ಬೆಂಗಳೂರು, ಮೇ. 25 : ಈಗ ಎಲ್ಲೆಡೆ ಪ್ರತಿಯೊಂದು ಕೆಲಸಗಳಿಗೂ ಆಧಾರ್ ಕಾರ್ಡ್ ಅನ್ನು ಪ್ರಮುಖ ಗುರುತಿನ ಚೀಟಿಯಾಗಿ ಬಳಸಲಾಗುತ್ತಿದೆ. ಇದೀಗ ರಾಜ್ಯ ಸರ್ಕಾರ ಆಸ್ತಿ ನೋಂದಣಿ ಪ್ರಕ್ರಿಯಗೂ ಆಧಾರ್ ಕಾರ್ಡ್ ಗಳನ್ನು ಬಳಸಲು ಅನುಮತಿಯನ್ನು ನೀಡಿದೆ. ಸ್ಥಿರಾಸ್ತಿಗಳ ನೋಂದಣಿ ಪ್ರಕ್ರಿಯೆಯಲ್ಲಿ ಮಾರಾಟಗಾರರು ಹಾಗೂ ಖರೀದಿದಾರರನ್ನು ಗುರುತಿಗಾಗಿ ಆಧಾರ್ ಕಾರ್ಡ್ ಅನ್ನು ಬಳಸಬಹುದಾಗಿದೆ. ಇದರಿಂದ ಆಸ್ತಿ ಮಾರಾಟದಲ್ಲಿ ನಡೆಯುವ ಅಕ್ರಮವನ್ನು ತಡೆಯಬಹುದು.
ಹಾಗಾಗಿ ಕಂದಾಯ ಇಲಾಖೆ ಆಸ್ತಿ ನೋಂದಣಿ ಪ್ರಕ್ರಿಯೆಯಲ್ಲಿ ಆಧಾರ್ ಕಾರ್ಡ್ ಅನ್ನು ಬಳಸಲು ಮುಂದಾಗಿದೆ. ಇಷ್ಟು ದಿನಗಳ ಕಾಲ ವಿವಿಧ ಗುರುತಿನ ದಾಖಲೆಗಳು ಮತ್ತು ಸಹಿಗಳನ್ನು ಬಳಸಿಕೊಂಡು ನೋಂದಣಿ ಮಾಡಲಾಗುತ್ತಿತ್ತು. ಗುರುತಿನ ಚೀಟಿಗಳ ಆಧಾರದಲ್ಲೇ ಮಾರಾಟಗಾರರು ಹಾಗೂ ಖರೀದಿದಾರರನ್ನು ಉಪ ನೋಂದಣಿ ಕಚೇರಿಗಳಲ್ಲಿ ಗುರುತಿಸಲಾಗುತ್ತಿತ್ತು. ಆದರೆ, ಇದರಲ್ಲಿ ಮೋಸವಾಗುವ ಸಾಧ್ಯತೆಯೂ ಇತ್ತು. ಇದಕ್ಕಾಗಿ ಈಗ ರಾಜ್ಯ ಸರ್ಕಾರ ಆಧಾರ್ ಕಾರ್ಡ್ ಅನ್ನು ಬಳಸಲು ಹೇಳಲಾಗಿದೆ.
ಕಂದಾಯ ಇಲಾಖೆಯ ಭೂಮಾಪನ ಮತ್ತು ಭೂದಾಖಲೆಗಳ ಇಲಾಖೆ, ಭೂಮಿ, ನಗರ ಆಸ್ತಿ ಮಾಲೀಕತ್ವದ ದಾಖಲೆಗಳ ವಿಭಾಗಗಳು ಇನ್ಮುಂದೆ ಆಸ್ತಿ ಮಾರಾಟ ಅಥವಾ ಖರೀದಿ ಸಂಬಂಧ ಆಧಾರ್ ಕಾರ್ಡ್ ಅನ್ನು ಬಳಸಲು ಅನುಮತಿ ನೀಡಿ ಮೇ 18ರಂದು ಅಧಿಸೂಚನೆ ಹೊರಡಿಸಲಾಗಿದೆ. ಇನ್ನು ಕಳೆದ ತಿಂಗಳು ಏಪ್ರಿಲ್ ನಲ್ಲಿ ನೋಂದಣಿ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿತ್ತು.