂಗಳವಾರವೂ ವಕೀಲರು ಭೇಟಿಮಾಡಿದ್ದರು. ರಾಘವೇಂದ್ರ ಮತ್ತು ಸುರೇಶ್ ಬಳಿ ಹಣ ತಲುಪಿಸುವಂತೆ ರಾಜಗೋಪಾಲ್ ಸೂಚಿಸಿದ್ದರು.ಈ ಬಗ್ಗೆ ವಕೀಲರು ಲೋಕಾಯುಕ್ತದ ಬೆಂಗಳೂರು ನಗರ ಪೊಲೀಸ್ ಘಟಕಕ್ಕೆ ದೂರು ನೀಡಿದ್ದರು.