21.6 C
Bengaluru
Friday, December 27, 2024

ಕರ್ನಾಟಕದ ವಸತಿ ಯೋಜನೆ: ಸಿಎಜಿ ವರದಿಯಲ್ಲಿ ಬಂಡವಾಳ ಬಯಲು

ಕರ್ನಾಟಕದಲ್ಲಿ ವಸತಿ ಯೋಜನೆಗಳಲ್ಲಿನ ನ್ಯೂನತೆಗಳನ್ನು ಗುರುತಿಸಿರುವ ಭಾರತದ ನಿಯಂತ್ರಕರು ಹಾಗೂ ಮಹಾಲೆಕ್ಕಪರಿಶೋಧಕರ (ಸಿಎಜಿ) ಸಂಸ್ಥೆ, ನಗರದಲ್ಲಿ ವಾಸಿಸುತ್ತಿರುವ 5.17 ಲಕ್ಷ ಬಡವರಿಗೆ ಸೂರು ನಿರ್ಮಾಣ ಗುರಿ ಹೊಂದಿದ್ದ ವಸತಿ ಇಲಾಖೆಯು ಇದುವರೆಗೆ ಕೇವಲ 88,395 ವಸತಿ ಘಟಕಗಳನ್ನು ಮಾತ್ರ ಪೂರ್ಣಗೊಳಿಸಿದೆ. ತನ್ನ ಗುರಿಯ ಶೇ17 ರಷ್ಟನ್ನು ಮಾತ್ರ ಸಾಧಿಸಿದೆ ಎಂದು ಹೇಳಿದೆ.

ವರದಿಗಳ ಪ್ರಕಾರ ಇನ್ನೂ 3,28,499 ವಸತಿ ಘಟಕಗಳ (DU) ನಿರ್ಮಾಣ ಕಾರ್ಯ ಆರಂಭವಾಗಬೇಕಿದ್ದು, ʼ2022ಕ್ಕೆ ಸರ್ವರಿಗೂ ಸೂರುʼ ಕಲ್ಪಿಸಬೇಕು ಎಂಬ ಸರ್ಕಾರದ ಗುರಿ ಸಾಧನೆ ಅನುಮಾನವಾಗಿದೆ.


ಬೇಡಿಕೆಗನುಗುಣವಾಗಿ 2021ರ ಮಾರ್ಚ್‌ನಲ್ಲಿ ಕೈಗೆತ್ತಿಕೊಳ್ಳಲಾದ, ಅನುಮೋದಿತ ವಸತಿ ಪಾಲುದಾರಿಕೆ (ಎಎಚ್‌ಪಿ) ಹಾಗೂ ಫಲಾನುಭವಿ ನೇತೃತ್ವದಲ್ಲಿ ಮನೆ ನಿರ್ಮಾಣ (ಬಿಎಲ್‌ಸಿ) ಯೋಜನೆಯಲ್ಲಿನ ಒಟ್ಟೂ 13,71,592 ಫಲಾನುಭವಿಗಳ ಪೈಕಿ ಕೇವಲ 5,17,531 ಫಲಾನುಭವಿಗಳಿಗೆ (ಶೇ 38) ಸಂಬಂಧಿಸಿದ ಯೋಜನೆಗಳ ನಿರ್ಮಾಣ ಕಾರ್ಯ ಮಾತ್ರ ಪ್ರಾರಂಭಗೊಂಡಿದೆ ಎಂದು ಸಿಎಜಿ ತಿಳಿಸಿದೆ.

ಅಲ್ಲದೆ 3,28,499 ವಸತಿ ಘಟಕಗಳ ನಿರ್ಮಾಣ ಯೋಜನೆ ಇನ್ನೂ ಪ್ರಾರಂಭವಾಗಬೇಕಿದ್ದು, 2022ರ ವೇಳೆಗೆ ಸರ್ವರಿಗೂ ಸೂರು ನಿರ್ಮಿಸಿಕೊಡುವ ಗುರಿ ಸಾಧಿಸುವುದು ಅಸಾಧ್ಯ ಎಂದಿದೆ. 2022ರ “ಕರ್ನಾಟಕದ ನಗರದಲ್ಲಿನ ಬಡವರಿಗೆ ವಸತಿ ಯೋಜನೆಗಳು‘ ಕುರಿತ ಸಿಎಜಿ ವರದಿಯನ್ನು ಮಂಗಳವಾರ ವಿಧಾನಸಭೆಯಲ್ಲಿ ಮಂಡಿಸಲಾಗಿದೆ.

ವರದಿಯ ಪ್ರಕಾರ, ವಸತಿ ಬೇಡಿಕೆಗೆ ಸಂಬಂಧಿಸಿದಂತೆ ನಡೆಸಲಾದ ಸಮೀಕ್ಷೆಯಲ್ಲಿ ಸೂಚಿಸಲಾದ ಯಾವುದೇ ಕಾರ್ಯವಿಧಾನಗಳನ್ನು ನಗರ ಸ್ಥಳೀಯ ಸಂಸ್ಥೆಗಳು (ಯುಎಲ್‌ಬಿ) ಅನುಸರಿಸಿಲ್ಲ. ಅಸಮರ್ಪಕ ಸಮೀಕ್ಷೆಯಿಂದಾಗಿ ಅರ್ಹ ಫಲಾನುಭವಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಆದರೆ ಕರ್ನಾಟಕ ಕೈಗೆಟಕುವ ವಸಿತಿ ಯೋಜನೆಯಲ್ಲಿ (ಕೆಎಎಚ್‌ಪಿ)ಯಲ್ಲಿ 20.35 ಲಕ್ಷ ಫಲಾನುಭವಿಗಳ ಬದಲಾಗಿ ಕೇವಲ 13.72ಲಕ್ಷ ಜನರನ್ನು ಗುರುತಿಸಲಾಗಿದೆ ಎಂದು ಅದು ತಿಳಿಸಿದೆ.

