ಕೈ ತುಂಬಾ ವೇತನ ಅಥವಾ ಅಪಾರ ದುಡಿಮೆ ಮಾಡುವ ಸಲುವಾಗಿ ದೇಶ ತೊರೆದು ಅನ್ಯ ದೇಶಗಳಲ್ಲಿ ವಾಸವಾಗಿದ್ದರೆ ಅವರನ್ನು ಅನಿವಾಸಿ ಭಾರತೀಯ (NRI) ಎಂದು ಕರೆಯುತ್ತೇವೆ. ಅನಿವಾಸಿ ಭಾರತೀಯರು ಭಾರತದಲ್ಲಿ ಬ್ಯಾಂಕ್ ಖಾತೆ ತೆಗೆಯಬೇಕಾದರೂ ಹಲವು ನಿಯಮ ಪಾಲಿಸಬೇಕು. ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡಬೇಕಾದರೆ, ಸ್ಥಿರಾಸ್ತಿ ಖರೀದಿ ಮಾಡಬೇಕಾದರೆ ಹಲವು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ ಹಲವು ಪ್ರಕ್ರಿಯೆಗಳನ್ನು ಪೂರೈಸಿದ ಬಳಿಕವಷ್ಟೇ ಅನಿವಾಸಿ ಭಾರತೀಯರು ಇಲ್ಲಿ ವಹಿವಾಟು ನಡೆಸಲು ಅರ್ಹರಾಗುತ್ತಾರೆ. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.
ಎನ್ಆರ್ಐ ಯಾರು? :
ಭಾರತೀಯ ಮೂಲದ ಪ್ರಜೆ ಬೇರೆ ದೇಶದಲ್ಲಿ ಕೆಲಸ ಅಥವಾ ವ್ಯಾಪಾರ ಇನ್ನಿತರೆ ಉದ್ದೇಶಕ್ಕೆ ಭಾರತ ತೊರೆದು ಅನ್ಯ ದೇಶದಲ್ಲಿ ಉಳಿದುಕೊಂಡಿದ್ದರೆ ಆತನನ್ನು ಅನಿವಾಸಿ ಭಾರತೀಯ ಎಂದು ( ಎನ್ಆರ್ಐ) ಕರೆಯುತ್ತೇವೆ. ಭಾರತದಲ್ಲಿ ಹುಟ್ಟಿ ಬೆಳೆದು ವಿದೇಶದಲ್ಲಿ ನೆಲೆಸಿರುವರು ಅನಿವಾಸಿ ಭಾರತೀಯರು.
ಆದರೆ, ಪಾಕಿಸ್ತಾನ, ಶ್ರೀಲಂಕಾ, ನೇಪಾಳ, ಬೂತಾನ್, ಬರ್ಮಾ, ಅಫಘಾನಿಸ್ತಾನದಲ್ಲಿ ನೆಲೆಸಿರುವ ಭಾರತೀಯ ಮೂಲದ ಪ್ರಜೆಗಳನ್ನು ಅನಿವಾಸಿ ಭಾರತೀಯ ಎಂದು ಪರಿಗಣಿಸುವುದಿಲ್ಲ.
ವಿಶ್ವ ಸಂಸ್ಥೆಯಲ್ಲಿ ಅಥವಾ ವಿದೇಶಗಳಲ್ಲಿ ಕೆಲಸ ಮಾಡಲು ಭಾರತ ಸರ್ಕಾರ, ರಾಜ್ಯ ಸರ್ಕಾರ ಅಥವಾ ನಿಗಮ ಮಂಡಳಿಗಳು ತಾತ್ಕಾಲಿಕವಾಗಿ ನಿಯೋಜನೆ ಮಾಡಿದ್ದರೂ ಆ ವ್ಯಕ್ತಿಗಳು ಕೂಡ ಅನಿವಾಸಿ ಭಾರತೀಯರು ಆಗುತ್ತಾರೆ. ಅನ್ಯ ದೇಶಗಳಲ್ಲಿ ನೆಲೆಸಿರುವರನ್ನು ಅನಿವಾಸಿ ಭಾರತೀಯರು ಎಂದು ಪರಿಗಣಿಸಬೇಕು ಎಂಬುದು ಭಾರತೀಯ ನೆಲದ ಕಾನೂನಿನ ನಿಯಮ.
