22.9 C
Bengaluru
Friday, July 5, 2024

ಸುಪ್ರಿಂ ತಡೆಯಾಜ್ಞೆ ತೆರವಿಗೆ ನಡೆಯದ ಪ್ರಯತ್ನ: ದಂಧೆ ಆಯ್ತು ರೆವಿನ್ಯೂ ನಿವೇಶನ ಅಕ್ರಮ ನೋಂದಣಿ:

Karnataka high court

ಬೆಂಗಳೂರು, ಜ. 05: ಇ – ಖಾತಾ ಇಲ್ಲದೇ ನಿವೇಶನ ನೋಂದಣಿ ಮಾಡಿ ಕೆಲ ಉಪ ನೋಂದಣಾಧಿಕಾರಿಗಳು ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಸರ್ಕಾರಿ ಸುತ್ತೋಲೆ ಉಲ್ಲಂಘನೆ ಮಾಡಿ ಇ ಖಾತಾ ಇಲ್ಲದ ( ರೆವಿನ್ಯೂ ನಿವೇಶನ) ನಿವೇಶನ ನೋಂದಣಿ ಮಾಡಿರುವ ಬಗ್ಗೆ ತಪಾಸಣೆ ನಡಸಿ ವರದಿ ಸಲ್ಲಿಸುವಂತೆ ಬೆಂಗಳೂರಿನ ಜಿಲ್ಲಾ ನೋಂದಣಾಧಿಕಾರಿಗಳೀಗೆ ನೋಂದಣಿ ಮಹಾ ಪರಿವೀಕ್ಷಕರು ಸೂಚನೆ ನೀಡಿದ್ದಾರೆ. ಏನಿದು ಇ ಖಾತಾ ಇಲ್ಲದ ನಿವೇಶನಗಳ ನೋಂದಣಿ ? ಯಾಕೆ ಅಕ್ರಮ ? ಹೈಕೋರ್ಟ್ ಏನು ತೀರ್ಪು ಕೊಟ್ಟಿತ್ತು. ಸುಪ್ರೀಂಕೋರ್ಟ್ ನೀಡಿರುವ ತಡೆಯಾಜ್ಞೆ ತೆರವಿಗೆ ಯಾಕೆ ಪ್ರಯತ್ನ ನಡೆಯಲಿಲ್ಲ. ಇದೇ ರೆವಿನ್ಯೂ ನಿವೇಶನಗಳ ಅಕ್ರಮ ನೋಂದಣಿ ಹಿಂದೆ ಹುಟ್ಟಿಕೊಂಡ ದಂಧೆಯ ಅಸಲಿ ಚಿತ್ರಣ ಭಾಗ – 2 ರಲ್ಲಿದೆ.

ಆರ್‌ಟಿಐ ಕಾರ್ಯಕರ್ತ ಎಸ್. ನಾರಾಯಣಸ್ವಾಮಿ ನೀಡಿದ ದೂರಿನ ಮೇರೆಗೆ ನೋಂದಣಿ ಮಹಾ ಪರಿವೀಕ್ಷಕಿ, ಮುದ್ರಾಂಕ ಇಲಾಖೆ ಅಯುಕ್ತೆ ಡಾ. ಬಿ.ಆರ್. ಮಮತಾ ಹದಿನೈದು ದಿನಗಳ ಕಾಲಾವಕಾಶ ಕೊಟ್ಟು ತಪಾಸಣೆ ನಡಸಿ ವರದಿ ಸಲ್ಲಿಸಲು ಸೂಚಿಸಿದ್ದರು. ಅಚ್ಚರಿ ಏನೆಂದರೆ, ಈ ತಪಾಸಣೆ ಏನಾಯಿತು ? ಅರ್‌ಟಿಐ ಕಾರ್ಯಕರ್ತನ ಸಾಮಾಜಿಕ ಹೋರಾಟ ಬೇರೆ ಅಯಾಮದಲ್ಲಿಯೇ ಮುಕ್ತಾಯವಾಗಿದೆ ಎಂಬ ಮಾತು ಕೇಳಿ ಬರುತ್ತಿವೆ. ಗನ್ ಮ್ಯಾನ್ ಗಳ ಭದ್ರತೆಯಲ್ಲಿ ಜಿಲ್ಲಾ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಅಪೀಲು ಅರ್ಜಿಗಳ ‘ವಿಲೇವಾರಿ’ ಅಗಿವೆ! ಸದ್ಯಕ್ಕೆ ಪ್ರಕರಣ ಇನ್ನೂ ತನಿಖಾ ಹಂತದಲ್ಲಿಯೇ ಇದೆ!

