ಬೆಂಗಳೂರು, ನ.7: ಕರ್ನಾಟಕ ಲೋಕಾಯುಕ್ತ ಪೊಲೀಸರು ಇತ್ತೀಚೆಗೆ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ವಿವಿಧ ಸಬ್‌ರಿಜಿಸ್ಟ್ರಾರ್ (ಹಿರಿಯ ಉಪನೋಂದಣಾಧಿಕಾರಿಗಳು ಮತ್ತು ವಿವಾಹ ನೋಂದಣಾಧಿಕಾರಿಗಳು) ಕಚೇರಿಗಳ ಮೇಲೆ ದಾಳಿಗೆ ಸಂಬಂಧಿಸದಿಂತೆ ಕೆಲವು ಮಧ್ಯವರ್ತಿಗಳ ಮೆಲೆ ಎಫ್‌ಐಆರ್ ದಾಖಲಿಸಿದ್ದಾರೆ.
ಲೋಕಾಯುಕ್ತ ಪೊಲೀಸರು ನ.3ರಂದು ಬೆಂಗಳೂರಿನ ಯಲಹಂಕ, ಬಾಣಸವಾಡಿ, ಮಹದೇವಪುರ, ವರ್ತೂರು, ಇಂದಿರಾನಗರ, ಬಸವನಗುಡಿ, ಆನೇಕಲ್, ಬನಶಂಕರಿ, ಕೆಂಗೇರಿ, ಜೆ.ಪಿ. ನಗರ, ಬ್ಯಾಟರಾಯನಪುರ ಸಹಿತ ಹಲವು ಕಚೇರಿಗಳ ಮೇಲೆ ದಾಳಿ ಮಾಡಿದ್ದರು. ಅಲ್ಲದೆ, ಜಿಲ್ಲೆಯ ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ ಕಚೇರಿಗಳಲ್ಲಿ ದಾಳಿ ನಡೆದಿತ್ತು. ಒಟ್ಟಾರೆ ಬೆಂಗಳೂರಿನ 14 ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ 5 ಉಪನೋಂದಣಾಧಿಕಾರಿಗಳ ಕಚೇರಿ ಮೇಲೆ ದಾಳಿ ನಡೆಸಲಾಗಿತ್ತು.
ದಾಳಿಯ ವೇಳೆ ಸಬ್‌ರಿಜಿಸ್ಟ್ರಾರ್ ಕಚೇರಿ ಅಧಿಕಾರಿಗಳಿಂದ ವಿವರಣೆ ಪಡೆದ ಲೋಕಾಯುಕ್ತ ಪೊಲೀಸರು ಈ ವೇಳೆ ಕೆಲವು ಮಧ್ಯವರ್ತಿಗಳನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ. ಕಚೇರಿಗಳ ಕಡತಗಳನ್ನು ಮೂರ್ನಾಲ್ಕು ದಿನಗಳ ಕಾಲ ಪರಿಶೀಲನೆಗೆ ಒಳಪಡಿಸಿದ್ದಾರೆ. ಕೆಲವು ಲೋಪಗಳು ಕಂಡ ಬಂದ ಹಿನ್ನೆಲೆಯಲ್ಲಿ ಮಧ್ಯವರ್ತಿಗಳ ಮೇಲೆ ಮೂರು ಪ್ರತ್ಯೇಕ ಎಫ್‌ಐಆರ್ ದಾಖಲಿಸಲಾಗಿದ್ದು, ಈ ಸಂಬಂಧ ಸಬ್‌ರಿಜಿಸ್ಟ್ರಾರ್‌ಗಳಿಗೂ ಆತಂಕ ಶುರುವಾಗಿದೆ.
ಸಬ್‌ರಿಜಿಸ್ಟ್ರಾರ್ ಕಚೇರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಬಂದಂತಹ ದೂರುಗಳ ಹಿನ್ನೆಲೆಯಲ್ಲಿ ಸಬ್‌ರಿಜಿಸ್ಟ್ರಾರ್‌ಗಳಿಗೂ- ಮಧ್ಯವರ್ತಿಗಳಿಗೂ ಇರುವ ವ್ಯವಹಾರದ ಬಗ್ಗೆ ತನಿಖೆ ನಡೆಸಲು ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಸಬ್‌ರಿಜಿಸ್ಟ್ರಾರ್ ಕಚೇರಿಗಳಲ್ಲಿ ನಿವೇಶ, ಸೇಲ್‌ಡೀಡ್ ಸಹಿತ ಕೆಲವು ಅಕ್ರಮ ನಡೆಸಲಾಗಿದೆ ಎಂಬುದಕ್ಕೆ ಪೂರಕವಾದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.