ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪ್ರಧಾನ ಮಂತ್ರಿ ಆವಾಸ (ಗ್ರಾಮೀಣ) ಯೋಜನೆ ಅನುಷ್ಠಾನದಲ್ಲಿ ವಿಳಂಬ ಎಸಗಿದರೆ ಆಯಾ ರಾಜ್ಯ ಸರ್ಕಾರಗಳು ದಂಡ ಭರಿಸಬೇಕಾಗಲಿದೆ. ಬಿಜೆಪಿ ಆಡಳಿತವಿರುವ ಅಸ್ಸಾಂ ಸೇರಿದಂತೆ ಬಿಜೆಪಿಯೇತರ ಆಡಳಿತವಿರುವ ಪಶ್ಚಿಮ ಬಂಗಾಳ, ಛತ್ತೀಸಗಡ ಹಾಗೂ ಒಡಿಶಾ ರಾಜ್ಯಗಳು ವಸತಿ ಯೋಜನೆಗಲ್ಲಿ ತಮ್ಮ ಗುರಿಗಿಂತ ಭಾರಿ ಹಿನ್ನಡೆ ಅನುಭವಿಸುತ್ತಿವೆ.
2.95 ಕೋಟಿ ಮನೆ ನಿರ್ಮಾಣದ ಯೋಜನೆಯನ್ನು 2016ರಲ್ಲಿ ಪರಿಚಯಿಸಿದ ನಂತರ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಇಂಥದ್ದೊಂದು ನಿಯಮವನ್ನು ಜಾರಿಗೆ ತಂದಿದೆ.
ಆರಂಭಿಕವಾಗಿ ಈ ಗುರಿ ತಲುಪಲು ಮಾರ್ಚ್ 2022ರ ಗಡುವು ನಿಗದಿಸಲಾಗಿತ್ತು. ಆದರೆ, ಕೋವಿಡ್ ಸಾಂಕ್ರಾಮಿಕ ಆವರಿಸಿದ ಕಾರಣ ಗಡುವನ್ನು 2024ರ ಮಾರ್ಚ್ ವರೆಗೆ ವಿಸ್ತರಿಸಲಾಗಿದೆ. ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಂಕಿ ಅಂಶದ ಪ್ರಕಾರ, 2022ರ ಆಗಸ್ಟ್ ಅಂತ್ಯಕ್ಕೆ 2.02 ಕೋಟಿ ಮನೆಗಳನ್ನು ನಿರ್ಮಿಸಲಾಗಿದೆ.
ದಂಡದ ಆರು ಷರತ್ತುಗಳನ್ನು ಪಟ್ಟಿ ಮಾಡುವ ಸುತ್ತೋಲೆಯನ್ನು ಎಲ್ಲಾ ರಾಜ್ಯ ಸರ್ಕಾರಗಳಿಗೆ ಸಚಿವಾಲಯವು ಸೆ.13ರಂದು ರವಾನಿಸಿದೆ. ಅದರ ಪ್ರಕಾರ-
ಮನೆ ಮಂಜೂರು ಮಾಡುವಲ್ಲಿ ಗಡುವಿಗಿಂತ ಒಂದು ತಿಂಗಳು ವಿಳಂಬವಾದರೆ ರಾಜ್ಯ ಸರ್ಕಾರವು ಪ್ರತಿ ಮನೆಗೆ ಮೊದಲ ತಿಂಗಳು ₹10 ಮತ್ತು ವಿಳಂಬವಾಗುವ ಮುಂದಿನ ಪ್ರತಿ ತಿಂಗಳುಗಳಿಗೂ ತಲಾ ₹20ರಂತೆ ದಂಡ ಭರಿಸಬೇಕಾಗುತ್ತದೆ. ಅದೇ ರೀತಿ, ಮಂಜೂರಾದ ದಿನದಿಂದ ಫಲಾನುಭವಿಗಳಿಗೆ ಮೊದಲ ಕಂತಿನ ಹಣ ಬಿಡುಗಡೆ ಮಾಡುವುದು ಏಳು ದಿನಕ್ಕಿಂತ ಹೆಚ್ಚು ವಿಳಂಬವಾದರೆ ರಾಜ್ಯ ಸರ್ಕಾರವು ಪ್ರತಿ ವಾರಕ್ಕೆ ₹10ರಂತೆ ದಂಡ ಪಾವತಿಸಬೇಕು. ಆದರೆ, ರಾಜ್ಯಗಳಿಗೆ ಕೇಂದ್ರ ಸರ್ಕಾರದ ನಿಧಿ ಲಭ್ಯವಿಲ್ಲದೇ ಹೋದಲ್ಲಿ ಯಾವುದೇ ದಂಡ ವಿಧಿಸಲಾಗುವುದಿಲ್ಲ ಎಂದೂ ಸ್ಪಷ್ಟಪಡಿಸಲಾಗಿದೆ.
