ಆಸ್ತಿ ತೆರಿಗೆ ಪಾವತಿಸಲು ವಿಫಲವಾದ ರಿಯಲ್ ಎಸ್ಟೇಟ್ ಡೆವಲಪರ್ಗಳಿಗೆ ನೋಟಿಸ್ ನೀಡುವ ಕಾರ್ಯವನ್ನು ನೋಯ್ಡಾ ಪ್ರಾಧಿಕಾರ ಆರಂಭಿಸಿದೆ. ಸುಪ್ರೀಂ ಕೋರ್ಟ್ ಇತ್ತೀಚೆಗಷ್ಟೇ, ಭೂಮಿ ಗುತ್ತಿಗೆ ನೀಡುವಾಗಿನ ಒಪ್ಪಂದದ ಪ್ರಕಾರ ಬಡ್ಡಿ ಸಹಿತ ಬಾಕಿ ಮೊತ್ತ ವಸೂಲಿ ಮಾಡಲು ಆದೇಶಿಸಿ ಪ್ರಾಧಿಕಾರದ ದಾರಿಯನ್ನು ಸುಗಮಗೊಳಿಸಿತ್ತು. ಅದರ ಬೆನ್ನಲ್ಲೇ ಈ ಕ್ರಮ ಜಾರಿಯಾಗಿದೆ.
9,000 ಕೋಟಿ ರೂಪಾಯಿಗಳಿಗಿಂತಲೂ ಅಧಿಕ ಮೊತ್ತ ಬಾಕಿ ಉಳಿಸಿಕೊಂಡಿರುವ ಸುಮಾರು 75 ಡೆವಲಪರ್‌ಗಳಿಗೆ ನೋಟಿಸ್ ನೀಡಲಾಗುತ್ತಿದೆ ಎಂದು ಪ್ರಾಧಿಕಾರ ತಿಳಿಸಿದೆ.
ಬಡ್ಡಿ ಸಹಿತ ಬಾಕಿ ಮೊತ್ತವನ್ನು ಪ್ರಾಧಿಕಾರಕ್ಕೆ ಪಾವತಿಸಬೇಕು ಎಂದು ಸುಪ್ರೀಂ ಕೋರ್ಟ್ ನವೆಂಬರ್ 7ರಂದು ಡೆವಲಪರ್‌ಗಳಿಗೆ ಆದೇಶಿಸಿತ್ತು. ವಿಳಂಬವಾದ ಮೊತ್ತಕ್ಕೆ ಶೇ 8ರಷ್ಟು ಬಡ್ಡಿ ಪಾವತಿಸಬೇಕು ಎಂಬ ತನ್ನ ಈ ಹಿಂದಿನ ಆದೇಶವನ್ನು ಮರು ಉಲ್ಲೇಖಿಸಿತು.
ಬಾಕಿ ಮೊತ್ತದ ರೂಪದಲ್ಲಿ ಇನ್ನೂ 26,000 ಕೋಟಿ ರೂಪಾಯಿ ಪ್ರಾಧಿಕಾರದ ಬೊಕ್ಕಸಕ್ಕೆ ಬರಬೇಕಿದೆ. ಆದರೆ ಬಡ್ಡಿ ದರವನ್ನು ಶೇ 8ಕ್ಕೆ ಮಿತಿಗೊಳಿಸಿದರೆ ಪ್ರಾಧಿಕಾರವು 12,776 ಕೋಟಿ ರೂಪಾಯಿಗಳ ನಷ್ಟ ಅನುಭವಿಸಲಿದೆ.
ಸಮೂಹ ವಸತಿ ವಿಭಾಗದ ಉಸ್ತುವಾರಿ ಪ್ರಸೂನ್ ದ್ವಿವೇದಿ, ʻಬಾಕಿ ಪಾವತಿಸಲು ಡೆವಲಪರ್ಗಳಿಗೆ 15 ದಿನಗಳ ಅವಕಾಶ ಇದೆ. ಅನಂತರವೂ ಪಾವತಿ ಬಾಕಿ ಉಳಿಸಿಕೊಂಡವರಿಗೆ ವಸೂಲಾತಿ ದೃಢೀಕರಣ ಪತ್ರ ನೀಡಲಾಗುವುದು. ಯಾವುದೇ ಮೂರನೇ ವ್ಯಕ್ತಿ ಆಸಕ್ತಿ ತೋರದಿದ್ದಲ್ಲಿ ಡೆವಲಪರ್‌ಗಳ ಭೂಮಿ ಹಂಚಿಕೆ ರದ್ದು ಮಾಡಲಾಗುವುದು. ವಸೂಲಾತಿ ದೃಢೀಕರಣ ಪತ್ರ ನೀಡಿದ ನಂತರವೂ ಪಾವತಿಸದ ಸ್ವತ್ತುಗಳನ್ನು ಹರಾಜು ಮಾಡುವ ಅವಕಾಶವೂ ಇದೆʼ ಎಂದರು.
