2011 ಏಪ್ರಿಲ್ 9ರಂದು ಮುಂಬೈನಿಂದ 48 ಕಿ.ಮೀ. ದೂರವಿರುವ ಉಲ್ಹಾಸನಗರದ ಗೋಲ್ ಮೈದಾನದ ಶೀಶ್ ಮಹಲ್ ಕಟ್ಟಡ ಕುಸಿತ ಘಟನೆಯನ್ನು ಮರೆಯಲು ಪ್ರಯತ್ನಿಸುತ್ತಿರುವ ಅದರ ಅಂದಿನ ನಿವಾಸಿಗಳು ಇದೀಗ ಮತ್ತೆ ಅಲ್ಲಿ ಹೊಸದೊಂದು ಕಟ್ಟಡ ನಿರ್ಮಾಣದ ಯತ್ನವನ್ನು ಆರಂಭಿಸಿದ್ದು, ಅವರಿಗೆ ಮತ್ತೊಮ್ಮೆ ಹಿನ್ನಡೆ ಉಂಟಾಗಿದೆ.
ಈ ಟೌನ್‌ಷಿಪ್ನ ಹಲವು ಕಟ್ಟಡಗಳಂತೆಯೇ ಶೀಶ್ ಮಹಲ್ ಕೂಡ ಕಾನೂನಾತ್ಮಕ ಅನುಮೋದನೆ ಇಲ್ಲದೆ, ಫ್ಲೋರ್ ಸ್ಪೇಸ್ ಇಂಡೆಕ್ಸ್ (ಎಫ್‌ಎಸ್ಐ) ಉಲ್ಲಂಘಿಸಿ ನಿರ್ಮಿಸಿದ್ದ ಕಟ್ಟಡ. ಅದೇ ಕಾರಣಕ್ಕೆ ಯಾವುದೇ ಕ್ರಯಪತ್ರಗಳೂ ನೋಂದಣಿ ಆಗಿರಲಿಲ್ಲ. ನಾಗರಿಕರು ರೂ.100 ಛಾಪಾಕಾಗದದ ಮೇಲೆ ಒಪ್ಪಂದ ಮಾಡಿಕೊಂಡು 1994ರಲ್ಲಿ ತಮ್ಮ ಮನೆ ಮತ್ತು ಅಂಗಡಿಗಳಿಗೆ ಮಾಲೀಕರಾದರು. ಮನೆ ಖರೀದಿದಾರರಿಗೆ ಭೂಮಿಯನ್ನು ಹಸ್ತಾಂತರಿಸದ ಕಾರಣ ಜಾಗವು ಮೂಲ ಮಾಲೀಕರ ಹೆಸರಲ್ಲೇ ಉಳಿಯಿತು. ಯಾವುದೇ ಹೌಸಿಂಗ್ ಸೊಸೈಟಿಯೂ ರಚನೆ ಆಗಿರಲಿಲ್ಲ.
ಆದ್ದರಿಂದ ಇವರೆಲ್ಲ ಅದೇ ಜಾಗದಲ್ಲಿ ಮತ್ತೆ ಕಟ್ಟಡ ನಿರ್ಮಾಣಕ್ಕೆ ಮುಂದಾದಾಗ ಭೂಮಿಯ ಮೂಲ ಮಾಲೀಕರಿಂದ ಕಾನೂನು ತೊಡಕುಗಳನ್ನು ಎದುರಿಸುವಂತಾಗಿದೆ. ಉಲ್ಹಾಸನಗರ ಮಹಾನಗರ ಪಾಲಿಕೆ ಅನುಮೋದನೆ ನೀಡಿದ್ದ ಎಫ್‌ಎಸ್ಐ ಗಿಂತ ಮೂರುಪಟ್ಟು ಹೆಚ್ಚಿನ ಸ್ಥಳಾವಕಾಶವನ್ನು ಶೀಶ್ ಮಹಲ್ ಆಕ್ರಮಿಸಿತ್ತು.