ತಿದ್ದುಪಡಿ ಸುತ್ತೋಲೆ ಮತ್ತು ಹೈಕೋರ್ಟ್ ಆದೇಶ :

ಇ- ಖಾತಾ ಇಲ್ಲದ ನಿವೇಶನ ನೋಂದಣಿಗೆ ನಿರ್ಬಂಧ ವಿಧಿಸಿ ನೋಂದಣಿ ನಿಯಮ 1965 ನಿಯಮ 73 ಕ್ಕೆ ತಿದ್ದುಪಡಿ ಸುತ್ತೋಲೆ ಹೊರಡಿಸಿ ಕರ್ನಾಟಕ ಸರ್ಕಾರ 2009 ರಲ್ಲಿ ಆದೇಶಿಸಿತ್ತು. ಈ ಮೂಲಕ ರೆವಿನ್ಯೂ ನಿವೇಶನಗಳ ನೋಂದಣಿಗೆ ನಿರ್ಬಂಧ ವಿಧಿಸಿತ್ತು. ಅನಧಿಕೃತ ಬಡಾವಣೆಗಳ ನಿರ್ಮಾಣಕ್ಕೆ ಕಡಿವಾಣ ಹಾಕುವ ಸರ್ಕಾರದ ಉದ್ದೇಶ ಸರಿಯಾಗಿಯೇ ಇತ್ತು. ಆಸ್ತಿಗಳ ದಸ್ತಾವೇಜು ನೋಂದಣಿಗೆ ಸಂಬಂಧಿಸಿದಂತೆ ಮೂಲ ನೋಂದಣಿ ನಿಯಮ 73 ಕ್ಕೆ ತದ್ವಿರುದ್ಧ ತಿದ್ದುಪಡಿ ಸುತ್ತೋಲೆ ಹೊರಡಿಸಿದ್ದ ಕರ್ನಾಟಕ ಸರ್ಕಾರದ ಕ್ರಮ ಪ್ರಶ್ನಿಸಿ ರಾಮಾಚಾರಿ ಎಂಬುವರು ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲ್ಲಿಸಿದ್ದರು. ಜಿ ರಾಮಾಚಾರಿ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿದ್ದ ಹೈಕೋರ್ಟ್ ಸರ್ಕಾರದ ತಿದ್ದುಪಡಿ ಸುತ್ತೋಲೆ ಕ.ಇ. 344,ಮುನೊಮು 2008 , ಬೆಂಗಳೂರು ರದ್ದು ಪಡಿಸಿತ್ತು.

ರೆವಿನ್ಯೂ ನಿವೇಶನಗಳ ನೋಂದಣಿಗೆ ನಿರ್ಬಂಧ ವಿಧಿಸಿದ್ದ ಕಂದಾಯ ಇಲಾಖೆಯ ತಿದ್ದುಪಡಿ ಸುತ್ತೋಲೆ ರದ್ದಾಗಿತ್ತು. ಹೈಕೋರ್ಟ್‌ ನೀಡಿದ ಅದೇಶದಿಂದ ಉಪ ನೋಂದಣಾಧಿಕಾರಿಗಳ ವಲಯದಲ್ಲಿ ಸಂತಸ ಮನೆ ಮಾಡಿತ್ತು. ಅನಾವಶ್ಯಕ ಇ ಖಾತಾ ಇಲ್ಲದ ನಿವೇಶನ ನೋಂದಣಿ ಮಾಡಿ ಅಕ್ರಮವನ್ನು ಮೈಮೇಲೆ ಎಳೆದುಕೊಂಡಿದ್ದಉಪ ನೋಂದಣಾಧಿಕಾರಿಗಳ ಮೇಲಿನ ಇಲಾಖಾ ವಿಚಾರಣೆ, ತನಿಖೆಗಳೆಲ್ಲವೂ ಹೈಕೋರ್ಟ್ ಆದೇಶದಿಂದ ಸ್ಥಗಿತವಾಗಿದ್ದವು.

ಹೈಕೋರ್ಟ್ ನ ಈ ಅದೇಶದ ವಿರುದ್ಧ ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಯಿತು. ಹೈಕೋರ್ಟ್ ತೀರ್ಪು ಪ್ರಶ್ನಿಸಿ ಅರ್ಜಿ ಸಲ್ಲಿಸಿದ ಕರ್ನಾಟಕ ಸರ್ಕಾರ ಹೈಕೋರ್ಟ್ ತೀರ್ಪಿನ ವಿರುದ್ಧ 2016 ರಲ್ಲಿ ತಡೆಯಾಜ್ಞೆ ತಂದಿತು. ಈ ತಡೆಯಾಜ್ಞೆಯಿಂದ ಕಂದಾಯ ಇಲಾಖೆಯ ತಿದ್ದುಪಡಿ ಆದೇಶ ಯಥಾಸ್ಥಿತಿ ಜಾರಿಗೆ ಬರುವಂತಾಯಿತು.

ನೋಂದಣಿ ನಿಯಮ 1965 ನಿಯಮ 73 ರ ಮೂಲ ನಿಯಮಕ್ಕೆ ತದ್ವಿರುದ್ಧ ತಿದ್ದುಪಡಿ ಸುತ್ತೋಲೆ ಹೊರಡಿಸಿದ್ದ ಕಂದಾಯ ಇಲಾಖೆಯ ಅದೇಶದ ವಿರುದ್ಧ ಸುಪ್ರೀಂಕೋರ್ಟ್ ನಲ್ಲಿ ಕಾನೂನು ಸಮರ ನಡೆಸಿದ್ದಲ್ಲಿ ತಡೆಯಾಜ್ಞೆ ತೆರವುಗೊಂಡು ಅಂತಿಮ ಆದೇಶ ಹೊರ ಬೀಳುತ್ತಿತ್ತು. ಮೂಲ ನೋಂದಣಿ ನಿಯಮ 1965 ನಿಯಮ 73 ಕ್ಕೆ ತದ್ವಿರುದ್ಧವಾಗಿರುವ ತಿದ್ದುಪಡಿ ಸುತ್ತೋಲೆಯನ್ನು ರದ್ದು ಪಡಿಸುವ ಅವಕಾಶ ಇದ್ದರೂ ಕಾನೂನು ಸಮರ ಮಾಡುವ ಪ್ರಯತ್ನ ನಡೆಯಲಿಲ್ಲ. ಹೀಗಾಗಿ ತಡೆಯಾಜ್ಞೆ ಯಥಾ ಸ್ಥಿತಿ ಮುಂದುವರೆದಿದೆ. ಕಂದಾಯ ಇಲಾಖೆಯ ತಿದ್ದುಪಡಿ ಸುತ್ತೋಲೆ ಅಸ್ತಿತ್ವಕ್ಕೆ ಬಂತು.

ಕಂದಾಯ ನಿವೇಶನಗಳ ಅಕ್ರಮ ನೋಂದಣಿಯಿಂದ ಉಪ ನೋಂದಣಾಧಿಕಾರಿಗಳ ಜೇಬು ತುಂಬಿಸಿ ಸಂತಸಕ್ಕೆ ನಾಂದಿ ಹಾಡಿತ್ತು. ಆದ್ರೆ, ಯಾವಾಗ ಇದು ನಿಯಮ ಬಾಹಿರ ಎಂಬ ವಿಚಾರ ತಿಳಿಯಿತೋ ಕಂದಾಯ ಇಲಾಖೆಯೇ ಕಂದಾಯ ನಿವೇಶನಗಳ ಅಕ್ರಮ ನೋಂದಣಿ ತಪಾಸಣೆ ನಡೆಸಿ ಶಿಸ್ತು ಕ್ರಮ ಜರುಗಿಸಲು ಮುಂದಾಯಿತು. ಈ ವಿಚಾರ ಅರಿತ ಕೆಲವು ಅರ್‌ಟಿಐ ಕಾರ್ಯಕರ್ತರು ಕಂದಾಯ ನಿವೇಶನಗಳ ಅಕ್ರಮ ನೋಂದಣಿ ಜಾಡು ಹಿಡಿದು ಅರ್‌ಟಿಐ ಅರ್ಜಿಗಳು ಗುಜರಾಯಿಸಿದ್ರು. ಎಲ್ಲಿ ತಮ್ಮ ಅಕ್ರಮಗಳು ಬಯಲಿಗೆ ಬರುತ್ತವೋ ಎಂಬ ಭೀತಿಗೆ ಒಳಗಾದ ಉಪ ನೋಂದಣಾಧಿಕಾರಿಗಳು ಅರ್‌ಟಿಐ ಕಾರ್ಯಕರ್ತರ ಕೈ ಬಿಸಿ ಮಾಡುವುದನ್ನು ಕಲಿಸಿದ್ರು. ಇದೀಗ ಕಂದಾಯ ನಿವೇಶನಗಳ ಅಕ್ರಮ ನೋಂದಣಿ ಉಪ ನೋಂದಣಾಧಿಕಾರಿಗಳ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಿಸಿದೆ.

ಅದರಲ್ಲೂ ಅರ್‌ಟಿಐ ಕಾರ್ಯಕರ್ತ ನಾರಾಯಣಸ್ವಾಮಿ ಅವರ ದೂರು ಅರ್ಜಿ ಗಳಂತೂ ಇಲಾಖೆಯಲ್ಲಿ ಭೀತಿ ಹುಟ್ಟುಹಾಕಿವೆ. ನಾರಾಯಣಸ್ವಾಮಿ ದೂರು ಆಧರಿಸಿ ಕಂದಾಯ ನಿವೇಶನಗಳ ಅಕ್ರಮ ನೋಂದಣಿ ತಪಾಸಣೆಗೆ ಅದೇಶಿಸಿದ್ದು, ಪ್ರಕರಣ ಹೊಸ ಆಯಾಮ ಪಡೆದುಕೊಂಡಿದೆ. ಅರ್‌ಟಿಐ ಅರ್ಜಿಗಳಿಗೆ ಎಷ್ಟು ಮಾಹಿತಿ ಪಡೆಯಲಾಗಿದೆ. ಎಷ್ಟು ಮಂದಿ ಉಪ ನೋಂದಣಾಧಿಕಾರಿಗಳು ಕಂದಾಯ ನಿವೇಶನ ನಿಯಮ ಬಾಹಿರವಾಗಿ ನೋಂದಣಿ ಮಾಡಿದ್ದಾರೆ. ಎಷ್ಟು ಮಂದಿ ಉಪ ನೋಂದಣಾಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗಿದೆ ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಸಿಕ್ಕಿಲ್ಲ! ಅತಿ ಶೀಘ್ರದಲ್ಲಿಯೇ ಈ ಪ್ರಶ್ನೆಗಳಿಗೆ ರೆವಿನ್ಯೂಫ್ಯಾಕ್ಟ್ಸ್ ಉತ್ತರ ನೀಡಲಿದೆ.

ಮೂಲ ನೋಂದಣಿ ನಿಯಮ ಏನು ಹೇಳುತ್ತೆ ? :

ನೋಂದಣಿ ನಿಯಮ 1965 ನಿಯಮ 73 ರ ಅನ್ವಯ ನೋಂದಣಾಧಿಕಾರಿಗಳು ಯಾವುದೇ ಆಸ್ತಿಗಳನ್ನು ನೋಂದಣಿ ಮಾಡಬಹುದು. ಅವರು ನೇಮಕವಾಗಿರುವುದು ರಾಜ್ಯ ಸರ್ಕಾರಕ್ಕೆ ರಾಜಸ್ವ ಸಂಗ್ರಹಿಸಲು. ಹಾಗೂ ಸರ್ಕಾರದ ಅಧಿಕೃತ ದಾಖಲೆಗಳನ್ನು ನಿರ್ವಹಣೆ ಮಾಡುವುದು ಅಷ್ಟೇ ಕರ್ತವ್ಯ. ಎಂದು ಹೇಳುತ್ತದೆ. ನಿವೇಶನಗಳ ನೋಂದಣಿ ಸಂಬಂಧ ಕರ್ನಾಟಕ ಸರ್ಕಾರ ನೋಂದಣಿ ನಿಯಮಗಳಿಗೆ ತಿದ್ದುಪಡಿ ತಂದು ಕಂದಾಯ ಇಲಾಖೆ ಹೊಸ ಸುತ್ತೋಲೆಯನ್ನು 2009 ರಲ್ಲಿ ( ಕಂ.ಇ.344ಮುನೋಮು2008 ಬೆಂಗಳೂರು- ದಿನಾಂಕ 06-04-2009 ) ಹೊರಡಿಸಿರುವುದು ಮೂಲ ನೋಂದಣಿ ನಿಯಮಗಳ ವಿರುದ್ಧವಾಗಿದೆ ಎಂಬುದು ವಾಸ್ತವ. ಆದ್ರೆ ಸುಪ್ರೀಂಕೋರ್ಟ್ ಕೊಟ್ಟಿರುವ ತಡೆಯಾಜ್ಞೆ ತೆರವು ಅಗಿಲ್ಲ. ಹೀಗಾಗಿ ರೆವಿನ್ಯೂ ಸೈಟ್‌ ಗಳ ನೋಂದಣಿ ಎಂಬುದೇ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಹಗರಣವಾಗಿ ಬದಲಾಗಿದೆ.

ರೆವಿನ್ಯೂ ನಿವೇಶನಗಳ ನೋಂದಣಿಗೆ ಇಂತಿಷ್ಟು ಫಿಕ್ಸ್ ಮಾಡಿರುವ ಕೆಲವು ಉಪ ನೋಂದಣಾಧಿಕಾರಿಗಳು ಅದನ್ನೇ ಅದಾಯದ ಮೂಲವನ್ನಾಗಿ ಮಾಡಿಕೊಂಡಿದ್ದಾರೆ. ನಿಯಮ ಉಲ್ಲಂಘನೆ ಮಾಡಿ ನೋಂದಣಿ ಮಾಡುವ ಉಪ ನೋಂದಣಾಧಿಕಾರಿಗಳ ವಿರುದ್ಧ ದೂರು ನೀಡುವ ಮೂಲಕ ಕೆಲ ಅರ್‌ಟಿಐ ಕಾರ್ಯಕರ್ತರು ಅದೇ ಹಾದಿ ಹಿಡಿದಿದ್ದಾರೆ. ಈ ಅನಿಷ್ಠಗಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಕಂದಾಯ ಇಲಾಖೆ ಕನಸು ಮನಸಲ್ಲೂ ಆಲೋಚನೆ ಮಾಡಿಲ್ಲ. ಇ – ಖಾತಾ ಇಲ್ಲದ ನಿವೇಶನಗಳ ನೋಂದಣಿ ಮಾಡಿದ ಉಪ ನೋಂದಣಾಧಿಕಾರಿಗಳ ಮೇಲೆ ವಿಚಾರಣೆ ಗುಮ್ಮ ಹೆಸರಿನಲ್ಲಿ ಎಲ್ಲವೂ ಮುಚ್ಚಿ ಹಾಕಲಾಗುತ್ತಿದೆ.

ಸುಪ್ರೀಂಕೋರ್ಟ್ ನಲ್ಲಿ ಬಾಕಿ ಇರುವ ರೆವಿನ್ಯೂ ನಿವೇಶನಗಳ ನೋಂದಣಿ ಸಂಬಂಧ ತಿದ್ದುಪಡಿ ಸುತ್ತೋಲೆ ತಡೆಯಾಜ್ಞೆ ತೆರವು ಆಗದ ಹೊರತು ರೆವಿನ್ಯೂ ನಿವೇಶನಗಳ ನೋಂದಣಿ ಗೊಂದಲಕ್ಕೆ ಮುಕ್ತಿ ಸಿಗುವುದು ಸಾಧ್ಯವೇ ಇಲ್ಲ! ಈ ತಡೆಯಾಜ್ಞೆ ತೆರವು ಅದರೆ ಬಡವರು ಕಡಿಮೆ ಬೆಲೆಗೆ ಸಿಗುವ ರೆವಿನ್ಯೂ ನಿವೇಶನಗಳ ಖರೀದಿಗೆ ಮುಗಿ ಬೀಳುತ್ತಾರೆ. ಹೀಗಾಗಿ ದೊಡ್ಡ ದೊಡ್ಡ ಬಿಲ್ಡರ್ ಗಳ ವ್ಯಾಪಾರಕ್ಕೆ ಧಕ್ಕೆ ಆಗುತ್ತದೆ. ಮಿಗಿಲಾಗಿ ಉಪ ನೋಂದಣಾಧಿಕಾರಿಗಳಿಗೂ ಆದಾಯ ನಿಂತು ಹೋಗುತ್ತದೆ! ಹೀಗಾಗಿಯೇ ಸುಪ್ರೀಂಕೋರ್ಟ್ ಕೊಟ್ಟಿರುವ ತಡೆಯಾಜ್ಞೆಯ ಬಗ್ಗೆ ಯಾರೂ ಪ್ರಸ್ತಾಪ ಮಾಡಿಲ್ಲ. ಮಾಡುವಂತೆಯೂ ಕಾಣುತ್ತಿಲ್ಲ!

Related News

spot_img

Revenue Alerts

spot_img

News

spot_img