22.9 C
Bengaluru
Friday, July 5, 2024

ಕರ್ನಾಟಕದಲ್ಲಿ ಆಸ್ತಿ ನೋಂದಣಿ: ಈ ತ್ರೈಮಾಸಿಕದಲ್ಲಿ ₹1,117.03 ಕೋಟಿ ಹೆಚ್ಚುವರಿ ಸಂಗ್ರಹ

ಏಪ್ರಿಲ್‌ನಿಂದ ಸೆಪ್ಟೆಂಬರ್‌ ತನಕ ಕರ್ನಾಟಕ ರಾಜ್ಯ ಆಸ್ತಿ ನೋಂದಣಿಯಲ್ಲಿ ₹6,764 ಕೋಟಿ ಸಂಗ್ರಹವಾಗಿದೆ. ಕೊರೊನಾ ಪೂರ್ವ ಸಮಯಕ್ಕಿಂತಲೂ ಈ ಹಣಕಾಸು ವರ್ಷದಲ್ಲಿ ಅತಿ ಹೆಚ್ಚು ಕೋಟಿ ಸಂಗ್ರಹವಾಗಿದೆ, ಈ ಮೂಲಕ ಗರಿಷ್ಠ ಮಟ್ಟ ತಲುಪುವ ದಾಖಲೆ ಮಾಡಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ ಮಾಹಿತಿ ನೀಡಿದ್ದಾರೆ.

ಎಲ್ಲಾ ಆಸ್ತಿ ವಹಿವಾಟುಗಳ ಗೈಡ್‌ಲೈನ್ಸ್‌ ಮೌಲ್ಯದ ಮೇಲೆ ಶೇ 10 ಬಡ್ಡಿ ಕಡಿತ ಮತ್ತು ಸ್ಟ್ಯಾಂಪ್‌ ಸುಂಕ ಹಾಗೂ ಬಡ್ಡಿ ದರವನ್ನು ಕಡಿಮೆಗೊಳಿಸಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ಏಪ್ರಿಲ್‌ನಿಂದ ಸೆಪ್ಟೆಂಬರ್‌ 4ರವರೆಗೆ ರಾಜ್ಯದಾದ್ಯಂತ 11 ಲಕ್ಷ ಆಸ್ತಿ ದಾಖಲೆಗಳ ನೋಂದಣಿ ಕಾರ್ಯ ನಡೆದಿದ್ದು, ಇದರಿಂದ ₹6,764.71 ಕೋಟಿ ಸಂಗ್ರಹವಾಗಿದೆ.

ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಸುಮಾರು ₹5,647.68 ಕೋಟಿ ಸಂಗ್ರಹದ ಗುರಿಯನ್ನು ಹೊಂದಲಾಗಿತ್ತು. ಆದರೆ ನಿರೀಕ್ಷೆಯನ್ನು ಮೀರಿ ಅಂದಾಜಿಗಿಂತಲೂ ₹1,117.03 ಕೋಟಿ ಹೆಚ್ಚುವರಿ ಸಂಗ್ರಹವಾಗಿದೆ. ಇದು 2019–20, 2020–21, 2021–22ರ ಹಣಕಾಸು ವರ್ಷಕ್ಕೆ ಹೋಲಿಸಿದರೆ ಈ ಬಾರಿ ಸರಾಸರಿಗಿಂತ ಹೆಚ್ಚಿನ ಆದಾಯ ಸಂಗ್ರಹವಾಗಿದೆ ಎಂದು ಅಶೋಕ ತಿಳಿಸಿದ್ದಾರೆ.

ಸೌಲಭ್ಯದ ವಿಸ್ತರಣೆ
ದಾಖಲೆ ಆದಾಯ ಸಂಗ್ರಹಕ್ಕೆ ಕಾರಣವಾಗಿರುವ ಆಸ್ತಿ ವಹಿವಾಟುಗಳ ಗೈಡ್‌ಲೈನ್ಸ್‌ ಮೌಲ್ಯದ ಮೇಲೆ ಶೇ 10 ಬಡ್ಡಿ ಕಡಿತ ಸೌಲಭ್ಯವನ್ನು ಮುಂದಿನ ಮೂರು ತಿಂಗಳ ಕಾಲ ಮತ್ತೆ ವಿಸ್ತರಿಸಲಾಗುತ್ತದೆ. ಈ ಬಗ್ಗೆ ಕೂಡಲೇ ಆದೇಶ ಹೊರಡಿಸಲಾಗುವುದು ಎಂದು ಅಶೋಕ ತಿಳಿಸಿದ್ದಾರೆ.