ಬ್ಯಾಂಕ್ ಖಾತೆ ತೆರೆಯಲು ನಿಯಮ:
ಅನಿವಾಸಿ ಭಾರತೀಯ ಭಾರತದಲ್ಲಿ ಬ್ಯಾಂಕ್ ಖಾತೆ ತೆರೆಯಬೇಕಾದರೆ, ಅಥವಾ ಶೇರ್ ಮತ್ತು ಸ್ಟಾಕ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬೇಕಾದರೆ, ಆತ ಭಾರತದ ಪಾಸ್ ಪೋರ್ಟ್ ಹೊಂದಿರಬೇಕು. ಅತನ ತಂದೆ, ತಾಯಿ, ಅಜ್ಜ ಅಥವಾ ಅಜ್ಜಿ ಭಾರತದಲ್ಲಿ ನೆಲೆಸಿರಬೇಕು. ಭಾರತೀಯ ನಾಗರಿಕ ಕಾಯ್ದೆ ಪ್ರಕಾರ ಅವರು ಭಾರತದ ಪೌರತ್ವ ಪಡೆದಿರಬೇಕು. ಭಾರತೀಯ ಮೂಲದವರನ್ನು ಮದುವೆಯಾಗಿದ್ದರೂ ಅವರು ಬ್ಯಾಂಕ್ ಖಾತೆ ತೆರೆಯಬಹುದು. ಆದ್ರೆ ಪಾಕಿಸ್ತಾನ ಮತ್ತು ಬಾಂಗ್ಲಾದಲ್ಲಿ ನೆಲೆಸಿರುವ ಭಾರತೀಯರಿಗೆ ಈ ನಿಯಮ ಅನ್ವಯ ಆಗುವುದಿಲ್ಲ.
ಸ್ಥಿರಾಸ್ಥಿ ಗಳಿಸಲು:
ಅನಿವಾಸಿ ಭಾರತೀಯ ಭಾರತದಲ್ಲಿ ಸ್ಥಿರಾಸ್ತಿ ಖರೀದಿ ಮಾಡಬಹುದು. ಆದರೆ ಅದಕ್ಕೆ ಹಲವು ನಿಯಮಗಳನ್ನು ಪಾಲನೆ ಮಾಡಬೇಕು. ಅನಿವಾಸಿ ಭಾರತೀಯ ವ್ಯಾಪ್ತಿಗೆ (ಬಾಂಗ್ಲಾ- ಪಾಕಿಸ್ಥಾನ್, ಅಫ್ಘಾನಿಸ್ಥಾನ್, ನೇಪಾಳ, ಶ್ರೀಲಂಕಾ, ಭೂತಾನ್) ಈ ದೇಶದ ನಾಗರಿಕರನ್ನು ಹೊರತು ಪಡಿಸಿ ಬೇರೆ ದೇಶಗಲ್ಲಿ ವಾಸಿಸಿರುವ ಭಾರತೀಯ ಮೂಲದ ಪ್ರಜೆಗಳು ಮಾತ್ರ ಸ್ಥಿರಾಸ್ತಿ ಖರೀದಿ ಮಾಡಬಹುದು. ಎಂದಿನಂತೆ , ಆತ ಭಾರತದ ಪಾಸ್‌ಪೋರ್ಟ್ ಹೊಂದಿರಬೇಕು. ತಂದೆ ಅಥವಾ ತಾಯಿ, ಅಜ್ಜ, ಅಜ್ಜಿ ಭಾರತದಲ್ಲಿ ವಾಸವಾಗಿರಬೇಕು. ಅವರು ಇಲ್ಲಿ ಸ್ಥಿರಾಸ್ಥಿ ಖರೀದಿ ಮಾಡಬಹುದು. ಖರೀದಿ ಮುನ್ನ ಭಾರತೀಯ ರಿಸರ್ವ ಬ್ಯಾಂಕ್ ನಿಯಮಗಳನ್ನು ಪಾಲಿಸಬೇಕು.
