24.4 C
Bengaluru
Wednesday, December 25, 2024

“ಸದ್ದಿಲ್ಲದೇ ಕರ್ನಾಟಕ ಲೋಕಸೇವಾ ಆಯೋಗದ ಗಾತ್ರ ಹೆಚ್ಚಿಸಿದ ರಾಜ್ಯ ಸರ್ಕಾರ:

ಏಪ್ರಿಲ್ :13

ಬೆಂಗಳೂರು: ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅಧ್ಯಕ್ಷತೆಯ ಆಡಳಿತ ಸುಧಾರಣಾ ಆಯೋಗವು ಕರ್ನಾಟಕ ಲೋಕಸೇವಾ ಆಯೋಗದ (KPSC) ಅಧ್ಯಕ್ಷರು ಮತ್ತು ಸದಸ್ಯರ ಒಟ್ಟು ಸಂಖ್ಯೆಯನ್ನು ಈಗಿರುವ 14 ರಿಂದ 8ಕ್ಕೆ ಇಳಿಸುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿ ತನ್ನ ವರದಿಯಲ್ಲಿ ತಿಳಿಸಿತ್ತು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ರಾಜ್ಯ ಸರ್ಕಾರವು ಈ ಸಂಖ್ಯೆಯನ್ನು ಸದ್ದಿಲ್ಲದೆ 16ಕ್ಕೆ ಏರಿಸಿದೆ!

KPSC ಒಟ್ಟು ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶದಿಂದ ‘ಕರ್ನಾಟಕ ಲೋಕಸೇವಾ ಆಯೋಗ (ಸೇವಾ ಷರತ್ತುಗಳು) ನಿಯಂತ್ರಣಗಳು– 1957’ಕ್ಕೆ ತಿದ್ದುಪಡಿ ಮಾಡಿ ಕಳೆದ ಮಾರ್ಚ್ 15 ರಂದು ಸರ್ಕಾರ ಅಧಿಸೂಚನೆ ಹೊರಡಿಸಿದೆ. ಅಷ್ಟೇ ಅಲ್ಲ ಈ ತಿದ್ದುಪಡಿಯ ಬೆನ್ನಲ್ಲೇ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯವರ ಶಿಫಾರಸಿನಂತೆ ಮಾರ್ಚ್ 16 ರಂದು ಮುಖ್ಯ ಮಂತ್ರಿಗಳ ತವರು ಜಿಲ್ಲೆಯಾದ ಹಾವೇರಿಯ ಶಕುಂತಲಾ ಎಸ್. ದುಂಡಿಗೌಡರ್ ಎಂಬುವರನ್ನು ಅಧಿಕಾರೇತರ ವರ್ಗದಿಂದ ಸದಸ್ಯರನ್ನಾಗಿ ನೇಮಿಸಿ ಅಧಿಸೂಚನೆ ಹೊರಡಿಸಲಾಗಿದೆ.

‘ಶಕುಂತಲಾ ಎಸ್. ದುಂಡಿಗೌಡರ್ ಅವರನ್ನು KPSC ಸದಸ್ಯರನ್ನಾಗಿನೇಮಿಸಲು ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಫೆ. 27 ರಂದು ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಟಿಪ್ಪಣಿ ಕಳುಹಿಸಿದ್ದರು. ಆದರೆ, ಅಧಿಕಾರೇತರ ಸದಸ್ಯ ಸ್ಥಾನ ಖಾಲಿ ಇಲ್ಲದೇ ಇದ್ದುದರಿಂದ ಅವರ ನೇಮಕಾತಿಗೆ ಅವಕಾಶ ಇರಲಿಲ್ಲ. ಹೀಗಾಗಿ, ತಿದ್ದುಪಡಿ ಮೂಲಕ ಅಧಿಕಾರೇತರ ಸಂಖ್ಯೆಯನ್ನು ಹೆಚ್ಚಿಸಿ ಅವಕಾಶ ಕಲ್ಪಿಸಲಾಗಿದೆ’ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ

‘ಉತ್ತರ ಪ್ರದೇಶವೂ ಸೇರಿದಂತೆ ಇತರ ರಾಜ್ಯಗಳಲ್ಲಿ ಲೋಕಸೇವಾ ಆಯೋಗದ ಸದಸ್ಯರ ಸಂಖ್ಯೆ 8 ಅಥವಾ ಅದಕ್ಕಿಂತ ಕಡಿಮೆ ಇದೆ. ಹೀಗಾಗಿ, ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರೂ ಸೇರಿ ಒಟ್ಟು ಸದಸ್ಯರ ಸಂಖ್ಯೆಯನ್ನು ಇಳಿಸಬಹುದು’ ಎಂದೂ ಸಮರ್ಥನೆ ನೀಡಿ ಆಡಳಿತ ಸುಧಾರಣಾ ಆಯೋಗವು ಫೆ. 3 ರಂದು ಮುಖ್ಯಮಂತ್ರಿಗೆ ಸಲ್ಲಿಸಿದ್ದ ವರದಿಯಲ್ಲಿ KPSC ಸದಸ್ಯರ ಸಂಖ್ಯೆಯನ್ನು ಇಳಿಸುವಂತೆ ಶಿಫಾರಸು ಮಾಡಿತ್ತು. ಆದರೆ, ಈ ಶಿಫಾರಸು ಮಾಡಿದ ಒಂದು ತಿಂಗಳ ಬಳಿಕ, ಅಂದರೆ ಮಾರ್ಚ್ 3 ರಂದು ಮುಖ್ಯ ಕಾರ್ಯದರ್ಶಿಗೆ ನೀಡಿದ್ದ ಟಿಪ್ಪಣಿಯಲ್ಲಿ, ಪ್ರಸ್ತುತ 13 ಸದಸ್ಯರ (ಅಧ್ಯಕ್ಷರೂ ಸೇರಿ 14) ಸಂಖ್ಯೆಯನ್ನು ‌15ಕ್ಕೆ (ಅಧ್ಯಕ್ಷರೂ ಸೇರಿ 16) ಹೆಚ್ಚಿಸಲು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಸೂಚಿಸಿದ್ದರು.

Related News

spot_img

Revenue Alerts

spot_img

News

spot_img