ʻರಾಜ್ಯ ಸರ್ಕಾರಗಳು ಯೋಜನೆಯ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡಲಿ ಎಂಬುದಷ್ಟೇ ಈ ಸುತ್ತೋಲೆಯ ಉದ್ದೇಶ. ಕೋವಿಡ್ ಸಾಂಕ್ರಾಮಿಕದ ಕಾರಣ ನಾವು ಈಗಾಗಲೇ ಒಂದು ಗಡುವನ್ನು ಮೀರಿದ್ದೇವೆ. ಮತ್ತೊಂದು ಗಡುವಿಗೆ ಇನ್ನು 19 ತಿಂಗಳಷ್ಟೇ ಬಾಕಿ ಇದೆʼ ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
ಬಾಕಿ ಇರುವ 93 ಲಕ್ಷ ಮನೆಗಳ ಪೈಕಿ ಹೆಚ್ಚು ಹಿನ್ನಡೆ ಅನುಭವಿಸುತ್ತಿರುವುದು ಛತ್ತೀಸಗಡ ಮತ್ತು ಪಶ್ಚಿಮ ಬಂಗಾಳ. ಛತ್ತೀಸಗಡದ 12 ಲಕ್ಷ ಮನೆಗಳಿಗೆ ಹಾಗೂ ಪಶ್ಚಿಮ ಬಂಗಾಳದ 11 ಲಕ್ಷ ಮನೆಗಳಿಗೆ ಕೇಂದ್ರ ಸರ್ಕಾರವು ಇನ್ನಷ್ಟೇ ಅನುದಾನ ಬಿಡುಗಡೆ ಮಾಡಬೇಕಿದೆ.
ಪಶ್ಚಿಮ ಬಂಗಾಳ ಸರ್ಕಾರವು ಕೇಂದ್ರ ಸರ್ಕಾರದ ಯೋಜನೆಯನ್ನು ʻಬಾಂಗ್ಲಾ ಆವಾಸ್ ಯೋಜನೆʼ ಎಂದು ತಿರುಚಿದೆ ಎಂದು ಅಲ್ಲಿನ ಸಂಸದರು ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಕೇಂದ್ರಕ್ಕೆ ದೂರಿದ್ದಾರೆ. ಇತರ ಕಾರ್ಯವಿಧಾನದ ವ್ಯತ್ಯಾಸದ ಕಾರಣಕ್ಕೂ ಪ್ರಸಕ್ತ ಹಣಕಾಸು ವರ್ಷಕ್ಕೆ ಅನುದಾನ ತಡೆಹಿಡಿಯಲಾಗಿದೆ.
ಛತ್ತೀಸಗಡ ಸರ್ಕಾರವು ಯೋಜನೆಯ ತನ್ನ ಪಾಲಿನ ಅನುದಾನ ನೀಡಲು ವಿಫಲವಾದ ಕಾರಣ ಕೇಂದ್ರ ಸರ್ಕಾರದ ಅನುದಾನ ದೊರೆತಿಲ್ಲ. ಯೋಜನೆ ವೆಚ್ಚದಲ್ಲಿ ರಾಜ್ಯ ಸರ್ಕಾರಗಳು ಶೇ 60ರಷ್ಟು ಪಾಲು ಭರಿಸಬೇಕಿದೆ.
ಮೂಲಗಳ ಪ್ರಕಾರ ಈ ಎರಡೂ ರಾಜ್ಯಗಳು ತಮ್ಮ ಕಡೆಯಿಂದ ಉಂಟಾಗಿದ್ದ ಸಮಸ್ಯೆಗಳನ್ನು ನಿವಾರಿಸಿವೆ ಮತ್ತು ಬಾಕಿ ಇರುವ ಕಾರ್ಯ ಆರಂಭಿಸಲು ಕೇಂದ್ರ ಸರ್ಕಾರ ಅನುದಾನ ಬಿಡುಗಡೆಗಾಗಿ ಎದುರುನೋಡುತ್ತಿವೆ.
ಉಳಿದ ರಾಜ್ಯಗಳ ಪೈಕಿ ಒಡಿಶಾ 9 ಲಕ್ಷ ಹಾಗೂ ಅಸ್ಸಾಂ 7 ಲಕ್ಷ ಮನೆಗಳನ್ನು ಈವರೆಗೂ ಮಂಜೂರು ಮಾಡಿಲ್ಲ. ಮಹಾರಾಷ್ಟ್ರ (2.5 ಲಕ್ಷ) ಹಾಗೂ ಬಿಹಾರ (2 ಲಕ್ಷ) ರಾಜ್ಯಗಳು ಕೂಡ ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿವೆ.