ಬೆಂಗಳೂರು, ಜೂ. 21 : ರಾಜ್ಯ ಸರ್ಕಾರ ಆಸ್ತಿ ನೋಂದಣಿ ಶುಲ್ಕವನ್ನು ಹೆಚ್ಚಿಸಲು ಮುಂದಾಗಿದೆ. ಈ ಸಂಬಂಧ ಪದೇ ಪದೇ ಮೀಟಿಂಗ್ ನಡೆಯುತ್ತಿದ್ದು, ಇಷ್ಟರಲ್ಲಿ ಆಸ್ತಿ ನೋಂದಣಿ ಶುಲ್ಕವನ್ನು ಹೆಚ್ಚಿಸಲಿದೆ. ಮಾರ್ಗದರ್ಶಿ ಮೌಲ್ಯವು ಆಸ್ತಿ ವಹಿವಾಟನ್ನು ನೋಂದಾಯಿಸುವ ಕನಿಷ್ಠ ಬೆಲೆಯಾಗಿದೆ. ಆಸ್ತಿ ಇರುವ ಪ್ರದೇಶವನ್ನು ಅವಲಂಬಿಸಿ ಸರ್ಕಾರವು ಮೌಲ್ಯವನ್ನು ನಿಗದಿಪಡಿಸುತ್ತದೆ, ಈ ಬೆಲೆಯ ಆಧಾರದ ಮೇಲೆ ಸ್ಟ್ಯಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕವನ್ನು ಲೆಕ್ಕಹಾಕುವುದರಿಂದ ಇದು ಗಮನಾರ್ಹವಾಗಿದೆ.
ಕರ್ನಾಟಕ ರಾಜ್ಯದಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಆಸ್ತಿ ಮಾರ್ಗಸೂಚಿ ಮೌಲ್ಯವನ್ನು ಹೆಚ್ಚಿಗೆ ಮಾಡಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ. ಸುಮಾರು 10-30 ರಷ್ಟು ಮೌಲ್ಯವನ್ನು ಹೆಚ್ಚಿಗೆ ಮಾಡಲು ರಾಜ್ಯ ಸರ್ಕಾರ ಹೆಚ್ಚಿಸಲು ಯೋಜಿಸಿದೆ ಎಂದು ಮುದ್ರಾಂಕ ಮತ್ತು ನೋಂದಣಿ ಇಲಾಖೆ ಮೂಲಗಳು ತಿಳಿಸಿವೆ. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಆಸ್ತಿ ಮಾರ್ಗಸೂಚಿ ಮೌಲ್ಯವು ಮಾರಾಟ ಮಾಡಲು ನೋಂದಾಯಿಸುವ ಕನಿಷ್ಠ ಮೌಲ್ಯ. ಇದನ್ನು ಕೆಲ ರಾಜ್ಯಗಳಲ್ಲಿ ವೃತ್ತ ದರ ಎಂದೂ ಕೂಡ ಕರೆಯಲಾಗುತ್ತದೆ.
ಕೊನೆಯ ಬಾರಿಗೆ ರಾಜ್ಯದಲ್ಲಿ 2018-19 ರಲ್ಲಿ ಶೇ. 25 ರಷ್ಟು ಹೆಚ್ಚಳ ಮಾಡಲಾಗಿತ್ತು. ಬಳಿಕ ಕೋವಿಡ್-19 ಕಾರಣದಿಂದಾಗಿ ಜುಲೈ 2022 ರವರೆಗೆ ಸರ್ಕಾರವು 10% ರಿಯಾಯಿತಿಯನ್ನು ಕೂಡ ನೀಡಲಾಗಿತ್ತು. ಇದೀಗ ಹೊಸ ಸರ್ಕಾರ ಸಂಪೂರ್ಣವಾಗಿ ರಚನೆಯಾದ ಬಳಿಕ ಮೌಲ್ಯವನ್ನು ಅಧಿಕಗೊಳಿಸಲು ನಿರ್ಧರಿಸಲಾಗಿದೆ. ಇನ್ನು ಈ ಮಾರ್ಗದರ್ಶನ ಮೌಲ್ಯದ ಹೆಚ್ಚಳವು ಮಾರಾಟದ ಮೇಲೆ ಪರಿಣಾಮವನ್ನು ಬೀರುತ್ತದೆ ಎಂದು ವಿವರಿಸಲಾಗಿದೆ.
ಆಸ್ತಿ ಮಾರ್ಗಸೂಚಿ ಮೌಲ್ಯ ಎಂದರೆ ಏನು ಎಂಬುದನ್ನು ತಿಳಿಯುವುದಾದರೆ, ರಾಜ್ಯದಲ್ಲಿ ನ್ಯಾಯಯುತವಾಗಿ ಭೂಮಿಯ ಬೆಲೆಯನ್ನು ಲೆಕ್ಕಾಚಾರ ಮಾಡಲಾಗುತ್ತದೆ. ಇದರಲ್ಲಿ ಸ್ಥಳ, ವಿಸ್ತೀರ್ಣ, ಮಾರುಕಟ್ಟೆ ಮೌಲ್ಯ ಹಾಗೂ ಬಂಡವಾಳ ಮೌಲ್ಯವನ್ನು ಸಂಯೋಜಿಸಿ ನಿರ್ಧರಿಸಲಾಗುತ್ತದೆ. ಇದರ ಬಗ್ಗೆ ಮಾಹಿತಿಯನ್ನು ರಾಜ್ಯದ ಮುದ್ರಾಂಕ ಮತ್ತು ನೋಂದಣಿ ಇಲಾಖೆಯ ವೆಬ್ಸೈಟ್ನಲ್ಲಿ ದೊರಕುತ್ತದೆ.