29.3 C
Bengaluru
Sunday, February 23, 2025

3 ಲಕ್ಷಕ್ಕೂ ಹೆಚ್ಚು ಮಾರಾಟವಾಗದ ಮನೆಗಳು: ಆತಂಕದಲ್ಲಿ ಡೆವಲಪರ್‌ಗಳು

ಮುಂಬೈನ ರಿಯಲ್‌ ಎಸ್ಟೇಟ್‌ ಕ್ಷೇತ್ರಕ್ಕೆ ಮುಂಬರವ ದಿನಗಳು ಸವಾಲಿನದ್ದಾಗಲಿವೆ. ಈಗಾಗಲೇ ಸಾಕಷ್ಟು ಮನೆಗಳು ಖಾಲಿ ಇದ್ದು ಮುಂದಿನ ಮೂರು ತಿಂಗಳಲ್ಲಿ ಇನ್ನೂ ಅನೇಕ ಪ್ರಾಜೆಕ್ಟ್‌ಗಳು ತಲೆ ಎತ್ತಲಿವೆ. ಈ ಸವಾಲನ್ನು ಎದುರಿಸಿ ಗ್ರಾಹಕರನ್ನು ಸೆಳೆಯುವಲ್ಲಿ ಡೆವಲಪರ್‌ಗಳು ಹರಸಾಹಸ ಮಾಡಬೇಕಿದೆ .

ಮುಂಬೈ ಮೆಟ್ರೊಪಾಲಿಟನ್‌ ಪ್ರದೇಶದಲ್ಲಿ (ಎಂಎಂಆರ್‌) ಮಾರಾಟವಾಗದೆ ಉಳಿದ ಮನೆಗಳ ಸಂಖ್ಯೆ ಹೊಸ ಮೈಲಿಗಲ್ಲನ್ನು ಸಾಧಿಸಿದ್ದು, ಭಾರತದ ಅತ್ಯಂತ ದುಬಾರಿ ವಸತಿ ಮಾರುಕಟ್ಟೆಯಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದೆ. 2022ರ ಸೆಪ್ಟೆಂಬರ್‌ 30ರ ವೇಳೆಗೆ ಮಾರಾಟಕ್ಕಿರುವ ಮನೆಗಳ ಸಂಖ್ಯೆ 340,000ನಷ್ಟಿದೆ ಎಂದು ರಿಯಲ್‌ ಎಸ್ಟೇಟ್‌ ಇಂಟೆಲಿಜೆನ್ಸ್‌ ಪ್ಲಾಟ್‌ಫಾರ್ಮ್‌ ಆಗಿರುವ ಲಿಯಾಸೆಸ್‌ ಫೋರಸ್ ದಾಖಲಿಸಿದೆ. ಈ ಸಂಖ್ಯೆಯು ಈ ಪ್ರದೇಶದ ಡೆವಲಪರ್‌ಗಳ ವಾರ್ಷಿಕ ಮಾರಾಟದ ಸುಮಾರು ಐದು ಪಟ್ಟು ಹೆಚ್ಚಿದೆ ಎನ್ನಲಾಗಿದೆ.

ಮಾರಾಟವಾಗದ ಮನೆಗಳ ಮೂರನೇ ಒಂದು ಭಾಗದಷ್ಟು ದಾಸ್ತಾನು ಇರುವುದು ಮುಂಬೈ ನಗರದಲ್ಲಿ. ಉಳಿದವು ಥಾಣೆ, ಪನ್ವೇಲ್‌, ನವ ಮುಂಬೈ ಹಾಗೂ ಇತರ ಉಪನಗರಗಳಲ್ಲಿ ಇವೆ. ಮುನ್ಸಿಪಲ್‌ ಕಾರ್ಪೊರೇಶನ್‌ ನೀಡುವ ಎಫ್‌ಎಸ್‌ಐ (ಫ್ಲೋರ್‌ ಸ್ಪೇಸ್‌ ಇಂಡೆಕ್ಸ್‌) ರಿಯಾಯಿತಿಯಿಂದ ಉತ್ತೇಜಿತರಾಗಿ, ಮುಂಬೈನಲ್ಲಿನ ಡೆವಲಪರ್‌ಗಳು ಹೊಸ ಹೊಸ ಯೋಜನೆಗಳನ್ನು ನಿರ್ಮಿಸುವಲ್ಲಿ ಉತ್ಸಾಹ ತೋರಿದರು. ಇದರಿಂದಾಗಿ ಸಾಮಾನ್ಯ ವರ್ಷಕ್ಕೆ ಹೋಲಿಸಿದರೆ ಕಳೆದ ವರ್ಷ ಹೊಸ ಯೋಜನೆಗಳಿಗೆ ಸಿಕ್ಕ ಅನುಮೋದನೆ 5 ಪಟ್ಟು ಹೆಚ್ಚಾಗಿದೆ. ಸಿಕ್ಕ ಅನುಮೋದನೆಯಿಂದ ಉತ್ಸುಕರಾದ ಬಿಲ್ಡರ್‌ಗಳು ಹಬ್ಬದ ಸೀಸನ್‌ಗಳಲ್ಲಿ ತಮ್ಮ ನೂತನ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದಾರೆ.

