ಬೆಂಗಳೂರು, ಮಾ. 17 :ಆರ್ಥಿಕ ವರ್ಷದ ಅಂತ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಸಮಯದಲ್ಲಿ ನೀವು ಅನೇಕ ಪ್ರಮುಖ ಕಾರ್ಯಗಳನ್ನು ನಿಭಾಯಿಸಬೇಕು. ಮಾರ್ಚ್ 31 ರ ಮೊದಲು ನೀವು ಈ ಕಾರ್ಯಗಳನ್ನು ನಿಭಾಯಿಸದಿದ್ದರೆ, ನೀವು ಭಾರೀ ನಷ್ಟವನ್ನು ಎದುರಿಸಬೇಕಾಗುತ್ತದೆ.2022-23ನೇ ಹಣಕಾಸು ವರ್ಷ ಮಾರ್ಚ್ 31ಕ್ಕೆ ಮುಕ್ತಾಯವಾಗಲಿದೆ.ಎಲ್ಲ ಹಣಕಾಸು ವ್ಯವಹಾರಗಳಿಗೂ ಇದು ನಿರ್ಣಾಯಕ ಘಟ್ಟ ಮತ್ತು ಗಡುವು.ನಿಮ್ಮ ಉದ್ಯಮ ಹಾಗೂ ಆದಾಯಕ್ಕೆ ಸಂಬಂಧಿಸಿ ಕೆಲವು ಪ್ರಮುಖ ಕೆಲಸಗಳನ್ನು ಈ ತಿಂಗಳಲ್ಲಿ ಮಾಡಿ ಮುಗಿಸಲೇಬೇಕಾದ ಅನಿವಾರ್ಯತೆಯಿದೆ.
ನಿರ್ದಿಷ್ಟ ಸಮಯದೊಳಗೆ ಈ ಕೆಲಸಗಳನ್ನು ಮಾಡಿ ಮುಗಿಸದಿದ್ರೆ ದಂಡ ಪಾವತಿಸುವ ಜೊತೆಗೆ ಸಮಸ್ಯೆಗಳನ್ನು ಕೂಡ ಎದುರಿಸಬೇಕಾಗುತ್ತದೆ. ಇದರಿಂದ ತೆರಿಗೆ ಭಾರ ತಗ್ಗಿ ಹಣ ಉಳಿತಾಯವಾಗುತ್ತದೆ. ಇನ್ನು ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಲು ಮಾ.31 ಅಂತಿಮ ಗಡುವಾಗಿದೆ. ಇದು ಕೂಡ ಬಹುಮುಖ್ಯ ಕೆಲಸವಾಗಿದ್ದು, ನೀವಿನ್ನು ಮಾಡಿಲ್ಲವಾದ್ರೆ ತಕ್ಷಣ ಮಾಡಿ ಮುಗಿಸಿ. ಇನ್ನು ಅಡ್ವಾನ್ಸ್ ತೆರಿಗೆ ಪಾವತಿ ಗಡುವು ಕೂಡ ಈ ತಿಂಗಳಿನಲ್ಲೇ ಇದೆ. ಈ ಎಲ್ಲ ಕೆಲಸಗಳನ್ನು ಈ ತಿಂಗಳಲ್ಲಿ ಮಾಡಿ ಮುಗಿಸದಿದ್ರೆ ಜೇಬಿನ ಮಲಿನ ಹೊರೆ ಹೆಚ್ಚುವ ಜೊತೆಗೆ ಮುಂದಿನ ದಿನಗಳಲ್ಲಿ ವಿವಿಧ ಕೆಲಸಗಳಿಗೆ ಅಡಚಣೆ ಕೂಡ ಎದುರಾಗಲಿದೆ.
ಇಲ್ಲಿದೆ ನೋಡಿ ಮಾರ್ಚ್ 31ರೊಳಗೆ ನೀವು ಬಹುಮುಖ್ಯವಾಗಿ ಮಾಡಬೇಕಾದ ಕೆಲಸಗಳು..