ಜನವರಿ 1ರಿಂದ ಮಾರ್ಚ್‌ 31ರ ತನಕ ಈ ಸೌಲಭ್ಯ ಒದಗಿಸಲಾಗಿತ್ತು. ಅದಾದ ನಂತರ ಏಪ್ರಿಲ್‌ 225ರಿಂದ ಜುಲೈ 24ರವರೆಗೆ ಇದನ್ನು ಮುಂದುವರಿಸಲಾಗಿತ್ತು.
ನವೆಂಬರ್‌ 1ರಿಂದ ಹೊಸ ಯೋಜನೆ

ಅತಿ ಶೀಘ್ರವಾಗಿ ಆಸ್ತಿ ನೋಂದಣಿ ಪ್ರಕ್ರಿಯೆಗಾಗಿ ಅಭಿವೃದ್ಧಿಪಡಿಸಿರುವ ‘ಕಾವೇರಿ 2.0’ ಸಾಫ್ಟ್‌ವೇರ್‌ ಅನ್ನು ಮುಂದಿನ ನವೆಂಬರ್‌ 1ರಿಂದ ಸರ್ಕಾರ ಆರಂಭಿಸಲಿದೆ ಎಂದು ಅಶೋಕ ಮಾಹಿತಿ ನೀಡಿದ್ದಾರೆ. ಹೊಸ ಸಾಫ್ಟ್‌ವೇರ್‌ ಮೂಲಕ ಸಬ್‌ರಿಜಿಸ್ಟ್ರಾರ್ ಆಫೀಸ್‌ಗಳಲ್ಲಿ ಆಸ್ತಿ ವಹಿವಾಟುಗಳನ್ನು ನಿರಾತಂಕವಾಗಿ ಮುಗಿಸುವ ಜನಸ್ನೇಹಿ ಯೋಜನೆಯಿದು. ಇ– ಗವರ್ನೆನ್ಸ್‌ಗಾಗಿ ಕೇಂದ್ರದಿಂದ ಅಭಿವೃದ್ಧಿಪಡಿಸಿರುವ ತಂತ್ರಾಂಶವಾಗಿದೆ.

ಆಸ್ತಿ ನೋಂದಣಿಗಾಗಿ ‘ಕಾವೇರಿ 2.0’ ತಂತ್ರಾಂಶ ಮೂಲಕ ಜನರು ಮಾಹಿತಿಗಳನ್ನು ಭರ್ತಿ ಮಾಡಿ, ದುಡ್ಡು ಪಾವತಿಸಬೇಕು. ನಂತರ ಸಬ್‌ ರಿಜಿಸ್ಟ್ರಾರ್‌ ಕಚೇರಿಯ ಭೇಟಿಗೆ, ನಮ್ಮ ಆಯ್ಕೆಯ ಪ್ರಕಾರ ಸಮಯವನ್ನು ನಿಗದಿಗೊಳಿಸಿ, ಅಪಾಯಿಂಟ್‌ಮೆಂಟ್‌ ಪಡೆದುಕೊಳ್ಳಬೇಕು. ಈ ಮೂಲಕ ಸಾರ್ವಜನಿಕರ ಸಮಯ ಗಣನೀಯವಾಗಿ ಉಳಿತಾಯವಾಗುತ್ತದೆ. ಈ ಮೊಬೈಲ್‌ ಅಪ್ಲಿಕೇಷನ್‌ ಎಲ್ಲಾ ರೀತಿಯ ಪ್ರಮಾಣಪತ್ರ ಹಾಗೂ ಪ್ರಮಾಣೀಕೃತ ಕಾಪಿಗಳಿಗೆ ಅರ್ಜಿ ಸಲ್ಲಿಸಲು ಸಹಾಯ ಮಾಡುತ್ತದೆ. ಜನರು ತಮ್ಮ ಫೋನ್‌ ಮೂಲಕ ಇದಕ್ಕೆ ಸಂಬಂಧಿಸಿದ ಅಪ್ಡೇಟ್‌ಗಳನ್ನು ಪಡೆಯುತ್ತಾರೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಹೊಸ ಕಾವೇರಿ 2.0 ಸಾಫ್ಟ್‌ವೇರ್‌ ಅನ್ನು ಈಗಾಗಲೇ ಕಲಬುರಗಿ ಜಿಲ್ಲೆಯ ಚಿಂಚೋಳಿಯಲ್ಲಿರುವ ಉಪ ನೋಂದಣಾಧಿಕಾರಿಗಳ ಕಚೇರಿಯನ್ನು ಪರೀಕ್ಷಿಸಲಾಗಿದೆ.

