ಬೆಂಗಳೂರು, ಫೆ. 17 : ಇಂದು ರಾಜ್ಯ ಬಜೆಟ್ ಅನ್ನು ಸಿಎಂ ಬಸವರಾಜ್ ಬೊಮ್ಮಾಯಿ ಅವರು ವಿಧಾನಸಭೆಯಲ್ಲಿ ಮಂಡಿಸಿದರು. 2 ಗಂಟೆ 35 ನಿಮಿಷದ ಬಜೆಟ್ ಅನ್ನು ಸುದೀರ್ಘವಾಗಿ ಮಂಡಿಸಿದರು. ಇದರಲ್ಲಿ ಪ್ರಮುಖವಾಗಿ ರೈತರು, ಮಹಿಳೆಯರು ಹಾಗೂ ವಿದ್ಯಾರ್ಥಿಗಳಿಗೆ ಭರಪೂರ ಕೊಡುಗೆಗಳನ್ನು ನೀಡಲಾಗಿತ್ತು. ಇನ್ನು ವಾಣಿಜ್ಯ ತೆರಿಗೆಯಲ್ಲಿ ಕಡಿಮೆ ಆದಾಯ ಇರುವವರಿಗೆ ವೃತ್ತಿ ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಿಸಿ ಘೋಷಣೆ ಮಾಡಿದ್ದಾರೆ. ಜೊತೆಗೆ ಕರ ಸಮಾಧಾನ ಯೋಜನೆಯನ್ನೂ ಜಾರಿಗೆ ತಂದಿದ್ದಾರೆ.
ಕಡಿಮೆ ಆದಾಯದವರಿಗೆ ವೃತ್ತಿ ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಿಸಿದೆ. ಪ್ರೊಫೆಷನಲ್ ಟ್ಯಾಕ್ಸ್ನಿಂದ ವಿನಾಯಿತಿ ಕೊಡಲಾಗುವ ಮಿತಿಯನ್ನುಹೆಚ್ಚಿಸಲಾಗಿದೆ. ಮಿತಿ 15 ಸಾವಿರ ರೂಪಾಯಿಯಿಂದ 25 ಸಾವಿರ ರೂಪಾಯಿಗೆ ಏರಿಸಲಾಗಿದೆ. ಅಂದರೆ 25 ಸಾವಿರಕ್ಕಿಂತ ಕಡಿಮೆ ಸಂಬಳ ಪಡೆಯುವವರಿಂದ ಪ್ರೊಫೆಷನ್ ಟ್ಯಾಕ್ಸ್ ಪಡೆಯಲಾಗುವುದಿಲ್ಲ. 25 ಸಾವಿರ ರೂಗಿಂತ ಹೆಚ್ಚು ಸಂಬಳ ಪಡೆಯುವವರು 200 ರೂ ವೃತ್ತಿ ತೆರಿಗೆ ಪಾವತಿಸಬೇಕು.
ಇದೇ ಸಂದರ್ಭದಲ್ಲಿ ಕರ ಸಮಾಧಾನ ಯೋಜನೆಯನ್ನು ಜಾರಿಗೆ ತರಲಾಗಿದೆ. ಜಿಎಸ್ಟಿ ಪೂರ್ವ ತೆರಿಗೆ ವ್ಯಾಜ್ಯಗಳನ್ನು ಇತ್ಯರ್ಥಪಡಿಸಲು ಕರ ಸಮಾಧಾನ ಯೋಜನೆಯಾಗಿದೆ. ತೆರಿಗೆ ಬಾಕಿ ಉಳಿಸಿಕೊಂಡವರು ಯಾವುದೇ ವ್ಯಾಜ್ಯದ ತಲೆನೋವಿಲ್ಲದೆ ಬಾಕಿ ಹಣ ಪಾವತಿಸುವ ಅವಕಾಶ ಕಲ್ಪಿಸಲಾಗಿದೆ. ಅಕ್ಟೋಬರ್ 30ರವರೆಗೂ ಗಡುವು ನೀಡಲಾಗಿದ್ದು, ಅಷ್ಟರೊಳಗೆ ಬಾಕಿ ತೆರಿಗೆ ಪಾವತಿಸಿದರೆ ಬಡ್ಡಿ ಮತ್ತು ದಂಡಬಡ್ಡಿ ಪಾವತಿಯಲ್ಲಿ ಪರಿಹಾರ ಇರುತ್ತದೆ ಎಂದು ಬಜೆಟ್ನಲ್ಲಿ ಆಶ್ವಾಸನೆ ಕೊಡಲಾಗಿದೆ.