ಫರೀದ್‌ಕೋಟ್‌ನ ಕೊನೆಯ ಅರಸ ಹರಿಂದರ್ ಸಿಂಗ್ ಬ್ರಾರ್ ಅವರ ಉಯಿಲುಗಳನ್ನು ನಕಲು ಮಾಡಿದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಪೊಲೀಸ್ ಬ್ಯೂರೊ ಆಫ್ ಇನ್‌ವೆಸ್ಟಿಗೇಷನ್ (ಬಿಒಎಲ್) ತನಿಖೆಯನ್ನು ಆರಂಭಿಸಿದೆ. ಮಹಾರಾವಲ್ ಖೇವಾಜಿ ಟ್ರಸ್ಟ್‌ನ 23 ಸದಸ್ಯರು ಹಾಗೂ ಉದ್ಯೋಗಿಗಳ ವಿರುದ್ಧ ತನಿಖೆ ನಡೆಯಲಿದೆ.
ಟ್ರಸ್ಟ್‌ನ ಸದಸ್ಯರು ಮತ್ತು ಉದ್ಯೋಗಿಗಳಿಗೆ ನವೆಂಬರ್ 7 ರಂದು ಮೊಹಾಲಿಯಲ್ಲಿರುವ ರಾಜ್ಯ ಅಪರಾಧದ ಸಹಾಯಕ ಪೊಲೀಸ್ ಮಹಾನಿರೀಕ್ಷಕರ ಕಚೇರಿಗೆ 1982ರ ಜೂನ್ 1ರಂದಯ ರಾಜ ಹರಿಂದರ್ ಸಿಂಗ್ ತಯಾರಿಸಿದ ವಿಲ್ ಸೇರಿ ಕೇಸಿಗೆ ಸಂಬಂಧಿಸಿದ ಎಲ್ಲ ದಾಖಲೆಗಳ ಸಮೇತ ಖುದ್ದಾಗಿ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿತ್ತು.
1988ರಲ್ಲಿ ಹರಿಂದರ್ ಸಿಂಗ್ ಮರಣದ ನಂತರ ಟ್ರಸ್ಟ್ ಆರಂಭಿಸಿದ ಕಾಲದಿಂದ ಇಲ್ಲಿಯವರೆಗಿನ ಎಲ್ಲಾ ದಾಖಲೆಗಳನ್ನು ಸಲ್ಲಿಸುವಂತೆ ತಿಳಿಸಿತ್ತು. 2020ರ ಆಗಸ್ಟ್‌ನಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ‘1982ರ ಜೂನ್ 1ರಂದು ಮಹರವಾಲ್ ಖೇವಾಜಿ ಟ್ರಸ್ಟ್ ಪರವಾಗಿ ಬ್ರಾರ್ ಅವರು ಬರೆದಿದ್ದರೆ ಎನ್ನಲಾದ ಉಯಿಲು ನಕಲಿಯಾಗಿದೆ’ ಎಂದು ತೀರ್ಪು ನೀಡಿದ ನಂತರ, ಟ್ರಸ್ಟ್‌ನ 23 ಸದಸ್ಯರು ಮತ್ತು ಉದ್ಯೋಗಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಲಾಯಿತು.
ಫರೀದ್‌ಕೋಟ್‌ನ ಕೊನೆಯ ಅರಸ ಹರಿಂದರ್ ಸಿಂಗ್ ಬ್ರಾರ್ ಅವರ ವಿವಾದಿತ ಆಸ್ತಿಯ ಒಟ್ಟಾರೆ ಈಗಿನ ಮೌಲ್ಯ ಸುಮಾರು 20,000 ಕೋಟಿ ರೂ. ಎಂದು ಅಂದಾಜಿಸಲಾಗಿದೆ.