ಬೆಂಗಳೂರು: ನಗರದ ಡಾ.ಶಿವರಾಮ ಕಾರಂತ ಬಡಾವಣೆಯ ಭೂಸ್ವಾಧೀನಕ್ಕೆ ಸಂಬಂಧಿಸದಿಂತೆ ಸಂಬಂಧಿಸಿದಂತೆ ನಡೆದಿರುವ ಲೋಪಗಳ ಬಗ್ಗೆ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದ್ದು, ಇದರಿಂದ ಬಿಡಿಎ ಅಧಿಕಾರಿಗಳ ಬುಡಕ್ಕೆ ಬಂದಿದೆ.
ಡಾ.ಶಿವರಾಮ ಕಾರಂತ ಬಡಾವಣೆಗಾಗಿ ಕಟ್ಟಡಗಳು ಇರುವ ಪ್ರದೇಶವನ್ನೂ ಸಹ ಭೂಸ್ವಾಧೀನ ಪಡಿಸಿಕೊಳ್ಳಲು ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಶಿವರಾಮ ಕಾರಂತ ಬಡಾವಣೆಗೆ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಪ್ರಕರಣ ಇದ್ದು, ಸದ್ಯ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದೆ. ಬಡಾವಣೆ ನಿರ್ಮಾಣಕ್ಕೆ ಅಧಿಸೂಚನೆ ಹೊರಡಿಸಲಾಗಿದ್ದು ಸ್ವಾಧೀನ ಪ್ರದೇಶದಲ್ಲಿ 245 ಎಕರೆ ಪ್ರದೇಶ ಕೈಬಿಟ್ಟಿರುವುದರ ಸಂಬಂಧ ಸುಪ್ರೀಂ ಕೋರ್ಟ್ ಪರಿಶೀಲನೆ ನಡೆಸಿದ್ದು, ಬಿಡಿಎ ಕೈಬಿಟ್ಟಿರುವ ಈ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳಬೇಕು ಎಂದು ಆದೇಶಿಸಿದೆ. ಇದರಂತೆ ಹೆಚ್ಚುವರಿಯಾಗಿ 245 ಎಕರೆ ಪ್ರದೇಶ ಸ್ವಾಧೀನಕ್ಕೆ ಕಳೆದ ಆಗಸ್ಟ್‌ನಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು.
245 ಎಕರೆ ಪ್ರದೇಶ ಸ್ವಾಧೀನಕ್ಕೆ ಸಂಬಂಧಿಸಿದಂತೆ ಎರಡು ತಿಂಗಳ ನಂತರ ಅಂತಿಮ ಅಧಿಸೂಚನೆ ಹೊರಡಿಸಿದಾಗ ಅದರಲ್ಲಿ 52 ಎಕರೆ ಕೈಬಿಟ್ಟು 193 ಎಕರೆ ಪ್ರದೇಶದ ಸ್ವಾಧಿನಕ್ಕೆ ಮಾತ್ರ ವರದಿ ಸಿದ್ಧಪಡಿಸಲಾಗಿತ್ತು. ಈ ಅಂತಿಮ ಅಧಿಸೂಚನೆಯ ಕರಡು ಸಹಿಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಳಿಗೆ ಹೋದಾಗ ಈ ಲೋಪ ಕಂಡುಬಂದಿದೆ.
ಬೆಂಗಳೂರು ಉತ್ತರದ ಯಶವಂತಪುರ, ಹೆಸರಘಟ್ಟ ಮತ್ತು ಯಲಹಂಕ ಹೋಬಳಿಯ 52 ಎಕರೆ ಪ್ರದೇಶವನ್ನು ಡಿನೋಟಿಫಿಕೇಷನ್ ಮಾಡಲು ವರದಿ ಸಿದ್ಧಪಡಿಸಲಾಗಿತ್ತು. ಇದಕ್ಕೆ ಈ ಪ್ರದೇಶದಲ್ಲಿ ಅದಾಗಲೇ ಮನೆಗಳ ನಿರ್ಮಾಣ ಆಗಿವೆ. ಜನವಸತಿ ಪ್ರದೇಶಗಳನ್ನು ವಶಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಕಾರಣ ನೀಡಲಾಗಿತ್ತು. ಆದರೆ, ಪ್ರಾಥಮಿಕ ಅಧಿಸೂಚನೆ ಮಾಡುವಾಗ ಇಲ್ಲಿ ಮನೆಗಳ ನಿರ್ಮಾಣ ಆಗಿರುವುದು ಕಾಣಲಿಲ್ಲವೇ ಎಂದು ಸಿಎಂ ಬೊಮ್ಮಾಯಿ ಬಿಡಿಎ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಈ ಹಿಂದೆ ಪ್ರಾಥಮಿಕ ಅಧಿಸೂಚನೆಯಂತೆ 245 ಎಕರೆ ಪ್ರದೇಶವೂ ಸಹ ಒಳಗೊಂಡಂತೆ ಅಧಿಸೂಚನೆ ಸಿದ್ಧಪಡಿಸಬೇಕು ಎಂದು ಕರಡು ವಾಪಸ್ ಮಾಡಿದ್ದಾರೆ ಎಂದು ಹೇಳಲಾಗಿದೆ.
ಇಷ್ಟಕ್ಕೆ ಸುಮ್ಮನಾಗದ ಸಿಎಂ ಬೊಮ್ಮಾಯಿ, ಕಟ್ಟಡ ಇದ್ದರೂ ಸಹ ಪ್ರಾಥಮಿಕ ಅಧಿಸೂಚನೆ ಹೊರಡಿಸಿ ಬೇಜವಾಬ್ದಾರಿ ತೋರಿರುವ ಅಧಿಕಾರಿಗಳನ್ನು ಅಮಾನತು ಮಾಡಿ ಎಂದು ಬಿಡಿಎಗೆ ಕಳೆದ ಆ.27ರಂದು ಪತ್ರ ಬರೆದಿದ್ದರು. ಆದರೆ, ಈ ವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ವಿಷಯವೂ ಸಹ ಮುಖ್ಯಮಂತ್ರಿಗಳ ಗಮನಕ್ಕೆ ಬಂದಿದ್ದು, ಶೀಘ್ರದಲ್ಲೇ ಕೆಲವು ಅಧಿಕಾರಿಗಳು ಅಮಾನತ್ತು ಆಗಬಹದು ಎಂದು ಬಿಡಿಎ ಮೂಲಗಳು ತಿಳಿಸಿವೆ.