21.1 C
Bengaluru
Monday, December 23, 2024

ಜಲಮಂಡಳಿ, ಬಿಬಿಎಂಪಿ ಕಟ್ಟಡಗಳಲ್ಲಿ ವಿದ್ಯುತ್ ಶುಲ್ಕ ಬಾಕಿ: ನೋಟಿಸ್ ಜಾರಿ

ಬೆಂಗಳೂರು: ಬೆಂಗಳೂರು ಜಲಮಂಡಳಿ ಮತ್ತು ಬಿಬಿಎಂಪಿ ಕಟ್ಟಡಗಳು ಮತ್ತು ವಿವಿಧ ಸರ್ಕಾರಿ ಕಚೇರಿಗಳು ಸೇರಿ 236 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ವಿದ್ಯುತ್‌ ಶುಲ್ಕ ಬಾಕಿ ಇರಿಸಿಕೊಂಡಿವೆ.

ಈ ಸಂಬಂಧ ಬೆಸ್ಕಾಂನ ಇಂದಿರಾನಗರ, ಕೋರಮಂಗಲ, ಶಿವಾಜಿನಗರ, ಮಲ್ಲೇಶ್ವರ ಮತ್ತು ವೈಟ್‌ಫೀಲ್ಡ್‌ ವಿಭಾಗಗಳು ತಮ್ಮ ವ್ಯಾಪ್ತಿಯ ಬೆಂಗಳೂರು ಜಲಮಂಡಳಿ ಮತ್ತು ಬಿಬಿಎಂಪಿ ಕಚೇರಿಗೆಳಿಗೆ ಬಿಲ್ ಪಾವತಿ ಕೋರಿ ಪ್ರತ್ಯೇಕ ನೋಟಿಸ್ ಜಾರಿಗೊಳಿಸಿವೆ.

ಬೆಸ್ಕಾಂನ ಶಿವಾಜಿನಗರ ವಿಭಾಗಗಳ ವ್ಯಾಪ್ತಿಗೆ ಬರುವ ಪಿಳ್ಳಣ್ಣ ಗಾರ್ಡ್‌ನ್‌, ಬಂಬೂ ಬಜಾರ್‌, ಕಾಕ್ಸ್‌ ಟೌನ್‌, ಬಾಣಸವಾಡಿ ಮತ್ತು ನಾಗವಾರ ಉಪ ವಿಭಾಗಗಳಿಗೆ ಬೆಂಗಳೂರು ಜಲಮಂಡಳಿ ಮತ್ತು ಬಿಬಿಎಂಪಿ ನೀರು ಸರಬರಾಜು ವಿಭಾಗ ಕ್ರಮವಾಗಿ 27.54 ಕೋಟಿ ರೂ ಮತ್ತು 90.20 ಕೋಟಿ ರೂ. ಬಾಕಿ ಇರಿಸಿಕೊಂಡಿದ್ದು, ಬಾಕಿ ಪಾವತಿಸಲು ಸೂಚಿಸಿ ಶಿವಾಜಿನಗರ ಕಾರ್ಯನಿರ್ವಾಹಕ ಇಂಜಿನಿಯರ್‌ ಎರಡೂ ಸಂಸ್ಥೆಗಳಿಗೆ ನೋಟಿಸ್‌ ಜಾರಿಗೊಳಿಸಿದ್ದಾರೆ.

ಬೆಸ್ಕಾಂನ ಕೋರಮಂಗಲ ವಿಭಾಗದ ಆಸ್ಟಿನ್‌ ಟೌನ್‌, ಕೋರಮಂಗಲ, ಮುರುಗೇಶ್‌ ಪಾಳ್ಯ, ಮಡಿವಾಳ, ಹೆಚ್.ಎ.ಎಲ್‌ ಉಪ ವಿಭಾಗಳ ವ್ಯಾಪ್ತಿಗೆ ಒಳಪಡುವ 10 ವಾರ್ಡ್‌ ಗಳಿಂದ ಬಿಡ್ಬ್ಲೂಎಸ್‌ ಎಸ್‌ ಬಿ 23.71 ಕೋಟಿ ರೂ. ವಿದ್ಯುತ್‌ ಶುಲ್ಕ ಬಾಕಿ ಇರಿಸಿಕೊಂಡಿದ್ದು, 19 ವಾರ್ಡ್‌ ಗಳಿಂದ ಬಿಬಿಎಂಪಿ ಸುಮಾರು 22.20 ಕೋಟಿ ರೂ. ವಿದ್ಯುತ್‌ ಶುಲ್ಕ ಪಾವತಿಸಬೇಕಾಗಿದೆ.

