ಬೆಂಗಳೂರಿನಲ್ಲಿ ಅತಿ ಹೆಚ್ಚು ವೇಗವಾಗಿ ಬೆಳೆಯುತ್ತಿರುವ ಪ್ರದೇಶ ಎಂದರೆ ಯಲಹಂಕದಿಂದ ದೇವನಹಳ್ಳಿ ವರೆಗಿನ ಪ್ರದೇಶ. ಸದ್ಯ ರಿಯಲ್ ಎಸ್ಟೇಟ್ ಬೂಮ್‌ನಲ್ಲಿರುವ ಪ್ರದೇಶವಿದು ಎಂದರೂ ಅಚ್ಚರಿಯಿಲ್ಲ. ಹೂಡಿಕೆದಾರರು, ರಿಯಲ್ ಎಸ್ಟೇಟ್ ಕಂಪೆನಿಗಳು ಇಲ್ಲಿಗೆ ವಿಶೇಷ ಒತ್ತು ನೀಡಿವೆ. ಉದ್ಯೋಗದ ಕಾರಣದಿಂದ ಒಂದು ಮನೆಯಲ್ಲಿ ಇರಬೇಕು ಎಂಬುವವರು ಮತ್ತು ನಿವೇಶನ, ಫ್ಲಾಟ್‌ಗಳ ಮೇಲೆ ಹೂಡಿಕೆ ಮಾಡುವವರೂ ಸಹ ಇದೇ ಪ್ರದೇಶಗಳ ಮೇಲೆ ಕಣ್ಣಿಟ್ಟಿದ್ದಾರೆ.
ಸದ್ಯ ಯಲಹಂಕದ ಭಾಗದಲ್ಲಿ ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ಗಳು ತಲೆ ಎತ್ತುತ್ತಿವೆ. ಈ ಹಿಂದೆ ಸರ್ಜಾಪುರ, ವೈಟ್‌ಫೀಲ್ಡ್ ಭಾಗದಲ್ಲಿ ಇದ್ದಂತಹ ವಿಲ್ಲಾಗಳು ಈಗ ಯಲಹಂಕ, ದೇವನಹಳ್ಳಿ ಸುತ್ತಮುತ್ತ ಕಾಣಿಸುತ್ತಿವೆ. ಹೊಸ ಹೊಸ ಅಪಾರ್ಟ್‌ಮೆಂಟ್‌ಗಳಲ್ಲಿ ಫ್ಲಾಟ್‌ಗಳ ಬುಕ್ಕಿಂಗ್ ಜೊತೆಗೆ ಹಳೆಯ ಅಪಾರ್ಟ್‌ಮೆಂಟ್‌ಗಳಿಗೂ ಒಳ್ಳೆಯ ರೀಸೇಲ್ ಬೆಲೆಗಳು ದಕ್ಕುತ್ತಿವೆ. ಇದು ರಿಯಲ್ ಎಸ್ಟೇಟ್ ಏಜೆಂಟರನ್ನೂ ಸಹ ಈ ಭಾಗದತ್ತ ಹೆಚ್ಚಿನ ಆಸಕ್ತಿ ಮೂಡಿಸುವಂತೆ ಮಾಡಿದೆ.
ಪುರವಂಕರ, ಬ್ರಿಗೇಡ್, ಪ್ರೆಸ್ಟೀಜ್, ಆದರ್ಶ ಗ್ರೀನ್, ವೈಷ್ಣವಿ ಸೆರೆನೆ, ಸತ್ವ ಎಕ್ಸಾಟಿಕ್ ಸೇರಿದಂತೆ ಅನೇಕ ಪ್ರಮುಖ ‘ಎ’, ‘ಬಿ’ ಮತ್ತು ‘ಸಿ’ ದರ್ಜೆಯ ರಿಯಲ್ ಎಸ್ಟೇಟ್ ಕಂಪೆನಿಗಳು ಇಲ್ಲಿ ನಿರ್ಮಾಣಕ್ಕೆ ಇಳಿದಿವೆ. ಈಗಾಗಲೇ ಅನೇಕ ಯೋಜನೆಗಳನ್ನು ಪೂರ್ಣಗೊಳಿಸಿ ಹೊಸ ಹೊಸ ಪ್ರಾಜೆಕ್ಟ್‌ಗಳಿಗೆ ಇದೇ ಭಾಗದಲ್ಲಿ ತಲಾಷ್ ನಡೆಸಿವೆ.
ಕಾರಣವೇನು?
ಯಲಹಂಕದ ಸುತ್ತಮುತ್ತ ರಿಯಲ್ ಎಸ್ಟೇಟ್ ಬೆಳೆಯುವುದಕ್ಕೆ ಕಾರಣ ಅನೇಕ ಇವೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ ಇತ್ತೀಚೆಗೆ ಇಲ್ಲಿ ಚಾಲನೆ ನೀಡಲಾಗಿದ್ದು, ಇದು ಎನ್‌ಆರ್‌ಐಗಳನ್ನು ಪ್ರಮುಖವಾಗಿ ಆಕರ್ಷಿಸಿದೆ.
ಇನ್ನು ಸದ್ಯ ಐಟಿ ಕ್ಷೇತ್ರದ ಕಂಪೆನಿಗಳು ಹೆಚ್ಚಾಗಿ ಇರುವಂತಹ ಎಲೆಕ್ಟ್ರಾನಿಕ್ ಸಿಟಿ, ಸರ್ಜಾಪುರ, ವೈಟ್‌ಫೀಲ್ಡ್ ಭಾಗದಲ್ಲಿ ಮೂಲಸೌಕರ್ಯಗಳ ಕೊರತೆ ಇರುವುದರಿಂದ ಮಳೆ ಬಂದಾಗ ಇತ್ತೀಚೆಗೆ ಜನರು ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದಾರೆ. ಹೀಗಾಗಿ ಹೊಸ ಕಂಪೆಗಳು ಮತ್ತು ಈಗಾಗಲೇ ಇರುವ ಹಳೆಯ ಕಂಪೆನಿಗಳು ತಮ್ಮ ಹೊಸ ಬ್ರ್ಯಾಂಚ್‌ಗಳನ್ನು ವಿಮಾನ ನಿಲ್ದಾಣಕ್ಕೆ ಆಸುಪಾಸಿನಲ್ಲಿ ಹೊಂದಿಕೊಂಡಂತೆ ಶಿಫ್ಟ್ ಮಾಡಲು ಆಲೋಚಿಸಿವೆ.
ಬೆಂಗಳೂರಿನ ಹಳೆಯ ಭಾಗದಲ್ಲಿ ಟ್ರಾಫಿಕ್ ಜಂಜಾಟ ಮತ್ತು ಜನಸಾಂದ್ರತೆಯಿಂದ ಕೆಲವರು ಹೊಸ ವಾತಾವರಣವನ್ನು ಬಯಸಿದ್ದಾರೆ. ಹೀಗಾಗಿ ಯಲಹಂಕ, ದೇವನಹಳ್ಳಿಯತ್ತ ಕಡಿಮೆ ಟ್ರಾಫಿಕ್ ಇರುವ ಪ್ರದೇಶವನ್ನು ಆಯ್ದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ವಿಮಾನ ನಿಲ್ದಾಣದಿಂದ ಬಹುತೇಕ ಹೆಬ್ಬಾಳದವರೆಗೂ ಸಿಗ್ನಲ್‌ಫ್ರೀ ಸಂಚಾರ ಇರುವುದರಿಂದ ಅನೇಕರು ಈ ಭಾಗದತ್ತಲೇ ಮುಖ ಮಾಡಿದ್ದಾರೆ.
ಎಷ್ಟಿದೆ ಫ್ಲಾಟ್‌ಗಳ ದರ?
