27.8 C
Bengaluru
Monday, July 1, 2024

ಕಾಮಗಾರಿ ಮುಗಿಯುವವರೆಗೆ ಶ್ರೀರಂಗಪಟ್ಟಣ ಟೋಲ್ ಶುಲ್ಕಕ್ಕೆ ನಿರ್ಬಂಧ ಕ್ರಮವಹಿಸಲು- ಮುಖ್ಯಮಂತ್ರಿಗಳಿಗೆ ಮನವಿ

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ನಡುವೆ ಇರುವ ಶ್ರೀರಂಗಪಟ್ಟಣದಲ್ಲಿ ಟೋಲ್ ಶುಲ್ಕ ಸಂಗ್ರಹಿಸದಂತೆ ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ, ಇದಕ್ಕೆ ತಡೆ ನೀಡಬೇಕು. ಸರ್ವಿಸ್ ರಸ್ತೆಗಳು ಇನ್ನಿತರ ಕಾಮಗಾರಿಗಳು ಪೂರ್ಣಗೊಳ್ಳುವವರೆಗೆ ಟೋಲ್ ಸಂಗ್ರಹ ಮಾಡದಂತೆ ತಡೆ ನೀಡಲು ಕೇಂದ್ರ ಸರ್ಕಾರದ ಗಮನ ಸೆಳೆಯಬೇಕು ಎಂದು ಶಾಸಕರಾದ ದಿನೇಶ್ ಗೂಳಿಗೌಡ, ರವಿಕುಮಾರ್ ಗಣಿಗ ಹಾಗೂ ರಮೇಶ್ ಬಂಡಿಸಿದ್ದೇಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಸರ್ವಿಸ್ ರಸ್ತೆ ಸೇರಿ ಹತ್ತಾರು ಕಾಮಗಾರಿಗಳು ಅಪೂರ್ಣ

ಬೆಂಗಳೂರಿನಿಂದ ಅಥವಾ ಮೈಸೂರಿನಿಂದ ಹೊರಟಾಗ ಒಂದು ಬಾರಿ ಟೋಲ್ ಶುಲ್ಕವನ್ನು ಕಟ್ಟಿಸಿಕೊಳ್ಳಲಾಗುತ್ತಿದೆ. ಈಗ ಶ್ರೀರಂಗಪಟ್ಟಣದಲ್ಲಿಯೂ ಟೋಲ್ ಕಟ್ಟಿಸಿಕೊಳ್ಳುತ್ತಿರುವುದು ಸಾರ್ವಜನಿಕರಿಗೆ ದುಪ್ಪಟ್ಟು ಹೊರೆಯಾಗಲಿದೆ. ಅಲ್ಲದೆ, ಇನ್ನೂ ಕಾಮಗಾರಿಗಳೇ ಪೂರ್ಣಗೊಂಡಿಲ್ಲ. ಹೀಗಾಗಿ ಮುಖ್ಯಮಂತ್ರಿಗಳು ಈ ಸಂಬಂಧ ಕೇಂದ್ರ ಸರ್ಕಾರದ ಗಮನಕ್ಕೆ ತಂದು ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಮನವಿ ಮಾಡಿದರು.

ಸೂಕ್ತ ಕ್ರಮವಹಿಸದೇ ಟೋಲ್ ಶುಲ್ಕ ಸರಿಯಲ್ಲ ಎಂದು ಸಿಎಂಗೆ ಮನವಿ

ಸರ್ವಿಸ್ ರಸ್ತೆ ಸೇರಿದಂತೆ ಇನ್ನಿತರ ಕಾಮಗಾರಿ ಮುಗಿಯುವವರೆಗೂ ಶ್ರೀರಂಗಪಟ್ಟಣ ಟೋಲ್‌ನಲ್ಲಿ ಶುಲ್ಕವನ್ನು ಸಂಗ್ರಹ ಮಾಡದಂತೆ ಕ್ರಮ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.

ಬೆಂಗಳೂರು-ಮೈಸೂರು ನಡುವಿನ ದಶಪಥ ಹೆದ್ದಾರಿಯು ಮಾರ್ಚ್ ತಿಂಗಳಲ್ಲಿ ಲೋಕಾರ್ಪಣೆಗೊಂಡಿದೆ. ಇದರಿಂದ ಬೆಂಗಳೂರು ಹಾಗೂ ಸಾಂಸ್ಕೃತಿಕ ನಗರಿ ಮೈಸೂರಿಗೆ ಶೀಘ್ರ ಸಂಚಾರಕ್ಕೆ ಅನುಕೂಲವಾಗಿದೆ ಎಂಬ ಅಂಶ ಬಿಟ್ಟರೆ ಇದು ಜನರಿಗೆ ನಿಜಕ್ಕೂ ಜೇಬು ಸುಡುವ ರಹದಾರಿಯಾಗಿದೆ. ಈ ಮಾರ್ಗದಲ್ಲಿ ಜನರು ಟೋಲ್ ಕಟ್ಟಿ ಕಟ್ಟಿ ಬಸವಳಿಯುವ ಸ್ಥಿತಿ ನಿರ್ಮಾಣವಾಗುತ್ತಿದೆ. ಈಗ ಇದ್ದದ್ದು ಸಾಲದೆಂಬಂತೆ ಶ್ರೀರಂಗಪಟ್ಟಣದಲ್ಲಿ ಸಹ ಇದೇ ಜುಲೈ 1ರಿಂದ ಟೋಲ್ ಸಂಗ್ರಹಕ್ಕೆ ಮುಂದಾಗಲಿರುವುದು ಜನರಿಗೆ ನುಂಗಲಾರದ ತುತ್ತಾಗಿದೆ.

