ಬೆಂಗಳೂರು ಜು. 19 :ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷ ರೂಗಳಿಂದ 5 ಲಕ್ಷ ರೂ. ವರೆಗೆ ಸಾಲ ನೀಡುವ ಯೋಜನೆ ಕೃಷಿಭಾಗ್ಯಕ್ಕೆ ಮರುಚಾಲನೆ ನೀಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.ಇನ್ನೂ ಹಲವಾರು ರೀತಿಯಲ್ಲಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಾಗಿದೆ ಎಂದು ವಿಧಾನಸಭೆಯಲ್ಲಿ ತಿಳಿಸಿದ್ದಾರೆ.ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ನಾವು ಜಾರಿಗೆ ತಂದಿದ್ದ ಕೃಷಿ ಭಾಗ್ಯ ಯೋಜನೆ ನಿಲ್ಲಿಸಿದ್ದರು. ಈಗ ಅದನ್ನು ಮತ್ತೆ ಮುಂದುವರಿಸುತ್ತೇವೆ ಎಂದರು.
ಕೃಷಿ ಸಮ್ಮಾನ್ ಯೋಜನೆಯಡಿ ಕೇಂದ್ರ ಸರಕಾರ ವಾರ್ಷಿಕ 6 ಸಾವಿರ ರೂ. ಹಾಗೂ ರಾಜ್ಯ ಸರಕಾರ 4 ಸಾವಿರ ರೂ.ನೀಡುತ್ತಿತ್ತು. ನಮ್ಮ ಗ್ಯಾರಂಟಿಗಳಿಂದ ರೈತರಿಗೆ ತಿಂಗಳಿಗೆ 4 ರಿಂದ 5 ಸಾವಿರ ರೂ.ವರೆಗೆ ಆರ್ಥಿಕ ನೆರವು ದೊರೆಯುತ್ತದೆ. ಇದು ವಾರ್ಷಿಕ 48 ರಿಂದ 60 ಸಾವಿರ ರೂ. ಆಗಲಿದೆ ಎಂದು ಅವರು ಹೇಳಿದರು.ಜೊತೆಗೆ, ಬಿತ್ತನೆ ಬೀಜಕ್ಕೆ 160 ಕೋಟಿ ರೂ, ರಸಗೊಬ್ಬರಕ್ಕೆ 10 ಕೋಟಿ ರೂ., ಕೃಷಿ ಯಂತ್ರೋಪಕರಣಗಳಿಗೆ 120 ಕೋಟಿ ರೂ., ಕೃಷಿ ಪರಿಕರ, ಕೃಷಿ ಸಂಸ್ಕರಣೆ ಯೋಜನೆಗಳನ್ನು ನೀಡುತ್ತಿದ್ದೇವೆ. ರೈತ ಬೆಳೆ ವಿಮೆ ಕಂತಿಗೆ ರಾಜ್ಯ ಸರಕಾರ 600 ಕೋಟಿ ರೂ.ವೆಚ್ಚ ಮಾಡಲಿದೆ ಎಂದು ಅವರು ಹೇಳಿದರು. ಹನಿ ನೀರಾವರಿ, ಕೃಷಿ ಹೊಂಡ, ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ನೀಡುತ್ತಿದ್ದ 3 ಲಕ್ಷ ರೂ.ಗಳವರೆಗಿನ ಸಾಲವನ್ನು 5 ಲಕ್ಷ ರೂ.ಗಳಿಗೆ ಹೆಚ್ಚಳ ಮಾಡಿದ್ದೇವೆ. ಅದೇ ರೀತಿ ಶೇ.3ರ ಬಡ್ಡಿ ದರದಲ್ಲಿ ನೀಡುತ್ತಿದ್ದ ಸಾಲವನ್ನು 10 ರಿಂದ 15 ಲಕ್ಷ ರೂ.ಗಳಿಗೆ ಹೆಚ್ಚಿಸಿದ್ದೇವೆ ಎಂದು ಮುಖ್ಯಮಂತ್ರಿ ಹೇಳಿದರು.ರಾಜ್ಯದ 86.81 ಲಕ್ಷ ರೈತರ ಪೈಕಿ ಬಿಜೆಪಿ ಸರಕಾರ ಕೃಷಿ ಸಮ್ಮಾನ್ ಯೋಜನೆಯಡಿ 51 ಲಕ್ಷ ರೈತರಿಗೆ ಮಾತ್ರ ನೆರವು ನೀಡಿತ್ತು. ನಮ್ಮ 52 ಸಾವಿರ ಕೋಟಿ ರೂ.ಗಳ ಗ್ಯಾರಂಟಿಗಳಿಂದ ರಾಜ್ಯದ 1.08 ಕೋಟಿ ಕುಟುಂಬಗಳಿಗೆ ನೆರವು ಸಿಗಲಿದೆ ಎಂದು ಅವರು ಹೇಳಿದರು.