ಸಾಮಾನ್ಯವಾಗಿ ಹೊಸದಾಗಿ ಬೆಂಗಳೂರಿಗೆ ಬಂದವರು ಮತ್ತು ಸ್ವಂತಕ್ಕಾಗಿ ಮನೆ ಬೇಕು ಎನ್ನುವವರು ಎರಡು ಬೆಡ್‌ರೂಮ್ ಹೊಂದಿರುವ ಫ್ಲಾಟ್‌ಗಳನ್ನೇ ಗಮನಿಸುತ್ತಾರೆ. ಸದ್ಯ ಬೆಂಗಳೂರು ಉತ್ತರ ತಾಲ್ಲೂಕಿನ ಯಲಹಂಕ ಸುತ್ತಮುತ್ತ ಎಷ್ಟಿದೆ ಫ್ಲಾಟ್‌ಗಳ ದರ ಎಂದು ನೋಡಿದಾಗ ವೈಷ್ಣವಿ ಸೆರೆನೆ 57 ಲಕ್ಷ ರೂ.ನಿಂದ 77 ಲಕ್ಷ ರೂ. ವರೆಗೂ ಇದೆ. ಸತ್ವ ಎಕ್ಸಾಟಿಕ್ ಬೆಲೆ 80ರಿಂದ 96 ಲಕ್ಷ ರೂ.ವರೆಗೆ ಇದೆ. ಬ್ರಿಗೇಡ್ ಬ್ರಿಕ್‌ಲೇನ್ 57 ಲಕ್ಷ ರೂ.ನಿಂದ 76 ಲಕ್ಷ ರೂ.ವರೆಗೆ ಇದೆ. ಎಸ್‌ಎಲ್‌ವಿ ಐಕಾನ್ 57 ಲಕ್ಷ ರೂ.ನಿಂದ 70 ಲಕ್ಷ ರೂ.ವರೆಗೆ ಬೆಲೆ ನಿಗದಿಪಡಿಸಿದೆ.
“ಕೊರೊನಾ ಮುಗಿದ ಬಳಿಕ ಯಲಹಂಕದ ಸುತ್ತಮುತ್ತ ರಿಯಲ್ ಎಸ್ಟೇಟ್ ಚೇತರಿಕೆ ಕಂಡಿದೆ. ಜನರು ತಾವು ನೆಲೆಸುವ ಪ್ರದೇಶವನ್ನು ಅಪ್‌ಗ್ರೇಡ್ ಮಾಡಿಕೊಳ್ಳುತ್ತಿದ್ದಾರೆ. ಅಂದರೆ ಅಪಾರ್ಟ್‌ಮೆಂಟ್‌ನಲ್ಲಿ ಇದ್ದವರು ವಿಲ್ಲಾಗಳಿಗೆ, ಒಂದು ಬೆಡ್‌ರೂಮ್ ಇರುವವರು ಎರಡು ಬೆಡ್‌ರೂಮ್ ಫ್ಲಾಟ್‌ಗೆ ಹೀಗೆ ಶಿಫ್ಟ್ ಆಗುತ್ತಿದ್ದಾರೆ. ಇದರಿಂದ ಹೊಸ ಹೊಸ ಅಪಾರ್ಟ್‌ಮೆಂಟ್‌ಗಳು ಅಷ್ಟೇ ಅಲ್ಲ, ಕೆಲವು ರೀಸೇಲ್ ಫ್ಲಾಟ್‌ಗಳಿಗೂ ಒಳ್ಳೆಯ ಬೆಲೆ ಬರುತ್ತಿದೆ,” ಎಂದು ರಿಯಾಲ್ಟಿ ಕ್ರಾಪ್‌ಇಂಡಿಯಾದ ಸುನೀಲ್‌ಸಿಂಗ್ ‘https://revenuefacts.com’ಗೆ ಮಾಹಿತಿ ನೀಡಿದರು.
ಪ್ರೆಸ್ಟೀಜ್ ರಾಯಲ್ ಗಾರ್ಡನ್ಸ್ ಅಪಾರ್ಟ್‌ಮೆಂಟ್‌ನಲ್ಲಿ ಮೂರು ಬೆಡ್‌ರೂಮ್ ಹೊಂದಿರುವ ಅಪಾರ್ಟ್‌ಮೆಂಟ್‌ನ ರೀಸೇಲ್ ಬೆಲೆ 1.15 ಕೋಟಿ ರೂ. ನಿಗದಿಪಡಿಸಲಾಗಿದೆ. ಜನರು ಇಲ್ಲಿ ಹೂಡಿಮೆ ಮಾಡಲು ಹಿಂದೆಮುಂದೆ ನೋಡುತ್ತಿಲ್ಲ. ಪ್ರತಿ ತಿಂಗಳು ನಾವೇ 4-5 ನೋಂದಣಿಗಳನ್ನು ಮಾಡಿಸುತ್ತೇವೆ ಎಂದು ಸುನೀಲ್ ಸಿಂಗ್ ಹೇಳಿದರು.