28.2 C
Bengaluru
Wednesday, July 3, 2024

ರಿಯಲ್‌ ಎಸ್ಟೇಟ್‌ ಉದ್ಯಮ: ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಮಾರಾಟ

ನಕಲಿ ಆಸ್ತಿ ದಾಖಲೆ ಪತ್ರಗಳನ್ನು ವ್ಯವಸ್ಥಿತವಾಗಿ ರೂಪಿಸುತ್ತಿದ್ದ ಜಾಲವನ್ನೇ ಮೈಸೂರು ಸಿಟಿ ಪೊಲೀಸರು ಈಚೆಗೆ ಭೇದಿಸಿದ್ದು, ಆಸ್ತಿ ದಾಖಲೆ ಪತ್ರಗಳನ್ನು ನಕಲಿ ಪ್ರಿಂಟ್‌ ಮಾಡುತ್ತಿದ್ದ, ಈ ಹಿಂದಿನ ಕೆಲ ಅಪರಾಧ ಪ್ರಕರಣಗಳಲ್ಲಿಯೂ ಭಾಗಿಯಾಗಿದ್ದ ಮೂವರು ವ್ಯಕ್ತಿಗಳನ್ನು ಬಂಧಿಸಿದ್ದಾರೆ.

ಇತ್ತೀಚೆಗೆ ದಕ್ಷಿಣ ಮೈಸೂರಿನ ಸರ್ವೀಸ್‌ ಅಪಾರ್ಟ್‌ಮೆಂಟ್‌ವೊಂದಕ್ಕೆ ದಾಳಿ ನಡೆಸಿದ ಪೊಲೀಸರು ಅಲ್ಲಿದ್ದ ನಕಲಿ ಬಾಂಡ್‌ ಪೇಪರ್‌ಗಳು, ಸರ್ಕಾರಿ ಸ್ಟ್ಯಾಂಪ್‌ಗಳು, ಪ್ರಿಂಟರ್ಸ್‌, ಸ್ಕ್ಯಾನರ್ಸ್‌ ಗಳನ್ನು ವಶಕ್ಕೆ ಪಡೆದಿದ್ದಾರೆ. ಡೆಪ್ಯುಟಿ ಕಮೀಷನರ್‌ ಆಫ್‌ ಪೊಲೀಸ್‌ (ಕಾನೂನು ಹಾಗೂ ಸುವ್ಯವಸ್ಥೆ) ಪ್ರದೀಪ್‌ ಗುಂಟಿ ಅವರ ನೇತೃತ್ವದಲ್ಲಿ ತಂಡವು ಕಾರ್ಯಾಚರಣೆ ನಡೆಸಿತ್ತು.

ಬಂಧಿಸಲಾಗಿರುವ ಮೂವರು ಕೂಡ ಮೈಸೂರು ನಿವಾಸಿಗಳು. ಸುಲಭವಾಗಿ ನಂಬಿಸಿ ಮೋಸಗೊಳಿಸಬಹುದಾದ ಆಸ್ತಿ ಖರೀದಿದಾರರು ಹಾಗೂ ಮಾರಾಟಗಾರರನ್ನು ಇವರು ಗುರುತಿಸಿ ನಕಲಿ ಆಸ್ತಿ ದಾಖಲೆ ಸೃಷ್ಟಿಸಿ, ಅವರನ್ನು ಪೂರ್ಣ ನಂಬಿಸಿ ವಂಚಿಸುತ್ತಿದ್ದರು.

