21.4 C
Bengaluru
Monday, December 23, 2024

ರಿಯಲ್ ಎಸ್ಟೇಟ್: ದಾರಿತಪ್ಪಿಸುವ ಜಾಹೀರಾತು ಕೊಟ್ಟರೆ ಹಣ ವಾಪಸ್ ಕೊಡಬೇಕಾದೀತು ಹುಷಾರ್‌!

ಬಿಲ್ಡರ್‌ಗಳು ತಾವು ನಿರ್ಮಿಸಿದ ಮನೆಗಳನ್ನು ಮಾರಾಟ ಮಾಡಲು ಗ್ರಾಹಕರನ್ನು ಸೆಳೆಯುವುದಕ್ಕಾಗಿ ನಾನಾ ತರಹದ ಜಾಹೀರಾತುಗಳನ್ನು ಪ್ರಕಟಿಸುತ್ತಾರೆ. ಉದಾಹರಣೆಗೆ ಇಲ್ಲಿಗೆ ಸಮೀಪದಲ್ಲಿ ಶೀಘ್ರವೇ ಮೆಟ್ರೊ ರೈಲು ಸೇವೆ ಆರಂಭವಾಗಲಿದೆ, ಬಹುಪಥ ರಸ್ತೆ ಬರಲಿದೆ ಎಂದು ಭರವಸೆ ನೀಡುವುದು ಸಾಮಾನ್ಯ. ಇದೀಗ, ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು (ಎನ್‌ಸಿಆರ್‌ಡಿಸಿ) ಬಿಲ್ಡರ್ಗಳು ತಿಳಿಸಿದ ಅವಧಿಯೊಳಗಾಗಿ ಸ್ಥಳೀಯ ಆಡಳಿತವು ಮೆಟ್ರೊ ರೈಲು ಅಥವಾ ರಸ್ತೆ ಸಂಪರ್ಕ ಕಲ್ಪಿಸದೇ ಇದ್ದ ಸಂದರ್ಭದಲ್ಲಿ ಬಿಲ್ಡರ್‌ಗಳು ಗ್ರಾಹಕರಿಗೆ ಹಣವನ್ನು ಮರಳಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.

ಗೃಹ ನಿರ್ಮಾಣ ಯೋಜನೆಗೆ ರಸ್ತೆ ಮತ್ತು ನೀರು, ವಿದ್ಯುತ್ ಸಂಪರ್ಕ ಕಲ್ಪಿಸುವುದರಲ್ಲಿ ಸರ್ಕಾರಿ ಅಧಿಕಾರಿಗಳ ಕಡೆಯಿಂದ ವಿಳಂಬ ಉಂಟಾದರೆ ಅದು, ಗ್ರಾಹಕರು ಯೋಜನೆಯಿಂದ ಹಿಂದೆ ಸರಿಯಲು ಸಮರ್ಪಕವಾದ ಕಾರಣವಾಗಿರುತ್ತದೆ ಮತ್ತು ಬಿಲ್ಡರ್‌ಗಳು ಹಣವನ್ನು ಮರಳಿಸುವ ಹೊಣೆಗಾರಿಕೆ ಹೊಂದಿರುತ್ತಾರೆ ಎಂಬುದನ್ನು ಎನ್‌ಸಿಆರ್‌ಡಿಸಿ ಎತ್ತಿಹಿಡಿದಿದೆ.

ಪ್ರಕರಣವೊಂದರಲ್ಲಿ ತೀರ್ಪು ನೀಡಿರುವ ಎನ್‌ಸಿಆರ್‌ಡಿಸಿ ಪೀಠವು, ಕಟ್ಟಡ ನಿರ್ಮಾಣದ ಹೊರತು ಹೊರಗಡೆ ಅಭಿವೃದ್ಧಿ ಕೆಲಸಗಳನ್ನು ಮಾಡುವುದು ಬಿಲ್ಡರ್‌ಗಳ ಕೆಲಸ ಅಲ್ಲ ಎಂಬುದನ್ನು ಒಪ್ಪಿಕೊಂಡಿದೆ. ಆದರೆ ಅದೇ ಸಂದರ್ಭದಲ್ಲಿ ಗ್ರಾಹಕರ ಹಿತಕ್ಕೂ ಆದ್ಯತೆ ನೀಡಿರುವ ಪೀಠವು, ʻಇಂತಹ ಜಾಹೀರಾತುಗಳಿಂದ ಪ್ರೇರಿತರಾಗಿ ತಮ್ಮ ಹಣವನ್ನು ಹೂಡಿಕೆ ಮಾಡಿದ ಖರೀದಿದಾರರು ತೊಂದರೆ ಅನುಭವಿಸುವಂತಾಗಬಾರದುʼ ಎಂದಿದೆ.

