21.1 C
Bengaluru
Monday, December 23, 2024

ತಾವೇ ವಿವಾಹ ನೆರವೇರಿಸಿ, ಮದುವೆ ಪ್ರಮಾಣಪತ್ರ ನೀಡುವ ವಕೀಲರ ವಿರುದ್ಧ ಕ್ರಮ ಕೈಗೊಳ್ಳಿ: ಹೈಕೋರ್ಟ್

ವಕೀಲರು ತಮ್ಮ ಕಚೇರಿಗಳಲ್ಲಿ ನಡೆಸುವ ಅಥವಾ ಕಾರ್ಮಿಕ ಸಂಘಗಳ ಕಚೇರಿಯಲ್ಲಿ ನಡೆಯುವ ಗೌಪ್ಯ ವಿವಾಹ ಮತ್ತು ಅದಕ್ಕೆ ವಿವಾಹ ಪ್ರಮಾಣಪತ್ರ ನೀಡುವ ವಕೀಲರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ತಮಿಳುನಾಡು ರಾಜ್ಯ ವಕೀಲರ ಪರಿಷತ್ತಿಗೆ ಸೂಚಿಸಿದೆ.

ಮಧುರೈ ಪೀಠದ ನ್ಯಾಯಮೂರ್ತಿಗಳಾದ ಎಂ ದಂಡಪಾಣಿ ಮತ್ತು ಆರ್ ವಿಜಯಕುಮಾರ್ ಅವರಿದ್ದ ರಜಾಕಾಲೀನ ಪೀಠ ಮೇ 5ರಂದು ನೀಡಿದ ಆದೇಶದಲ್ಲಿ ಸುಪ್ರೀಂ ಕೋರ್ಟ್ ಪ್ರಕಾರ ಅಂತಹ ವಿವಾಹ ಹಾಗೂ ಅದಕ್ಕೆ ನೀಡಲಾದ ವಿವಾಹ ಪ್ರಮಾಣಪತ್ರಗಳು ಅಸಿಂಧು ಎಂದು ಹೇಳಿದೆ.

ʼಆತ್ಮಗೌರವʼ ಹೆಸರಿನಡಿ ನಡೆಯುವ ಎಲ್ಲಾ ವಿವಾಹಗಳು ತಮಿಳುನಾಡು ವಿವಾಹ ನೋಂದಣಿ ಕಾಯಿದೆ- 2009ರ ಅಡಿ ನೋಂದಣಿಯಾಗಿರಬೇಕು ಮತ್ತು ಕಕ್ಷಿದಾರರು ಭೌತಿಕವಾಗಿ ರಿಜಿಸ್ಟ್ರಾರ್ ಮುಂದೆ ಹಾಜರಾಗಬೇಕು ಎಂದು ಪೀಠ ಹೇಳಿದೆ.

ತಮಿಳುನಾಡಿನಲ್ಲಿ ದ್ರಾವಿಡ ಚಳವಳಿಯ ಹರಿಕಾರರಾದ ಪೆರಿಯಾರ್ ರಾಮಸ್ವಾಮಿ ಅವರ ಸ್ಫೂರ್ತಿಯಿಂದ ಆರಂಭವಾಗಿದ್ದ ಆತ್ಮಗೌರವ ವಿವಾಹ ಅಥವಾ ʼಸುಯಮಾರಿಯಾತೈʼನಲ್ಲಿ ಸಾಮಾನ್ಯವಾಗಿ ಹಿಂದೂ ವಿವಾಹಗಳಲ್ಲಿ ಕಂಡುಬರುವ ಮಂಗಳಸೂತ್ರ ಧಾರಣೆ, ಕನ್ಯಾದಾನ ಇತ್ಯಾದಿ ಆಚರಣೆಗಳು ಇರುವುದಿಲ್ಲ. ಬದಲಿಗೆ ಹಿರಿಯರು, ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಒಬ್ಬ ಅಧಿಕಾರಿ ಈ ಮದುವೆ ನೆರವೇರಿಸುತ್ತಾನೆ. ಕರ್ನಾಟಕದಲ್ಲಿ ರಾಷ್ಟ್ರಕವಿ ಕುವೆಂಪು ಅವರು ಕರೆಕೊಟ್ಟ ʼಮಂತ್ರ ಮಾಂಗಲ್ಯʼ ವಿವಾಹ ಈ ಬಗೆಯ ಮದುವೆ ಆಚರಣೆಯಿಂದ ಸ್ಫೂರ್ತಿ ಪಡೆದಿದೆ ಎನ್ನಬಹುದು.