ಇಂತಹ ಪ್ರಕರಣಗಳು ಇದು ಮೊದಲ ಬಾರಿಯೇನಲ್ಲ. ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ಅನೇಕ ಬದಲಾವಣೆಗಳು ಆಗಿರುವುದರಿಂದ ಈ ತರಹದ ಅನೇಕ ಪ್ರಕರಣಗಳು ರಾಜ್ಯದ ವಿವಿಧ ಕಡೆಗಳಲ್ಲಿ ಆಗಾಗ ದಾಖಲಾಗುತ್ತಲೇ ಇರುತ್ತವೆ. ಇದೇ ವಾರ ಮೈಸೂರಿನ ಲಕ್ಷ್ಮಿಪುರ ಹಾಗೂ ಮೆಟಗಳ್ಳಿ ಪ್ರದೇಶಗಳಲ್ಲಿ ಎರಡು ಆಸ್ತಿ ದಾಖಲೆ ವಂಚನೆ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳ ಮುಖ್ಯ ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ. ಸುಳಿವು ಆಧರಿಸಿ ಸರ್ವೀಸ್‌ ಅಪಾರ್ಟ್‌ಮೆಂಟ್‌ಗೆ ದಾಳಿ ನಡೆಸಿದಾಗ ನಕಲಿ ದಾಖಲೆ ಸೃಷ್ಟಿ ಜಾಲವೇ ಪತ್ತೆಯಾಯಿತು ಎಂದು ಪ್ರದೀಪ್‌ ಗುಂಟಿ ತಿಳಿಸಿದ್ದಾರೆ.

ಸಾಮಾನ್ಯ ಜನರು ಹಾಗೂ ಆಸ್ತಿ ಖರೀದಿಸಲು ಬಯಸುವವರು ಇಂತಹ ನಕಲಿ ದಾಖಲೆ ಹಾಗೂ ಜನರ ಬಗ್ಗೆ ಹೆಚ್ಚು ತಿಳಿದುಕೊಂಡಿರಬೇಕು. ಆಸ್ತಿ ಖರೀದಿ ಅಥವಾ ಮಾರಾಟಕ್ಕೂ ಮುನ್ನ ಪರಿಚಿತ ವ್ಯಕ್ತಿಗಳ ಜೊತೆ ವ್ಯವಹಾರ ನಡೆಸಬೇಕು. ಯಾವುದಾದರೂ ಅಪರಿಚಿತರು ಆಸ್ತಿ ಮಾರಾಟ ಅಥವಾ ಖರೀದಿಗೆ ಆಸಕ್ತಿ ತೋರಿಸಿದಾಗ ಎಚ್ಚರಿಕೆ ವಹಿಸಬೇಕು ಎಂಬುದು ಪೊಲೀಸರ ಸಲಹೆ.

ನಗರಗಳಲ್ಲಿ ಖಾಲಿ ಇರುವ ಸೈಟ್‌ಗಳನ್ನು ಗುರುತಿಸಿ ಅದರ ಮಾಲೀಕರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೇರೆಯವರಿಗೆ ಮಾರಾಟ ಮಾಡುವ ದೊಡ್ಡ ದಂಧೆಯೇ ನಡೆಯುತ್ತಿದೆ.

ಗ್ರಾಮಿಣ ಭಾಗಗಳಲ್ಲಿ, ತಾಲೂಕುಗಳಲ್ಲಿ ನಕಲಿ ದಾಖಲೆ ಸೃಷ್ಟಿಸಿ ಜಮೀನುಗಳ ಪರಭಾರೆ ನಡೆಸಲಾಗುತ್ತಿದೆ. ಹಾಗಾಗಿ ಜನರು ತಮ್ಮ ಜಮೀನುಗಳ ಪಹಣಿಯನ್ನು ತಿಂಗಳಿಗೊಮ್ಮೆ ಪರಿಶೀಲನೆ ಮಾಡಬೇಕು. ಮೊಬೈಲ್‌ನಲ್ಲೇ ತಮ್ಮ ಜಮೀನು ಪಹಣಿ ನೋಡುವ ಸೌಲಭ್ಯವಿರುವುದರಿಂದ ಖಾತೆ ಬದಲಾವಣೆ ಕುರಿತು ಯಾವುದೇ ಅನುಮಾನ ಇದ್ದಲ್ಲಿ ಕಂದಾಯ ಇಲಾಖೆ ಅಥವಾ ಪೊಲೀಸ್‌ ಇಲಾಖೆಯನ್ನು ಸಂಪರ್ಕಿಸಬೇಕು ಎಂದು ಪೊಲೀಸರು ತಿಳಿಸುತ್ತಾರೆ.

Related News

spot_img

Revenue Alerts

spot_img

News

spot_img