ಎನ್‌ಸಿಆರ್‌ಡಿಸಿ ಬಾಗಿಲು ತಟ್ಟಿದರು
ಗ್ರಾಹಕರೊಬ್ಬರು 2015ರಲ್ಲಿ ಗುರುಗ್ರಾಮದ ಸೆಕ್ಟರ್ 104ರಲ್ಲಿ ಪ್ರಾಥಮಿಕವಾಗಿ 51.36 ಲಕ್ಷ ರೂಪಾಯಿ ನೀಡಿ ಗೋದ್ರೇಜ್ ಸಮ್ಮಿತ್ ಯೋಜನೆಯಲ್ಲಿ ಮನೆಯನ್ನು ಮುಂಗಡ ಬುಕ್ ಮಾಡಿದ್ದಾರೆ. 2017ರಲ್ಲಿ ಬಿಲ್ಡರ್ ಆಕ್ಯುಪೇಷನ್ ಪ್ರಮಾಣಪತ್ರವನ್ನು ಪಡೆದುಕೊಂಡಿದ್ದಾರೆ ಮತ್ತು ಮನೆ ಸ್ವಾಧೀನಕ್ಕೆ ಪಡೆದುಕೊಳ್ಳುವಂತೆ ಗ್ರಾಹಕರಿಗೆ ತಿಳಿಸಿದ್ದಾರೆ. ಆದರೆ ತಾವು ನೀಡಿರುವ ಭರವಸೆಗಳನ್ನು ಈಡೇಸಿರುವಲ್ಲಿ ಬಿಲ್ಡರ್ ವಿಫಲವಾಗಿದ್ದಾರೆ ಎಂದು ಆರೋಪಿಸಿ ಗ್ರಾಹಕ ಬಾಕಿ ಹಣವನ್ನು ಪಾವತಿಸಲು ನಿರಾಕರಿಸಿದ್ದಾರೆ. ಆಗ ಸಂಸ್ಥೆಯು ಮನೆ ಹಂಚಿಕೆಯನ್ನು ರದ್ದುಗೊಳಿಸಿ, ಮುಂಗಡ ನೀಡಿದ್ದ 46.94 ಲಕ್ಷ ರೂಪಾಯಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ತನ್ನ ಹಣವನ್ನು ಮರಳಿ ಪಡೆಯಲೆಂದು ಗ್ರಾಹಕ ವಕೀಲರ ಮೂಲಕ ಎನ್‌ಸಿಆರ್‌ಡಿಸಿ ಬಾಗಿಲು ತಟ್ಟಿದ್ದಾರೆ.

ದ್ವಾರಕ ಎಕ್ಸ್‌ಪ್ರೆಸ್‌ ವೇ ಗೆ ಸಂಪರ್ಕ ಕಲ್ಪಿಸುವ 24 ಮೀಟರ್ ಅಗಲದ ರಸ್ತೆ ನಿರ್ಮಾಣ ಆಗಲಿದೆ ಎಂದು ಬಿಲ್ಡರ್ ಭರವಸೆ ನೀಡಿದ್ದರು. ಆ ರಸ್ತೆ ನಿರ್ಮಾಣ ಆಗಿರಲಿಲ್ಲ. ಅಷ್ಟೇ ಅಲ್ಲದೆ, ನೀರು ಮತ್ತು ವಿದ್ಯುತ್‌ಗಳಂತಹ ಪ್ರಾಥಮಿಕ ಸೌಲಭ್ಯಗಳನ್ನೂ ಕಲ್ಪಿಸುವುದು ಸಾಧ್ಯವಾಗಲಿಲ್ಲ. ನೀರನ್ನು ಟ್ಯಾಂಕರ್‌ಗಳ ಮೂಲಕ ಮತ್ತು ವಿದ್ಯುತ್ ಅನ್ನು ಜನರೇಟರ್ ಮೂಲಕ ಪೂರೈಸಲಾಗುತ್ತಿತ್ತು.

ಇನ್ನೊಂದು ಕಡೆ ತನ್ನ ವಾದ ಮಂಡಿಸಿದ ಬಿಲ್ಡರ್ ಸಂಸ್ಥೆಯು, ಕಟ್ಟಡ ನಿರ್ಮಾಣದ ಆವರಣದ ಹೊರಗಡೆ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಹೊಣೆಯು ನಮ್ಮದಲ್ಲ. ಅದು ಸರ್ಕಾರದ ಕೆಲಸ ಆಗಿರುತ್ತದೆ. 24 ಮೀಟರ್ ರಸ್ತೆ ನಿರ್ಮಾಣ ಮಾಡುವುದಾಗಿ ಸ್ಥಳೀಯ ಆಡಳಿತವೇ ತಿಳಿಸಿತ್ತು ಮತ್ತು ನಾವು ಅದನ್ನೇ ನಮ್ಮ ಯೋಜನೆಯ ಮಾಹಿತಿಯಲ್ಲಿ ತಿಳಿಸಿದ್ದೇವೆ. ಆದ್ದರಿಂದ ತಾನು ಖರೀದಿದಾರರಿಗೆ ದಾರಿತಪ್ಪಿಸಿಲ್ಲ ಎಂದು ಪ್ರತಿಪಾದಿಸಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಪೀಠವು, ಬಿಲ್ಡರ್‌ಗಳು ತಾವು ನೀಡಿರುವ ಜಾಹೀರಾತಿನ ಭಿತ್ತಿಪತ್ರಗಳು ಮತ್ತು ಗ್ರಾಹಕರೊಂದಿಗಿನ ಒಪ್ಪಂದದಲ್ಲಿ ರಸ್ತೆಯನ್ನು ಪ್ರಮುಖ ಸೌಲಭ್ಯವನ್ನಾಗಿ ಬಿಂಬಿಸಿದ್ದಾರೆ. ಕಟ್ಟಡ ನಿರ್ಮಾಣ ಪೂರ್ಣಗೊಳ್ಳುವ ಹೊತ್ತಿಗೆ ಈ ಸೌಲಭ್ಯ ಸಿಗಬಹುದು ಎಂಬುದೂ ಗ್ರಾಹಕರು ಮನೆ ಖರೀದಿಗೆ ಮುಂದಾಗಲು ಪ್ರಮುಖ ಕಾರಣವಾಗಿತ್ತು ಎಂಬುದನ್ನು ಗುರುತಿಸಿದೆ.

Related News

spot_img

Revenue Alerts

spot_img

News

spot_img