ನಿಮ್ಮ ಮನೆಯಿಂದ ಬಸ್ ನಿಲ್ದಾಣ ದೂರದಲ್ಲಿದೆಯೇ? ಅದೇ ಕಾರಣಕ್ಕೆ ಸಮೂಹ ಸಾರಿಗೆ ಬಳಸುವುದು ನಿಮಗೆ ಸಾಧ್ಯವಾಗುತ್ತಿಲ್ಲವೇ? ಇನ್ನು ಮುಂದೆ ಬಸ್ ನಿಮ್ಮ ಮನೆಯ ಬಾಗಿಲಿಗೇ ಬಂದು ನಿಮ್ಮನ್ನು ಹತ್ತಿಸಿಕೊಂಡರೆ ಹೇಗಿರುತ್ತದೆ? ಕೊನೇ ಹಂತದ ಜನರನ್ನೂ ಸಮೂಹ ಸಾರಿಗೆ ವ್ಯಾಪ್ತಿಗೆ ತರುವ ನಿಟ್ಟಿನಲ್ಲಿ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಹಾಗೂ ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ಇಂಥದ್ದೊಂದು ಯೋಜನೆಗೆ ಮುಂದಾಗಿವೆ. ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್‌ಗಳಿಂದ ಜನರನ್ನು ಮೆಟ್ರೋ ನಿಲ್ದಾಣಕ್ಕೆ ಕರೆತರಲು, ನಿಲ್ದಾಣದಿಂದ ಮನೆ/ಕಚೇರಿಗಳಿಗೆ ಬಿಡಲು ಇಂಥದ್ದೊಂದು ಫೀಡರ್ ಬಸ್ ಸೇವೆ ನಿಯೋಜಿಸುವ ಒಪ್ಪಂದಕ್ಕೆ ಈ ಎರಡೂ ಸಂಸ್ಥೆಗಳು ಆಸಕ್ತಿ ತೋರಿವೆ.
“ಸದ್ಯ ಫೀಡರ್ ಬಸ್ಗಳು ಮೆಟ್ರೋ ನಿಲ್ದಾಣ ಮತ್ತು ಸಮೀಪದ ಬಸ್ ನಿಲ್ದಾಣದ ನಡುವೆ ಸಂಚರಿಸುತ್ತಿವೆ. ಇದಕ್ಕಾಗಿ ಬಿಎಂಟಿಸಿ 95 ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸಿದೆ. ಸದ್ಯಕ್ಕೆ ಇವೆಲ್ಲವೂ ಕಾರ್ಯನಿರ್ವಹಿಸುತ್ತಿಲ್ಲ, ಶೀಘ್ರದಲ್ಲೇ ಎಲ್ಲ ಬಸ್‌ಗಳೂ ರಸ್ತೆಗಿಳಿಯುವ ನಿರೀಕ್ಷೆಯಿದೆ,” ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ತಿಳಿಸಿದ್ದಾರೆ.
“ಅಪಾರ್ಟ್‌ಮೆಂಟ್‌ಗಳು ಅಥವಾ ಕಚೇರಿಗಳಲ್ಲಿ ಯಾವ ಸ್ವರೂಪದಲ್ಲಿ ಜನರ ಹಂಚಿಕೆ ಆಗಿದೆ ಎಂಬ ಆಧಾರದಲ್ಲಿ ಫೀಡರ್ ಸೇವೆಯ ಬಸ್ ನಿಲ್ದಾಣಗಳನ್ನು ಗುರುತಿಸಲಾಗುವುದು. ಆ ಮೂಲಕ ಹೆಚ್ಚಿನ ಜನರಿಗೆ ಸೇವೆ ವಿಸ್ತರಿಸಲಾಗುವುದು. ತಮ್ಮ ಮನೆ/ಕಚೇರಿಗಳಿಂದ 200-250 ಮೀಟರ್ ವ್ಯಾಪ್ತಿಯಲ್ಲಿ ಬಸ್ ಸೇವೆ ಸಿಕ್ಕರೆ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗುತ್ತದೆ,” ಎಂದು ಅಂಜುಮ್ ವಿವರಿಸುತ್ತಾರೆ.
