ಬೆಂಗಳೂರು:ಮೊನ್ನೆ ಮುಖ್ಯಮಂತ್ರಿಗಳು ಮಂಡಿಸಿದ್ದ ರಾಜ್ಯ ಸರ್ಕಾರದ 2023-24ನೇ ಸಾಲಿನ ಬಜೆಟ್ನಲ್ಲಿ 7ನೇ ವೇತನ ಆಯೋಗದ ಜಾರಿ ಮತ್ತು ನೂತನ ಪಿಂಚಣಿ ಯೋಜನೆಯ ಬಗ್ಗೆ ಯಾವುದೇ ಪ್ರಸ್ತಾವ ಮಾಡದಿರುವ ಹಿನ್ನೆಲೆಯಲ್ಲಿ, ಈ ಬಗ್ಗೆ ಚರ್ಚಿಸಿ ಮುಂದಿನ ನಡೆ ಕೈಗೊಳ್ಳಲು ರಾಜ್ಯ ಸರ್ಕಾರಿ ನೌಕರರ ಸಂಘವು ಮಂಗಳವಾರ (ಫೆ 21) ರಂದು ತುರ್ತುಸಭೆಯನ್ನು ಹಮ್ಮಿಕೊಂಡಿದೆ.
ಈ ಬಗ್ಗೆ ಸೋಮವಾರ ನೌಕರರ ಸಂಘಗಳ ಪದಾಧಿಕಾರಿಗಳು ಸಮಾಲೋಚನಾ ಸಭೆ ನಡೆಸಿದರು. ನೌಕರರ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ರಾಜ್ಯ ಸರ್ಕಾರಿ ನೌಕರರ ಸಂಘ ಕರೆದಿರುವ ಸಭೆಯಲ್ಲಿ ಭಾಗವಹಿಸಲು ಈ ನೌಕರರ ಸಂಘಗಳು ನಿರ್ಧರಿಸಿದ್ದು ಸೋಮವಾರ ನಡೆದ ಈ ಸಭೆಯಲ್ಲಿ ರಾಜ್ಯ ಸರ್ಕಾರಿ ಎನ್.ಪಿ.ಎಸ್ ನೌಕರರ ಸಂಘ, ಪದವಿಪೂರ್ವ ಶಿಕ್ಷಣ ಉಪನ್ಯಾಸಕರ ಸಂಘ, ಸರ್ಕಾರದ ಸಚಿವಾಲಯ ನೌಕರರ ಸಂಘ, ಅರಣ್ಯ ಇಲಾಖೆ ನೌಕರರ ಸಂಘ, ಸರ್ವೇ ಇಲಾಖೆ ನೌಕರರ ಸಂಘ, ವಿಧಾನಸಭಾ ಸಚಿವಾಲಯ ನೌಕರರ ಸಂಘ, ವಿಧಾನ ಪರಿಷತ್ ಸಚಿವಾಲಯ ನೌಕರರ ಸಂಘದ ಸದಸ್ಯರು ಭಾಗವಹಿಸಿದ್ದರು.