1.ಪ್ಯಾನ್-ಆಧಾರ್ ಲಿಂಕ್ ಮಾಡುವುದು ಕಡ್ಡಾಯ: ;ಆದಾಯ ತೆರಿಗೆ ಇಲಾಖೆ ಆಧಾರ್ ಜೊತೆಗೆ ನಿಮ್ಮ ಕಾಯಂ ಖಾತೆ ಸಂಖ್ಯೆಯನ್ನು (ಪ್ಯಾನ್ ) ಮಾ.31ರೊಳಗೆ ಕಡ್ಡಾಯವಾಗಿ ಜೋಡಣೆ ಮಾಡುವಂತೆ ತಿಳಿಸಿದೆ. ಈಗ ನೀವು ಆಧಾರ್ ಹಾಗೂ ಪ್ಯಾನ್ ಕಾರ್ಡ್ ಲಿಂಕ್ ಮಾಡಲು 1000ರೂ. ದಂಡ ಪಾವತಿಸಬೇಕು. ಒಂದು ವೇಳೆ ಅಂತಿಮ ಗಡುವಿನೊಳಗೆ ಆಧಾರ್-ಪ್ಯಾನ್ ಲಿಂಕ್ ಮಾಡದಿದ್ರೆ ಏಪ್ರಿಲ್ 1 ರಿಂದ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳ್ಳಲಿದೆ. ಒಮ್ಮೆ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಂಡರೆ ನಿಮಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡಲು ಸಾಧ್ಯವಾಗೋದಿಲ್ಲ. ಡಿಮ್ಯಾಟ್ ಖಾತೆ,ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಲು ಸಾಧ್ಯವಾಗೋದಿಲ್ಲ.
2.ತೆರಿಗೆ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ
ಪಿಪಿಎಫ್, ಸುಕನ್ಯಾ ಸಮೃದ್ಧಿ ಯೋಜನೆ, ನಿಶ್ಚಿತ ಠೇವಣಿ ಗಳಲ್ಲಿ ಹಣ ಹೂಡಿಕೆ ಮಾಡಿ. ಈ ಮೂಲಕ ನಿಮ್ಮ ತೆರಿಗೆ ಉಳಿತಾಯದ ಲಾಭ ಪಡೆಯಿರಿ.ಸಣ್ಣ ಉಳಿತಾಯ ಯೋಜನೆಗಳೂ ಸಹಕಾರಿ. ಇದು ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್. ಹೆಚ್ಚಿನ ರಿಟರ್ನ್ಸ್ ನೀಡುವ ಸಾಮರ್ಥ್ಯ ಇದಕ್ಕಿದೆ. ಇದರಲ್ಲಿ ಹೂಡಿಕೆ ಮಾಡುವುದು ಕೂಡ ಸರಳ.ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್): ಇದರ ರಿಟರ್ನ್ಸ್ ತೆರಿಗೆಮುಕ್ತ ಆಗಿದೆ. ಆದರೆ ನಿಧಾನವಾಗಿ ಬಡ್ಡಿ ದರ ಕಡಿಮೆ ಆಗುತ್ತಿದೆ. ಬದಲಾಗುವ ಬಡ್ಡಿ ದರ ಇನ್ನಷ್ಟು ಕಡಿಮೆ ಆಗಬಹುದು.
3.ಮ್ಯೂಚ್ಯುಯಲ್ ಫಂಡ್ಗಳ ನಾಮನಿರ್ದೇಶನ ಪ್ರಕ್ರಿಯೆ
ಹೂಡಿಕೆದಾರರಿಗೆ ಮ್ಯೂಚುಯಲ್ ಫಂಡ್ ಒಂದು ವರದಾನವಾಗಿದೆ. ಯಾರಿಗೆ ವೇಳೆಯಿದೆ ಆದರೆ ಷೇರು ಮಾರುಕಟ್ಟೆಯ ಬಗ್ಗೆ ಹೆಚ್ಚಿನ ಪ್ರಾಕ್ಟಿಕಲ್ ಅನುಭವವಿಲ್ಲ ಅಂತಹವರೂ ಕೂಡ ಪ್ರಾರಂಭಿಕ ಹಂತದಲ್ಲಿ ಮ್ಯೂಚುಯಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುವುದು ಉತ್ತಮ. ಮಾರುಕಟ್ಟೆ ಹೇಗೆ ನಡೆಯುತ್ತದೆ , ಬದಲಾಗುತ್ತದೆ ಇತ್ಯಾದಿಗಳ ಸ್ಥೂಲ ಚಿತ್ರಣ ಇದರಿಂದ ಸಿಗುತ್ತದೆ. ಯಾವುದೇ ಮ್ಯೂಚ್ಯುಯಲ್ ಫಂಡ್ಗಳಲ್ಲಿ ಹೂಡಿಕೆ ಮಾಡುವವರು ಮಾರ್ಚ್ 31ರೊಳಗೆ ಅದರ ನಾಮನಿರ್ದೇಶನ ಪ್ರಕ್ರಿಯೆ ಮುಗಿಸಿರುವುದು ಕಡ್ಡಾಯ
4.ಆದಾಯ ತೆರಿಗೆ ವಿನಾಯಿತಿಗಾಗಿ ಹೂಡಿಕೆ:
ಆದಾಯ ತೆರಿಗೆ ವಿನಾಯಿತಿಯ ಲಾಭ ಪಡೆಯಲು ನೀವು ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ, ನೀವು ಮಾರ್ಚ್ 31 ರೊಳಗೆ ಹೂಡಿಕೆ ಮಾಡಬೇಕು ಎಂದು ತಿಳಿದಿರಬೇಕು. ವಾಸ್ತವವಾಗಿ, ತೆರಿಗೆ ವಿನಾಯಿತಿಯ ಪ್ರಯೋಜನವು 80C ಮತ್ತು 80D ನಂತಹ ಆದಾಯ ತೆರಿಗೆ ಕಾಯ್ದೆಯ ಹಲವಾರು ವಿಭಾಗಗಳ ಅಡಿಯಲ್ಲಿ ಮಾಡಿದ ಹೂಡಿಕೆಗಳ ಮೇಲೆ ಮಾತ್ರ ಲಭ್ಯವಿದೆ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ, ರೂ. 1.5 ಲಕ್ಷದವರೆಗಿನ ಹೂಡಿಕೆಗಳ ಮೇಲೆ ತೆರಿಗೆ ವಿನಾಯಿತಿ ಲಭ್ಯವಿದೆ.
