ಬೆಂಗಳೂರು ಹೊರತುಪಡಿಸಿದರೆ ನಿವೇಶನ, ಮನೆ, ಅಪಾರ್ಟ್‌ಮೆಂಟ್, ಫ್ಲಾಟ್ ಹೀಗೆ ರಿಯಲ್ ಎಸ್ಟೇಟ್‌ನಲ್ಲಿ ಹೆಚ್ಚಿನ ಬೇಡಿಕೆ ಮತ್ತು ವ್ಯವಹಾರ ನಡೆಯುವ ಜಿಲ್ಲೆ ಎಂದರೆ ಅದು ಮಂಗಳೂರು. ಮಂಗಳೂರಿನಲ್ಲಿಯೂ ಸಹ ಮನೆ ಹೊಂದಬೇಕು ಎಂಬ ಆಪೇಕ್ಷೆ ಇಟ್ಟುಕೊಂಡವರಿಗೆ ಕರ್ನಾಟಕ ಗೃಹ ಮಂಡಳಿ ಒಳ್ಳೆಯ ಸುದ್ದಿಯೊಂದು ನೀಡಿದೆ.
ಕರ್ನಾಟಕ ಗೃಹ ಮಂಡಳಿಯು ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲ್ಲೂಕು ಸುರತ್ಕಲ್ ಹೋಬಳಿಯ ಮಧ್ಯ ಗ್ರಾಮದ ಸರ್ವೆ ನಂಬರ್ 1,5,6,27,30,33 ಹಾಗೂ 40ರಲ್ಲಿ ಕರ್ನಾಟಕ ಗೃಹ ಮಂಡಳಿ ವತಿಯಿಂದ ಸುಮಾರು 31 ಎಕರೆ, 57 ಸೆಂಟ್ಸ್ ಜಾಗದಲ್ಲಿ 50:50 ಅನುಪಾತದಲ್ಲಿ ಎಲ್ಲಾ ಮೂಲಭೂತ ಸೌಲಭ್ಯಗಳು ಹೊಂದಿರುವ ವಸತಿ ಯೋಜನೆ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ.
ಸಂಯುಕ್ತ ವಸತಿ ಯೋಜನೆಯಲ್ಲಿ ವಿವಿಧ ವರ್ಗದ ನಿವೇಶನ ಹೊಂದಲು ಬಯಸುವ ಸಾರ್ವಜನಿಕರಿಂದ ಬೇಡಿಕೆ ಸಮೀಕ್ಷೆಗಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಸಾರ್ವಜನಿಕರು ನೋಂದಣಿ ಶುಲ್ಕ ಮತ್ತು ಆರಂಭಿಕ ಠೇವಣಿ ಹಣವನ್ನು ಆನ್‌ಲೈನ್ ಪಾವತಿ (e-payment) ಮೂಲಕ ಪಾವತಿ ಮಾಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಕೆ ದಿನಾಂಕ:
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ನ.23ರಿಂದ ಆರಂಭವಾಗಿದ್ದು, ಡಿ.20ರವರೆಗೂ ಅವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಸಬಯಸುವವರು ಮಂಡಳಿಯ ವೆಬ್‌ಸೈಟ್ https://khb.karnataka.gov.in ರಲ್ಲಿ ನೋಂದಣಿ ಶುಲ್ಕ ಮತ್ತು ನಿಗದಿಪಡಿಸಿದ ಆರಂಭಿಕ ಠೇವಣಿ ಮೊತ್ತವನ್ನು ಇ-ಪೇಮೆಂಟ್ ಮೂಲಕ ಪಾವತಿ ಮಾಡಿ ಅರ್ಜಿ ಸಲ್ಲಿಸಬಹುದು.
ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2006, 2007, 2008 ಮತ್ತು 2009 ರಲ್ಲಿ ಮಂಡಳಿಯಿಂದ ಕೈಗೊಂಡ ಬೇಡಿಕೆ ಸಮೀಕ್ಷೆಯಲ್ಲಿ ಅರ್ಜಿ ಸಲ್ಲಿಸಿದ ನೋಂದಾಯಿಸಿರುವ ಅರ್ಜಿದಾರರು ಅದೇ ನೋಂದಣಿ ಸಂಖ್ಯೆಗೆ ಆರಂಭಿಕ ಠೇವಣಿ ಹಣ ಪಾವತಿಸಬಹುದು ಮತ್ತು ಹೊಸದಾಗಿಯೂ ಸಹ ಅರ್ಜಿ ಸಲ್ಲಿಸಬಹುದು. ಹಳೆಯ ಅರ್ಜಿದಾರರಿಗೆ ಆದ್ಯತೆ ಮೇರೆಗೆ ಇ-ಲಾಟರಿ ಮುಖಾಂತರ ಹಂಚಿಕೆ ಮಾಡಿ ಬಾಕಿ ನಿವೇಶನ ಉಳಿದಲ್ಲಿ ಹೊಸ ಅರ್ಜಿದಾರರಿಗೆ ಇ-ಲಾಟರಿ ಮುಖಾಂತರ ಹಂಚಿಕೆ ಮಾಡಲಾಗುತ್ತದೆ.
ಷರತ್ತಗಳು ಹೀಗಿವೆ:
* ನಿವೇಶನ ಹಂಚಿಕೆಗೆ ಅರ್ಜಿ ಸಲ್ಲಿಸಿ ನೋಂದಣಿ ಪಡೆದ ಅರ್ಜಿದಾರರಿಗೆ ನೋಂದಣಿ ಶುಲ್ಕ ಮರುಪಾವತಿ ಮಾಡುವುದಿಲ್ಲ.
* ಇದೊಂದು ಬೇಡಿಕೆ ಸಮೀಕ್ಷೆ ಪ್ರಕಟಣೆಯಾಗಿದ್ದು, ಈ ಸಮೀಕ್ಷೆಗೆ ಅನುಗುಣವಾಗಿ ನಿರೀಕ್ಷಿತ ಬೇಡಿಕೆ ಬಂದಲ್ಲಿ ಮಂಡಳಿಯ ಹಂಚಿಕೆ ನಿಯಮಗಳಂತೆ ಯೋಜನೆಯನ್ನು ಹಮ್ಮಿಕೊಳ್ಳಲಾಗುವುದು.
* ನಿವೇಶನಗಳನ್ನು ಒಂದೇ ಇಡಿಗಂಟಿನ (Outright sale) ಆಧಾರದ ಮೇಲೆ ಹಂಚಿಕೆ ಮಾಡಲಾಗುವುದು.
* ಅರ್ಜಿದಾರರು ನಗರ, ಪುರಸಭೆ ವ್ಯಾಪ್ತಿಯಲ್ಲಿ ಗಂಡ/ ಹೆಂಡತಿ ಅಪ್ರಾಪ್ತ ವಯಸ್ಕ ಮಕ್ಕಳ ಹೆಸರಿನಲ್ಲಿ ಮನೆ ಅಥವಾ ನಿವೇಶನ ಹೊಂದಿರಬಾರದು. ಕರ್ನಾಟಕ ಗೃಹ ಮಂಡಳಿಯಿಂದಾಗಲೂ ಅಥವಾ ಇನ್ನಿತರ ಯಾವುದೇ ಪ್ರಾಧಿಕಾರದಿಂದಾಗಲೀ ಮನೆ/ ನಿವೇಶನ ಪಡೆದಿಲ್ಲ ಎಂದು ಅರ್ಜಿದಾರರು ಅರ್ಜಿ ಸಲ್ಲಿಸುವುದಕ್ಕೆ ಮೊದಲು 10 ವರ್ಷಗಳಿಗೆ ಕಡಿಮೆ ಇಲ್ಲದಷ್ಟು ಕಾಲ ಕರ್ನಾಟಕ ರಾಜ್ಯದ ಸಾಮಾನ್ಯ ನಿವಾಸಿಯಾಗಿರುವ ಬಗ್ಗೆ ನೋಟರಿ ಮೂಲಕ ಪ್ರಮಾಣೀಕರಿಸಿದ ಪ್ರಮಾಣ ಪತ್ರ (ಅಫಿಡವಿಟ್) ಅಪ್‌ಲೋಡ್ ಮಾಡಬೇಕು.
* ಆರ್ಥಿಕ ದುರ್ಬಲ ವರ್ಗದ ನಿವೇಶನಗಳಿಗೆ ಅರ್ಜಿ ಸಲ್ಲಿಸುವವರು ತಮ್ಮ ಕುಟುಂಬದ ವಾರ್ಷಿಕ ವರಮಾನ ನಗರ ವ್ಯಾಪ್ತಿಯಲ್ಲಿದ್ದಲ್ಲಿ 87,600 ರೂ., ಗ್ರಾಮೀಣ ವ್ಯಾಪ್ತಿಯಲ್ಲಿದ್ದಲ್ಲಿ 32,000 ರೂ., ಮೀರದಿರುವ ಬಗ್ಗೆ ಸಂಬಂಧಪಟ್ಟ ತಹಶೀಲ್ದಾರರಿಂದ ಪ್ರಮಾಣ ಪತ್ರವನ್ನು ಪಡೆದು ಅರ್ಜಿಯೊಂದಿಗೆ ಸಲ್ಲಿಸಬೇಕು.
* ನಿವೇಶನಗಳನ್ನು ಪ್ರವರ್ಗವಾರು ಮೀಸಲಾತಿ ಅನ್ವಯ ಕಾಯ್ದಿರಿಸಿ ಇ-ಲಾಟರಿ ಮೂಲಕ ಹಂಚಿಕೆ ಮಾಡಲಾಗುವುದು
* ಹಂಚಿಕೆ ನಂತರ ಹಂಚಿಕೆದಾರರ ಕೋರಿಕೆ ಅಥವಾ ನಿಗದಿತ ಸಮಯದಲ್ಲಿ ಹಣ ಸಂದಾಯ ಮಾಡದ ಸಂದರ್ಭದಲ್ಲಿ ಹಂಚಿಕೆಯನ್ನು ರದ್ದುಪಡಿಸಿ ಆರಂಭಿಕ ಠೇವಣಿ ಮೊತ್ತಕ್ಕೆ ಯಾವುದೇ ಬಡ್ಡಿ ನೀಡದೆ ಹಿಂತಿರುಗಿಸಲಾಗುವುದು
* ಅರ್ಜಿದಾರರು ಇಚ್ಛಿಸಿದಲ್ಲಿ ಯಾವುದೇ ಸಂದರ್ಭದಲ್ಲಿ ಮಂಡಳಿಗೆ ಕೋರಿಕೆ ಸಲ್ಲಿಸಿ ಆರಂಭಿಕ ಠೇವಣಿ ಮೊತ್ತ ವಾಪಸ್ ಪಡೆಯಬಹುದು.
ವಿವರಗಳಿಗೆ ಸಂಪರ್ಕಿಸಿ:
ಹೆಚ್ಚಿನ ಮಾಹಿತಿಗಾಗಿ 9844762205, 9448000447, 9945373779, 080-22273511 ಅಥವಾ ಮಂಡಳಿಯ ವೆಬ್‌ಸೈಟ್ ಮೂಲಕ ಸಂಪರ್ಕ ಸಾಧಿಸಬಹುದು ಎಂದು ಕೆಎಚ್‌ಬಿ ಪ್ರಕಟಣೆಯಲ್ಲಿ ವಿವರಿಸಲಾಗಿದೆ.