ಮೂಲ ಸೌಲಭ್ಯ– ಡೆಡ್‌ಲೈನ್‌
ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಿಗೆ ಭೇಟಿ ನೀಡುವ ಜನರಿಗಾಗಿ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಲು ಅಧಿಕಾರಿಗಳಿಗೆ ಮೂರು ತಿಂಗಳ ಗಡುವು ನಿಗದಿ ಮಾಡಲಾಗಿದೆ ಎಂದು ಸಚಿವ ಆರ್‌. ಅಶೋಕ ವಿವರಿಸಿದ್ದಾರೆ.

ಕರ್ನಾಟಕದಲ್ಲಿ 253 ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಿವೆ. ಅದರಲ್ಲಿ 36 ಕಚೇರಿಗಳಲ್ಲಿ ಶೌಚಾಲಯಗಳಿಲ್ಲ, 28 ಆಫೀಸ್‌ಗಳಲ್ಲಿ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆಗಳಿಲ್ಲ, 202 ಕಚೇರಿಯಲ್ಲಿ ಲಿಫ್ಟ್‌ಗಳಿಲ್ಲ. 58 ಕಚೇರಿಗಳಲ್ಲಿ ವಾಹನ ಪಾರ್ಕಿಂಗ್‌ ಸೌಲಭ್ಯವಿಲ್ಲ. ‘ಮೂರು ತಿಂಗಳೊಳಗೆ ಎಲ್ಲಾ ಸಗತ್ಯ ಸೌಕರ್ಯ ಒದಗಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳುತ್ತೇನೆ‘ ಎಂದು ಸಚಿವರು ಸೂಚಿಸಿದ್ದಾರೆ.

ಭೂ ಪರಿವರ್ತನೆ
ಕೃಷಿ ಭೂಮಿಯನ್ನು ಕೃಷಿಯೇತರ ಬಳಕೆಗೆ ಪರಿವರ್ತಿಸಲು ಅನುಮತಿಸುವ ಮಸೂದೆಯನ್ನು ಸರ್ಕಾರ ಕೇವಲ ಮೂರು ದಿನಗಳೊಳಗೆ ಮಂಡಿಸಲಿದೆ.

ರೈತರು ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವ ಸರ್ಕಾರಿ ಭೂಮಿಯನ್ನು ಗುತ್ತಿಗೆಗೆ ನೀಡುವ ಮತ್ತೊಂದು ಮಸೂದೆಯನ್ನು ಮಂಡಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಹಾಸನ, ಚಿಕ್ಕಮಗಳೂರು ಮತ್ತಿತರ ಕಡೆಗಳಲ್ಲಿ ಸರ್ಕಾರಿ ಭೂಮಿಯಲ್ಲಿ ಕೃಷಿ ನಡೆಯುತ್ತಿದೆ. ಇದು ಅಧಿಕಾರಿಗಳ ಜೊತೆ ತಿಕ್ಕಾಟಕ್ಕೆ ಕಾರಣವಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ರೈತರಿಗೆ 30 ವರ್ಷಗಳ ಅವಧಿಗೆ ಅವರು ಕೃಷಿ ಮಾಡುತ್ತಿರುವ ಸರ್ಕಾರಿ ಭೂಮಿಯನ್ನು ಗುತ್ತಿಗೆಗೆ ಅವರಿಗೇ ನೀಡಲಾಗುವುದು ಎಂದು ವಿವರ ನೀಡಿದ್ದಾರೆ.

Related News

spot_img

Revenue Alerts

spot_img

News

spot_img