#Revenue site, #Illegal Registration #Revenue department #Karnataka news
ಬೆಂಗಳೂರು, ಆ. 02: ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಕಂದಾಯ ನಿವೇಶನಗಳ ( ರೆವಿನ್ಯೂ ಸೀಟ್ ) ನಿಯಮ ಬಾಹಿರ ನೋಂದಣಿ ಪ್ರಕ್ರಿಯೆಗೆ ಕೆಲವು ಉಪ ನೋಂದಣಾಧಿಕಾರಿಗಳು ಚಾಲನೆ ನೀಡಿದ್ದಾರೆ. ಬೇಗೂರು ಹಾಗೂ ಬೊಮ್ಮನಹಳ್ಳಿ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ನ್ಯಾಯಾಲಯದ ಅದೇಶ ಹಾಗೂ ಸರ್ಕಾರದ ಸುತ್ತೋಲೆ ಉಲ್ಲಂಘನೆ ಮಾಡಿ ನೂರಾರು ಕಂದಾಯ ನಿವೇಶನಗಳನ್ನು ನಿಯಮ ಬಾಹಿರವಾಗಿ ನೋಂದಣಿ ಮಾಡಿ ಅಕ್ರಮ ಎಸಗಲಾಗಿದೆ.
ಬೇಗೂರು ಉಪ ನೋಂದಣಾಧಿಕಾರಿ ಸಂತೋಷ್ ಕಟ್ಟೀಮನಿ ಹಾಗೂ ಬೊಮ್ಮನಹಳ್ಳಿಯ ಉಪ ನೋಂದಣಾಧಿಕಾರಿ ಪ್ರಸನ್ನ ಕುಮಾರ್, ರಾಮಚಂದ್ರ ಅವರು ಅವರು ನಿಯಮ ಬಾಹಿರವಾಗಿ ಕಂದಾಯ ನಿವೇಶನಗಳನ್ನು ನೋಂದಣಿ ಮಾಡಿದ್ದು ಆ ದಾಖಲೆಗಳು ರೆವಿನ್ಯೂ ಫ್ಯಾಕ್ಟ್ ವೆಬ್ ತಾಣಕ್ಕೆ ಲಭ್ಯವಾಗಿವೆ. ಒಂದು ರೆವಿನ್ಯೂ ನಿವೇಶನ ನಿಯಮ ಬಾಹಿರ ನೋಂದಣಿಗೆ ಕನಿಷ್ಠ 25 ಸಾವಿರ ರೂ. ನಿಂದ 30 ಸಾವಿರ ರೂ. ನಿವೇಶನ ನೊಂದಣಿದಾರರಿಂದ ವಸೂಲಿ ಮಾಡುತ್ತಿರುವ ಅರೋಪ ಕೇಳಿ ಬಂದಿದೆ. ರೆವಿನ್ಯೂ ನಿವೇಶನಗಳ ನೋಂದಣಿ ಅಕ್ರಮ ಎಂಬುದನ್ನೇ ಬಂಡವಾಳ ಮಾಡಿಕೊಂಡಿರುವ ಇವರು ಹಣ ವಸೂಲಿಗೆ ಪ್ರತ್ಯೇಕ ಏಜೆಂಟರನ್ನು ನೇಮಿಸಿಕೊಂಡಿದ್ದಾರೆ. ಅಚ್ಚರಿ ಏನೆಂದರೆ ಕಾವೇರಿ 2 ತಂತ್ರಾಂಶ ಪರಿಚಯಿಸಿದ್ದರೂ ಸಹ ಭೂ ಪರಿವರ್ತನೆಯಾಗದೇ, ಪಂಚಾಯಿತಿಯಿಂದ ಇ ಸ್ವೊತ್ತು ಇಲ್ಲದ ಕಂದಾಯ ನಿವೇಶನಗಳನ್ನು ನೋಂದಣಿ ಮಾಡಿ ಅಕ್ರಮ ಗಳಿಕೆಗೆ ಚಾಲನೆ ನೀಡಿದ್ದಾರೆ.
Illegal revenue site Registration: ಬಜೆಟ್ ಅಧಿವೇಶನ ಮುಗಿದಂತೆ ಚಾಲನೆ: ಜು. 24 ರಂದು ಅಧಿವೇಶನ ಮುಗಿಯುತ್ತಿದ್ದಂತೆ ಬೇಗೂರು ಮತ್ತು ಬೊಮ್ಮನಹಳ್ಳಿ ಉಪ ನೋಂದಣಾಧಿಕಾರಿಗಳು ಕಾನೂನು ಬಾಹಿರವಾಗಿ ರೆವಿನ್ಯೂ ನಿವೇಶನಗಳ ನೋಂದಣಿಗೆ ಚಾಲನೆ ನೀಡಿದ್ದಾರೆ. ಕಂದಾಯ ನಿವೇಶನ ನೋಂದಣಿ ಆಗುತ್ತಿರುವ ಸುದ್ದಿ ಕೇಳುತ್ತಿದ್ದಂತೆ ಜಯನಗರ ಕಂದಾಯ ಜಿಲ್ಲೆಯ ವ್ಯಾಪ್ತಿಗೆ ಬರುವ ಕಂದಾಯ ನಿವೇಶನಗಳ ನೋಂದಣಿಯ ದಾಸ್ತವೇಜು ಹಿಡಿದು ಬೊಮ್ಮನಹಳ್ಳಿಹಾಗೂ ಬೇಗೂರು ಉಪ ನೋಂದಣಾಧಿಕಾರಿಗಳ ಕಚೇರಿ ಮುಂದೆ ಜನರು ಸಾಲುಗಟ್ಟಿ ನಿಂತಿದ್ದಾರೆ. ಬೇಗೂರು ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಈಗಾಗಲೇ ನೂರಕ್ಕೂ ಅಧಿಕ ಕಂದಾಯ ನಿವೇಶನ ನೋಂದಣಿ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿವೆ. ಅದೇ ರೀತಿ ಬೊಮ್ಮನಹಳ್ಳಿ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಸಹ ನೂರಾರು ರೆವಿನ್ಯೂ ನಿವೇಶನ ನೋಂದಣಿ ಮಾಡಿರುವುದು ಬುಕ್ 01 ದಾಖಲೆಗಳಿಂದ ಲಭ್ಯವಾಗಿದೆ.
Revenue department rules violation: ಏನಿದು ಕಂದಾಯ ನಿವೇಶನ ಅಕ್ರಮ ನೋಂದಣಿ: ಅವೈಜ್ಞಾನಿಕವಾಗಿ ಲೇಔಟ್ ನಿರ್ಮಿಸುವುದನ್ನು ತಪ್ಪಿಸುವ ಉದ್ದೇಶದಿಂದ ವಸತಿ ಉದ್ದೇಶಕ್ಕೆ ಭೂ ಪರಿವರ್ತನೆ ಆಗದೇ, ಸೂಚಿತ ಸಕ್ಷಮ ಪ್ರಾಧಿಕಾರಗಳಿಂದ ಅನುಮತಿ ಪಡೆಯದೇ ಭೂ ಪರಿವರ್ತನೆಯಾಗದ ಜಮೀನಿನಲ್ಲಿ ಮನಸೋ ಇಚ್ಚೇ ನಿವೇಶನ ವಿಂಗಡಿಸಿ ಮಾರಾಟ ಮಾಡುವುದನ್ನು ತಡೆಯಲು ಕಂದಾಯ ಇಲಾಖೆ ಸುತ್ತೋಲೆ ಹೊರಡಿಸಿತ್ತು. ಕಂ.ಇ. 344ಮುನೋಮು2008 ( ದಿನಾಂಕ: 06-04-2008) ರಂದು ಸುತ್ತೋಲೆ ಹೊರಡಿಸಲಾಗಿತ್ತು. ಈ ಸುತ್ತೋಲೆಯನ್ನು ಹೈಕೋರ್ಟ್ ವಜಾ ಮಾಡಿದರೂ ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿತ್ತು. ಈ ನಿಯಮದ ಪ್ರಕಾರ ಕೃಷಿ ಜಮೀನಿನಲ್ಲಿ ನಿವೇಶನ ವಿಂಗಡಿಸಿ ಮಾರಾಟ ಮಾಡುವುದು ಕಾನೂನು ಬಾಹಿರ. ಕರ್ನಾಟಕ ಸರ್ಕಾರದಿಂದ ಭೂ ಬದಲಾವಣೆ ಹಾಗೂ ಭೂ ಪರಿವರ್ತನೆಯಾದ ಬಳಿಕ ಲೇಔಟ್ ಪ್ಲಾನ್ ರೂಪಿಸಿ ನಗರಾಭಿವೃದ್ಧಿ ಪ್ರಕಾಧಿಕಾರದಿಂದ ಅನುಮತಿ ಪಡೆದು ಲೇಔಟ್ ನಿರ್ಮಿಸಬೇಕು. ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ನಿವೇಶನಗಳಿಗೆ ಕಡ್ಡಾಯವಾಗಿ ಇ ಸ್ವೊತ್ತು ನಂಬರ್ ಪಡೆದಿರಬೇಕು. ಹೊರತು ಪಡಿಸಿ ಕೃಷಿ ಜಮೀನಿನಲ್ಲಿ ಮನಸೋ ಇಚ್ಚೆ ಲೇಔಟ್ ನಿರ್ಮಿಸಿ ನಿವೇಶನ ಮಾರಾಟ ಮಾಡುವುದು ಮೇಲಿನ ಅದೇಶದ ಪ್ರಕಾರ ನಿಯಮ ಬಾಹಿರ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ಉಪ ನೋಂದಣಾಧಿಕಾರಿಗಳು ಬೆಂಗಳೂರು ಹೊರ ವಲಯದಲ್ಲಿನ ಕಂದಾಯ ನಿವೇಶನಗಳನ್ನು ನಿಯಮ ಬಾಹಿರ ನೋಂದಣಿ ಮಾಡಿ ಅಕ್ರಮ ಗಳಿಕೆ ಹಾದಿಯನ್ನಾಗಿ ಮಾಡಿಕೊಂಡಿದ್ದಾರೆ.
ಬೇಗೂರು ಸಂತೋಷ್ ಕಟ್ಟೀಮನಿ vs ಕಂದಾಯ ನಿವೇಶನ ನೋಂದಣಿ: ಬೇಗೂರು ಉಪ ನೋಂದಣಾಧಿಕಾರಿ ಸಂತೋಷ್ ಕಟ್ಟೀಮನಿ, ಕೆಂಗೇರಿ ಹೋಬಳಿಯ ಕಂಬೀಪುರ ಸೇರಿದಂತೆ ಹಲವು ಗ್ರಾಮಗಳ ವ್ಯಾಪ್ತಿಗೆ ಬರುವ ಕಂದಾಯ ನಿವೇಶನಗಳನ್ನು ನಿಯಮ ಬಾಹಿರವಾಗಿ ನೊಂದಣಿ ಮಾಡಿದ್ದು ಈ ದಾಖಲೆಗಳು ರೆವಿನ್ಯೂ ಫ್ಯಾಕ್ಟ್ಸ್ ಗೆ ಲಭ್ಯವಾಗಿವೆ. ಬುಕ್ ನಂ ಒನ್ ನಲ್ಲಿ ನಮೂದಿಸಿರುವ ನೋಂದಣಿ ದಾಖಲೆ ನಂಬರ್ 3351 ಬೆಟ್ಟದಾಸನಪುರದಲ್ಲಿ ಕಂದಾಯ ನಿವೇಶನ ನೋಂದಣಿ ಮಾಡಿದ್ದಾರೆ. ಅದೇ ರೀತಿ , ಕೆಂಗೇರಿ ಹೋಬಳಿ ಕಂಬೀಪುರದ ಸೈಟ್ ನಂಬರ್ 163 ನೋಂದಣಿ ದಸ್ತಾವೇಜು ನಂಬರ್ 3353, BGR-1-03354-2023-34, ದಿನ್ನೆಪಾಳ್ಯ ಗ್ರಾಮದ ನಿವೇಶನ ನೋಂದಣಿ BGR-1-03355-23-24, ಕೆಂಗೇರಿ ಹೋಬಳಿ ಕಂಬೀಪುರ ಗ್ರಾಮದ ನಿವೇಶನ ಸಂಖ್ಯೆ 2 ಕ್ಕೆ ಸಂಬಂಧಿಸಿದಂತೆ, BGR-1-03356-23-24, ಹೀಗೆ ನೂರಾರು ರೆವಿನ್ಯೂ ನಿವೇಶನಗಳನ್ನು ನೋಂದಣಿ ಮಾಡಿದ್ದು, ದಾಖಲೆಗಳು ಲಭ್ಯವಿದೆ.
ಬೊಮ್ಮನಹಳ್ಳಿ ಉಪ ನೋಂದಣಾಧಿಕಾರಿ ಪ್ರಸನ್ನಕುಮಾರ್ ಅಕ್ರಮ: ಬೊಮ್ಮನಹಳ್ಳಿ ಉಪ ನೋಂದಣಾಧಿಕಾರಿ ಪ್ರಸನ್ನ ಕುಮಾರ್ ಸಹ ಹಲವಾರು ಕಂದಾಯ ನಿವೇಶನಗಳನ್ನು ನಿಯಮ ಬಾಹಿರವಾಗಿ ನೋಂದಣಿ ಮಾಡಿದ್ದಾರೆ. ಜು. 24 ರಿಂದ ಈವರೆಗೂ ಒಂದು ವಾರದಲ್ಲಿ ಹಲವಾರು ಕಂದಾಯ ನಿವೇಶನ ನೋಂದಣಿ ಮಾಡಿ ಕಂದಾಯ ಇಲಾಖೆಯ ಸುತ್ತೋಲೆಯನ್ನು ಗಾಳಿಗೆ ತೂರಿ ಕರ್ತವ್ಯ ಲೋಪ ಎಸಗಿದ್ದಾರೆ. ಈ ಹಿಂದೆಯೂ ಕಂದಾಯ ನಿವೇಶನ ನೋಂದಣಿ ಮಾಡಿದ ಆರೋಪ ಇವರ ಮೇಲಿತ್ತು. ಇವರ ವಿರುದ್ಧ ನೀಡಿರುವ ವಿಚಾರಣಾ ವರದಿ ಬಾಕಿಯಿದ್ದು ಕಾನೂನು ಕ್ರಮ ಬಾಕಿಯಿದೆ. ಇದರ ನಡುವೆಯೇ ಊರಿಗೆ ಮೊದಲೇ ಕಂದಾಯ ನಿವೇಶನ ನೋಂದಣಿ ಮಾಡಿ ಲೋಪ ಎಸಗಿದ್ದಾರೆ. ಇವರು ನೋಂದಣಿ ಮಾಡಿರುವ ಕಂದಾಯ ನಿವೇಶನಗಳ ಶ್ಯಾಂಪಲ್ ದಾಖಲೆಗಳು ಹೀಗಿವೆ. Bk 1 BNG BMH 4293,( ಬಿ.ಎಂ. ಕಾವಲು ಗ್ರಾಮದ ಶ್ರೀ ವರಾಹಿ ಬಡಾವಣೆ ನಾಲ್ಕನೇ ನಂಬರ್ ನಿವೇಶನ) ಕೆಂಗೇರಿ ಹೋಬಳಿ ಅಗರ ಗ್ರಾಮದ ನಿವೇಶನ ನಂಬರ್ 45, Bk 1 BNG BMH 4290, ಕೆಂಗೇರಿ ಹೋಬಳಿ ಕಂಬೀಪುರ ಗ್ರಾಂದ ನಿವೇಶನ 121 Bk 1 BNG BMH 4280 ಸೇರಿದಂತೆ ಹಲವಾರು ಕಂದಾಯ ನಿವೇಶನ ನಿಯಮ ಬಾಹಿರವಾಗಿ ನೋಂದಣಿ ಮಾಡಿರುವುದು ದೃಢಪಟ್ಟಿದ್ದು,, ಇವರ ವಿರುದ್ಧ ಕಂದಾಯ ಇಲಾಖೆ ಶಿಸ್ತು ಕ್ರಮ ಜರುಗಿಸಲಿದಯೇ ? ಕಂದಾಯ ನಿವೇಶನ ನೋಂದಣಿ ಮಾಡಿ ತಪ್ಪು ಮಾಡುವ ಉಪ ನೋಂದಣಾಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸದ ಹೊರತು ಕಂದಾಯ ನಿವೇಶನಗಳ ನೋಂದಣಿ ಅಕ್ರಮಕ್ಕೆ ಬ್ರೇಕ್ ಹಾಕುವುದು ಅಸಾಧ್ಯ ಎಂಬ ಮಾತು ಇಲಾಖೆ ವಲಯದಲ್ಲಿ ಕೇಳಿ ಬರುತ್ತಿದೆ.
ಕಂದಾಯ ಸಚಿವರ ಮಾತು : ಕಂದಾಯ ಸಚಿವರಾಗಿ ಕೃಷ್ಣಬೈರೇಗೌಡ ಅವರು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಅಕ್ರಮ ನೋಂದಣಿಗೆ ಕಡಿವಾಣ ಹಾಕುವುದಾಗಿ ಹೇಳಿದ್ದರು. ರೆವಿನ್ಯೂ ನಿವೇಶನಗಳ ಅಕ್ರಮ ನೋಂದಣಿಗೆ ಕಡಿವಾಣ ಹಾಕುವುದಾಗಿ ಹೇಳಿದ್ದರು. ಅದಾಗಲೇ ಬೊಮ್ಮನಹಳ್ಳಿ ಹಾಗೂ ಬೇಗೂರು ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೂರಾರು ರೆವಿನ್ಯೂ ನಿವೇಶನಗಳು ನೋಂದಣಿಯಾಗಿವೆ.