ಮಹಾರಾಷ್ಟ್ರ ರಾಜ್ಯದ ನೋಂದಣಿ ಹಾಗೂ ಮುದ್ರಾಂಕ ಕಚೇರಿ ದೇಶದ ಅತ್ಯಂತ ಸುಧಾರಿತ ಇಲಾಖೆಗಳಲ್ಲೊಂದಾಗಿದೆ. ಈ ಪ್ರಧಾನ ಕಚೇರಿಯು ನಾಗರಿಕರಿಗೆ ಸಹಾಯ ಮಾಡಲು ಹಾಗೂ ಸೇವೆಗಳನ್ನು ತ್ವರಿತವಾಗಿ ತಲುಪಿಸಲು ಅತ್ಯಂತ ಸುಧಾರಿತ ಆಧುನಿಕ ತಂತ್ರಜ್ಞಾನ ಹಾಗೂ ಪಾರದರ್ಶಕವಾಗಿ ಕೆಲಸ ಮಾಡುತ್ತಿದೆ. ಈಚೆಗೆ ಈ ಪ್ರಧಾನ ಕಚೇರಿಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಪುಣೆ ಸೇರಿದಂತೆ ಮಹಾರಾಷ್ಟ್ರದ ಎಲ್ಲಾ ಕಡೆಗಳ ಉಪ ನೋಂದಣಿ ಕಚೇರಿಗಳಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆಗೆ ಅಡ್ಡಿಯಂಟಾಗಿ ದಿನಪೂರ್ತಿ ಸಾರ್ವಜನಿಕರು ಪಡಿಪಾಟಲು ಪಟ್ಟ ಸಂಗತಿ ನಡೆದಿದೆ.
ಪಬ್ಲಿಕ್ ಡಾಟಾ ಎಂಟ್ರಿ ಸಿಸ್ಟಂ ಹಾಗೂ ಸಬ್ ರಿಜಿಸ್ಟ್ರಾರ್ ಆಫೀಸ್‌ಗಳಲ್ಲಿ ಆಸ್ತಿ ರಿಜಿಸ್ಟ್ರೇಷನ್‌ಗೆ ಸಮಯ ನಿಗದಿ ಕಾರ್ಯಗಳು ಸೇರಿದಂತೆ ಎಲ್ಲಾ ಕಾರ್ಯಗಳಿಗೆ ತಾಂತ್ರಿಕ ದೋಷದಿಂದ ಅಡ್ಡಿಯುಂಟಾಯಿತು.
ಪುಣೆಯಲ್ಲಿಯೇ 27 ಸಬ್ ರಿಜಿಸ್ಟ್ರಾರ್ ಕಚೇರಿಗಳಿದ್ದು, ಹವೇಲಿ ವಿಭಾಗ ಸೇರಿದಂತೆ ಎಲ್ಲಾ ಕಚೇರಿಗಳಲ್ಲಿ ತಾಂತ್ರಿಕ ದೋಷ ಸಮಸ್ಯೆಯಿಂದ ಕೆಲಸ ಭಾರಿ ನಿಧಾನವಾಗಿ ಸಾಗುತ್ತಿದೆ ಅಥವಾ ಯಾವುದೇ ಆಸ್ತಿ ನೋಂದಣಿ ಪ್ರಕ್ರಿಯೆ ನಡೆಯುತ್ತಿಲ್ಲ ಎಂದು ಅನೇಕ ಜನರು ಅಸಮಾಧಾನ ವ್ಯಕ್ತಪಡಿಸಿದರು.
ಗುರುವಾರಪೇಟೆ, ಚಂದಾನಗರ, ವಿಶ್ರಾಂತವಾಡಿ ಸೇರಿದಂತೆ ಅನೇಕ ಕಡೆಗಳಲ್ಲಿ ವಕೀಲರು ಸೇರಿ ಅನೇಕರು ನೋಂದಣಿ ಕೆಲಸ ಆಗದೇ ತೊಂದರೆಗೊಳಗಾದರು.
ಕೆಲ ಕಚೇರಿಗಳಲ್ಲಿ ಕೆಲವೇ ಕೆಲವು ಜನರು ಕಚೇರಿಯಲ್ಲಿ ಉಳಿದುಕೊಂಡಿದ್ದರೆ, ಇನ್ನು ಕೆಲವು ಕಡೆಗಳಲ್ಲಿ ಕೆಲಸ ನಿಧಾನವಾಗಿ ನಡೆಯುತ್ತಿದ್ದರಿಂದ ಜನಸಂದಣಿ ಸೇರಿತ್ತು.
