24.6 C
Bengaluru
Wednesday, December 18, 2024

Part-1:Land Acquisition Act: ಭೂ ಸ್ವಾಧೀನದಿಂದ ನಿಮ್ಮ ಭೂಮಿ ರಕ್ಷಿಸಿಕೊಳ್ಳಬೇಕೆ ? ಈ ಕಾನೂನು ಅಂಶ ತಿಳಿದಿದ್ದರೆ ಸಾಕು!

#Land #law # Land Acquisition act #The Right to Fair Compensation and transparency in Land Acquisition, Rehabilitation and Resettlement act 2013

ಬೆಂಗಳೂರು, ನ. 07: ಸರ್ಕಾರ ಜನ ಕಲ್ಯಾಣ ಯೋಜನೆಗಳಿಗಾಗಿ ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುತ್ತದೆ. ಹೆದ್ದಾರಿ, ನದಿ ಕಾಲುವೆ, ಕೈಗಾರಿಕೆ ವಲಯ, ವಿಮಾನ ನಿಲ್ದಾಣ ಮತ್ತಿತರ ಮೂಲ ಸೌಕರ್ಯಕ್ಕಾಗಿ ರೈತರ ಜಮೀನನನ್ನು ಸರ್ಕಾರ ಸ್ವಾಧೀನ ಪಡಿಸಿಕೊಂಡು ಪರಿಹಾರ ಹಣವನ್ನು ನೀಡುತ್ತದೆ. ವಾಸ್ತವದಲ್ಲಿ ಸ್ವಾಧೀನಕ್ಕೆ ಒಳಗಾದ ಭೂಮಿಗೆ ರೈತರಿಗೆ ಸರ್ಕಾರ ನೀಡುವ ಬೆಲೆಗೂ ಅದರ ಮಾರುಕಟ್ಟೆ ಬೆಲೆಗೂ ಅಜಗಜಾಂತರ ವ್ಯತ್ಯಾಸ ಇರುತ್ತದೆ. ಇದರಿಂದಾಗಿ ಭೂ ಸ್ವಾಧೀನ ವಿರುದ್ಧ ರೈತರು ದಂಗೆ ಎದ್ದ ಉದಾಹರಣೆಗಳು ರಾಜ್ಯದಲ್ಲಿದೆ. ಅನೇಕ ಭೂ ಸ್ವಾಧೀನ ಪ್ರಕರಣಗಳಲ್ಲಿ ಅನ್ಯಾಯಕ್ಕೆ ಒಳಗಾದ ರೈತರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಇನ್ನೂ ಅನೇಕ ಯೋಜನೆಗಳಲ್ಲಿ ಭೂ ಸ್ವಾಧೀನದಲ್ಲಿಯೇ ಅಕ್ರಮ ಎಸಗಿ ಮಧ್ಯವರ್ತಿಗಳು ಲಾಭ ಮಾಡಿಕೊಂಡಿರುವ ಘಟನೆಗಳು ಜರುಗಿವೆ. ಭೂ ಸ್ವಾಧೀನದಲ್ಲಿ ಪಾರದರ್ಶಕತೆ ತರಲು, ಭೂಮಿ ಕಳೆದುಕೊಂಡವರಿಗೆ ನ್ಯಾಯಯುತ ಪರಿಹಾರ ನೀಡಲು ಕೇಂದ್ರ ಸರ್ಕಾರ 2013 ರಲ್ಲಿ ಭೂ ಸ್ವಾಧೀನ ಕಾಯಿದೆಯನ್ನು ಜಾರಿಗೆ ತಂದಿದೆ. ಈ ಕಾಯಿದೆಯನ್ನು ಕಟ್ಟು ನಿಟ್ಟಾಗಿ ಪಾಲಿಸಿದರೆ ರೈತರು ಅನ್ಯಾಯಕ್ಕೆ ಒಳಗಾಗುವ ಪ್ರಸಂಗ ಎದುರಾಗುವುದಿಲ್ಲ. ಸರ್ಕಾರ ಕೂಡ ಬೇಕಾಬಿಟ್ಟಿ ಭೂ ಸ್ವಾಧೀನ ಪಡಿಸಿಕೊಳ್ಳಲು ಸಾಧ್ಯವಿಲ್ಲ. 2014 ರಿಂದ ಜಾರಿಗೆ ಬಂದಿರುವ ಭೂ ಸ್ವಾಧೀನ ಕಾಯಿದೆಯ ಅಂಶಗಳ ಕುರಿತು ಸರಿಯಾಗಿ ತಿಳಿದುಕೊಂಡರೆ ಭೂಮಿ ಕಳೆದುಕೊಂಡವರು ಪಾರದರ್ಶಕ ನ್ಯಾಯ ಪಡೆಯಬಹುದು ಇಲ್ಲವೇ ಭೂ ಸ್ವಾಧೀನ ಪ್ರಕ್ರಿಯೆಯನ್ನು ರದ್ದು ಪಡಿಸುವ ಅವಕಾಶ ಕಾಯಿದೆಯಲ್ಲಿದೆ. ಹೀಗಾಗಿ ಭೂ ಸ್ವಾಧೀನ ಕಾಯಿದೆ ಕುರಿತ ಸಮಗ್ರ ಕಾನೂನು ಅಂಶಗಳನ್ನು ಇಲ್ಲಿ ವಿವರಿಸಲಾಗಿದೆ.

ಈ ಹಿಂದೆ ಭಾರತದಲ್ಲಿ ಜಾರಿಯಲ್ಲಿದ್ದ Land Acquisition act 1894 ರ ಬದಲಿಗೆ ದೇಶದಲ್ಲಿ The Right to Fair Compensation and transparency in Land Acquisition, Rehabilitation and Resettlement act 2013 ಜಾರಿಗೆ ತರಲಾಗಿದೆ.

ಈ ಕಾಯಿದೆಯ ಮೂಲ ಉದ್ದೇಶ ಭೂಮಿ ಕಳೆದುಕೊಂಡ ರೈತರ ಹಿತ ಕಾಯುವುದು. ಅಲ್ಲದೇ ಭೂ ಸ್ವಾಧೀನಕ್ಕೆ ಒಳಗಾದ ರೈತರಿಗೆ ಪರಿಹಾರ ನೀಡುವುದು. 2013 ಡಿಸೆಂಬರ್‌ 31 ರಂದು ನೂತನ ಭೂ ಸ್ವಾಧೀನ ಮಸೂದೆಗೆ ರಾಷ್ಟ್ರಪತಿ ಅಂಗೀಕಾರ ದೊರೆಯಿತು. 2014 ರಿಂದ ಜಾರಿಗೆ ಬಂದಿದೆ. 120 ವರ್ಷಗಳ ಹಿಂದಿನ ಭೂ ಸ್ವಾಧೀನ ಕಾಯಿದೆಯಲ್ಲಿನ ಲೋಪಗಳನ್ನು ಸರಿ ಪಡಿಸಲಾಗಿದೆ.

The Right to Fair Compensation and transparency in Land Acquisition, Rehabilitation and Resettlement act 2013

ನೂತನ ಭೂ ಸ್ವಾಧೀನ ಕಾಯಿದೆ ಇತಿಹಾಸ: ಭೂ ಸ್ವಾಧೀನ ಪರಿಹಾರ ರೀ ಸೆಟ್ಲ್‌ಮೆಂಟ್ ಬಿಲ್ ನ್ನು ಮೊದಲು 2011 ರಲ್ಲಿ ಲೋಕಸಭೆಯಲ್ಲಿ ಮಂಡಿಸಲಾಯಿತು. 2013, Aug 29 ರಂದು ಲೋಕಸಭೆ ಅನುಮೋದನೆ ನೀಡಿತು. ಸೆ. 4 ರಂದು ರಾಜ್ಯಸಭೆಯಲ್ಲಿ ಮಂಡನೆ ಮಾಡಲಾಯಿತು. ಸೆ. 27 ರಂದು ರಾಷ್ಟ್ರಪತಿ ಅಂಕಿತ ಪಡೆದು ಜನವರಿ 1 , 2014 ಜ. 1 ರಿಂದ ಜಾರಿಗೆ ಬಂತು. 2015 ರಲ್ಲಿ ಈ ಕಾಯಿದೆಗೆ ತಿದ್ದುಪಡಿ ತರಲಾಗಿದೆ.

ಇದಕ್ಕೂ ಮೊದಲು 2007 ರಲ್ಲಿ ಯುಪಿಎ ಸರ್ಕಾರ ಈ ಬಿಲ್‌ ಜಾರಿಗೆ ತರಲು ಪ್ರಸ್ತಾಪಿಸಿತ್ತು. ಲೋಕಸಭೆ ಮತ್ತು ರಾಜ್ಯ ಸಭೆಯಲ್ಲಿ ಮಸೂದೆ ಮಂಡಿಸಲಾಯಿತಾದರೂ ಅಂಗೀಕಾರವಾಗಲಿಲ್ಲ. ಆನಂತರ ರಾಷ್ಟ್ರೀಯ ಸಲಹಾ ಮಂಡಳಿ ಶಿಫಾರಸು ಅಧರಿಸಿ ಭೂ ಸ್ವಾಧೀನ ಕಾಯಿದೆ ಹಾಗೂ ಭೂ ಪರಿಹಾರ ಕಾಯಿದೆಯ ಅಂಶಗಳನ್ನು ಒಗ್ಗೂಡಿಸಿ 2013 ರಲ್ಲಿ ಮಸೂದೆ ಮಂಡಿಸಿ ಅಂಗೀಕಾರ ಪಡೆಯಲಾಯಿತು.

