ಬೆಂಗಳೂರು, ಜೂನ್ 19 :ನ್ಯಾಷನಲ್ ಕೋ-ಆಪರೇಟಿವ್ ಕನ್ಸೂಮರ್ಸ್ ಫೆಡರೇಷನ್ (ಎನ್ ಸಿ ಸಿಎಫ್), ನ್ಯಾಷನಲ್ ಅಗ್ರಿಕಲ್ಚರಲ್ ಕೋ-ಆಪರೇಟಿವ್ ಮಾರ್ಕೆಟಿಂಗ್ ಫೆಡರೇಷನ್ (ನಾಫೆಡ್) ಹಾಗೂ ಕೇಂದ್ರೀಯ ಭಂಡಾರ, ಈ ಮೂರು ಸಂಸ್ಥೆಗಳು ಭಾರತ ಸರ್ಕಾರಕ್ಕೆ ಸೇರಿದ್ದು, ಈ ಮೂರು ಸಂಸ್ಥಗಳಿಂದ ಅಕ್ಕಿ ಪಡೆಯಲು ದರಪಟ್ಟಿ ಕರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ ಸಿಎಂ ಸಿದ್ದರಾಮಯ್ಯ, ಭಾರತೀಯ ಆಹಾರ ಮಂಡಳಿ(ಎಫ್ ಸಿಐ) ನಿಂದ 34 ರೂ. ಅಕ್ಕಿ , 2.60 ರೂ. ಸಾಗಾಣಿಕೆ ವೆಚ್ಚ ಸೇರಿ ಒಂದು ಕೆ.ಜಿ. ಅಕ್ಕಿಗೆ ಒಟ್ಟು 36.40 ರೂ. ವೆಚ್ಚ ತಗಲುತ್ತದೆ. ಈ ಮೂರು ಸಂಸ್ಥೆಗಳು ನಮೂದಿಸುವ ದರ, ಸರಬರಾಜು ಮಾಡುವ ಪ್ರಮಾಣಗಳ ವಿವರ ಪಡೆಯಲಾಗುವುದು . ಟೆಂಡರ್ ಮೂಲಕ ಅಕ್ಕಿ ಪಡೆಯಲೂ ಕ್ರಮ ಕೈಗೊಳ್ಳಲಾಗುವುದು ಎಂದರು.
10 ಕೆಜಿ ಅಕ್ಕಿನೀಡಲು ವಾರ್ಷಿಕ 10,092 ಕೋಟಿ ರೂ
ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ವಿತರಿಸಲು ಒಂದು ತಿಂಗಳಿಗೆ 840 ಕೋಟಿ ರೂ. ವೆಚ್ಚ ತಗುಲಲಿದೆ. ವರ್ಷಕ್ಕೆ 10,092 ಕೋಟಿ ವೆಚ್ಚವಾಗಲಿದೆ. ಸರ್ಕಾರ ಈ ವೆಚ್ಚವನ್ನು ಭರಿಸಿ ಅಕ್ಕಿಯನ್ನು ವಿತರಿಸಲು ಸಿದ್ಧವಿದೆ. ಅಕ್ಕಿಯ ದಾಸ್ತಾನು ಲಭ್ಯವಿದ್ದರೂ ಕೇಂದ್ರ ಸರ್ಕಾರದವರು ಅಕ್ಕಿ ನೀಡಲು ಒಪ್ಪುತ್ತಿಲ್ಲ. ರಾಜ್ಯ ಬಿಜೆಪಿ ಪಕ್ಷದವರು ರಾಜ್ಯದ ಬಡವರಿಗೆ ಅನುಕೂಲವಾಗಲು ಅಕ್ಕಿಯನ್ನು ವಿತರಿಸುವಂತೆ ಕೇಂದ್ರ ಸರ್ಕಾರವನ್ನು ಮನವಿ ಮಾಡಬಹುದಲ್ಲ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು, ರಾಜ್ಯದಲ್ಲಿ ರಾಗಿ, ಜೋಳವನ್ನು 6 ತಿಂಗಳವರೆಗೆ ತಲಾ 2 ಕೆಜಿ ಕೊಡುವಷ್ಟು ಮಾತ್ರ ದಾಸ್ತಾನು ಲಭ್ಯವಿದೆ. ಹಳೇ ಮೈಸೂರು ಭಾಗದ ಜನರಿಗೆ 2 ಕೆಜಿ ರಾಗಿ ಹಾಗೂ ಹೈದ್ರಾಬಾದ್ ಕರ್ನಾಟಕ ಹಾಗೂ ಮುಂಬೈ ಕರ್ನಾಟಕದ ಭಾಗದ ಜನರಿಗೆ 2 ಕೆಜಿ ಜೋಳ ನೀಡಬಹುದು. ಇನ್ನುಳಿದ 3 ಕೆಜಿ ಅಕ್ಕಿಯನ್ನು ರಾಜ್ಯದ ಜನರಿಗೆ ನೀಡಬೇಕಾಗುತ್ತದೆ ಎಂದರು.
ಪಂಜಾಬ್ ಸರ್ಕಾರದೊಂದಿಗೆ ಚರ್ಚೆ
ಪಂಜಾಬ್ ಸರ್ಕಾರ ಕರ್ನಾಟಕಕ್ಕೆ ಅಕ್ಕಿ ಸರಬರಾಜು ಮಾಡಲು ಸಿದ್ದವಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಪಂಜಾಬ್ ನಿಂದ ಅಕ್ಕಿ ಖರೀದಿ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಚರ್ಚಿಸಿದ್ದಾರೆ. ರಾಜ್ಯ ತಿಳಿಸುವ ದರಕ್ಕೆ ಅಕ್ಕಿ ನೀಡಲು ಪಂಜಾಬ್ ಸರ್ಕಾರದೊಂದಿಗೆ ಮತ್ತೊಮ್ಮೆ ಚರ್ಚಿಸಲಾಗುವುದು ಎಂದರು.
ಬಡವರಿಗಾಗಿ ಅಕ್ಕಿ ನೀಡುವ ಯೋಜನೆಗೆ ತಪ್ಪದೇ ಚಾಲನೆ
ಕೇಂದ್ರ ಸರ್ಕಾರದ ಸಂಸ್ಥೆಗಳಿಂದ ಅಕ್ಕಿ ಪಡೆಯುವವರೆಗೆ ಸರ್ಕಾರದ ಬಳಿ ಸಮಯವಿದೆಯೇ ಎಂಬುದಕ್ಕೆ ಪ್ರತಿಕ್ರಯಿಸಿ, ಜುಲೈ 1 ರಿಂದ ರಾಜ್ಯದ ಜನರಿಗೆ ಅಕ್ಕಿಯನ್ನು ನೀಡಲು ಸರ್ಕಾರ ಪ್ರಮಾಣಿಕವಾಗಿ ಪ್ರಯತ್ನಿಸುತ್ತಿದೆ. ಕೇಂದ್ರ ಸರ್ಕಾರದಲ್ಲಿ ಅಕ್ಕಿಯ ದಾಸ್ತಾನು ಲಭ್ಯವಿದ್ದು, ಅವರು ರಾಜ್ಯಕ್ಕೆ ಅಕ್ಕಿ ನೀಡಲು ಮನಸ್ಸು ಮಾಡಬೇಕಿದೆ. ಎಂಎಸ್ ಪಿ ಮೂಲಕ ಅಕ್ಕಿ ಖರೀದಿಸಬೇಕಾಗಿದೆ. ಬಡವರಿಗೆ ಅಕ್ಕಿ ನೀಡುವ ವಿಷಯದಲ್ಲಿ ಯಾರೇ ಎಷ್ಟೇ ರಾಜಕಾರಣ ಮಾಡಿದರೂ , ನಮ್ಮ ಸರ್ಕಾರ ಅನ್ನಭಾಗ್ಯ ಯೋಜನೆಯನ್ನು ಖಂಡಿತ ಚಾಲನೆಗೊಳಿಸಲಿದೆ ಎಂದರು.
ಕೇಂದ್ರ ಸರ್ಕಾರ ಬಡವರ ಅಕ್ಕಿ ಕೊಡುವುದರಲ್ಲಿ ರಾಜಕಾರಣ ಹಾಗೂ ದ್ವೇಷದ ರಾಜಕಾರಣ ಮಾಡುತ್ತಿದೆ. ಕೇಂದ್ರ ಸರ್ಕಾರವೇನೂ ಭತ್ತ ಬೆಳೆಯಲು ಜಮೀನು ಇಟ್ಟುಕೊಂಡಿಲ್ಲ. ಅವರೂ ರಾಜ್ಯಗಳಿಂದ ಅಕ್ಕಿಯನ್ನು ಪಡೆದಿದ್ದಾರೆ ಎಂದು ತಿಳಿಸಿದರು.
ಕೇಂದ್ರ ಸಹಕರಿಸಬೇಕು
ಸಹಕಾರಿ ಒಕ್ಕೂಟದ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಪದೇ ಪದೇ ಹೇಳುತ್ತಾರೆ. ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ಕೇಂದ್ರ ಸರ್ಕಾರಕ್ಕೆ ತೆರಿಗೆ ಬರುವುದು ರಾಜ್ಯಗಳಿಂದ. ಅವರು ಸಹಕರಿಸಬೇಕು ಎಂದರು.
ಕರ್ನಾಟಕಕ್ಕೆ ನೀರು ಬಿಡಬಾರದೆಂದು ಮಹಾರಾಷ್ಟ್ರದ ರೈತರು ಬ್ಯಾರೇಜ್ ಬಂದ್ ಮಾಡಿದ್ದು, ರೈತರು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಸುದ್ದಿಗಾರರು ಮುಖ್ಯಮಂತ್ರಿಗಳು ಗಮನಕ್ಕೆ ತಂದಾಗ, ಅಲ್ಲಿನ ರೈತರು ಹಾಗೂ ಮುಖ್ಯಮಂತ್ರಿಗಳೊಂದಿಗೆ ಮಾತನಾಡಲಾಗುವುದು ಎಂದರು.
ಗೊಂದಲವಿಲ್ಲ
ಸರ್ಕಾರ ಐದು ವರ್ಷಗಳ ಅವಧಿ ಮುಗಿಸುತ್ತದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಹಾಗೂ ಅಧಿಕಾರ ಹಂಚಿಕೆಯ ಬಗ್ಗೆ ಗೊಂದಲಗಳು ನಮ್ಮಲ್ಲಿಲ್ಲ ಎಂದು ಸ್ಪಷ್ಟ ಪಡಿಸಿದರು.
ಜಿ.ಎಸ್.ಟಿ ಸಮಿತಿಗೆ ಅರ್ಹರು
ಜಿ.ಎಸ್.ಟಿ ಸಮಿತಿಗೆ ಮುಖ್ಯಮಂತ್ರಿಗಳೇ ಅಧ್ಯಕ್ಷರಾಗಬಹುದಿತ್ತು ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಕೃಷ್ಣಬೈರೇಗೌಡರನ್ನು ಕಳಿಸಲು ಅವಕಾಶವಿದೆ. ಅದಕ್ಕೆ ಅವರು ಅರ್ಹರೂ ಕೂಡ ಎಂದರು.