ಮುಂಬೈನಲ್ಲಿ ಶೇ 30ರಷ್ಟು ವಸತಿ ದಾಸ್ತಾನು 1 ಕೋಟಿ ರೂಪಾಯಿಗಿಂತ ಕಡಿಮೆ ಬೆಲೆಯದ್ದು. ಶೇ 70ರಷ್ಟು ಮನೆಗಳು 2ಕೋಟಿ ಮೌಲ್ಯಕ್ಕಿಂತ ಕಡಿಮೆ ಬೆಲೆಯದ್ದಾಗಿದೆ. ಕೋವಿಡ್‌ -19 ಬಂದ ನಂತರ ಹೆಚ್ಚಿನವರು ದೊಡ್ಡ ದೊಡ್ಡ ಮನೆಗಳ ಬಗ್ಗೆ ಆಸಕ್ತಿ ತೋರುತ್ತಿದ್ದಾರೆ ಎಂಬುದು ಅನೇಕರ ವಾದವಾಗಿತ್ತು. ಆದರೆ ಇದಕ್ಕೆ ವಿರುದ್ಧವಾಗಿ ಶೇ 75ರಷ್ಟು ಮಂದಿ 2ಬಿಎಚ್‌ಕೆ ಹಾಗೂ ಅದಕ್ಕಿಂತ ಕಡಿಮೆ ಸಂರಚನೆಗಳಿರುವ ಮನೆಯನ್ನು ಕೊಳ್ಳುವಲ್ಲಿ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.

ಮಾರಾಟವಾಗಬೇಕಿರುವ ಮನೆಗಳ ಸಂಖ್ಯೆ ಸಾಕಷ್ಟಿರುವುದರಿಂದ ಡೆವಲಪರ್‌ಗಳು ಹೆಚ್ಚು ಆತಂಕದಲ್ಲಿದ್ದಾರೆ. ಇದು ರಿಯಲ್‌ ಎಸ್ಟೇಟ್‌ ಕ್ಷೇತ್ರಕ್ಕೆ ದೊಡ್ಡ ಸವಾಲಾಗಲಿದ್ದು ಗ್ರಾಹಕರ ಗಮನ ಸೆಳೆಯುವಲ್ಲಿ ಹೊಸ ಹೊಸ ತಂತ್ರಗಳನ್ನು ಅಳವಡಿಸಿಕೊಂಡು ಕೆಲಸ ಮಾಡಲಿದ್ದಾರೆ ಡೆವಲಪರ್‌ಗಳು. ಸದ್ಯದ ಪರಿಸ್ಥಿತಿಯ ಪ್ರಕಾರ ಮನೆಗಳ ಬೆಲೆ ಏರಿಕೆನ್ನೂ ಕಾಣುವುದಿಲ್ಲ. ಹಾಗೆಯೇ ಇಳಿಕೆಯನ್ನೂ ಕಾಣುವುದಿಲ್ಲ ಎನ್ನಲಾಗುತ್ತಿದೆ.

ಅದರೆ ಅನುಮೋದನೆಗೊಂಡು ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಮಾರಾಟದ ಬಗ್ಗೆ ಮೊದಲೇ ಊಹಿಸುವುದೂ ಕಷ್ಟ. ಹೀಗಾಗಿ ಈ ಎಲ್ಲ ಬೆಳವಣಿಗೆಗಳ ಮೂಲಕ ಮುಂಬೈ ರಿಯಲ್‌ ಎಸ್ಟೇಟ್‌ ಕ್ಷೇತ್ರ ಸವಾಲುಗಳ ಬಿರುಗಾಳಿಯನ್ನು ಎದುರಿಸಲಿದೆ. ಅದನ್ನು ಮೀರಿ ಗೆಲ್ಲುವ ಎದೆಗಾರಿಕೆಯನ್ನು ರಿಯಲ್‌ ಎಸ್ಟೇಟ್‌ ಕ್ಷೇತ್ರ ತೋರಬೇಕಿದೆ ಎಂಬುದು ತಜ್ಞರ ಅಭಿಪ್ರಾಯ.

Related News

spot_img

Revenue Alerts

spot_img

News

spot_img