Ramnavami#Celebration#Festival#speciality
ಬೆಂಗಳೂರು, ಮಾ. 28 : ಶ್ರೀರಾಮ ನವಿಮಿಯನ್ನು ಇಡೀ ಭಾರತದಲ್ಲಿ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ಉತ್ತರ ಭಾರತದಲ್ಲಿ ಶ್ರೀರಾಮ ಜನ್ಮ ಸ್ಥಳವಾದ ಅಯೋಧ್ಯೆಯಲ್ಲಿ ಅದ್ಧೂರಿಯಾಗಿ ಏಲ್ಲರೂ ಸೇರಿ ಆಚರಣೆಯನ್ನು ಮಾಡುತ್ತಾರೆ. ಈಗ ರಾಮನ ಜನ್ಮ ದಿನ ಹತ್ತಿರ ಬರುತ್ತಿದೆ. ಇದೇ ಸಂದರ್ಭದಲ್ಲಿ ರಾಮನ ಬಗ್ಗೆ ಒಂದಷ್ಟು ಅಂಶಗಳನ್ನು ತಿಳಿದುಕೊಳ್ಳೋಣ ಬನ್ನಿ.
ಶ್ರೀರಾಮ ಜನಿಸಿದ ವಂಶದ ಬಗ್ಗೆ ಒಬ್ಬರು ಒಂದೊಂದು ಹೆಸರಿನಲ್ಲಿ ಕರೆಯುತ್ತಾರೆ. ಶ್ರೀರಾಮನು ಹುಟ್ಟಿದ ವಂಶಕ್ಕೆ ಹಲವಾರು ಹೆಸರುಗಳಿವೆ. ಸೂರ್ಯ ವಂಶ ಎಂದು ಕೆಲವರು ಕರೆದರೆ, ಇಕ್ಷ್ವಾಕು ವಂಶ ಎಂದು ಮತ್ತಷ್ಟು ಮಂದಿ ಕರೆದಿದ್ದಾರೆ. ಇನ್ನು ಕೆಲವರು ರಘು ವಂಶ ಎಂದು ಕೂಡ ಕರೆಯುತ್ತಾರೆ. ಆದರೆ ಇದೆಲ್ಲವೂ ಒಂದೇ ಎಂದು ಮತ್ತು ಕೆಲವರು ಹೇಳುತ್ತಾರೆ. ಹೆಚ್ಚಾಗಿ ಇಕ್ಷ್ವಾಕು ವಂಶ ಎಂದು ಬಳಸುವುದು ರೂಢಿಯಲ್ಲಿದೆ.
ಭೂಮಿಯ ಮೇಲೆ ರಾವಣನ ಕಾಟವನ್ನು ತಾಳಲಾರದೆ. ದೇವತೆಗಳೆಲ್ಲರೂ ರಾವಣನನ್ನು ಸಂಹರಿಸಲು ಯಾರು ಸರಿ ಎಂದು ಯೋಚಿಸುತ್ತಾರೆ. ಆಗ ಅವರಿಗೆಲ್ಲಾ ಕಣ್ಣ ಮುಂದೆ ಬರುವುದು ನಾರಾಯಣ. ಹೀಗಾಗಿ ದೇವತೆಗಳು ವೈಕುಂಠಕ್ಕೆ ಹೋಗಿ ನಾರಾಯಣನಲ್ಲಿ ಪ್ರಾರ್ಥನೆಯನ್ನು ಮಾಡಿಕೊಳ್ಳುತ್ತಾರೆ. ಹೇಗಾದರೂ ಮಾಡಿ ರಾವಣನನ್ನು ಸಂಹಾರ ಮಾಡು ಎಂದು ಕೇಳಿಕೊಳ್ಳುತ್ತಾರೆ. ಹಾಗಾಗಿ ನಾರಾಯಣ ಶ್ರೀರಾಮನ ಅವತಾರದಲ್ಲಿ ಜನಿಸಿದ ಎಂದು ಪುರಾಣದಲ್ಲಿ ಹೇಳಲಾಗಿದೆ.
ಇದೇ ಸಂದರ್ಭದಲ್ಲಿ ಭೂಲೋಕದಲ್ಲಿ ದಶರಥನಿಗೆ ಮೂವರು ಪತ್ನಿಯರಿದ್ದರೂ ಪುತ್ರ ಪ್ರಾಪ್ತಿ ಆಗಿರುವುದಿಲ್ಲ. ಆಗ ಋಷ್ಯಶೃಂಗರು ಹೇಳಿದಂತೆ ದಶರಥ ಮಹಾರಾಜನು ಪುತ್ರ ಪ್ರಾಪ್ತಿಗಾಗಿ ಪುತ್ರ ಕಾಮೇಷ್ಠಿ ಯಜ್ಞವನ್ನು ಮಾಡುತ್ತಾನೆ. ಹೋಮ ಕುಂಡದ ಅಗ್ನಿಯಿಂದ ಒಬ್ಬ ದಿವ್ಯ ಪುರುಷ ಪ್ರಕಟವಾಗುತ್ತಾನೆ. ಆತ ಚಿನ್ನದ ಪಾತ್ರೆಯಲ್ಲಿರುವ ಪಾಯಸವನ್ನು ದಶರಥ ಮಹಾರಾಜನಿಗೆ ಕೊಟ್ಟು, ನಿನ್ನ ಪತ್ನಿಯರಿಗೆ ಕೊಡು ಎಂದು ಹೇಳುತ್ತಾನೆ. ದಶರಥ ಮಹಾರಾಜನು ಆ ಪಾಯಸವನ್ನು ಕೌಸಲ್ಯೆ, ಸುಮಿತ್ರೆ, ಮತ್ತು ಕೈಕೇಯಿಗೆ ಕೊಡುತ್ತಾನೆ.
ಇದಾದ ಬಳಿಕ ಕೌಸಲ್ಯೆಯ ಮಗನಾಗಿ ರಾಮನು, ಕೈಕೇಯಿ ಮಗನಾಗಿ ಭರತನು, ಸುಮಿತ್ರೆಯ ಮಕ್ಕಳಾಗಿ ಲಕ್ಷ್ಮಣ ಮತ್ತು ಶತ್ರುಘ್ನರು ಚೈತ್ರ ಮಾಸದಲ್ಲಿ ಜನಿಸುತ್ತಾರೆ. ಇವರೆಲ್ಲರೂ ಶ್ರೀವಿಷ್ಣುವಿನ ಅವತಾರ ಎಂದು ಕೂಡ ಹೇಳಲಾಗಿದೆ. ಸಾಕ್ಷಾತ್ ” ಶ್ರೀಮನ್ ನಾರಾಯಣನೇ” ರಾಮ, ಭರತ, ಲಕ್ಷ್ಮಣ, ಶತ್ರುಘ್ನರಾಗಿ ಅವತಾರ ಮಾಡಿದ್ದು. 4 ಜನ ಬೇರೆ ಬೇರೆಯಂತೆ ಕಂಡರೂ ಒಬ್ಬನೇ ಪರಮಾತ್ಮ ಎಂದು ಹೇಳಲಾಗಿದೆ.
ರಾಮನದ್ದು ಪುನರ್ವಸು ನಕ್ಷತ್ರ ನವಮಿ ತಿಥಿಯ ಮಧ್ಯಾಹ್ನ ಜನಿಸಿದ್ದು. ಭರತ ಪುಷ್ಯ ನಕ್ಷತ್ರ ದಶಮೀ ತಿಥಿ ಹಾಗೂ ಲಕ್ಷ್ಮಣ ಶತ್ರುಘ್ನ ರದ್ದು ದಶಮೀ ತಿಥಿ ಆಶ್ಲೇಷ ನಕ್ಷತ್ರದಲ್ಲಿ ಜನಿಸಿದ್ದಾರೆ. ಇನ್ನು ರಾವಣನ ಸಂಹಾರ ಮಾಡಲು ಹಾಗೂ ರಾಮ ಲಕ್ಷ್ಮಣರ ಸೇವೆಯನ್ನು ಮಾಡುವ ಸಲುವಾಗಿ ಹನುಮಂತ, ಜಾಂಬವಂತ, ಸುಗ್ರೀವ ಇತ್ಯಾದಿ ವಾನರರು ಕೂಡ ಮುಂಚೆಯೇ ಅವತಾರ ಮಾಡಿರುತ್ತಾರೆ.
ಶ್ರೀರಾಮನು ಅವತಾರ ಮಾಡಿದ ದಿನವೇ ರಾಮದಾಸರೂ ಅವತಾರ ಮಾಡಿದ ದಿನ. ಕಲಿಯುಗದಲ್ಲಿ ರಾಮದಾಸರು ಅವತಾರವೆತ್ತಿದ್ದು, 1608ರಲ್ಲಿ ರಾಮ ನವಮಿಯಂದೇ ಜನಿಸಿದ್ದಾರೆ. ರಾಮ ಭಕ್ತ ಹನುಮ ಸಮರ್ಥ ರಾಮದಾಸರಾಗಿ ಅವತಾರ ಮಾಡಿದ್ದಾರೆ. ರಾಮ ನಾಮ ಮಹಿಮೆಯನ್ನು ಸಾರಿದ್ದಾರೆ. ಇನ್ನು ರಾಮ ಲಕ್ಷ್ಮಣರ ತರಹ ಅಣ್ಣ ತಮ್ಮ ಇರಬೇಕು ಹಾಗೂ ರಾಮ ಹನುಮನ ತರಹ ಗುರು ಶಿಷ್ಯರಿರ ಬೇಕು ಎಂಬುದನ್ನು ಇವರನ್ನು ನೋಡಿ ಕಲಿಯಬೇಕು.