ಬಿಎಂಟಿಸಿ ನಿರ್ದೇಶಕ (ತಾಂತ್ರಿಕ) ಎ.ವಿ. ಸೂರ್ಯಸೇನ್ ಅವರು, “ಈಗಾಗಲೇ 200 ಮೆಟ್ರೋ ಫೀಡರ್ ಬಸ್‌ಗಳನ್ನು ಓಡಿಸಲಾಗುತ್ತಿದೆ. ಆದರೆ ಇವು ಹೆಚ್ಚು ಒಳ ರಸ್ತೆಗಳನ್ನು ಸಂಪರ್ಕಿಸುವುದಿಲ್ಲ. ಆದ್ದರಿಂದ ಬಿಎಂಆರ್‌ಸಿಎಲ್ ನವರು ಕೆಲವು ಮಾರ್ಗಗಳನ್ನು ಗುರುತಿಸಿ ಅಲ್ಲಿ ಫೀಡರ್ ಸೇವೆ ಒದಗಿಸುವಂತೆ ಪ್ರಸ್ತಾವ ಇಟ್ಟಿದ್ದಾರೆ. ಈ ಉದ್ದೇಶಕ್ಕಾಗಿ, 20-25 ಪ್ರಯಾಣಿಕರನ್ನು ಸಾಗಿಸಬಲ್ಲ ಸಣ್ಣ ಬಸ್‌ಗಳನ್ನು ಖರೀದಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಸಂಬಂಧಿಸಿದ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಟೆಂಡರ್ ಕರೆಯಲಿದ್ದೇವೆ. ಶೀಘ್ರವೇ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಸೇವೆ ಆರಂಭ ಆಗಲಿದೆ,” ಎಂದು ಮಾಹಿತಿ ನೀಡಿದರು.
ಸಾರಿಗೆ ಆಧಾರಿತ ಅಭಿವೃದ್ಧಿ:
“ಮೆಟ್ರೋ, ಉಪನಗರ ರೈಲು ಅಥವಾ ಸಂಚಾರ ಸಾರಿಗೆ ನಿರ್ವಹಣಾ ಕೇಂದ್ರಗಳ (ಟಿಟಿಎಂಸಿ) ಸಮೀಪವೇ ವಾಸಿಸುವಂತೆ ಜನರಿಗೆ ಉತ್ತೇಜಿಸುವ ಪರಿಕಲ್ಪನೆ ಇದಾಗಿದೆ. ಇದನ್ನು ಸಾರಿಗೆ ಆಧಾರಿತ ಅಭಿವೃದ್ಧಿ ಎಂದು ಕರೆಯಲಾಗುತ್ತದೆ. ಅಂದರೆ, ಸಮೂಹ ಸಾರಿಗೆ ವ್ಯವಸ್ಥೆಗೆ ಹತ್ತಿರವೇ ವಾಸಿಸುವುದರಿಂದ ಜನರ ಅನಗತ್ಯ ಓಡಾಟ ತಗ್ಗುತ್ತದೆ. ಅದೂ ಅಲ್ಲದೆ ಇಂತಹ ಸಾರಿಗೆ ಲಭ್ಯವಿರುವ ಪ್ರದೇಶಗಳಲ್ಲಿ ಅಭಿವೃದ್ಧಿಯೂ ಹೆಚ್ಚುತ್ತದೆ. 2025ರ ವೇಳೆಗೆ ಮೆಟ್ರೋ ರೈಲು ವ್ಯಾಪ್ರಿ 179 ಕಿ.ಮೀ.ಗೆ ಹಿಗ್ಗಲಿದೆ,” ಎಂದು ಪರ್ವೇಜ್ ತಿಳಿಸಿದರು.
ಬಿಎಂಆರ್‌ಸಿಎಲ್ ಮತ್ತು ಬಿಎಂಟಿಸಿಯ ಈ ಯೋಜನೆ ಸುಗಮವಾಗಿ ಅನುಷ್ಠಾನಕ್ಕೆ ಬಂದು ಅಂದುಕೊಂಡಂತೆ ಸಾಗಿದರೆ ಈ ಸೇವೆ ಸಿಗುವ ಪ್ರದೇಶದಲ್ಲಿ ರಿಯಲ್ ಎಸ್ಟೇಟ್ ಬೆಳವಣಿಗೆಯೂ ಚುರುಕು ಪಡೆಯುವಲ್ಲಿ ಅನುಮಾನಗಳಿಲ್ಲ ಎಂದು ನಿರೀಕ್ಷಿಸಲಾಗಿದೆ.