ಬೆಳಗಾವಿ: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರ (ಉಳ್ಳಾಲ) ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಏಕಾಏಕಿ ನಾಮಪತ್ರ ವಾಪಸ್ ಪಡೆದಿರುವುದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ಗೋಕಾಕ್ನಲ್ಲೂ ಸಹ ಜೆಡಿಎಸ್ ಅಭ್ಯರ್ಥಿ ನಾಮಪತ್ರ ವಾಪಸ್ ಪಡೆದುಕೊಂಡಿದ್ದಾರೆ. ಇದರೊಂದಿಗೆ ಜೆಡಿಎಸ್ ವರಿಷ್ಠರಿಗೆ ಶಾಕ್ ಕೊಟ್ಟಿದ್ದಾರೆ. ಹೌದು… ಗೋಕಾಕ್ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಚಂದನ್ ಗಿಡ್ಡನವರ್ ಅವರು ತಮ್ಮ ನಾಮಪತ್ರ ವಾಪಸ್ ಪಡೆದುಕೊಂಡು ಕಾಂಗ್ರೆಸ್ ಜೊತಗೆ ಕೈಜೋಡಿಸಿದ್ದಾರೆ. ಇದರೊಂದಿಗೆ ಗೋಕಾಕ್‌ನಲ್ಲಿ ರಮೇಶ್ ಜಾರಕಿಹೊಳಿ ಸೋಲಿಸಲು ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಒಂದಾಗಿದ್ದಾರೆ. ಜೆಡಿಎಸ್ ಅಭ್ಯರ್ಥಿ ಕಣದಿಂದ ಹಿಂದೆ ಸರಿದಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ಪಕ್ಷದ ನಾಯಕರಿಗೆ ಹೇಳದೆ ನಾಮಪತ್ರ ವಾಪಸ್ ಪಡೆದಿದ್ದಾರೆಂಬ ಟೀಕೆ ವ್ಯಕ್ತವಾಗಿದೆ.
ರಮೇಶ್ ಜಾರಕಿಹೊಳಿ ಹಾಗೂ ಕಾಂಗ್ರೆಸ್ ಮಧ್ಯೆ ಜಿದ್ದಾಜಿದ್ದಿ ಹೋರಾಟವಿರುವ ಗೋಕಾಕ್ ರಾಜಕೀಯದಲ್ಲಿ ಹೊಸ ಬೆಳವಣಿಗೆ ನಡೆಸಿದ್ದು, ಕಾಂಗ್ರೆಸ್ಗೆ ವರದಾನವಾಗಿದೆ. ಇದರಿಂದ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿಗೆ ಕೊಂಚ ಸಂಕಷ್ಟ ಎದುರಾಗಿದೆ. ಯಾಕಂದ್ರೆ, ಕ್ಷೇತ್ರದ ಅಲ್ಪಸಂಖ್ಯಾತ ಮಗಳು ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಹರಿದುಹಂಚಿ ಹೋಗಲಿದ್ದು, ಇದರಿಂದ ತಮಗೆ ಲಾಭವಾಗಲಿದೆ ಎನ್ನುವ ನಿರೀಕ್ಷೆಯಲ್ಲಿ ರಮೇಶ್ ಜಾರಕಿಹೊಳಿ ಇದ್ದರು. ಆದ್ರೆ, ಇದೀಗ ಜೆಡಿಎಸ್ ಅಭ್ಯರ್ಥಿ ಕೊನೆ ಕ್ಷಣದಲ್ಲಿ ಕೈಕೊಟ್ಟಿದ್ದು, ರಮೇಶ್ ಜಾರಕಿಹೊಳಿ ಲೆಕ್ಕಾಚಾರವೆಲ್ಲ ಉಲ್ಟಾ ಆಗಿದೆ.
ಏಪ್ರಿಲ್ 24 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿತ್ತು. ಕೊನೆಯ ಕ್ಷಣದಲ್ಲಿ ನಾಮಪತ್ರ ವಾಪಸ್ ಪಡೆದಿರುವ ಗೋಕಾಕ್ ತಾಲೂಕು ಜೆಡಿಎಸ್ ಅಧ್ಯಕ್ಷರೂ ಆಗಿರುವ ಚಂದನ್ ಗಿಡ್ಡನವರ್, ಅವರು ಕಾಂಗ್ರೆಸ್ ಅಭ್ಯರ್ಥಿ ಡಾ.ಮಹಾಂತೇಶ ಕಡಾಡಿಗೆ ಬೆಂಬಲ ಘೋಷಿಸಿದ್ದಾರೆ. ಇದರಿಂದ ಚಂದನ್ ಗಿಡ್ಡನವರ್‌ನ್ನು ಪಕ್ಷದಿಂದ ಉಚ್ಚಾಟನೆ ಮಾಡಲು ಜಿಲ್ಲಾ ಜೆಡಿಎಸ್ ನಿರ್ಧಾರ ಮಾಡಿದೆ.
ಉಳ್ಳಾಲ ಜೆಡಿಎಸ್ ಅಭ್ಯರ್ಥಿ ನಾಮಪತ್ರ ವಾಪಸ್
ಇನ್ನು ನಿನ್ನೆ ಬೆಳಗ್ಗೆ ಮಂಗಳೂರು ಉಳ್ಳಾಲ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೈಕಮಾಂಡ್ ಗಮನಕ್ಕೂ ಬಾರದೆ ನಾಮಪತ್ರ ಅಲ್ತಾಫ್ ಕುಂಪಲ ಹಿಂತೆಗೆದುಕೊಂಡಿದ್ದರು. ಜಿದ್ದಾಜಿದ್ದಿ ಹೋರಾಟವಿರುವ ಮಂಗಳೂರು ಕ್ಷೇತ್ರದಲ್ಲಿ ಹಾಲಿ ಶಾಸಕ, ಯು.ಟಿ.ಖಾದರ್ ವಿರುದ್ಧ ಅಲ್ತಾಫ್ ಅವರನ್ನು ಜೆಡಿಎಸ್ ಸ್ಪರ್ಧೆಗಿಳಿಸಿತ್ತು. ಆದರೆ ಬೆಳಗ್ಗೆ ಅವರು ನಾಮಪತ್ರ ಹಿಂಪಡೆದಿದ್ದರು.
ನಾಮಪತ್ರ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಅಲ್ತಾಫ್ ಕುಂಪಲ, ನಾನು ಎಲ್ಲೂ ಓಡಿಹೋಗಿಲ್ಲ, ನನ್ನನ್ನು ಅಪಹರಿಸಿ ಬೆದರಿಸಿ ನನ್ನಿಂದ ನಾಮಪತ್ರ ಹಿಂದೆ ಪಡೆಯುವಂತೆ ಮಾಡಲಾಗಿದೆ. ನನಗೆ ಯಾವುದೇ ರೀತಿಯಲ್ಲಿ ಆಮಿಷ ಒಡ್ಡಲಾಗಿಲ್ಲ. ಈ ಕುರಿತು ಪೊಲೀಸ್ ಕಮಿಷನರ್ ಅವರಿಗೆ ಭದ್ರತೆ ನೀಡುವಂತೆ ಮನವಿ ಮಾಡಲಾಗಿದೆ ಎಂದಿದ್ದರು.