ನವದೆಹಲಿ;ಮಣಿಪುರ ಪರಿಸ್ಥಿತಿ ಕುರಿತ ಚರ್ಚೆಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಸಂಸತ್ತಿನ ಉಭಯ ಸದನಗಳಲ್ಲಿ ಗದ್ದಲ ಮುಂದುವರೆಸಿದ ಪರಿಣಾಮ ಉಭಯ ಸದನಗಳನ್ನು ಸೋಮವಾರಕ್ಕೆ ಮುಂದೂಡಲಾಗಿದೆ.ಅವಿಶ್ವಾಸ ನಿರ್ಣಯದ ಮೇಲೆ ತಕ್ಷಣ ಚರ್ಚೆಗೆ ಲೋಕಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರು ಒತ್ತಾಯಿಸಿದರು. ಈ ವೇಳೆ ಗದ್ದಲ ಏರ್ಪಟ್ಟ ಹಿನ್ನೆಲೆ ಸದನವನ್ನು ಮುಂದೂಡಲಾಗಿದೆ.ಕಲಾಪ ಆರಂಭಗೊಂಡ ದಿನದಿಂದಲೂ ವಿಪಕ್ಷಗಳು ಮಣಿಪುರ ವಿಚಾರವಾಗಿ ಗದ್ದಲ ಮಾಡುತ್ತಿದ್ದು, ಸತತವಾಗಿ ಕಲಾಪ ಮುಂದೂಡಲಾಗುತ್ತಿದೆ.ಮಣಿಪುರದ ಪರಿಸ್ಥಿತಿಯ ಬಗ್ಗೆ ವಿಸ್ತೃತ ಚರ್ಚೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗಾಗಿ ವಿರೋಧ ಪಕ್ಷಗಳು ಸಂಸತ್ತಿನ ಉಭಯ ಸದನಗಳ್ಲಲಿ ಪ್ರತಿಭಟನೆ ನಡೆಸುತ್ತಿದ್ದು, ಕಳೆದ ಎಂಟು ದಿನಗಳಿಂದಲೂ ಸುಗಮ ಕಲಾಪ ನಡೆಯದೇ ವ್ಯರ್ಥವಾಗುತ್ತಿದೆ.