ತಮಿಳುನಾಡು ಸರ್ಕಾರ 1968ರಲ್ಲಿ ಆತ್ಮಗೌರವ ವಿವಾಹಗಳನ್ನು ಕಾನೂನುಬದ್ಧಗೊಳಿಸಿತು, ವಿವಾಹದ ಕನಿಷ್ಠ ವಯೋಮಿತಿ ಪೂರೈಸಿದ ಜೋಡಿ, ಮೇಲ್ಜಾತಿಯ ಪುರೋಹಿತಶಾಹಿತ್ವ ಮತ್ತು ಗೊಡ್ಡು ಆಚರಣೆಗಳನ್ನು ಧಿಕ್ಕರಿಸಿ ಪರಸ್ಪರ ಒಪ್ಪಿಗೆ ಮೇಲೆ ಈ ಬಗೆಯ ವಿವಾಹವಾಗುತ್ತಾರೆ. ಆದರೂ ಇಂತಹ ವಿವಾಹಗಳು ಕಾನೂನು ಪ್ರಕಾರ ನೋಂದಾಯಿಸಿಕೊಳ್ಳಬೇಕಾಗುತ್ತದೆ.

“ತಮ್ಮ ಕಚೇರಿ ಅಥವಾ ಕಾರ್ಮಿಕ ಸಂಘಗಳ ಕಚೇರಿಗಳಲ್ಲಿ ವಿಶೇಷ ವಿವಾಹ ನೆರವೇರಿಸಲು ವಕೀಲರಿಗೆ ಹೇಗೆ ಅಧಿಕಾರ ದೊರೆಯಿತು ಎಂದು ನಮಗೆ ಅಚ್ಚರಿಯಾಗುತ್ತದೆ” ಎಂದು ಹೈಕೋರ್ಟ್ ನುಡಿದಿದೆ.

ಎಸ್ ಬಾಲಕೃಷ್ಣನ್ ಪಾಂಡಿಯನ್ ವಿರುದ್ಧ ಪೊಲೀಸ್ ವರಿಷ್ಠಾಧಿಕಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ 2014ರಲ್ಲಿ ನೀಡಿದ ತೀರ್ಪು ವಕೀಲರ ಕಚೇರಿಗಳು ಮತ್ತು ವಕೀಲರ ಸಂಘಗಳ ಕೋಣೆಗಳಲ್ಲಿ ಗೋಪ್ಯವಾಗಿ ನಡೆಸುವ ವಿವಾಹಗಳು ಕಾನೂನಿನಡಿ ಮಾನ್ಯವಲ್ಲ ಎಂದು ಹೇಳಿದೆ ಎಂಬುದಾಗಿ ಹೈಕೋರ್ಟ್ ತಿಳಿಸಿದೆ.

ಹಿಂದೂ ವಿವಾಹ ಕಾಯಿದೆಯ ಸೆಕ್ಷನ್ 7-ಎ ಅಡಿಯಲ್ಲಿ ಕಾರ್ಮಿಕ ಸಂಘದ ವಕೀಲರು ಮತ್ತು ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲಿ ತಮ್ಮ ವಿವಾಹ ನೆರವೇರಿದ್ದರೂ ತನ್ನ ಪತ್ನಿಯನ್ನು ಆಕೆಯ ಪೋಷಕರು ಬಲವಂತವಾಗಿ ಬಂಧಿಸಿಟ್ಟುಕೊಂಡಿದ್ದಾರೆ. ವಕೀಲರು ತಮಗೆ ಆತ್ಮ ಗೌರವ ವಿವಾಹ ಪ್ರಮಾಣಪತ್ರವನ್ನೂ ನೀಡಿದ್ದಾರೆ ಎಂದು ವಿವರಿಸಿ ಇಳವರಸನ್ ಎಂಬುವವರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ತೀರ್ಪು ನೀಡಿದೆ.

ಆದರೆ ಇಳವರಸನ್ ಅವರ ಮದುವೆ ಅಸಿಂಧು ಎಂದು ಪರಿಗಣಿಸಿದ ನ್ಯಾಯಾಲಯ ಸಂಬಂಧಪಟ್ಟ ವಕೀಲರಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳುವಂತೆ ವಕೀಲರ ಪರಿಷತ್ತಿಗೆ ಸೂಚಿಸಿತು. ರಾಜ್ಯಾದ್ಯಂತ ಇಂತಹ ವಿವಾಹಗಳನ್ನು ನಡೆಸುತ್ತಿರುವ ಎಲ್ಲ ವಕೀಲರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಪರಿಷತ್ಗೆ ನ್ಯಾಯಾಲಯ ತಾಕೀತು ಮಾಡಿದೆ.

Related News

spot_img

Revenue Alerts

spot_img

News

spot_img