ರಾಜ್ಯದ 2,472 ಯೋಜನೆಗಳಿಗೆ ಅನುಮೋದಿಸಲಾದ 5.17ಲಕ್ಷ ಫಲಾನುಭವಿಗಳಿದ್ದು 3.43ಲಕ್ಷದಷ್ಟು ಫಲಾನುಭವಿಗಳನ್ನು ಮಾತ್ರ ಎಷ್‌ಪಿ ಹಾಗೂ ಬಿಎಲ್‌ಸಿಗೆ ಲಗತ್ತಿಸಲಾಗಿದೆ. ಆಧಾರಕಾರ್ಡ್‌ನಂಥ ವಿಶಿಷ್ಟ ಗುರುತಿನ ಚೀಟಿ ಮೌಲ್ಯೀಕರಣದ ನಂತರ ಕೆಲವರಷ್ಟೇ ಲಾಭ ಪಡೆದುಕೊಂಡಿದ್ದಾರೆ ಎಂದೂ ವರದಿ ತಿಳಿಸಿದೆ.

ಇದರಿಂದಾಗಿ ಬಿಎಲ್‌ಸಿ ಅಡಿಯಲ್ಲಿ ಸೇರಿಸಲಾಗಿದ್ದ 206 ಫಲಾನುಭವಿಗಳು ಎಎಚ್‌ಪಿ ಅಡಿಯಲ್ಲಿ ಪ್ರಯೋಜನ ಪಡೆದಿದ್ದಾರೆ. ಮಾಹಿತಿ ನೀಡುವ ಸಂದರ್ಭದಲ್ಲಿ ಸಂಗಾತಿಯ ವಿವರಗಳನ್ನು ಸೇರಿಸದಿರುವುದರಿಂದ ಬಿಎಲ್‌ಸಿ ಫಲಾನುಭವಿಗಳಲ್ಲಿ 21 ಜನರಿಗೆ ಎಎಚ್‌ಪಿ ಅಡಿಯಲ್ಲಿ ಅವಕಾಶ ನೀಡಲಾಗಿದೆ.

ʼಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ನಿಗದಿತ ಕಾರ್ಯವಿಧಾನಗಳನ್ನು ಅನುಸರಿಸದೆ ಇದ್ದ ಕಾರಣದಿಂದಾಗಿ ಅನರ್ಹರಿಗೂ ಈ ಯೋಜನೆಯ ಪ್ರಯೋಜನವಾಗಿದೆ. 3 ಲಕ್ಷಕ್ಕೂ ಅಧಿಕ ವಾರ್ಷಿಕ ಆದಾಯ ಹೊಂದಿದ್ದು ಈಗಾಗಲೇ ಮನೆ ಇರುವವರನ್ನೂ ಈ ಯೋಜನೆ ಅಡಿಯಲ್ಲಿ ಫಲಾನುಭವಿಗಳು ಎಂದು ಗುರುತಿಸಲಾಗಿತ್ತುʼ ಎಂದು ಸಿಎಜಿ ತಿಳಿಸಿದೆ.

ಪ್ರಧಾನ ಮಂತ್ರಿ ಆವಾಸ್‌ ಯೋಜನೆ- ಅರ್ಬನ್‌ ಅಡಿಯಲ್ಲಿ ನಿರ್ಮಿಸಲಾದ ಶೇ 41ರಷ್ಟು ಮನೆಗಳು ದುಬಾರಿ ಬಹುಮಹಡಿ ಕಟ್ಟಡಗಳಾಗಿದ್ದು 30 ಚದರ ಅಡಿಗೂ ಹೆಚ್ಚಿನ ವಿಸ್ತೀರ್ಣದ ಕಾರ್ಪೆಟ್‌ ಪ್ರದೇಶವನ್ನು ಹೊಂದಿರುವುದು ಜಂಟಿ ಪರಿಶೀಲನೆ ಹಾಗೂ ಲೆಕ್ಕಪರಿಶೋಧನೆಯ ಸಮಯದಲ್ಲಿ ಗಮನಕ್ಕೆ ಬಂದಿದೆ. ಇದು ಫಲಾನುಭವಿಗಳ ಆಯ್ಕೆಯಲ್ಲಿ ನಡೆದ ಅಕ್ರಮವನ್ನು ಎತ್ತಿ ತೋರಿಸುತ್ತದೆ ಎಂದೂ ಅದು ಹೇಳಿದೆ.

ರಾಜ್ಯ ಸರ್ಕಾರವು ನಿಗದಿತ ಷರತ್ತುಗಳನ್ನು ಪೂರೈಸದೆ ಇರುವುದು, ಫಲಾನುಭವಿಗಳ ಕೊಡುಗೆ 8360.78 ಕೋಟಿ ರೂಪಾಯಿ ಯುಎಲ್‌ಬಿ ಪಾಲು ಸಂಗ್ರಹಣೆಯಲ್ಲಿನ ಕೊರತೆಯಿಂದಾಗಿ ಕೇಂದ್ರ ಸರ್ಕಾರವು 1003.55 ಕೋಟಿ ರೂಪಾಯಿ ಹಣವನ್ನು ತಡೆಹಿಡಿದಿದೆ. ಇದರಿಂದ ಎಎಚ್‌ಪಿ ಯೋಜನೆಗೆ ಆರ್ಥಿಕ ಸಂಪನ್ಮೂಲವನ್ನು ಕ್ರೋಢೀಕರಿಸುವಲ್ಲಿ ಹಿನ್ನಡೆಯಾಗಿದೆ.

Related News

spot_img

Revenue Alerts

spot_img

News

spot_img