ಅನಿವಾಸಿ ಭಾರತೀಯ vs ಓವರ್ ಸೀಸ್ ಸಿಟಿಜನ್ ಆಫ್ ಇಂಡಿಯಾ:
ಇನ್ನು ಅನಿವಾಸಿ ಭಾರತೀಯ ಮಾದರಿಯಲ್ಲಿ ಒಸಿಬಿ ಕೂಡ ಇದೆ. ಹೊರ ದೇಶದಲ್ಲಿ ಕಂಪನಿ ಸ್ಥಾಪಿಸಿ ಆ ಕಂಪನಿಯಲ್ಲಿ ಪಾಲುದಾರಿಕೆ ಹೊಂದಿರುವ ಭಾರತೀಯ ಮೂಲದ ಪ್ರಜೆ, ಕಾರ್ಪೋರೇಟ್ ಕಂಪನಿ, ಸೊಸೈಟಿ, ದತ್ತಿಗಳಲ್ಲಿ ಶೇ. 60 ರಷ್ಟು ಪಾಲುದಾರಿಕೆ ಹೊಂದಿರುವ ಭಾರತೀಯ ಪ್ರಜೆಯನ್ನು ಒಸಿಬಿ ( ಓವರ್ ಸಿಸ್ ಸಿಟಿಜನ್ ಆಫ್ ಇಂಡಿಯಾ ಎಂದು ಕರೆಯುತ್ತೇವೆ. ಅನಿವಾಸಿ ಭಾರತೀಯರಿಗೆ ಇರುವ ಎಲ್ಲಾ ಸೌಲಭ್ಯಗಳು ಒಸಿಬಿಗೂ ಇರುತ್ತವೆ.
ಎನ್‌ಆರ್‌ಐಗಳಿಗೆ ಭಾರತದಲ್ಲಿರುವ ಸೌಲಭ್ಯ:
ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಯಾವುದೇ ಬ್ಯಾಂಕಿನಲ್ಲಿ ಎನ್ಆರ್ಐ ಅಥವಾ ಒಸಿಬಿಗಳು ಬ್ಯಾಂಕ್ ಖಾತೆ ತೆರೆದು ನಿರ್ವಹಿಸಬಹುದು. ಭಾರತೀಯ ಸ್ಟಾಕ್ ಮಾರುಕಟ್ಟೆಯಲ್ಲಿ ಸೆಕ್ಯುರಿಟಿ, ಸ್ಟಾಕ್ಸ್ , ಶೇರ್ಸ್ ಟ್ರಸ್ಟ್ ಗಳಲ್ಲಿ ಹೂಡಿಕೆ ಮಾಡಬಹುದು. ಭಾರತದ ಸ್ಥಿರ ಸ್ವತ್ತುಗಳ ಮೇಲೆ ಹೂಡಿಕೆ ಮಾಡಬಹುದು. ಆದರೆ, ಈ ಕೆಲಸ ಮಾಡುವ ಮುನ್ನ ಭಾರತೀಯ ರಿಸರ್ವ ಬ್ಯಾಂಕ್ ಆಫ್ ಇಂಡಿಯಾಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು. ಅನಿವಾಸಿ ಭಾರತೀಯರಿಗೆ ಸೇವೆ ಒದಗಿಸುವ ಆರ್‌ಬಿಐ ನ ಪ್ರತ್ಯೇಕ ಕಚೇರಿ ಮುಂಬಯಿನಲ್ಲಿದೆ.
ಭಾರತದಲ್ಲಿ ಹೂಡಿಕೆ ಮಾಡುವಂತಿದ್ದರೆ ಆರ್‌ಬಿಐಗೆ ಅರ್ಜಿ ಸಲ್ಲಿಸಿ ಹೂಡಿಕೆ ಸಂಬಂಧ ಅನುಮತಿ ಪಡೆಯಬೇಕು. ಅನುಮತಿ ಪಡೆದು ಹೂಡಿಕೆ ಮಾಡಿದ ಮೂರು ವರ್ಷದಲ್ಲಿ ( ಲಾಕ್ ಇನ್ ಅವಧಿಯಲ್ಲಿ) ಎಲ್ಲಾ ತೆರಿಗೆಗಳನ್ನು ಪಾವತಿ ಮಾಡಬೇಕು. ಅನಿವಾಸಿ ಭಾರತೀಯರು ಸ್ಥಿರಾಸ್ಥಿ ಖರೀದಿಗೆ , ಮನೆ, ಜಮೀನು, ಕೃಷಿ ಜಮೀನು ಖರೀದಿಗೆ ಆರ್‌ಬಿಐ ಅನುಮತಿ ಕಡ್ಡಾಯವಲ್ಲ. ಸ್ಥಿರಾಸ್ತಿ ಖರೀದಿ ಮಾಡಿದ 90 ದಿನದಲ್ಲಿ ಫಾರಂ ಐಪಿಐ 7 ಫಾರಂನಲ್ಲಿ ಆರ್‌ಬಿಐಗೆ ಎಲ್ಲಾ ವಿವರ ಸಲ್ಲಿಸಬೇಕು. ಆಸ್ತಿ ಖರೀದಿ ಮತ್ತು ಹೂಡಿಕೆ ಸಂಬಂಧ ಆರ್‌ಬಿಐ ನಲ್ಲಿ ಡಿಕ್ಲೇರ್ ಮಾಡಿಕೊಳ್ಳಬೇಕು. ಖರೀದಿ ಮಾಡಿದ ಆಸ್ತಿ ಮಾರಾಟ ಮಾಡಲು, ಹೂಡಿಕೆ ವಾಪಸು ಪಡೆಯಲು ಆರ್‌ಬಿಐ ಅನುಮತಿ ಪಡೆಯುವ ಅಗತ್ಯವಿಲ್ಲ.
ಅನಿವಾಸಿ ಭಾರತೀಯ ಪ್ರಜೆಗಳು ವಿದೇಶಿ ಹಣವನ್ನು ವಿನಿಮಯ ಮಾಡಿಕೊಂಡು ಬ್ಯಾಂಕ್ ವಹಿವಾಟು ನಡೆಸಬಹುದು. ತಾನು ವಹಿವಾಟು ಹೊಂದಿರುವ ಬ್ಯಾಂಕಿನಲ್ಲಿ ವಿದೇಶಿ ಕರೆನ್ಸಿಯನ್ನು ಭಾರತೀಯ ರೂಪಾಯಿಗೆ ವಿನಿಯಮ ಮಾಡಿಕೊಳ್ಳಬಹುದು. ಎನ್‌ಅರ್‌ಐಗಳು ತಾವು ಗಳಿಸಿದ ಆಸ್ತಿ ಮತ್ತು ಸಂಪತ್ತನ್ನು ನೇರವಾಗಿ ಭಾರತೀಯರಿಗೆ ದಾನ ಮಾಡಬಹುದೇ ಎಂಬ ಪ್ರಶ್ನೆ ಸಾಮಾನ್ಯ. ಎನ್‌ಆರ್‌ಐಗಳು ತಾವು ಗಳಿಸಿದ ಸಂಪತ್ತನ್ನು ಭಾರತದಲ್ಲಿ ದಾನ ಮಾಡಬೇಕಾದರೆ, ಆರ್‌ಬಿಐ ಮುಂದೆ ಘೋಷಣೆ ಮಾಡಿಕೊಳ್ಳಬೇಕು. ಇನ್ನು ಅನಿವಾಸಿ ಭಾರತೀಯ ಖರೀದಿ ಮಾಡಿದ ಕಟ್ಟಡವನ್ನು ಬಾಡಿಗೆಗೆ ಪಡೆಯಬಹುದು. ಅದನ್ನು ಒತ್ತೆಯಿಟ್ಟು ಲೋನ್ ಪಡೆಯಲು ಅವಕಾಶವಿದೆ ಎನ್ನುತ್ತದೆ ಎನ್‌ಆರ್‌ಐ ನಿಯಮಗಳು.