5.ಪ್ರಧಾನಮಂತ್ರಿ ವಯೋ ವಂದನಾ ಯೋಜನೆ (PMVVY):
ಇದು ವಿಮೆ ಹಾಗೂ ಪಿಂಚಣಿ ಎರಡನ್ನೂ ಒಳಗೊಂಡಿರುವ ಯೋಜನೆಯಾಗಿದ್ದು, ಹಿರಿಯ ನಾಗರಿಕರಿಗೆ ಆರ್ಥಿಕ ಭದ್ರತೆ ಒದಗಿಸುತ್ತದೆ. ಭಾರತೀಯ ಜೀವ ವಿಮಾ ನಿಗಮ (ಎಲ್ ಐಸಿ) ಈ ಪಿಂಚಣಿ ಯೋಜನೆಯನ್ನು ಒದಗಿಸುತ್ತಿದೆ. ಹಿರಿಯ ನಾಗರಿಕರು ಇದರಲ್ಲಿ 15ಲಕ್ಷ ರೂ. ತನಕ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಹೂಡಿಕೆ ಮಾಡಲು 2023ರ ಮಾ.31ರ ತನಕ ಅವಕಾಶವಿದೆ. 10 ವರ್ಷಗಳ ಅವಧಿಗೆ ಪಿಎಂವಿವಿವೈ ಶೇ.7.4ರಷ್ಟು ಬಡ್ಡಿದರ ನೀಡುತ್ತದೆ. ಪಿಂಚಣಿಯನ್ನು ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕವಾಗಿ ಪಡೆಯಲು ಅವಕಾಶವಿದೆ.
6.ತಡವಾಗಿ ಮತ್ತು ಪರಿಷ್ಕೃತ ರಿಟರ್ನ್ಸ್ ಫೈಲ್ ಮಾಡಿ:
ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸಲು ಕೊನೆಯ ದಿನಾಂಕವೂ ಮಾರ್ಚ್ 31 ಆಗಿದೆ. ತಡವಾದ ಅಥವಾ ತಿದ್ದುಪಡಿ ಮಾಡಿದ ಫೈಲಿಂಗ್‌ಗೆ ಇದು ಕೊನೆಯ ದಿನಾಂಕವಾಗಿದೆ. ಅಂದರೆ, ಇದರ ನಂತರ ನೀವು ITR ಅನ್ನು ಸಲ್ಲಿಸಲು ಅವಕಾಶವಿರುವುದಿಲ್ಲ. ಹಣಕಾಸಿನ ವರ್ಷಕ್ಕೆ ರಿಟರ್ನ್ಸ್ ಸಲ್ಲಿಸಲು ಮೂಲ ಗಡುವು ಮುಗಿದ ನಂತರ ತಡವಾದ ರಿಟರ್ನ್ ಅನ್ನು ಸಲ್ಲಿಸಲಾಗುತ್ತದೆ. ಯಾರಾದರೂ ಇದನ್ನು ಮಾಡದಿದ್ದರೆ, ಅವರು ಇದಕ್ಕಾಗಿ 10 ಸಾವಿರ ರೂಪಾಯಿ ದಂಡವನ್ನು ಪಾವತಿಸಬೇಕಾಗುತ್ತದೆ.