ಪ್ರಾಧಿಕಾರವು ಪ್ರತಿ ದಿನ 4-5 ಡೆವಲಪರ್‌ಗಳೊಂದಿಗೆ ಸಭೆ ನಡೆಸಿ, ಬೇಗನೆ ಬಾಕಿ ಮೊತ್ತ ಪಾವತಿಸುವಂತೆ ಒತ್ತಡವನ್ನೂ ಹೇರುತ್ತಿದೆ.
ಡೆವಲಪರ್‌ಗಳು ಬಾಕಿ ಚುಕ್ತಾ ಮಾಡಿದ ನಂತರ ಪ್ರಾಧಿಕಾರವು ಅವರ ಫ್ಲಾಟ್‌ಗಳ ನೋಂದಣಿ ಪ್ರಕ್ರಿಯೆ ಪ್ರಾರಂಭಿಸುವುದರಿಂದ ಈ ಕ್ರಮವು ಮನೆ ಖರೀದಿಸಿದ ಸಾವಿರಾರು ಜನರಿಗೆ ನಿರಾಳ ಒದಗಿಸುವ ಸಾಧ್ಯತೆಯಿದೆ. ನೋಂದಣಿ ವಿಳಂಬವು ವಾರಾಂತ್ಯದಲ್ಲಿ ನಿವಾಸಿಗಳ ಹಲವು ಪ್ರತಿಭಟನೆಗಳಿಗೆ ಕಾರಣವಾಗುತ್ತಿದೆ.
ಆದಾಗ್ಯೂ, ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ ) ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವ ಪ್ರಕರಣಗಳಲ್ಲಿ ಡೆವಲಪರ್‌ಗಳಿಗೆ ಪ್ರಾಧಿಕಾರವು ನೋಟಿಸ್ ನೀಡುವುದಿಲ್ಲ.
ʻರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯಲ್ಲಿ 20 ನಿರ್ಮಾಣ ಯೋಜನೆಗಳ ವಿಚಾರಣೆ ನಡೆಯುತ್ತಿದೆ ಮತ್ತು ಅವುಗಳ ಡೆವಲಪರ್ಗಳು ವಿವಿಧ ಪ್ರಾಧಿಕಾರಗಳಿಗೆ ಉಳಿಸಿಕೊಂಡಿರುವ ಬಾಕಿ ಮೊತ್ತ 3,000 ಕೋಟಿ ರೂಪಾಯಿ ಇದೆ. ಅವುಗಳ ಹೊರತಾಗಿ ಯುನಿಟೆಕ್, ಆಮೃಪಾಲಿ, ಜಯ್ಪೀ ಯೋಜನೆಗಳ ವಿಚಾರಣೆ ಸುಪ್ರೀಂ ಕೋರ್ಟ್ನಲ್ಲಿ ನಡೆಯುತ್ತದೆʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಧಿಕಾರದ ವರದಿ ಪ್ರಕಾರ, ನೋಯ್ಡಾದ 116 ಸಮೂಹ ವಸತಿ ಯೋಜನೆಯಲ್ಲಿ ಅಂದಾಜು 1.7 ಲಕ್ಷ ಫ್ಲ್ಯಾಟ್ಗಳಿವೆ. ಈ ಪೈಕಿ ಈವರೆಗೆ 60,675 ಫ್ಲ್ಯಾಟ್‌ಗಳಿಗೆ ಉಪ ಗುತ್ತಿಗೆ ಕರಾರು ಮಾಡಿಕೊಳ್ಳಲಾಗಿದೆ. 47 ಯೋಜನೆಗಳು ಪೂರ್ಣಗೊಂಡಿದ್ದು, ಅವುಗಳಲ್ಲಿ 40,807 ಫ್ಲ್ಯಾಟ್ಗಳು ಸಿದ್ಧಗೊಂಡಿವೆ. ಅಕ್ಟೋಬರ್ ವರೆಗೆ 98,833 ಫ್ಲ್ಯಾಟ್‌ಗಳಿಗೆ ಸ್ವಾಧೀನ ಪ್ರಮಾಣಪತ್ರ ವಿತರಿಸಲಾಗಿದೆ.