ಕಾಯಿದೆಯ ಮಹತ್ವದ ಅಂಶಗಳು: ಸಾರ್ವಜನಿಕ ಉದ್ದೇಶಕ್ಕಾಗಿ ಭೂಮಿಯನ್ನು ಸರ್ಕಾರ ಭೂ ಸ್ವಾಧೀನ ಪಡಿಸಿಕೊಳ್ಳಬಹುದು. ರಾಷ್ಟ್ರ ರಕ್ಷಣೆ, ರೈಲ್ವೇ, ಹೆದ್ದಾರಿ ಯೋಜನೆ, ನೀರಾವರಿ ಕಾಲುವೆ, ಕೈಗಾರಿಕಾ ವಲಯ, ವಿಶೇಷ ಆರ್ಥಿಕ ವಲಯ ನಿರ್ಮಾಣ ಮತ್ತಿತರ ಜನ ಕಲ್ಯಾಣ ಯೋಜನೆಗಳಿಗೆ ಸರ್ಕಾರ ಸಾರ್ವಜನಿಕರ ಆಸ್ತಿಯನ್ನು ಸ್ವಾಧೀನ ಪಡಿಸಿಕೊಳ್ಳುತ್ತದೆ.

ಇನ್ನು ಈ ಕಾಯಿದೆಯ ನಿಯಮಗಳನ್ನು ಉಲ್ಲಂಘನೆ ಮಾಡಿ ಭೂ ಸ್ವಾಧೀನ ಮಾಡಿದರೆ ಅಂತಹ ಭೂ ಸ್ವಾಧೀನ ಪ್ರಕ್ರಿಯೆ ರದ್ದುಪಡಿಸಬಹುದು. ಪಾರದರ್ಶಕ ಭೂ ಸ್ವಾಧೀನ ಪ್ರಕ್ರಿಯೆಯ ಮಹತ್ವದ ಈ ನಿಯಮಗಳನ್ನು ಪ್ರತಿಯೊಬ್ಬರೂ ತಿಳಿದಿರಬೇಕು.

sec 4 of Land acquisition act: ಸಾಮಾಜಿಕ ಪರಿಣಾಮದ ಬಗ್ಗೆ ಅಧ್ಯಯನ: ಯಾವುದೇ ಒಂದು ಸರ್ಕಾರಿ ಯೋಜನೆಗಾಗಿ ಸಾರ್ವಜನಿಕರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಮುನ್ನ ಯೋಜನೆಯಿಂದ ಆಗುವ ಸಮಾಜಿಕ ಪರಿಣಾಮದ ಬಗ್ಗೆ ಸೆಕ್ಷನ್ 4 ರ ಅಡಿ ಸರ್ಕಾರ ಅಥವಾ ಸರ್ಕಾರದಿಂದ ನೇಮಿಸಿದ ಪ್ರಾಧಿಕಾರ ಅಧ್ಯಯನ ನಡೆಸಿ ವರದಿ ನೀಡಬೇಕು. ಭೂ ಸ್ವಾಧೀನಕ್ಕೆ ಒಳಗಾಗುವ ಪ್ರದೇಶ, ಅದರಿಂದ ಬಾದಿತರಾಗುವ ಕುಟುಂಬಗಳ ಬಗ್ಗೆ ಗ್ರಾಮ ಪಂಚಾಯಿತಿ, ವಾರ್ಡ್‌ ಮಟ್ಟದಲ್ಲಿ ಅಧ್ಯಯನ ನಡೆಸಿ ವರದಿ ನೀಡಬೇಕು. ಹೀಗೆ ಸಾಮಾಜಿಕ ಪರಿಣಾಮದ ಬಗ್ಗೆ ನಡೆಸಿದ ಅಧ್ಯಯನ ವರದಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಬೇಕು.

ಭೂ ಸ್ವಾಧೀನದಿಂದ ಬಾದಿತ ಕುಟುಂಬಗಳು, ಜನರು ಅವರಿಗೆ ಪರ್ಯಾಯ ವ್ಯವಸ್ಥೆಯ ಬಗ್ಗೆಯೂ ಸಾಮಾಜಿಕ ಪರಿಣಾಮ ಅಧ್ಯಯನ ವರದಿ ಮಾಹಿತಿ ಒಳಗೊಂಡಿರಬೇಕು. ಮತ್ತು ಯೋಜನೆಗೆ ಬೇಕಾಗುವ ಕನಿಷ್ಠ ಭೂಮಿಯನ್ನಷ್ಟೇ ಸ್ವಾಧೀನ ಪಡಿಸಿಕೊಳ್ಳಬೇಕು. ಭೂಮಿ ಕಳೆದುಕೊಂಡವರಿಗೆ ಪರ್ಯಾಯ ಭೂಮಿ ನೀಡಲು ಅವಕಾಶ ಇರುವ ಬಗ್ಗೆಯೂ ಸಮಾಜಿಕ ಪರಿಣಾಮ ವರದಿ ಬೆಳಕು ಚೆಲ್ಲುವಂತಿರಬೇಕು.

ಇನ್ನು ಯೋಜನೆಯಿಂದ ಆಗುವ ಲಾಭಗಳು, ಯೋಜನೆಗೆ ತಗಲುವ ವೆಚ್ಚ, ಈ ಯೋಜನೆಯಿಂದ ಸಾರ್ವಜನಿಕರಿಗೆ ಆಗುವ ಪ್ರಯೋಜನದ ಮಾಹಿತಿ ಒಳಗೊಂಡಿರಬೇಕು.

sec 5 of Land acquisition act: public hearing for social impact: ಸರ್ಕಾರ ಜನ ಕಲ್ಯಾಣಕ್ಕಾಗಿ ಪ್ರಸ್ತಾಪಿತ ಯೋಜನೆಯ ಬಗ್ಗೆ ನಡೆಸಿದ ಸಾಮಾಜಿಕ ಪರಿಣಾಮ ಅಧ್ಯಯನ ವರದಿಯ ಬಗ್ಗೆ ಸರ್ಕಾರ ಅಥವಾ ಸಕ್ಷಮ ಪ್ರಾಧಿಕಾರ ಸಾರ್ವಜನಿಕ ಅಹವಾಲು ಸ್ವೀಕಾರ ಸಭೆ ನಡೆಸಬೇಕು. ಯಾವುದೇ ಒಂದು ಉದ್ದೇಶಿತ ಯೋಜನೆಗೆ ಭೂ ಸ್ವಾಧೀನ ಪಡಿಸಿಕೊಳ್ಳಲು ಸರ್ಕಾರ ಕಾಯಿದೆಯ ಸೆಕ್ಷನ್‌ 5 ರ ಪ್ರಕಾರ ಸಾರ್ವಜನಿಕ ಸಭೆ ನಡೆಸಿ ಭೂ ಸ್ವಾಧೀನದಿಂದ ಬಾದಿತರಿಂದ ಅಹವಾಲು ಸ್ವೀಕರಿಸಬೇಕು. ಭೂ ಸ್ವಾಧೀನ ಕುರಿತು ಸಾರ್ವಜನಿಕರಿಗೆ ತಿಳಿಸಬೇಕು. ಭೂ ಸ್ವಾಧೀನದಿಂದ ಬಾದಿತರ ಅಭಿಪ್ರಾಯಗಳನ್ನು ಸರ್ಕಾರ ದಾಖಲು ಮಾಡಿಕೊಳ್ಳಬೇಕು.

ಸಾಮಾಜಿಕ ಪರಿಣಾಮ ವರದಿ ಪ್ರಕಟಣೆ: ಸೆಕ್ಷನ್ 6 ರ ಪ್ರಕಾರ ಸರ್ಕಾರ ಸಾಮಾಜಿಕ ಪರಿಣಾಮ ವರದಿಯನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಪ್ರಕಟಿಸಬೇಕು. ಅದು ಸ್ಥಳೀಯ ಭಾಷೆಯಲ್ಲಿರಬೇಕು.ಪಂಚಾಯಿತಿ, ಮುನಿಸಿಪಾಲಿಟಿಯಲ್ಲಿ ಪ್ರಕಟವಾಗಿರಬೇಕು. ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ಕಚೇರಿಯಲ್ಲಿ ಪ್ರಕಟ ಮಾಡಬೇಕು. ಅಲ್ಲದೇ ಸರ್ಕಾರ ಸೂಚಿತ ವೆಬ್ ಸೈಟ್‌ ನಲ್ಲಿ ಕೂಡ ಪ್ರಕಟಿಸಿರಬೇಕು. ಇದಲ್ಲದೇ ಉದ್ದೇಶಿತ ಯೋಜನೆಯಿಂದ ಪರಿಸರದ ಮೇಲೆ ಬೀರುವ ಪರಿಣಾಮದ ಬಗ್ಗೆ ವರದಿಯನ್ನು ಕೇಂದ್ರ ಸರ್ಕಾರದ ಪರಿಸರ ಸಂರಕ್ಷಣಾ ಸಚಿವಾಲಯಕ್ಕೆ ಸಲ್ಲಿಸಿರಬೇಕು.

ಸಾಮಾಜಿಕ ಪರಿಣಾಮ ವರದಿ ಅನ್ವೇಷಣೆ: ಉದ್ದೇಶಿತ ಯೋಜನೆ, ಭೂ ಸ್ವಾಧೀನ, ಪರಿಹಾರ ಕುರಿತು ತಯಾರಿಸಿದ ಸಾಮಾಜಿಕ ಪರಿಣಾಮ ವರದಿಯನ್ನು ಸ್ವತಂತ್ರ ತಜ್ಞರ ಸಮಿತಿಯಿಂದ ಅಧ್ಯಯನ ನಡೆಸಬೇಕು ಎಂದು ಸೆಕ್ಷನ್ 7 ಹೇಳುತ್ತದೆ. ಈ ತಜ್ಞರ ಸಮಿತಿ ಇಬ್ಬರು ಅಧಿಕಾರೇತರ ಪರಿಸರ ವಿಜ್ಞಾನಿಗಳು, ಪಂಚಾಯಿತಿ, ಮುನಿಸಿಪಾಲಿಟಿ ಸ್ಥಳೀಯ ಸರ್ಕಾರದಿಂದ ಇಬ್ಬರು ಪ್ರತಿನಿಧಿಗಳು, ಪರಿಹಾರ ಕುರಿತ ಇಬ್ಬರು ತಜ್ಞರು, ಒಬ್ಬ ತಾಂತ್ರಿಕ ಪರಿಣಿತ, ಸರ್ಕಾರದಿಂದ ಸಮಿತಿಯ ಮುಖ್ಯಸ್ಥರನ್ನು ನೇಮಿಸಿರಬೇಕು. ಈ ಸಮಿತಿಯು ಉದ್ದೇಶಿತ ಯೋಜನೆ, ಅದರಿಂದ ಆಗುವ ಸಮಾಜಿಕ ಪರಿಣಾಮ, ಯೋಜನೆ ಸಾರ್ವಜನಿಕ ಹಿತ ರಕ್ಷಣೆ, ಸಾಮಾಜಿಕ ಪರಿಣಾಮ ಮೀರಿ ಯೋಜನೆಯಿಂದ ಆಗುವ ಲಾಭದ ಬಗ್ಗೆ ಅನ್ವೇಷಣೆ ಮಾಡುತ್ತದೆ. ಈ ತಜ್ಞರ ಸಮಿತಿ ರಚಿಸಿದ ಎರಡು ತಿಂಗಳ ಒಳಗೆ ತಜ್ಞರ ಸಮಿತಿ ತನ್ನ ಅಭಿಪ್ರಾಯವನ್ನು ಸರ್ಕಾರಕ್ಕೆ ನೀಡಬೇಕು. ಬಹುಮುಖ್ಯವಾಗಿ ಉದ್ದೇಶಿತ ಯೋಜನೆಗೆ ಅಗತ್ಯ ವಿರುವ ಕನಿಷ್ಠ ಭೂಮಿಯನ್ನಷ್ಟೇ ನೀಡಬೇಕು.

ತಜ್ಞರ ಸಮಿತಿಯ ಶಿಫಾರಸು ವರದಿಯನ್ನು ಸ್ಥಳೀಯ ಭಾಷೆಯಲ್ಲಿ ಪ್ರಕಟಿಸಿ ಸ್ಥಳೀಯ ಸಂಸ್ಥೆಗಳಲ್ಲಿ ಪ್ರಕಟಿಸಿರಬೆಕು. ಜತೆಗೆ ಜಿಲ್ಲಾಧಿಕಾರಿಗಳು, ತಹಶೀಲ್ದಾರ್‌ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಬೇಕು.

sec 8: examination of proposals for land acquisition: ಸೆಕ್ಷನ್ 8 ರ ಪ್ರಕಾರ ತಜ್ಞರ ಸಮಿತಿ ವರದಿ ನೀಡಿದ ಬಳಿಕ ಸರ್ಕಾರ ಅದನ್ನು ಪರಿಶೀಲಿಸಬೇಕು. ಬಹುಮುಖ್ಯವಾಗಿ ಯೋಜನೆಗೆ ಅಗತ್ಯ ಇರುವ ಕನಿಷ್ಠ ಭೂಮಿಯನ್ನು ಮಾತ್ರ ಸ್ವಾಧೀನ ಮಾಡಿಕೊಳ್ಳಲು ಪ್ರಸ್ತಾಪಿಸಬೇಕು. ಯೋಜನೆಗೆ ಅಗತ್ಯ ಬೀಳದೇ ಇರುವ ಜಾಗವನ್ನು ಮೊದಲೇ ಸ್ವಾಧೀನ ಪಡಿಸಿಕೊಳ್ಳಲು ಪ್ರಸ್ತಾಪ ಸಲ್ಲಿಸಬಾರದು. ಈಗಾಗಲೇ ಉದ್ದೇಶಿತ ಯೋಜನೆಗೆ ಸ್ವಾಧೀನ ಪಡಿಸಿಕೊಂಡು ಅದು ಖಾಲಿಯಿದ್ದರೆ ಅಂತಹ ಭೂಮಿಯ ಬಳಕೆಗೆ ಆದ್ಯತೆ ನೀಡಬೇಕು.

ಜಿಲ್ಲಾಧಿಕಾರಿಗಳ ವರದಿ ಆಧರಿಸಿ ತಜ್ಞರ ವರದಿ, ಸಾಮಾಜಿಕ ಪರಿಣಾಮ ಅಧ್ಯಯನ ವರದಿಯನ್ನು ಪರಿಗಣಿಸಿ ಭು ಸ್ವಾಧೀನದಿಂದ ಬಾದಿತರಿಗೆ ಪರ್ಯಾಯ ವ್ಯವಸ್ಥೆ, ಅವರಿಗೆ ಮೂಲ ಸೌಕರ್ಯ, ಪರಿಸರ ಸಂರಕ್ಷಣೆ, ವೈಯಕ್ತಿಕ ಬಾದಿತರ ವಿವರ ಬಗ್ಗೆ ಸರ್ಕಾರ ಪರಿಶೀಲಿಸಬೇಕು. ಈ ಕುರಿತ ಸರ್ಕಾರ ತೆಗೆದುಕೊಂಡ ನಿರ್ಧಾರವನ್ನು ಸ್ಥಳಿಯ ಭಾಷೆಯಲ್ಲಿ ಪ್ರಕಟಿಸಿ ಸಾರ್ವಜನಿಕರಿಗೆ ಮಾಹಿತಿ ಒದಗಿಸಬೇಕು.

ಉದ್ದೇಶಿತ ಭೂಮಿಯ ಸ್ವಾಧೀನ ಸಂಬಂಧ ಅದರ ಮಾಲೀಕರಿಂದ ಸರ್ಕಾರ ಸಮ್ಮತಿ ಪಡೆಯಬೇಕು. ಸಮಚಿತ ಮಾರ್ಗದಲ್ಲಿ ಭೂಮಿ ಬಿಟ್ಟು ಕೊಡುವ ಬಗ್ಗೆ ಭೂ ಮಾಲೀಕರ ಅಭಿಪ್ರಾಯ ಸಂಗ್ರಹಿಸಬೇಕು.

ಸಾಮಾಜಿಕ ಅಧ್ಯಯನ ವರದಿ ಪರಿಣಾಮ ಅಧ್ಯಯನಕ್ಕೆ ವಿನಾಯಿತಿ: ಸರ್ಕಾರ ತುರ್ತು ಯೋಜನೆಗಾಗಿ ಭೂ ಸ್ವಾಧಿನ ಪಡಿಸಿಕೊಳ್ಳುವ ಸಂದರ್ಭದಲ್ಲಿ(ಸೆಕ್ಷನ್ 40) ಸೆಕ್ಷನ್ 9 ಪ್ರಕಾರ ಉದ್ದೇಶಿತ ಭೂ ಸ್ವಾಧೀನ ಯೋಜನೆಯ ಸಾಮಾಜಿಕ ಪರಿಣಾಮ ಅಧ್ಯಯನ ಕೈ ಬಿಡಲು ಅವಕಾಶವಿದೆ.

Land acquisition and publication of preliminary notification: ಸರ್ಕಾರ ಉದ್ದೇಶಿತ ಯೋಜನೆಗೆ ಅಗತ್ಯ ಭೂ ಸ್ವಾಧೀನ ಬಗ್ಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿರುವ ಬಗ್ಗೆ ಪ್ರಕಟಣೆ ನೀಡಬೇಕು. ಸರ್ಕಾರಿ ಗೆಜೆಟ್‌, ಎರಡು ದಿನಪತ್ರಿಕೆ, ಒಂದು ಸ್ಥಳೀಯ ಪತ್ರಿಕೆಯಲ್ಲಿ ಪ್ರಕಟಿಸಬೇಕು. ಅದೇ ವಿಷಯವನ್ನು ಸ್ಥಳೀಯ ಪಂಚಾಯಿತಿ ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರಕಟಣೆ ನೀಡಬೇಕು. ಸರ್ಕಾರದ ವೆಬ್ ತಾಣದಲ್ಲಿ ಅಪ್‌ಲೋಡ್‌ ಮಾಡಬೇಕು. ಇದಾದ ಬಳಿಕ ಗ್ರಾಮಸಭೆ, ಮುನಿಸಿಪಾಲಿಟಿ ಸಭೆಗಳಲ್ಲಿ ನೋಟಿಫಿಕೇಷನ್ ವಿಷಯವನ್ನು ಸಭೆಗಳಲ್ಲಿ ಪ್ರಸ್ತಾಪಿಸಿ ನಾಗರಿಕರಿಗೆ ಅರಿವು ಮೂಡಿಸಬೇಕು. ಬಹುಮುಖ್ಯವಾಗಿ ಸಂತ್ರಸ್ತರಿಗೆ.

ಉದ್ದೇಶಿತ ಯೋಜನೆ, ಅದರ ಅಗತ್ಯತೆ, ಅದರಿಂದ ಆಗುವ ಲಾಭ, ಭೂ ಸಂತ್ರಸ್ತರಿಗೆ ಪರ್ಯಾಯ ವ್ಯವಸ್ಥೆ ವಿಧಾನ, ಸಮಾಜಿಕ ಪರಿಣಾಮದ ಸಂಗತಿ ಪುನರ್‌ ವ್ಯವಸ್ಥೆ ಪರಿಹಾರ ಕುರಿತು ಮಾಹಿತಿ ನೀಡಬೇಕು. ಒಮ್ಮೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ದಿನದಿಂದ ಸದರಿ ಭೂಮಿಯನ್ನು ಅನ್ಯರು ಖರೀದಿ ಮಾಡುವಂತಿಲ್ಲ. ಭೂ ಸ್ವಾಧೀನ ಪ್ರಕ್ರಿಯೆ ಮುಗಿಯುವ ತನಕ ಭೂ ಮಾಲೀಕರಿಂದ ಭೂಮಿ ಖರೀದಿಸಬಾರದು. ವಿಶೇಷ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಿಗೆ ಲಿಖಿತ ಮನವಿ ನೀಡಿ ಅವರ ಅನುಮತಿ ಮೇರೆಗೆ ಮಾರಬಹುದು. ಒಂದು ವೇಳೆ ಪ್ರಾಥಮಿಕ ಅಧಿಸೂಚನೆಗೆ ಒಳಪಟ್ಟ ಭೂಮಿಯನ್ನು ಖರೀದಿಸಿ ಯಾರಾದರೂ ನಷ್ಟ ಅನುಭವಿಸಿದರೆ ಅದಕ್ಕೆ ಜಿಲ್ಲಧಿಕಾರಿಗಳು ಆಗಲಿ, ಸರ್ಕಾರ ಆಗಲೀ ಹೊಣೆ ಆಗಿರುವುದಿಲ್ಲ. ಒಮ್ಮೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ಬಳಿಕ ಸ್ವಾಧೀನಕ್ಕೆ ಒಳಪಡುವ ಭೂಮಿಯ ದಾಖಲೆಗಳಲ್ಲಿ ಎರಡು ತಿಂಗಳ ಒಳಗಾಗಿ ಜಿಲ್ಲಾಧಿಕಾರಿಗಳು ಭೂ ದಾಖಲೆಗಳಲ್ಲಿ ಯೋಜನೆ ಸ್ವಾಧೀನದ ಬಗ್ಗೆ ನಮೂದಿಸಬೇಕು.

ಪ್ರಾಥಮಿಕ ಸರ್ವೆ : ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ಬಳಿಕ ಸರ್ಕಾರ ಉದ್ದೇಶಿತ ಯೋಜನೆಗೆ ಅಗತ್ಯ ಇರುವ ಭೂಮಿಯನ್ನು ಕಾನೂನು ಬದ್ಧವಾಗಿ ಸರ್ವೆ ಮಾಡಬೇಕು. ಸ್ವಾಧೀನಕ್ಕೆ ಒಳಗಾಗುವ ಭೂಮಿ, ಅದರಲ್ಲಿರುವ ಮರಗಳು, ಬೋರ್‌ ವೆಲ್, ಮನೆ, ಬೆಳೆ, ಭೂಮಿಯ ಬೌಂಡರಿ ಕುರಿತು ಸರ್ವೆ ಮಾಡಬೇಕು. ಭೂ ಮಾಲೀಕರ ಅನುಪಸ್ಥಿತಿಯಲ್ಲಿ ಸರ್ವೆ ಮಾಡುವಂತಿಲ್ಲ. ಕನಿಷ್ಠ ಅವರಿಂದ ನೇಮಿಸಲ್ಪಟ್ಟ ವ್ಯಕ್ತಿಯಾದರೂ ಇರಬೇಕು. ಆದರೆ ಸರ್ವೆ ಮಾಡುವ ಬಗ್ಗೆ ಆರು ದಿನಗಳ ಮುಂಚಿತವಾಗಿ ನೋಟಿಸ್‌ ನೀಡಬೇಕು. ಪ್ರಾಥಮಿಕ ಅಧಿಸೂಚನೆಯಾದ ಬಳಿಕಸ್ವಾಧೀನಕ್ಕೆ ಒಳಗಾಗುವ ಭೂಮಿಯಲ್ಲಿ ಯಾವುದೇ ಕಟ್ಟಡಗಳನ್ನು ನಿರ್ಮಿಸಬಾರದು.

ಸೆಕ್ಷನ್ 13 ಡಾಮೇಜ್‌ಗೆ ಪರಿಹಾರ : ಭೂ ಸ್ವಾಧೀನದಿಂದ ಆಗುವ ನಷ್ಟದ ಬಗ್ಗೆ ಅಧಿಕಾರಿಗಳು ನಿರ್ಧಾರ ಕೈಗೊಳ್ಳಬಹುದು. ಈ ನಷ್ಟ ಪರಿಹಾರ ವಿವಾದದಲ್ಲಿ ಜಿಲ್ಲಾಧಿಕಾರಿಗಳು ಅಥವಾ ಜಿಲ್ಲಾ ಕಂದಾಯ ಅಧಿಕಾರಿಗಳ ನಿರ್ಣವೇ ಅಂತಿಮ ಆಗಿರುತ್ತದೆ.

ಸಾಮಾಜಿಕ ಪರಿಣಾಮ ವರದಿ ಕಾಲಮಿತಿ: ಉದ್ದೇಶಿತ ಯೋಜನೆಯ ಬಗ್ಗೆ ಸಾಮಾಜಿಕ ಪರಿಣಾಮ ಅಧ್ಯಯನ ವರದಿ ತಜ್ಞರ ಸಮಿತಿ ಸಲ್ಲಿಸಿದ 12 ತಿಂಗಳ ಒಳಗೆ ಭೂ ಸ್ವಾಧೀನ ಕುರಿತ ಪ್ರಾಥಮಿಕ ಅಧಿಸೂಚನೆ ಹೊರಡಿಸಬೇಕು. ಒಂದು ವೇಳೆ ಹೊರಡಿಸದಿದ್ದರೆ ಸರ್ಕಾರದ ಅನುಮತಿ ಪಡೆದು 12 ತಿಂಗಳ ಕಾಲ ವಿಸ್ತರಿಸಬಹುದು. ಸರ್ಕಾರ ಅನುಮತಿ ಇಲ್ಲದೇ ಸಾಮಾಜಿಕ ಪರಿಣಾಮ ಅಧ್ಯಯನ ವರದಿ ಸಲ್ಲಿಸಿದ 12 ತಿಂಗಳಾದರೂ ಭೂ ಸ್ವಾಧೀನ ಪ್ರಕ್ರಿಯೆ ಪ್ರಾಥಮಿಕ ಅಧಿಸೂಚನೆ ಹೊರಡಿಸದಿದ್ದರೆ ಅಂತಹ ಅಂತಯ ಭೂ ಸ್ವಾಧೀನ ಪ್ರಕ್ರಿಯೆ ಸ್ಥಗಿತ ಅಂತಲೇ ಭಾವಿಸತಕ್ಕದ್ದು. ಸರ್ಕಾರ ಒಂದು ವರ್ಷದ ಕಾಲಾವಕಾಶ ನೀಡಿದ್ದರೆ ಆ ಮಾಹಿತಿಯನ್ನು ಸರ್ಕರಿ ವೆಬ್ ತಾಣದಲ್ಲಿ ಪ್ರಕಟಿಸಿರಬೇಕು.

ಭೂ ಸ್ವಾಧೀನಕ್ಕೆ ಆಕ್ಷೇಪಣೆ: ಸೆಕ್ಷನ್ 15 ರ ಪ್ರಕಾರ ಭೂ ಸ್ವಾಧೀನ ಸಂಬಂಧ ಪ್ರಾಥಮಿಕ ಅಧಿಸೂಚನೆ ಹರಡಿಸಿದ ಬಳಿಕ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ ಆರು ದಿನದ ಒಳಗೆ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಬಹುದು. ಆಕ್ಷೇಪಣೆಯನ್ನು ಸಂಬಂಧಿಸಿದ ಜಿಲ್ಲಾಧಿಕಾರಿಗೆ ಲಿಖಿತವಾಗಿ ಸಲ್ಲಿಸಬೇಕು. ವಕೀಲರ ಮೂಲಕವೂ ಸಂತ್ರಸ್ತರು ಆಕ್ಷೇಪಣೆ ಸಲ್ಲಿಸಬಹುದು. ಆಕ್ಷೇಪಣೆ ಆಲಿಸಿದ ಬಳಿಕ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ತನ್ನ ಶಿಫಾರಸು ಜತೆಗೆ ವರದಿ ಸಲ್ಲಿಸಬೇಕು. ಆದರೆ ಸರ್ಕಾರದ ನಿರ್ಣಯವೇ ಅಂತಿಮವಾಗಿರುತ್ತದೆ.

ಆಡಳಿತಾಧಿಕಾರಿಂದ ಪುನರ್‌ ವ್ಯವಸ್ಥೆ ಪರಿಹಾರಕ್ಕೆ ತಯಾರಿ: ಪ್ರಾಥಂಇಕ ಅಧಿಸೂಚನೆ ಬಳಿಕ ಆಡಳಿತ ಅಧಿಕಾರಿ ಭೂಮಿ ಕಳೆದುಕೊಂಡವರಿಗೆ ಪರಿಹಾರ ಕೊಡುವ ತಯಾರಿ ನಡೆಸಬೇಕು. ಸರ್ವೆ ವರದಿ ಆಧರಿಸಿ ಬಾದಿತ ಕುಟುಂಬಗಳ ಪಟ್ಟಿ ತಯಾರಿಸಬೇಕು.

ಸಂತ್ರಸ್ತ ಕುಟುಂಬಗಳು ಕಳೆದುಕೊಂಡ ಭೂಮಿ, ಕಟ್ಟಡಗಳು ಜಾನುವಾರುಗಳು, ಸರ್ಕಾರಿ ಕಟ್ಟಡಗಳು, ಸಾರ್ವಜನಿಕ ರಸ್ತೆ, ಪುನರ್‌ ವ್ಯವಸ್ಥೆ, ಪರಿಹಾರ ಯೋಜನೆ ಬಗ್ಗೆ ವಿವರ ಒಳಗೊಂಡಿರಬೇಕು. ಪುನರ್‌ ವಸತಿ ಹಾಗೂ ಪರಿಹಾರದ ಬಗ್ಗೆ ಬಾದಿತ ಪ್ರದೆಶದಲ್ಲಿ ಪ್ರಚಾರ ನೀಡಬೇಕು. ಗ್ರಾಮ ಸಭೆ, ಮುನಿಸಿಪಾಲಿಟಿ ಸಭೆಗಳಲ್ಲಿ ಬಾದಿತರಿಗೆ ಮಾಹಿತಿ ಸಿಗಬೇಕು. ಅಲ್ಲದೇ ಸಾರ್ವಜನಿಕ ಸಭೆ ಕರೆದು ಮಾಹಿತಿ ವಿನಿಯಮ ಅಡಬೇಕು. ಪುನರ್ ವಸತಿ, ಪರಿಹಾರ ಯೋಜನೆ ಆಕ್ಷೇಪಣೆ ಕುರಿತು ಆಡಳಿತ ಅಧಿಕಾರಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡಬೇಕು.

Related News

spot_img

Revenue Alerts

spot_img

News

spot_img