ಏಳು ಚದರ ಕಿ.ಮೀ. ವ್ಯಾಪ್ತಿಯ ಟೌನ್ಶಿಪ್ನ ಹಲವು ಕಟ್ಟಡಗಳ ಪರಿಸ್ಥಿತಿಯನ್ನು ಈ ಶೀಶ್ ಮಹಲ್ ಪ್ರತಿನಿಧಿಸುತ್ತದೆ. ಉಲ್ಹಾಸನಗರದ ನಾಗರಿಕರು ವಿಷವರ್ತುಲದಲ್ಲಿ ಸಿಲುಕಿದ್ದಾರೆ. ಇದೇ ವರ್ಷ ಅಲ್ಲಿ ಮೂರು ಕಟ್ಟಡಗಳು ಕುಸಿದು ಆರು ಮಂದಿ ಮೃತಪಟ್ಟಿದ್ದಾರೆ. ಕಳೆದ ವರ್ಷ ಪ್ರಾಣ ತೆತ್ತವರ ಸಂಖ್ಯೆ 15.
ದೇಶ ವಿಭಜನೆಯಾದ ನಂತರ ಉಲ್ಹಾಸನಗರವು ಮೂಲದಲ್ಲಿ ಸಿಂಧಿ ಸಮುದಾಯದ ನೆಲೆಯಾಗಿತ್ತು. ನಂತರ ವ್ಯಾಪಾರಿ ಚಟುವಟಿಕೆಗಳು ಚುರುಕುಗೊಂಡಂತೆ ಬೇರೆ ಸಮುದಾಯದವರೂ ಇಲ್ಲಿ ಹೂಡಿಕೆಗೆ ಮುಂದಾದರು. ಕಟ್ಟಡ ನಿರ್ಮಾಣ ಉದ್ಯಮಾವಕಾಶ ಹೆಚ್ಚಳವಾದಂತೆ ಟೌನ್‌ಷಿಪ್‌ನಲ್ಲಿ ಕುಟುಂಬಗಳು, ಜನಸಂಖ್ಯೆ ಹೆಚ್ಚಳವಾಯಿತು. ಅದಕ್ಕೆ ತಕ್ಕಂತೆ ವಸತಿ ಕಲ್ಪಿಸಲು ಸ್ಥಳಾವಕಾಶ ಇಲ್ಲದ ಕಾರಣ ನಿಯಮ ಬಾಹಿರವಾಗಿ ಮನೆ ನಿರ್ಮಾಣ ಆರಂಭವಾಯಿತು. ಸಮೀಪದ ಉಪನಗರಗಳಿಗೆ ಹೋಲಿಸಿದರೆ ಅಲ್ಲಿ ಮನೆಗಳೂ ತೀರಾ ಅಗ್ಗವಾಗಿದ್ದವು.
ರಾಜಕಾರಣಿಗಳು, ಸ್ಥಳೀಯ ಆಡಳಿತದ ಅಧಿಕಾರಿಗಳು ಮತ್ತು ಬಿಲ್ಡರ್ಗಳ ದುಷ್ಟಕೂಟದ ಫಲವಾಗಿ ಅಕ್ರಮ ಕಟ್ಟಡಗಳು ತಲೆಯೆತ್ತಿದವು. ನಗರ ಸಮೀಕ್ಷೆ ವಿಭಾಗದ ಸಮೀಕ್ಷೆ ಪ್ರಕಾರ 1965ರಿಂದ 1971ರ ವರೆಗೆ 30,714 ಅತಿಕ್ರಮಣ ಪ್ರಕರಣಗಳು ಪತ್ತೆಯಾಗಿದ್ದವು. 2007ರಲ್ಲಿ ಅದು 1,13,767ಕ್ಕೆ ಹೆಚ್ಚಳವಾಗಿತ್ತು. ಮುಂದೆ ಇದು ಸ್ಥಳೀಯ ಆಡಳಿತ, ಬಿಲ್ಡರ್ಗಳು, ಮನೆಯ ಮಾಲೀಕರ ನಡುವಣ ಕಾನೂನು ಸಮರಕ್ಕೂ ದಾರಿಯಾಯಿತು.
1999ರಲ್ಲಿ ಏಕಮಾತ್ರ ಸದಸ್ಯರಿರುವ ನಂದಲಾಲ್ ಸಮಿತಿಯನ್ನು ಅಧ್ಯಯನಕ್ಕೆಂದು ನೇಮಿಸಲಾಯಿತು. ಅದರ ವರದಿಯಲ್ಲಿ, ಅಕ್ರಮ ಬಿಲ್ಡರ್ಗಳ ಬೆನ್ನಿಗೆ ಉಲ್ಹಾಸನಗರದ ಅಧಿಕಾರಿಗಳು, ರಾಜಕಾರಣಿಗಳು ನಿಂತಿದ್ದನ್ನು ಬಹಿರಂಬಪಡಿಸಿತು.
ಹತ್ತು ವೃತ್ತಿಪರ ಬಿಲ್ಡರ್ಗಳಿದ್ದರೆ 90ರಷ್ಟು ಬಿಲ್ಡರ್ಗಳಿಗೆ ಕಟ್ಟಡ ನಿರ್ಮಾಣದಲ್ಲಿ ಯಾವುದೇ ಅನುಭವವೂ ಇರಲಿಲ್ಲ. ಭೂಮಿಯನ್ನು ಖರೀದಿಸಿದವರೆಲ್ಲರೂ ಬಿಲ್ಡರ್ಗಳಾದರು.
2005ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ಕೈಗೆತ್ತಿಕೊಂಡ ಬಾಂಬೆ ಹೈಕೋರ್ಟ್, ಕಾನೂನುಬಾಹಿರ ಕಟ್ಟಡಗಳನ್ನು ನೆಲಸಮ ಮಾಡುವಂತೆ ಆದೇಶಿಸಿತು. ಆರಂಭದಲ್ಲಿ 855 ಕಟ್ಟಡಗಳನ್ನು ಉರುತಿಸಿ, ಅವುಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯಾಡಳಿತಕ್ಕೆ ಸೂಚಿಸಲಾಯಿತು. ಆಡಳಿತವು ತಿಂಗಳುಗಟ್ಟಲೆ ಸಮಯ ವ್ಯಯ ಮಾಡಿ, ಕೊನೆಗೆ ವಸತಿ ಇಲ್ಲದ ಮೂರು ಕಟ್ಟಡಗಳನ್ನು ನೆಲಸಮ ಮಾಡಿತು.
ಖಾಸಗಿ ಕಟ್ಟಡ ಕೆಡವಲು ಮುಂದಾದಾಗ ಅವರ ಮೇಲೆ ದಾಳಿಯೂ ನಡೆಯಿತು. ಮುಂದೆ 2006ರಲ್ಲಿ ಮಹಾರಾಷ್ಟ್ರ ಸರ್ಕಾರ ನಿಯಮ ಸಡಿಲಿಸಿ ನಿವಾಸಿಗಳ ನೆರವಿಗೆ ಧಾವಿಸಿತು. ಆಗ ಕೆಲವರು ಅವಕಾಶ ತಪ್ಪಿಸಿಕೊಂಡಿದ್ದರು. ಇದೀಗ 2021ರಲ್ಲಿ ಮತ್ತೆ ನಿಯಮ ತಿದ್ದುಪಡಿಯ ಚಿಂತನೆ ನಡೆಸಿದೆ.
ಇಷ್ಟೆಲ್ಲ ಮೇಲಾಟಗಳ ನಡುವೆಯೂ ಇಂದಿಗೂ ಉಲ್ಹಾಸನಗರದಲ್ಲಿ ಕಟ್ಟಡ ಕುಸಿತ ಮುಂದುವರಿದಿದೆ. ಈವರೆಗೆ 38 ಕಟ್ಟಡಗಳು ಧರಾಶಾಹಿಯಾಗಿದ್ದು, ಸುಮಾರು 50 ಜನರನ್ನು ಬಲಿಪಡೆದಿವೆ.