ಮಲ್ಲೇಶ್ವರಂ ವಿಭಾಗಗಳ ವ್ಯಾಪ್ತಿಗೆ ಒಳಪಡುವ ಉಪ ವಿಭಾಗಗಳಿಗೆ ಬಿಡ್ಬ್ಲೂಎಸ್‌ ಎಸ್‌ ಬಿ ಮತ್ತು ಬಿಬಿಎಂಪಿ ಕ್ರಮವಾಗಿ 13.60 ಕೋಟಿ ರೂ. ಮತ್ತು 16.70 ಕೋಟಿ ರೂ.ಗಳನ್ನು ಬೆಸ್ಕಾಂ ಗೆ ಪಾವತಿಸಬೇಕಾಗಿದೆ. ಮಲ್ಲೇಶ್ವರಂ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್‌ ಎರಡೂ ಸಂಸ್ಥೆಗಳಿಗೆ ಬಿಲ್‌ ಪಾವತಿಸಲು ಕೋರಿ ನೋಟಿಸ್‌ ಜಾರಿಗೊಳಿಸಿದ್ದಾರೆ.

ಇಂದಿರಾನಗರ ವಿಭಾಗಕ್ಕೆ ಬಿಬಿಎಂಪಿ, ಬಿಡಬ್ಲ್ಯೂಎಸ್‌ಎಸ್‌ಬಿ, ಕಬ್ಬನ್‌ ಪಾರ್ಕ್‌, ವಸತಿ ಇಲಾಖೆ ಮ್ಯೂಸಿಯಂ, ತೋಟಗಾರಿಕೆ ಇಲಾಖೆ, ಪೋಸ್ಟ್‌ ಆಫೀಸ್‌, ನ್ಯಾಷನಲ್‌ ಎರೋನಾಟಿಕ್ಸ್‌ ಲಿಮಿಟೆಡ್‌, ಎಲ್‌ಐಸಿ, ಬಿಎಸ್ಎನ್ಎಲ್‌, ಬಿಡಿಎ, ಬಿಎಂಆರ್‌ಸಿಎಲ್‌, ಡಿಆರ್‌ಡಿಓ, ಹೈಕೋರ್ಟ್‌ ವಸತಿಗೃಹ, ಮುಂತಾದ ಸರಕಾರಿ ಕಚೇರಿಗಳು ಒಟ್ಟು 36.25 ಕೋಟಿ ರೂ. ವಿದ್ಯುತ್‌ ಬಿಲ್‌ ಪಾವತಿಸಬೇಕಾಗಿದೆ ಎಂದು ಇಂದಿರಾನಗರ ಕಾರ್ಯನಿರ್ವಾಹಕ ಇಂಜಿನಿಯರ್‌ ನೀಡಿರುವ ನೋಟಿಸ್‌ ನಲ್ಲಿ ವಿವರಿಸಲಾಗಿದೆ.

ಹಾಗೆಯೇ ವೈಟ್‌ ಫೀಲ್ಡ್‌ ವಿಭಾಗದ ವ್ಯಾಪ್ತಿಗೆ ಬರುವ ಒಟ್ಟು 7 ವಾರ್ಡ್‌ ಗಳಿಂದ ಬೆಸ್ಕಾಂಗೆ ಬಿಡಬ್ಲ್ಯೂಎಸ್‌ಎಸ್‌ಬಿ ಮತ್ತು ಬಿಬಿಎಂಪಿಗಳಿಂದ ಒಟ್ಟು 5.81 ಕೋಟಿ ರೂ. ವಿದ್ಯುತ್‌ ಶುಲ್ಕ ಬಾಕಿ ಇದೆ.

ವಿದ್ಯುತ್‌ ಬಿಲ್‌ ವಸೂಲಿಗೆ ಕ್ರಮ ಕೈಗೊಳ್ಳಲು ಬೆಸ್ಕಾಂ ಎಂಡಿ ಮಹಾಂತೇಶ ಬೀಳಗಿ ಇತ್ತೀಚೆಗೆ ನಡೆದ ಅಧಿಕಾರಿಗಳ ಸಭೆಯಲ್ಲಿ ಕಟ್ಟು ನಿಟ್ಟಿನ ಸೂಚನೆ ನೀಡಿದ್ದರು.

Related News

spot_img

Revenue Alerts

spot_img

News

spot_img