ಟಿವಿಎಸ್ ಸಮೂಹ ಸಂಸ್ಥೆಯ ಅಂಗಸಂಸ್ಥೆಯಾದ ಟಿವಿಎಸ್ ಎಮರಾಲ್ಡ್ ರಿಯಲ್ ಎಸ್ಟೇಟ್ ಕಂಪನಿಯು ರಾಜ್ಯ ರಾಜಧಾನಿ, ಸಿಲಿಕಾನ್ ಸಿಟಿ, ರಿಯಲ್ ಎಸ್ಟೇಟ್ ಉದ್ಯಮಗಳ ನೆಚ್ಚಿನ ತಾಣ ಎನಿಸಿಕೊಂಡ ಬೆಂಗಳೂರಿನಲ್ಲಿ ತನ್ನ ಮೊದಲ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಕೂಡ್ಲು ಗೇಟ್ ಬಳಿ ಉದ್ಯಾನ-ಪರಿಕಲ್ಪನೆಯ ಸಮುದಾಯ ವಸತಿ ಯೋಜನೆಗೆ ʻಜಾರ್ಡಿನ್ʼ ಎಂದು ಹೆಸರು ನೀಡಿದೆ. ಸ್ಪ್ಯಾನಿಶ್ ಭಾಷೆಯ ʻಜಾರ್ಡಿನ್ʼ ಪದಕ್ಕೆ ಉದ್ಯಾನ ಎಂಬ ಅರ್ಥ ಇದೆ.
ಆರು ಎಕರೆಗೂ ಅಧಿಕ ವಿಶಾಲ ಪ್ರದೇಶದಲ್ಲಿ ಹರಡಿಕೊಂಡಿರುವ ʻಜಾರ್ಡಿನ್ʼ, ಶೇ 63ರಷ್ಟು ತೆರೆದ ಪ್ರದೇಶ (ಓಪನ್ ಸ್ಪೇಸ್) ಮತ್ತು ಎರಡು ಎಕರೆಗಳಷ್ಟು ಲ್ಯಾಂಡ್‌ಸ್ಕೇಪ್ ಹೊಂದಿದೆ. ಇಲ್ಲಿ ಈಗ 1 ಬಿಎಚ್‌ಕೆ, 2 ಬಿಎಚ್‌ಕೆ ಮತ್ತು 3 ಬಿಎಚ್‌ಕೆ ಮನೆಗಳನ್ನು ವಿತರಿಸಲಾಗುತ್ತಿದೆ.
ಬಸಾಪುರ ಕೆರೆ ವೀಕ್ಷಣೆಯ ವಿಶಾಲ ಕ್ಲಬ್‌ಹೌಸ್, ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಹೆಲ್ತ್ ಕ್ಲಬ್, ಕೋ-ವರ್ಕಿಂಗ್ ಸ್ಥಳಾವಕಾಶ, ವಿಬ್‌ಗಯೋರ್ (VIBGYOR) ಮಾದರಿಯ ಸಸ್ಯಪಾಲನಾಲಯ, ಮಿಯಾವಾಕಿ ಅರಣ್ಯ, ಹಲವು ವಿಧದ ಒಳಾಂಗಣ ಮತ್ತು ಹೊರಾಂಗಣ ಚಟುವಟಿಕೆ ಸೇರಿದಂತೆ ಐವತ್ತಕ್ಕೂ ಅಧಿಕ ಸೌಕರ್ಯಗಳನ್ನು ಈ ಯೋಜನೆಯು ಒದಗಿಸುತ್ತದೆ.
ಒಟ್ಟು ಲಭ್ಯವಿರುವ ಸ್ವತ್ತಿನ ಶೇ 70ರಷ್ಟು ಮೊದಲ ದಿನವೇ ಮಾರಾಟ ಆಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಶೇ 70ರಷ್ಟು ಎಂದರೆ ಸರಿಸುಮಾರು ರೂ.300 ಕೋಟಿ ಮೊತ್ತದ ಸ್ವತ್ತು ಮಾರಾಟವಾಗಿದೆ. ಎಚ್‌ಎಸ್‌ಆರ್ ಲೇಔಟ್, ಕೋರಮಂಗಲ, ಎಲೆಕ್ಟ್ರಾನಿಕ್ ಸಿಟಿ ಅಂತಹ ಪ್ರಮುಖ ಜನಪ್ರಿಯ ಪ್ರದೇಶಗಳಿಗೂ ಹತ್ತಿರವಾಗಿಯೇ ʻಜಾರ್ಡಿನ್ʼ ನಿರ್ಮಾಣಗೊಂಡಿರುವುದು ಈ ಯೋಜನೆಗೆ ಪ್ರಾಮುಖ್ಯತೆ ಸಿಗಲು ಮತ್ತೊಂದು ಮುಖ್ಯ ಕಾರಣ.
ಸಕಾರಾತ್ಮಕ ಸ್ಪಂದನೆ
ʻಟಿವಿಎಸ್ ಎಮರಾಲ್ಡ್ ಜಾರ್ಡಿನ್ ಇದು ಒಂದು ರೀತಿಯ ಉದ್ಯಾನ ಮಾದರಿಯ ವಸತಿ ಯೋಜನೆ ಆಗಿದ್ದು, ಕ್ಷಿಪ್ರವಾಗಿ ಬೆಳವಣಿಗೆ ಕಾಣುತ್ತಿರುವ ಬೆಂಗಳೂರು ಮಹಾನಗರದ ಹೃದಯ ಭಾಗದಲ್ಲಿ ಹಸಿರು ಹುಲ್ಲುಗಾವಲುಗಳ ಐಷಾರಾಮಿ ಜೀವನವನ್ನು ಒದಗಿಸುತ್ತದೆ. ಬೆಂಗಳೂರಿನ ನಮ್ಮ ಮೊದಲ ವಸತಿ ಯೋಜನೆಯನ್ನು ಇಲ್ಲಿನ ಗ್ರಾಹಕರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ ಮತ್ತು ಸಕಾರಾತ್ಮಕ ಸ್ಪಂದನೆ ಸಿಗುತ್ತಿದೆʼ ಎಂದು ಟಿವಿಎಸ್ ಎಮರಾಲ್ಡ್ ಅಧ್ಯಕ್ಷ ಮತ್ತು ಸಿಇಒ ಆಗಿರುವ ಶ್ರೀರಾಮ್ ಐಯ್ಯರ್ ಹರ್ಷ ವ್ಯಕ್ತಪಡಿಸಿದ್ದಾರೆ.
ʻಈ ಹಬ್ಬದ ಋತುವಿನಲ್ಲಿ ವಸತಿ ಯೋಜನೆಗಳಿಗೆ ಗಮನಾರ್ಹವಾಗಿ ಬೇಡಿಕೆ ಹೆಚ್ಚಳ ಆಗುವುದನ್ನು ನಾವು ನಿರೀಕ್ಷಿಸುತ್ತಿದ್ದೇವೆ ಮತ್ತು ಯೋಜನೆ ಪರಿಚಯಿಸಿದ ಆರಂಭಿಕ ದಿನದಿಂದಲೂ ಬೇಡಿಕೆ ಹೆಚ್ಚಳ ಆಗುತ್ತಿರುವುದನ್ನು ನೋಡಿದ್ದೇವೆ. ಅದು ಇನ್ನೂ ಹೆಚ್ಚಳ ಆಗುವ ನಿರೀಕ್ಷೆ ಇದೆʼ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮುಂಬರುವ ತ್ರೈಮಾಸಿಕದಲ್ಲಿ ಚೆನ್ನೈ ಮತ್ತು ಬೆಂಗಳೂರುಗಳಲ್ಲಿ ಟಿವಿಎಸ್ ಎಮರಾಲ್ಡ್ ಸಾಲು ಸಾಲು ಹೊಸ ಯೋಜನೆಗಳನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ.