ಬೆಂಗಳೂರು, ಫೆ. 17 : ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದೆನಿಸಿರುವ ಮಲೆ ಮಹದೇಶ್ವರ ಬೆಟ್ಟಕ್ಕೆ ಪ್ರತೀ ವರ್ಷವೂ ಸುತ್ತೂರು ಜನರು ಪಾದಯಾತ್ರೆ ಬರುತ್ತಾರೆ. ಬೆಟ್ಟದಲ್ಲಿ ಶಿವರಾತ್ರಿ ಹಿನ್ನೆಲೆ ನಾಲ್ಕು ದಿನಗಳ ಕಾಲ ಜಾತ್ರಾ ಮಹೋತ್ಸವ ನಡೆಯುತ್ತದೆ. ರಾಜ್ಯದ ನಾನಾ ಮೂಲೆಗಳಿಂದ ಭಕ್ತ ಸಮೂಹ ಪಾದಯಾತ್ರೆ ಮೂಲಕ ಆಗಮಿಸುತ್ತಾರೆ. ಹೀಗೆ ಪಾದಯಾತ್ರೆ ಮಾಡಲು ಕಾರಣವೇನು..? ಯಾವೆಲ್ಲಾ ಭಕ್ತ ಸಮೂಹ ಪಾದಯಾತ್ರೆಯನ್ನು ಕೈಗೊಳ್ಳುತ್ತಾರೆ..? ಇದರ ಇತಿಹಾಸವೇನು ಎಂಬುದನ್ನು ನೋಡೋಣ ಬನ್ನಿ..
ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ನಾಲ್ಕು ದಿನ ಹಿಂದಿನಿಂದಲೇ ತಂಡೋಪ ತಂಡವಾಗಿ ಪಾದಯಾತ್ರೆಯನ್ನು ಕೈಗೊಳ್ಳುತ್ತಾರೆ. ಕಾವೇರಿ ನದಿ ದಾಟಿ ಕಾಡಿನ ಮುಖಾಂತರ ಪಾದಯಾತ್ರೆ ಮಾಡಿ ಮಲೆ ಮಹದೇಶ್ವರ ಬೆಟ್ಟವನ್ನು ತಲುಪುತ್ತಾರೆ. ಮಹದೇಶ್ವರನ ದರ್ಶನ ಮಾಡಿ ಜಾತ್ರೆಯಲ್ಲಿ ಪಾಲ್ಗೊಂಡು ಮನೆಗಳಿಗೆ ವಾಪಸ್ಸಾಗುತ್ತಾರೆ. ಇನ್ನು ಪೊಲೀಸರ ಕಣ್ಗಾವಲಿನಲ್ಲಿ ಪಾದಚಾರಿಗಳಿಗೆ ರಕ್ಷಣೆ ನೀಡಲಾಗುತ್ತದೆ. ಪಾದಯಾತ್ರೆ ಜರುಗುವ ಸ್ಥಳದಲ್ಲಿ ಮಜ್ಜಿಗೆ, ಪಾನಕದ ವ್ಯವಸ್ಥೆ. ಸುಸ್ತಾದವರಿಗೆ ಚಿಕಿತ್ಸೆ ನೀಡಲು ಕೂಡ ವ್ಯವಸ್ಥೆಗಳನ್ನು ಮಾಡಲಾಗುತ್ತದೆ. ಮಾದಪ್ಪನಿಗೆ ಹರಕೆ ಹೊತ್ತ ಭಕ್ತರು ಪಾದಯಾತ್ರೆಯನ್ನು ಕೈಗೊಳ್ಳುತ್ತಾರೆ.
ಹತ್ತಾರು ವರ್ಷಗಳಿಂದ ಭಕ್ತರು ಮಲೆ ಮಹದೇಶ್ವರ ಬೆಟ್ಟಕ್ಕೆ ಶಿವರಾತ್ರಿಯಲ್ಲಿ ಪಾದಯಾತ್ರೆಯನ್ನು ಕೈಗೊಳ್ಳುತ್ತಾರೆ. ಪಾದಯಾತ್ರೆಯಲ್ಲಿ ಭಾಗವಹಿಸುವ ಭಕ್ತರು ಹರಕೆಗಳನ್ನು ಹೊತ್ತಿರುತ್ತಾರೆ. ತಮ್ಮ ಹರಕೆ ಈಡೇರಿದವರು ಪಾದಯಾತ್ರೆಯನ್ನು ಮಾಡುತ್ತಾರೆ. ಪಾದಯಾತ್ರೆ ಮಾಡುವ ಮೂಲಕ ಮಲೆ ಮಹದೇಶ್ವರನಿಗೆ ಹರಕೆಯನ್ನು ತೀರಿಸುತ್ತಾರೆ. ಈ ಪಾದಯಾತ್ರೆಯಲ್ಲಿ ಕೋಲಾರ, ಬೆಂಗಳೂರು, ಮಂಡ್ಯ, ರಾಮನಗರ, ಮೈಸೂರು, ಚನ್ನಪಟ್ಟಣ, ಬಿಡದಿ ಕಡೆಗಳಿಂದ ಭಕ್ತರು ಆಗಮಿಸುತ್ತಾರೆ. ಇನ್ನು ಈ ವರ್ಷ ವಿಶೇಷವಾಗಿ ಮದುವೆಯಾಗದೇ 30 ವರ್ಷ ದಾಟಿದ ಯುವಕರು ಕೂಡ ಪಾದಯಾತ್ರೆ ಮಾಡುತ್ತಿರುವುದು ವಿಶೇಷ.
ಬೆಂಗಳೂರು, ಕನಕಪುರ, ನೆಲಮಂಗಲ, ಮಾಗಡಿ, ಸಾತನೂರು, ಹಾರೋಹಳ್ಳಿ, ರಾಮನಗರ ಕಡೆಯಿಂದ ಕಾಲ್ನಡಿಗೆಯಲ್ಲಿ ಬಸವನ ಕಡಲು ಮೂಲಕ ಕಾವೇರಿ ನದಿ ದಾಟಿ ದುರ್ಗಮ ಕಾವೇರಿ ವನ್ಯಧಾಮದಲ್ಲಿ ಬರಿಗಾಲಿನಲ್ಲಿ ಸಾಗಲಾಗುತ್ತೆ. ಪ್ರತಿ ವರ್ಷ ಜರುಗುವ ಜಾತ್ರೆಗೆ ಲಕ್ಷ ಲಕ್ಷ ಜನ ಸೇರುತ್ತಾರೆ. ಲಕ್ಷಾಂತರ ಭಕ್ತರಿಗೆ ಅಲ್ಲಲ್ಲಿ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಜಾತ್ರೆ ಹಿನ್ನೆಲ್ಲೆ ಮಹದೇಶ್ವರನಿಗೆ ವಿಶೇಷ ಸೇವೆಗಳನ್ನು ಸಲ್ಲಿಸಲು ಅವಕಾಶವಿರುತ್ತದೆ. ಈಗಾಗಲೇ ಸಾವಿರಾರು ಮಂದಿ ಪಾದಯಾತ್ರೆ ಮೂಲಕ ಬೆಟ್ಟವನ್ನು ತಲುಪಿರುತ್ತಾರೆ.
ಪಾದಯಾತ್ರೆ ಮಾಡುವ ಭಕ್ತರು ಮೊದಲು ಶಿವಶರಣೆ ಮುದ್ದಮ್ಮನಿಗೆ ಪೂಜೆಯನ್ನು ಸಲ್ಲಿಸುತ್ತಾರೆ. ಬಳಿಕ ಮಹದೇಶ್ವರನ ದರ್ಶನ ಮಾಡುವುದು ವಾಡಿಕೆ. ಇದು ಶತಮಾನಗಳಿಂದಲೂ ನಡೆದುಕೊಂಡು ಬಂದಿರುವ ಆಚರಣೆಯಾಗಿದೆ. ಏಳಗಳ್ಳಿ ಗ್ರಾಮದಲ್ಲಿ ಮುದ್ದಮ್ಮ ತಾಯಿಯ ದೇವಾಲಯವಿದೆ. ಇಲ್ಲಿ ಪೂಜೆ ಸಲ್ಲಿಸಿದ ನಂತರ ಅನ್ನ ದಾಸೋಹ ವ್ಯವಸ್ಥೆ ಇರುತ್ತದೆ. ಭಕ್ತರು ಊಟ ಮಾಡಿ ವಿಶ್ರಾತಿ ಪಡೆಯುತ್ತಾರೆ. ನಂತರವಷ್ಟೇ ಮಹದೇಶ್ವರನ ದರ್ಶನ ಮಾಡಿ ಹರಕೆಯನ್ನು ಪೂರೈಸುತ್ತಾರೆ.