27.3 C
Bengaluru
Monday, July 1, 2024

ಮಕರ ಸಂಕ್ರಾಂತಿಯಂದು ಗಾಳಿಪಟವನ್ನು ಹಾರಿಸುವುದರ ಧಾರ್ಮಿಕ ಮಹತ್ವ ಏನು?

Makar Sankranti : ಮಕರ ಸಂಕ್ರಾಂತಿ ಸುಗ್ಗಿಯ ಹಬ್ಬ. ಈ ಹಬ್ಬವು ಋತುವಿನ ಬದಲಾವಣೆಯನ್ನು ಸೂಚಿಸುತ್ತದೆ, ಈ ದಿನದಿಂದ ಸೂರ್ಯನು ದಕ್ಷಿಣಾಯನ (ದಕ್ಷಿಣ) ದಿಂದ ಉತ್ತರಾಯಣ (ಉತ್ತರ) ಗೋಳಾರ್ಧದವರೆಗೆ ತನ್ನ ಚಲನೆಯನ್ನು ಪ್ರಾರಂಭಿಸುತ್ತಾನೆ, ಇದು ಚಳಿಗಾಲದ ಅಧಿಕೃತ ಅಂತ್ಯವನ್ನು ಸೂಚಿಸುತ್ತದೆ.ಎಳ್ಳು ಬೆಲ್ಲವ ತಿಂದು ಒಳ್ಳೆಯ ಮಾತನಾಡೋಣ ಎನ್ನುತ್ತಲೇ ಎಲ್ಲರೂ ಮಕರ ಸಂಕ್ರಾಂತಿಯ ಸ್ವಾಗತಕ್ಕೆ ಸಜ್ಜಾಗಿದ್ದಾರೆ. ಪ್ರತಿವರ್ಷ ಜನವರಿಯಲ್ಲಿ ಆಚರಿಸುವ ಖುಷಿಯ ಹಬ್ಬಗಳಲ್ಲಿ ಮಕರ ಸಂಕ್ರಾಂತಿ ಕೂಡಾ ಒಂದು. ಎಳ್ಳು ಬೆಲ್ಲವನ್ನು ಹಂಚಿ ಜನರು ಈ ದಿನ ಸಂಭ್ರಮಿಸುತ್ತಾರೆ.

ಮಕರ ಸಂಕ್ರಾಂತಿ, ದಕ್ಷಿಣಾಯನ, ಉತ್ತರಾಯಣಗಳ ದಿನಗಳು ಸಂಕ್ರಾಂತಿಯಂದು ಆರಂಭವಾಗುವುದರಿಂದ ಈ ದಿನ ವಿಶೇಷ ಮಹತ್ವವನ್ನು ಹೊಂದಿದೆ. ಪ್ರತಿ ವರ್ಷ ಜನವರಿ 14 ಅಥವಾ 15 (ಪುಷ್ಯಮಾಸ)ದಲ್ಲಿ ಬರುವ ಮಕರ ಸಂಕ್ರಾಂತಿಯನ್ನು `ಉತ್ತರಾಯಣ ಪುಣ್ಯಕಾಲ’ ಎಂದು ಕರೆಯುತ್ತಾರೆ. ಕೇವಲ ಬದುಕುವುದಕ್ಕೆ ಅಷ್ಟೇ ಅಲ್ಲದೆ, ಸಾಯುವುದಕ್ಕೂ ಉತ್ತರಾಯಣ, ಪುಣ್ಯಕಾಲವನ್ನು ನೋಡುತ್ತಾರೆ. ಈ ಪುಣ್ಯಮುಹೂರ್ತದಲ್ಲಿ ಪುಣ್ಯ ಸ್ಥಳಗಳಲ್ಲಿ ಹಾಗೂ ತುಂಗಾ, ಗಂಗಾ, ಕೃಷ್ಣಾ, ಕಾವೇರಿ ಮುಂತಾದ ಪುಣ್ಯ ನದಿಗಳಲ್ಲಿ ಲಕ್ಷಾಂತರ ದೈವಭಕ್ತರು ತೀರ್ಥಸ್ನಾನ ಮಾಡುತ್ತಾರೆ. ಹಾಗೆಯೇ ಉತ್ತರಾಯಣವನ್ನು ದೇವತೆಗಳ ಕಾಲವೆಂದು ಹಲವರು ನಂಬಿದ್ದಾರೆ.

ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಶಬರಿಮಲೆಯಲ್ಲಿ ಮಕರ ಜ್ಯೋತಿಯ ದರ್ಶನವಾದರೆ, ಬೆಂಗಳೂರಿನ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಶಿವಲಿಂಗಕ್ಕೆ ಸೂರ್ಯರಶ್ಮಿಯ ಸ್ಪರ್ಶದ ಸುಂದರ ವಿದ್ಯಮಾನಕ್ಕೆ ಭಕ್ತರು ಸಾಕ್ಷಿಯಾಗುತ್ತಾರೆ. ಅದೂ ಅಲ್ಲದೆ, ಈ ದಿನ ದೇಗುಲಗಳಲ್ಲಿ, ಮನೆ ಮನೆಗಳಲ್ಲಿ ಸಂಭ್ರಮ ತುಂಬಿರುತ್ತದೆ. ಎಳ್ಳು ಬೆಲ್ಲವನ್ನು ಸವಿದು ಎಲ್ಲರೂ ಭಕ್ತಿ ಭಾವದಿಂದ ಹಬ್ಬವನ್ನು ಆಚರಿಸುತ್ತಾರೆ.ಮಕರ ಸಂಕ್ರಾಂತಿಯ ಸಂಭ್ರಮದಲ್ಲಿ ಗಾಳಿಪಟ ಹಾರಿಸುವ ಪದ್ಧತಿ ಕೂಡಾ ಬೆಸೆದುಕೊಂಡಿದೆ.ಈ ಸಂಕ್ರಾಂತಿ ಸಂಭ್ರಮದ ದಿನ ಗಾಳಿಪಟ ಹಾರಿಸುವುದು ಒಂದು ಸಂಪ್ರದಾಯವಾಗಿದೆ. ಆದರೆ ಸಂಕ್ರಾಂತಿ ಹಬ್ಬದಂದು ಗಾಳಿಪಟ ಯಾಕೆ ಹಾರಿಸುತ್ತಾರೆ ಎನ್ನುವ ಬಗ್ಗೆ ಹಲವರಿಗೆ ಗೊತ್ತಿರಲ್ಲ. ಸಂಕ್ರಾಂತಿಯಂದು ಗಾಳಿಪಟ ಯಾಕೆ ಹಾರಿಸುತ್ತಾರೆ? ಏನಿದರ ವಿಶೇಷತೆ ಏನು ಎಂಬುದನ್ನ ನಾವು ಈಗ ತಿಳಿದುಕೊಳ್ಳೋಣ.

ಗಾಳಿಪಟ ಹಾರಿಸುವುದರ ಹಿಂದಿನ ಧಾರ್ಮಿಕ ಮಹತ್ವವೇನು?

*ಪುರಾಣದ ಪ್ರಕಾರ ಉತ್ತರಾಯಣ ಪುಣ್ಯಕಾಲ ಸಂಕ್ರಾಂತಿಯ ದಿನ ಎಲ್ಲರೂ ಒಟ್ಟಾಗಿ ಪಟ ಹಾರಿಸಿ ಖುಷಿಪಡುತ್ತಾರೆ. ಮಕರ ಸಂಕ್ರಾಂತಿಯಂದು ಬಹುತೇಕ ಕಡೆಗಳಲ್ಲಿ ಮನೆಯ ಮಹಡಿಯಲ್ಲಿ ಅಥವಾ ಮೈದಾನದಲ್ಲಿ ಗಾಳಿಪಟ ಹಾರಿಸಿ ಜನ ಸಂಭ್ರಮಿಸುವುದನ್ನು ನೋಡಬಹುದು. ಸಾಕಷ್ಟು ಕಡೆಗಳಲ್ಲಿ ಗಾಳಿಪಟ ಸ್ಪರ್ಧೆ ಕೂಡಾ ನಡೆಯುತ್ತದೆ. ಸಂಕ್ರಾಂತಿ ಒಂದೆಡೆ ಸುಗ್ಗಿಯ ಋತುವಿನ ಆಗಮನವನ್ನು ಸೂಚಿಸುವ ಹಬ್ಬವಾದರೆ, ಇನ್ನೊಂದೆಡೆ ಚಳಿಗಾಲದ ಅಂತ್ಯವನ್ನು ಸಾಂಕೇತಿಕವಾಗಿ ತೋರುವ ದಿನ ಎನ್ನಲಾಗುತ್ತೆ., ಮಕರ ಸಂಕ್ರಾಂತಿಯ ದಿನ ಗಾಳಿಪಟ ಹಾರಿಸುವುದಕ್ಕೆ ಕಾರಣವೇನು ಎಂಬುದನ್ನು ಹುಡುಕುತ್ತಾ ಹೋದರೆ ಧಾರ್ಮಿಕ ಮತ್ತು ವೈಜ್ಞಾನಿಕ ಕಾರಣಗಳು ಸಿಗುತ್ತವೆ.

*ಚಳಿಗಾಲದಲ್ಲಿ ಸಾಕಷ್ಟು ಸೂಕ್ಷ್ಮಾಣುಗಳು ಉತ್ಪತ್ತಿಯಾಗುವ ಕಾರಣಕ್ಕೆ ಮನುಷ್ಯ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಮಕರ ಸಂಕ್ರಾಂತಿಯ ಸಮಯದಲ್ಲಿ ಮುಂಜಾನೆ ಸೂರ್ಯನ ಕಿರಣಗಳು ದೇಹದ ಮೇಲೆ ಬೀಳುವುದರಿಂದ ಬ್ಯಾಕ್ಟೀರಿಯಾಗಳು ನೈಸರ್ಗಿಕವಾಗಿ ನಾಶವಾಗುತ್ತವೆ. ಜೊತೆಗೆ ದೇಹಕ್ಕೆ ವಿಟಮಿನ್ ಡಿ ದೊರಕುತ್ತದೆ. ಇದು ಚರ್ಮದ ಸಮಸ್ಯೆ ನಿವಾರಣೆಗೆ ಉತ್ತಮ ಪರಿಣಾಮ ಬೀರುತ್ತದೆ. ಈ ಕಾರಣಕ್ಕೆ ಸಂಕ್ರಾಂತಿಯ ದಿನ ಹಾಗೂ ಉತ್ತರಾಯಣ ಋತುವಿನ ಕಾಲದಲ್ಲಿ ಹೆಚ್ಚಾಗಿ ಗಾಳಿಪಟವನ್ನು ಹಾರಿಸಲಾಗುತ್ತದೆ.

*ಧಾರ್ಮಿಕ ನಂಬಿಕೆಗಳ ಪ್ರಕಾರ, ಭಗವಾನ್ ಶ್ರೀರಾಮ ಮಕರ ಸಂಕ್ರಾಂತಿಯ ದಿನದಂದು ಗಾಳಿಪಟ ಹಾರಿಸುತ್ತಿದ್ದ ಹಿನ್ನೆಲೆ ಸಿಗುತ್ತದೆ. ತ್ರೇತಾಯುಗದಲ್ಲಿ ಮಕರ ಸಂಕ್ರಾಂತಿಯ ದಿನದಂದು ಭಗವಾನ್ ರಾಮ ತನ್ನ ಸಹೋದರರು ಮತ್ತು ಹನುಮಂತನೊಂದಿಗೆ ಗಾಳಿಪಟವನ್ನು ಹಾರಿಸುತ್ತಿದ್ದುದ್ದಾಗಿ ನಂಬಿಕೆ. ಹೀಗಾಗಿ, ಅಂದಿನಿಂದ ಮಕರ ಸಂಕ್ರಾಂತಿಯಂದು ಗಾಳಿಪಟ ಹಾರಿಸುವ ಸಂಪ್ರದಾಯ ಪ್ರಾರಂಭವಾಯಿತು .

*ಪುರಾಣದ ಪ್ರಕಾರ ಉತ್ತರಾಯಣ ಪುಣ್ಯಕಾಲದಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂಬ ನಂಬಿಕೆಯೂ ಇದೆ. ಇದರೊಂದಿಗೆ, ಉತ್ತರಾಯಣ ಮತ್ತು ಸಂಕ್ರಾಂತಿಯ ಸಂದರ್ಭದಲ್ಲಿ ಗಾಳಿಪಟ ಹಾರಿಸಿದರೆ ಅವು ಸ್ವರ್ಗಕ್ಕೆ ಹಾರಿ ಹೋಗುತ್ತವೆ ಎಂಬ ನಂಬಿಕೆ ಕೂಡಾ ಇದೆ. ಜತೆಗೆ, ಇದು ಸುಗ್ಗಿಯ ಕಾಲ. ಹೀಗಾಗಿ, ಒಳ್ಳೆಯ ಬೆಳೆ ಮತ್ತು ಜೀವನದಲ್ಲಿ ಖುಷಿ ಕರುಣಿಸಿದ್ದಕ್ಕೆ ದೇವರಿಗೆ ಕೃತಜ್ಞತೆ ಹೇಳುವ ಸಲುವಾಗಿಯೂ ಸಂಕ್ರಾಂತಿಯ ವೇಳೆ ಗಾಳಿಪಟ ಹಾರಿಸಲಾಗುತ್ತದೆ ಎಂಬ ನಂಬಿಕೆಯೂ ಇದೆ.

 

 

Related News

spot_img

Revenue Alerts

spot_img

News

spot_img