27.6 C
Bengaluru
Saturday, December 21, 2024

ಆಸ್ತಿಗಳ ನೋಂದಣಿ ನಿಯಮದಲ್ಲಿ ದೊಡ್ಡ ಬದಲಾವಣೆ ಉಪ ನೋಂದಣಾಧಿಕಾರಿಗಳಿಗೆ ಹೆಚ್ಚುವರಿ ಹೊಣೆ ಫೆ. 1 ರಿಂದ ಕನ್‌ ಕರೆಂಟ್ ಅಡಿಟ್ ಪದ್ಧತಿ ರಾಜ್ಯದಲ್ಲಿ ಜಾರಿ!

#revenue #kaveri 2.0 #Karnataka #Registration
ಬೆಂಗಳೂರು: ಆಸ್ತಿಗಳ ನೋಂದಣಿಗೆ ಸಂಬಂಧಿಸಿದಂತೆ ದಸ್ತಾವೇಜುಗಳನ್ನು ‘ಕನ್‌ ಕರೆಂಟ್ ಅಡಿಟ್ ‘ ನೋಂದಣಿ ಮಾಡುವ ಹೊಸ ಪದ್ಧತಿ ಪರಿಚಯಿಸಲು ಕಂದಾಯ ಇಲಾಖೆ ಮುಂದಾಗಿದೆ. ಫೆಬ್ರವರಿ ಒಂದನೇ ತಾರೀಖಿನಿಂದ ರಾಜ್ಯದಲ್ಲೆಡೆ ಈ ಹೊಸ ಪದ್ಧತಿ ಜಾರಿಗೆ ಬರಲಿದೆ. ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್‌ ಅವರು ಈ ಕುರಿತು ಅಧಿಕೃತ ಸೂಚನೆ ನೀಡಿದ್ದು, ಫೆಬ್ರವರಿಯಿಂದ ರಾಜ್ಯದಲ್ಲಿ ಚಾಲನೆ ಪಡೆಯಲಿದೆ. ಈಗಾಗಲೇ ಅಸ್ತಿಗಳ ನೋಂದಣಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಕಾವೇರಿ 2 ತಂತ್ರಾಂಶ ಅಭಿವೃದ್ಧಿ ಪಡಿಸಿದ್ದು ರಾಜ್ಯದಲ್ಲಿ ಚಾರಿಗೆ ತರಲಾಗಿದೆ. ಈ ಹಿಂದೆ ಇದ್ದ ಮ್ಯಾನ್ಯುವಲ್ ದಸ್ತಾವೇಜುಗಳ ನೋಂದಣಿ ಸ್ಥಗಿತಗೊಳಿಸಿ ಆನ್‌ಲೈನ್‌ನಲ್ಲಿಯೇ ಹಾಜರು ಪಡಿಸಿ ಕಾಲಮಿತಿಯಲ್ಲಿ ನೋಂದಣಿ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ಇದರ ನಡುವೆಯೂ ಆಸ್ತಿಗಳ ನೋಂದಣಿ ವೇಳೆ ಸ್ಥಿರಾಸ್ತಿಗಳ ಮೌಲ್ಯ ನಿಗದಿ ಮಾಡಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಾರದರ್ಶಕವಾಗಿ ಸಂಗ್ರಹ ಮಾಡುವಲ್ಲಿ ಎಡವಟ್ಟುಗಳು ಪತ್ತೆಯಾಗಿವೆ. ಆಸ್ತಿಗಳ ಮೌಲ್ಯ ನಿಗದಿ ಮಾಡಿ ಸರಿಯಾದ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಂಗ್ರಹದಲ್ಲಿ ಲೋಪಗಳಾಗಿವೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟಾಗಿದೆ. ರಾಜಸ್ವ ಸೋರಿಕೆ ತಡೆಯುವ ಉದ್ದೇಶದಿಂದ 3 ಕೋಟಿ ರೂ. ಮೌಲ್ಯದ ಯಾವುದೇ ದಸ್ತಾವೇಜನ್ನು ವರ್ಚುವಲ್ ಕನ್‌ ಕರೆಂಟ್‌ ಅಡಿಟ್‌ ಮಾಡಿಸಿ ನೋಂದಣಿ ಮಾಡುವ ಹೊಸ ಪದ್ಧತಿಯನ್ನು ಪರಿಚಯಿಸಲಾಗುತ್ತಿದೆ.

ಏನಿದು ಕನ್ ಕರೆಂಟ್ ಅಡಿಟ್ : ಯಾವುದೇ ಒಂದು ಆಸ್ತಿಯ ನೋಂದಣಿ ವೇಳೆ ಅದರ ಮೌಲ್ಯ 3 ಕೋಟಿ ರೂಪಾಯಿಗೂ ಅಧಿಕವಾಗಿದ್ದರೆ, ಅಂತಹ ದಸ್ತಾವೇಜನ್ನು ಸಂಬಂಧಪಟ್ಟ ಉಪ ನೋಂದಣಾಧಿಕಾರಿ ನೋಂದಣಿ ಮಾಡುವ ಮುನ್ನ ರಾಜ್ಯದ ಯಾವುದೋ ಮೂಲೆಯಲ್ಲಿರುವ ಉಪ ನೋಂದಣಾಧಿಕಾರಿಗೆ ತಂತ್ರಜ್ಞಾನ ನೆರವಿನಿಂದ ಕಳುಹಿಸಲಾಗುತ್ತದೆ. ಆ ಉಪ ನೋಂದಣಾಧಿಕಾರಿ ದಸ್ತಾವೇಜನ್ನು ಪರಿಶೀಲಿಸಿ, ಆಸ್ತಿಯ ಮೌಲ್ಯ ಮತ್ತು ಪಡೆಯುತ್ತಿರುವ ರಾಜಸ್ವ ಸರಿಯಾಗಿದೆಯೇ ಎಂಬುದನ್ನು ಖಾತ್ರಿ ಪಡಿಸಿ ಹಸಿರು ನಿಶಾನೆ ತೋರಿದ ಬಳಿಕ ಸಂಬಂಧಪಟ್ಟ ಉಪ ನೋಂದಣಾಧಿಕಾರಿಗೆ ಮಾಹಿತಿ ರವಾನೆಯಾಗುತ್ತದೆ. ಆ ನಂತರವಷ್ಟೇ ದಸ್ತಾವೇಜನ್ನು ನೋಂದಣಿ ಮಾಡಬೇಕು. ಒಂದು ವೇಳೆ ದಸ್ತಾವೇಜಿನ ಆಸ್ತಿಯ ಮೌಲ್ಯ, ಪಾವತಿಸುತ್ತಿರುವ ನೋಂದಣಿ ಮತ್ತು ಮುದ್ರಾಂಕ ಶುಲ್ಕದಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ ಅದರ ನೋಂದಣಿಗೆ ಉಪ ಕನ್‌ ಕರೆಂಟ್ ಅಡಿಟ್‌ ಉಪ ನೋಂದಣಾಧಿಕಾರಿ ನಿರಾಕರಿಸಿದರೆ ಅಂತಹ ದಸ್ತಾವೇಜನ್ನು ಉಪ ನೋಂದಣಾಧಿಕಾರಿ ನೋಂದಣಿ ಮಾಡುವಂತಿಲ್ಲ. ಸೋರಿಕೆಯಾಗಿರುವ ರಾಜಸ್ವ ಪಾವತಿಸಿ ಪುನಃ ದಸ್ತಾವೇಜನ್ನು ನೋಂದಣಿಗೆ ಹಾಜರುಪಡಿಸಬೇಕು. ಆ ನಂತರವಷ್ಟೇ ದಸ್ತಾವೇಜು ನೋಂದಣಿಯಾಗಲಿದೆ.

ವರ್ಚುವಲ್ ರವಾನೆ: ಜಂಟಿ ಅಭಿವೃದ್ಧಿ ಕರಾರು, ಕ್ರಯಪತ್ರ ಮಾಡುವಾಗ ಅಡ್ಡ ಮಾರ್ಗ ಹಿಡಿದಿರುವ ಹಲವು ಉಪ ನೋಂದಣಾಧಿಕಾರಿಗಳು ಆಸ್ತಿಯ ಕಡಿಮೆ ಮೊತ್ತ ನಮೂದಿಸಿ ಸರ್ಕಾರಕ್ಕೆ ಸಂಗ್ರಹವಾಗಬೇಕಿದ್ದ ರಾಜಸ್ವಸೋರಿಕೆಯಾಗಲು ಕಾರಣರಾಗಿದ್ದಾರೆ. ಅದರಲ್ಲೂ ರಿಯಲ್ ಎಸ್ಟೇಟ್ ಹೆಚ್ಚಿರುವ ಜಂಟಿ ಅಭಿವೃದ್ಧಿ ಕರಾರುಗಳ ನೋಂದಣಿ ವೇಳೆ ಈ ರೀತಿಯ ಅಕ್ರಮಗಳು ನಡೆದಿರುವುದು ಕಂಡು ಬಂದಿದೆ. ಇದನ್ನು ತಡೆಯುವ ಉದ್ದೇಶದಿಂದ ಕನ್‌ ಕರೆಂಟ್ ಅಡಿಟ್‌ ಪದ್ಧತಿ ಜಾರಿಗೆ ತರಲಾಗುತ್ತಿದೆ.

ದೃಶ್ಯಾಂತ: ಚಿಕ್ಕಮಗಳೂರಿಗೆ ಸಂಬಂಧಿಸಿದಂತೆ ಮೂರು ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿಯ ನೋಂದಣಿಗೆ ಪಾರ್ಟಿಗಳು ಅರ್ಜಿ ಸಲ್ಲಿಸಿದ್ದಾರೆ ಎಂದಿಟ್ಟುಕೊಳ್ಳಿ. ಅದನ್ನು ಚಿಕ್ಕಮಗಳೂರಿನ ಉಪ ನೋಂದಣಾಧಿಕಾರಿ ಪರಿಶೀಲಿಸಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಲೆಕ್ಕ ಹಾಕಿದ ಬಳಿಕ ಅದನ್ನು ಕಾವೇರಿ 2 ತಂತ್ರಾಂಶ ಬಳಿಸಿ ರಾಜ್ಯದ ಇನ್ಯಾವುದೋ ಮೂಲೆಯಲ್ಲಿರುವ ಉಪ ನೋಂದಣಾಧಿಕಾರಿ ಕಚೇರಿಗೆ ರವಾನಿಸಲಾಗುತ್ತದೆ. ಉದಾಹರಣೆಗೆ ಬೆಂಗಳೂರಿನ ನಾಗರಭಾವಿ ಉಪ ನೋಂದಣಾಧಿಕಾರಿ ಎಂದು ಊಹಿಸಿಕೊಳ್ಳಿ. ನಾಗರಭಾವಿ ಉಪ ನೋಂದಣಾಧಿಕಾರಿ 24 ತಾಸಿನ ಒಳಗೆ ಚಿಕ್ಕಮಗಳೂರಿನ ಉಪ ನೋಂದಣಾಧಿಕಾರಿ ನಿಗದಿ ಪಡಿಸಿರುವ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸರಿಯಾಗಿದೆಯೇ, ಅಸ್ತಿ ಮೌಲ್ಯ ಸರಿಯಿದೆಯೇ ಎಂದು ಪರಿಶೀಲಿಸಿ ನೋಂದಣಿ ಮಾಡಲು ಅನುಮತಿ ನೀಡಿದರೆ ಪುನಃ ಅ ದಸ್ತಾವೇಜು ಚಿಕ್ಕಮಗಳೂರು ಉಪ ನೋಂದಣಧಿಕಾರಿಗೆ ರವಾನೆಯಾಗುತ್ತದೆ. ಅ ನಂತರ ಆಸ್ತಿಯನ್ನು ನೋಂದಣಿ ಮಾಡಬಹುದು.

ಆಸ್ತಿಯ ಮೌಲ್ಯ ಮತ್ತು ಸಂಗ್ರಹ ಮಾಡಲು ಉದ್ದೇಶಿಸಿರುವ ನೋಂದಣಿ ಮತ್ತು ಮುದ್ರಾಂಕ ಶುಲ್ಕದಲ್ಲಿ ವ್ಯತ್ಯಾಸ ಕಂಡು ಬಂದು ನಾಗರಭಾವಿ ಉಪ ನೋಂದಣಾಧಿಕಾರಿ ನಿರಾಕರಿಸಿದರೆ, ಅಂತಹ ದಸ್ತಾವೇಜು ನೋಂದಣಿ ಮಾಡಲು ಸಾಧ್ಯವಾಗುವುದಿಲ್ಲ. ನಿರಾಕರಣೆ ಮಾಡಲು ಆಗಿರುವ ಲೋಪವನ್ನು ಉಲ್ಲೇಖಿಸಬೇಕು. ಆನಂತರ ಸರಿ ಪಡಿಸಿ ಪುನಃ ನೋಂದಣಿಗೆ ಅರ್ಜಿ ಸಲ್ಲಿಸಬಹುದು. ಇದರಿಂದ ಕಂದಾಯ ಇಲಾಖೆಗೆ ಸೋರಿಕೆಯಾಗುತ್ತಿರುವ ರಾಜಸ್ವ ತಡೆಗಟ್ಟಬಹುದು ಎಂಬುದು ಕಂದಾಯ ಇಲಾಖೆಯ ಚಿಂತನೆ. ರಾಜ್ಯದ ಪ್ರತಿಯೊಬ್ಬ ಉಪ ನೋಂದಣಾಧಿಕಾರಿಗೂ ಕನ್ ಕರೆಂಟ್ ಅಡಿಟ್ ಅಡಿಯಲ್ಲಿ ಪ್ರತಿದಿನ ಇಂತಿಷ್ಟು ದಸ್ತಾವೇಜುಗಳನ್ನು ಕಳುಹಿಸಲಾಗುತ್ತದೆ. ಅವನ್ನು ತಪ್ಪದೇ ಪರಿಶೀಲಿಸಿ ನೋಂದಣಿಗೆ ಅನುಮತಿ ನೀಡಬೇಕು. ಇಲ್ಲದಿದ್ದರೆ ನಿರಾಕರಿಸಿ ಕಾರಣ ನೀಡಬೇಕು. ಪ್ರತಿಯೊಬ್ಬರಿಗೂ ಸರಾಸರಿ ಕನಿಷ್ಠ ೧೦ ದಸ್ತಾವೇಜುಗಳು ಕನ್‌ ಕರೆಂಟ್‌ ಅಡಿಟ್‌ ಗೆ ರವಾನಿಸಲಾಗುತ್ತದೆ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿಗಳ ಸಭೆಯಲ್ಲಿ ತೀರ್ಮಾನ: ಕಂದಾಯ ಇಲಾಖೆಯಲ್ಲಿ ದಸ್ತಾವೇಜುಗಳ ನೋಂದಣಿ ವೇಳೆ ಮೌಲ್ಯಮಾಪನ ಹಾಗೂ ನೋಂದಣಿ ಮತ್ತು ಮುದ್ರಾಂಕ ಶುಲ್ಕ ರಾಜಸ್ವ ಸೋರಿಕೆಯಾಗುತ್ತಿರುವುದು ಸಿಎಜಿ ವರದಿಯಲ್ಲಿ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಂದಾಯ ಸಚಿವರು ಕನ್ ಕರೆಂಟ್ ಅಡಿಟ್ ಪದ್ಧತಿ ಪ್ರಸ್ತಾಪಿಸಿದ್ದು, ಕಾವೇರಿ ತಂತ್ರಾಂಶದಲ್ಲಿ ಅದನ್ನು ಅಳವಡಿಸಲು ತೀರ್ಮಾನಿಸಿದ್ದಾರೆ.

ಸರ್ಕಾರದ ಈ ತೀರ್ಮಾನದ ಹಿನ್ನೆಲೆಯಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ 2 ತಂತ್ರಾಂಶದಲ್ಲಿ ಕನ್‌ ಕರೆಂಟ್ ಅಡಿಟ್ ಅಳವಡಿಸಿ ಫೆ. 1 ರಿಂದ ಜಾರಿಗೆ ಬರುವಂತೆ ಸಂಬಂಧಪಟ್ಟವರಿಗೆ ನಿರ್ದೇಶನ ನೀಡುವಂತೆ ಕೋರಿ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್‌ ಅವರು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ಪತ್ರ ಬರೆದಿದ್ದಾರೆ. ಅಂದಹಾಗೆ ಈ ಕನ್ ಕರೆಂಟ್‌ ಅಡಿಟ್‌ ಜಾರಿಗೆ ತರುತ್ತಿರುವುದು ಉಪ ನೋಂದಣಾಧಿಕಾರಿಗಳ ವಲಯದಲ್ಲಿ ಭಾರೀ ಚರ್ಚೆಗೆ ನಾಂದಿ ಹಾಡಿದೆ.

ಕೆಲಸದ ಒತ್ತಡ: ಈಗಾಗಲೇ ಕಂದಾಯ ಇಲಾಖೆಯಲ್ಲಿ ಕಡಿಮೆ ಸಿಬ್ಬಂದಿ ಇದ್ದಾರೆ. ಹೊರ ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಕ ಮಾಡಿಕೊಂಡರೂ ದಿನದ ಕೆಲಸ ಒತ್ತಡದಲ್ಲಿ ಮಾಡಲಾಗುತ್ತಿದೆ. ಒಂದು ಕಚೇರಿ ನಿರ್ವಹಣೆ ಮಾಡುವುದೇ ಕಷ್ಟವಾಗಿರುವ ಪರಿಸ್ಥಿತಿಯಲ್ಲಿ ನಮ್ಮ ಕಚೇರಿಯದ್ದು ಅಲ್ಲದ ದಸ್ತಾವೇಜುಗಳನ್ನು ಅಡಿಟ್ ಮಾಡಿ ಕೂತುಕೊಳ್ಳುವುದರಿಂದ ಮತ್ತಷ್ಟು ಒತ್ತಡ ಹೆಚ್ಚಾಗಲಿದೆ. ಜನರಿಗೆ ತ್ವರಿತ ಸೇವೆ ಒದಗಿಸಲು ಕಷ್ಟವಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕನ್ ಕರೆಂಟ್ ಅಡಿಟ್ ಮಾಡಲು ಪ್ರತ್ಯೇಕ ತಂಡವನ್ನೇ ರಚಿಸಿ ಅವರಿಗೆ ಕನ್‌ ಕರೆಂಟ್ ಅಡಿಟ್ ಜವಾಬ್ಧಾರಿ ನೀಡುವುದು ಒಳಿತು ಎಂಬ ಮಾತು ಉಪ ನೋಂದಣಾಧಿಕಾರಿಗಳ ವಲಯದಲ್ಲಿ ಕೇಳಿ ಬರುತ್ತಿರುವ ಅಭಿಪ್ರಾಯ.

Related News

spot_img

Revenue Alerts

spot_img

News

spot_img