‘ಬೆಳಿಗ್ಗೆಯಿಂದ ಜನರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಆದರೆ ತಾಂತ್ರಿಕ ದೋಷದಿಂದ ಕೆಲಸಗಳು ನಿಧಾನವಾಗಿ ನಡೆಯುತ್ತಿವೆ. ಹಿರಿಯ ವ್ಯಕ್ತಿಗಳು, ಮಹಿಳೆಯರು ಹಾಗೂ ಮಧ್ಯವಯಸ್ಕರು ಕೂಡ ತೊಂದರೆಗೆ ಒಳಗಾದರು. ಕೆಲವು ಜನರು ಕಚೇರಿ ಕೆಲಸಕ್ಕೆ ರಜೆ ಹಾಕಿ ಆಸ್ತಿ ನೋಂದಣಿ ಪ್ರಕ್ರಿಯೆಗಾಗಿ ಬಂದಿದ್ದರು. ಡಾಟಾ ಎಂಟ್ರಿ ಹೊರತುಪಡಿಸಿಯೂ ದಾಖಲೆಗಳು, ಸರ್ವರ್ ಪ್ರಾಬ್ಲಂ, ಕ್ಯಾಮೆರಾ ಅಡ್ಡಿ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಯಿತು’ ಎಂದು ಸಬ್ ರಿಜಿಸ್ಟ್ರಾರ್ ಕಚೇರಿಗೆ ಭೇಟಿ ಮಾಡಿದ ಮಹಿಳೆಯೊಬ್ಬರು ಅಳಲು ತೋಡಿಕೊಂಡರು.
“ಅದು ಇ– ಕೆವೈಸಿಗೆ ಸಂಬಂಧಿಸಿದ ತಾಂತ್ರಿಕ ದೋಷವಾಗಿತ್ತು. ಇದು ರಾಜ್ಯ ಮತ್ತು ಕೇಂದ್ರದಿಂದ ನಿಯಂತ್ರಿಸಲ್ಪಡುವುದರಿಂದ, ಸರಾಗವಾಗಿ ಕಾರ್ಯನಿರ್ವಹಿಸಲು ನಾವು
ವಿವಿಧ ಇ-ವ್ಯವಸ್ಥೆಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದೇವೆ. ಗುರುವಾರ ಮಧ್ಯರಾತ್ರಿ 12 ಗಂಟೆಯವರೆಗೆ ಸಾರ್ವಜನಿಕ ಡೇಟಾ ಎಂಟ್ರಿ (ಪಿಡಿಇ) ಸಮಸ್ಯೆಯನ್ನು ಪರಿಹರಿಸಲಾಗಿದೆ. ಆದಾಗ್ಯೂ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಲಾಗುವುದು,” ಎಂದು ಮಾಹಿತಿ ತಂತ್ರಜ್ಞಾನ ವಿಭಾಗದ ಡೆಪ್ಯುಟಿ ಇನ್‌ಸ್ಪೆಕ್ಟರ್ ಜನರಲ್ ಸುಹಾಸ್ ಮಪರಿ ತಿಳಿಸಿದ್ದಾರೆ.
ನೋಂದಣಿ ಪ್ರಕ್ರಿಯೆಗಾಗಿ ರಾಜ್ಯದಲ್ಲಿ ಒಟ್ಟು 507 ಸಬ್ ರಿಜಿಸ್ಟ್ರಾರ್ ಕಚೇರಿಗಳಿವೆ. ಗ್ರಾಮೀಣ ಭಾಗದಲ್ಲಿ ಪ್ರತಿ ತಾಲೂಕಿಗೆ ಒಂದು ಕಚೇರಿಯಿದೆ.
ಸಬ್ ರಿಜಿಸ್ಟ್ರಾರ್ ಕಚೇರಿಗಳ ಮೇಲೆ ನಿಗಾವಹಿಸಲು ಜಿಲ್ಲಾಮಟ್ಟದಲ್ಲಿ 34 ಜಂಟಿ ಜಿಲ್ಲಾ ನೋಂದಣಾಧಿಕಾರಿಗಳ ಕಚೇರಿಗಳಿವೆ. ಮುಂಬೈ, ಪುಣೆ, ಥಾಣೆ, ನಾಸಿಕ್, ಔರಂಗಾಬಾದ್, ನಾಗ್ಪುರ, ಅಮರಾವತಿ, ಲಾತೂರ್ ಸೇರಿದಂತೆ ರಾಜ್ಯದಲ್ಲಿ 8 ಪ್ರಾದೇಶಿಕ ವಿಭಾಗಗಳನ್ನು ಹೊಂದಲಾಗಿದ್ದು, ಇವು ಡೆಪ್ಯುಟಿ ಇನ್‌ಸ್ಪೆಕ್ಟರ್ ಜನರಲ್ ಆಫ್ ರಿಜಿಸ್ಟ್ರೇಷನ್ ನಿಯಂತ್ರಣದಲ್ಲಿ ಕೆಲಸ ನಿರ್ವಹಿಸುತ್ತವೆ.