ಬೆಂಗಳೂರು: ಕರ್ನಾಟಕದ ನೆರೆರಾಜ್ಯ ಕೇರಳದಲ್ಲಿ ಕೊರೊನಾ ಸೋಂಕು ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಕೋವಿಡ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮನವಿ ಮಾಡಿದ್ದಾರೆ.
ಶಬರಿಮಲೆಗೆ ಹೋಗಿಬಂದವರು ಒಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ..!
ಬೆಂಗಳೂರಿನ ಶಾಂತಿನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ನೆರೆ ರಾಜ್ಯದಲ್ಲಿ ಕೋವಿಡ್ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆರೋಗ್ಯ ಇಲಾಖೆಯಿಂದ ಕೋವಿಡ್ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಕೇರಳಕ್ಕೆ ಯಾರು ಯಾರು ಹೋಗಿ ಬರುತ್ತಿದ್ದಾರೋ ಅವರು ಕೋವಿಡ್ ತಪಾಸಣೆ ಮಾಡಿಸಿಕೊಳ್ಳಬೇಕು. ಶಬರಿ ಮಲೆಯ ಅಯ್ಯಪ್ಪಸ್ವಾಮಿ ಭಕ್ತರೂ ಸಹ ಕೋವಿಡ್ ತಪಾಸಣೆ ಮಾಡಿಸಿಕೊಳ್ಳಬೇಕು. ಶೀತ, ಕೆಮ್ಮು, ಜ್ವರದ ಲಕ್ಷಣ ಇರುವವರು ಡಾಕ್ಟರ್ ಅತ್ರ ಹೋಗಿ ಬರುವುದು ಉತ್ತಮ. 60 ವರ್ಷ ದಾಟಿದವರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಬೇಕು ಎಂದು ರಾಮಲಿಂಗರೆಡ್ಡಿ ಹೇಳಿದ್ದಾರೆ.
60 ವರ್ಷ ದಾಟಿದ ಪ್ರಯಾಣಿಕರು ಬಸ್ ಪ್ರಯಾಣದ ವೇಳೆ ಮಾಸ್ಕ್ ಧರಿಸಬೇಕು..!
ಬಸ್ಸಿನಲ್ಲಿ ಜನ ತುಂಬಿರುತ್ತಾರೆ ಹಾಗಾಗಿ ರೋಗ ಲಕ್ಷಣ ಇರುವವರು ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಧರಿಸಬೇಕು. ಅದೇ ರೀತಿ 60 ವರ್ಷ ದಾಟಿದ ಪ್ರಯಾಣಿಕರು ಬಸ್ ಪ್ರಯಾಣದ ವೇಳೆ ಮಾಸ್ಕ್ ಧರಿಸಬೇಕು. ದೇವಾಲಯದಲ್ಲಿಯೂ ಭಕ್ತರ ಸಂಖ್ಯೆ ಹೆಚ್ಚಿರಲಿದೆ ಅಲ್ಲಿಯೂ ಕೂಡ 60 ವರ್ಷ ದಾಟಿದವರು ಕಡ್ಡಾಯ ಮಾಸ್ಕ್ ಹಾಕಿಕೊಳ್ಳಬೇಕು. ಯಾರಿಗೇ ರೋಗ ಲಕ್ಷಣವಿದ್ದರೂ ಅವರು ಬಸ್ ಹಾಗೂ ಮೆಟ್ರೋ ಪ್ರಯಾಣದ ವೇಳೆ ಮತ್ತು ದೇವಾಲಯದ ಒಳಗಡೆ ಬಂದಿರುವಾಗ ಮಾಸ್ಕ್ ಹಾಕಿಕೊಳ್ಳಬೇಕು. ಅವರ ಆರೋಗ್ಯ ಹಾಗೂ ಬೇರೆಯವರ ಹಿತದೃಷ್ಟಿಯಿಂದ ಮಾಸ್ಕ್ ಹಾಕಿಕೊಳ್ಳಬೇಕು ಎಂದು ಹೇಳಿದರು.
ಸಾರಿಗೆ ಮತ್ತು ಮುಜರಾಯಿ ಇಲಾಖೆಗೆ ಜನರು ಸಹಕರಿಸಬೇಕು-ಸಚಿವ ರಾಮಲಿಂಗರೆಡ್ಡಿ
KSRTC ಬಸ್ಸುಗಳು ಪ್ರತಿನಿತ್ಯ ಕೇರಳಾಗೆ ಸಂಚಾರ ಮಾಡುತ್ತವೆ, ಆದ್ದರಿಂದ ಬಸ್ಸುಗಳಲ್ಲಿ ಸಹ ಸ್ಯಾನಿಟೈಸರ್ ಬಳಸಲೇಬೇಕು. ಆದರೆ ಬಸ್ಸುಗಳಿಗೆ ಸ್ಯಾನಿಟೈಸ್ ಮಾಡಲಾಗುತ್ತಿಲ್ಲ. ಸದ್ಯದ ಮಟ್ಟಿಗೆ ಕೊರೊನಾದಿಂದ ಯಾವುದು ಪ್ರಾಣಾಪಾಯವಿಲ್ಲ. ಪ್ರಯಾಣಿಕರೆಲ್ಲ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಂಡು ಪ್ರಯಾಣ ಮಾಡಬೇಕು. ಸಾರಿಗೆ ಮತ್ತು ಮುಜರಾಯಿ ಇಲಾಖೆಗೆ ಜನರು ಸಹಕರಿಸಬೇಕು ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಮನವಿ ಮಾಡಿಕೊಂಡರು.
ಚೈತನ್ಯ ರೆವೆನ್ಯೂ ಫ್ಯಾಕ್ಟ್ ನ್ಯೂಸ್, ಬೆಂಗಳೂರು