ಕೇಂದ್ರ ಸರ್ಕಾರದ ಗಮನಕ್ಕೆ ತಂದು ಟೋಲ್ ಸಂಗ್ರಹಕ್ಕೆ ತಡೆ ನೀಡಲು ಮನವಿ

‌ಉದ್ಘಾಟನೆಯಾಗಿ ಎರಡು ತಿಂಗಳು ಕಳೆಯುವಷ್ಟರಲ್ಲಿ ಈ ರೀತಿಯ ಜನರಿಗೆ ಹೊರೆಯಾದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ. ಅಲ್ಲದೆ, ಬೆಂಗಳೂರಿನಿಂದ ಮೈಸೂರಿಗೆ ಸ್ವಂತ ವಾಹನದಲ್ಲಿ ಹೋಗಿ ಬರಲು ಟೋಲ್ ಶುಲ್ಕವಾಗಿಯೇ 500 ರೂಪಾಯಿ ಕಟ್ಟಬೇಕೆಂದರೆ ನಿಜಕ್ಕೂ ಪ್ರಯಾಣ ಎಂಬುದು ದುಸ್ತರವಾಗಲಿದೆ.

ಒಂದೆಡೆ ಆರಂಭಿಕ ಹಂತದಲ್ಲಿ ಟೋಲ್ ಶುಲ್ಕ ಬೀಳುತ್ತಿದೆ. ಇದನ್ನು ಜೂನ್‌ 1ರಿಂದಲೇ ಜಾರಿಗೆ ಬರುವಂತೆ ಶೇಕಡಾ 22ರಷ್ಟು ಹೆಚ್ಚಳ ಮಾಡಿ ಆದೇಶಿಸಲಾಗಿತ್ತು. ಮೊದಲೇ ಬೆಲೆ ಏರಿಕೆ ಸೇರಿದಂತೆ ಇನ್ನಿತರ ಸಮಸ್ಯೆಗಳಿಂದ ಬಳಲುತ್ತಿರುವ ಜನರಿಗೆ ಇದು ದೊಡ್ಡ ಹೊರೆಯಾಗಲಿದೆ.

ಬಾಕಿ ಉಳಿದಿರುವ ಕಾಮಗಾರಿಗಳು ಹತ್ತಾರು ಇವೆ. ಅವುಗಳು ಇನ್ನೂ ಕುಂಟುತ್ತಾ ಸಾಗಿವೆ. ಕೇಳಿದರೆ ಕುಂಟು ನೆಪಗಳನ್ನು ಹೇಳಲಾಗುತ್ತಿದೆ. ಆದರೆ, ಜನರಿಂದ ದುಡ್ಡು ಪಡೆಯಲು ಮಾತ್ರ ಇದಾವುದೂ ಲೆಕ್ಕಕ್ಕೇ ಬಾರದು ಎಂದರೆ ಹೇಗೆ?

ಮಂಡ್ಯ ತಾಲೂಕಿನ ಹನಕೆರೆ ಅಂಡರ್ ಪಾಸ್, ಹಳೇ ಬೂದನೂರು ಹಾಗೂ ಹೊಸ ಬೂದನೂರು ನಡುವಿನ ಸರ್ವಿಸ್ ರಸ್ತೆಗೆ ನಿರ್ಮಾಣ ಮಾಡುತ್ತಿರುವ ಸೇತುವೆ ಸೇರಿದಂತೆ ಹಲವು ಕಾಮಗಾರಿಗಳು ಅಪೂರ್ಣವಾಗಿವೆ. ಈ ಹಂತದಲ್ಲಿ ಟೋಲ್ ಸಂಗ್ರಹ ಮಾಡುವುದು ಸರಿ ಅಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ನಡೆ ಖಂಡನಾರ್ಹವಾಗಿದೆ. ಈ ಬಗ್ಗೆ ಕ್ರಮ ವಹಿಸಬೇಕು ಎಂದು ವಿನಂತಿಸಿದ್ದಾರೆ.

Related News

spot_img

Revenue Alerts

spot_img

News

spot_img