24.2 C
Bengaluru
Sunday, December 22, 2024

ಮುಂಬೈ ಧಾರಾವಿ ಸ್ಲಮ್ ಪುನರುಜ್ಜೀವನ: ಬಿಡ್ ಗೆದ್ದ ಅದಾನಿ ಗ್ರೂಪ್‌!

ಮುಂಬೈ ಎಂದರೆ ಮುಗಿಲೆತ್ತರದ ಕಟ್ಟಡಗಳು ಹೇಗೆ ಕಣ್ಣಿಗೆ ರಾಚುತ್ತವೋ ಹಾಗೇ ಸ್ಲಮ್‌ಗಳೂ (ಕೊಳಚೆ ಪ್ರದೇಶಗಳು) ಸಹ ಧುತ್ತೆಂದು ಎದುರಾಗುತ್ತವೆ. ಅದರಲ್ಲೂ ಮುಂಬೈ ಎಂದರೆ ಧಾರಾವಿ ಸ್ಲಮ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಮುಂಬೈನ್ ಹೃದಯ ಭಾಗದಲ್ಲಿರುವ ಈ ಸ್ಲಮ್ ವಿಶ್ವದ ಅತಿದೊಡ್ಡ ಕೊಳಚೆ ಪ್ರದೇಶ ಎಂಬ ಕುಖ್ಯಾತಿಯನ್ನೂ ಪಡೆದಿದೆ. ಬ್ರಿಟೀಷರ ಕಾಲದಲ್ಲಿಯೇ ನಿರ್ಮಾಣವಾದ ಈ ಸ್ಲಮ್‌ನಲ್ಲಿ ಸದ್ಯ 10 ಲಕ್ಷಕ್ಕಿಂತ ಹೆಚ್ಚು ಜನ ವಾಸಿಸುತ್ತಿದ್ದಾರೆ ಎಂಬ ಮಾಹಿತಿ ಇದೆ.

ಇಂತಹ ಪ್ರಸಿದ್ಧ ಸ್ಲಮ್‌ನ ಪುನರ್ ನಿರ್ಮಾಣ ಕಾರ್ಯವನ್ನು ಮಹಾರಾಷ್ಟ್ರ ಸರ್ಕಾರ ಕೈಗೆತ್ತಿಕೊಂಡಿದೆ. 259 ಹೆಕ್ಟೇರ್ ಪ್ರದೇಶದಲ್ಲಿ ಹರಡಿಕೊಂಡಿರುವ ಧಾರಾವಿ ಸ್ಲಮ್‌ನ ಪುನರ್ ನಿರ್ಮಾಣ ಟೆಂಡರ್ ಅದಾನಿ ಗ್ರೂಪ್‌ನ ಪಾಲಾಗಿದೆ.

“ಜಗತ್ತಿನ ಅತಿ ದೊಡ್ಡ ಕೊಳೆಗೇರಿ ಪ್ರದೇಶಗಳ ಪುನರಾಭಿವೃದ್ಧಿಗೆ 5,069 ಕೋಟಿ ರೂ. ಬಿಡ್‌ ಹಾಕಿದ್ದು, ಡಿಎಲ್‌ಎಫ್‌ಗಿಂತ 2,025 ಕೋಟಿ ರೂ.ಗಳನ್ನು ಹೆಚ್ಚುವರಿ ಕೋಟ್ ಮಾಡಿದ್ದೇದೆ,” ಎಂದು ಯೋಜನೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್‌ವಿಆರ್‌ ಶ್ರೀನಿವಾಸ್‌ ತಿಳಿಸಿದ್ದಾರೆ.

“ಬಿಡ್‌ ವಿವರಗಳನ್ನು ನಾವು ಸರ್ಕಾರಕ್ಕೆ ಕಳುಹಿಸುತ್ತೇವೆ. ಇದನ್ನು ಸರ್ಕಾರ ಪರಿಗಣಿಸುವ ನಿರೀಕ್ಷೆ ಇದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ಸರ್ಕಾರವು ಒಂದೆರಡು ವಾರಗಳಲ್ಲಿ ಈ ಯೋಜನೆಗೆ ಅನುಮೋದನೆ ನೀಡಲಿದೆ,” ಎಂದು ಶ್ರೀನಿವಾಸ್ ಪಿಟಿಐಗೆ ತಿಳಿಸಿದ್ದಾರೆ.

ಧಾರಾವಿ ಸ್ಲಮ್ ಪುನರುಜ್ಜೀವನ ಸಂಪೂರ್ಣ ಯೋಜನೆಯ ಬಿಡ್ ಒಟ್ಟಾರೆ 20,000 ಕೋಟಿ ರೂಪಾಯಿಗಳ ಮೊತ್ತದ್ದು ಆಗಿದೆ. 2.5 ಚದರ ಕಿಲೋಮೀಟರ್ ಪ್ರದೇಶದಲ್ಲಿ ಹರಡಿರುವ 6.5 ಲಕ್ಷ ಕೊಳೆಗೇರಿ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸುವ ಯೋಜನೆಗೆ ಒಟ್ಟಾರೆ 7 ವರ್ಷಗಳ ಕಾಲಾವಧಿ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಧಾರಾವಿ ಪುನರುಜ್ಜೀವನಕ್ಕಾಗಿ ಕಳೆದ ಅಕ್ಟೋಬರ್‌ನಲ್ಲಿ ನಡೆದ ಪ್ರೀ-ಬಿಡ್‌ನಲ್ಲಿ ದಕ್ಷಿಣ ಕೊರಿಯಾ ಮತ್ತು ಯುಎಇಯ ಘಟಕಗಳು ಸೇರಿದಂತೆ ಒಟ್ಟು ಎಂಟು ಬಿಡ್‌ದಾರರು ಭಾಗವಹಿಸಿದ್ದರು. ಅದರಲ್ಲಿ ಮೂವರು ಅಂತಿಮ ಬಿಡ್‌ಗೆ ಆಯ್ಕೆಯಾಗಿದ್ದರು. ಅಂತಿಮವಾಗಿ ಈ ಬಿಡ್ ಅದಾನಿ ಗ್ರೂಪ್ ಪಾಲಾಗಿದ್ದು, ಮುಂಬೈ ನಗರ ಮೂಲದ ಡೆವಲಪರ್ ನಮನ್ ಗ್ರೂಪ್ ಮೂರನೇ ಸ್ಥಾನದಲ್ಲಿದೆ.

ಬಿಡ್‌ ವಿಜೇತರನ್ನು ಆಯ್ಕೆ ಮಾಡಬೇಕಾದರೆ ಸರ್ಕಾರವು ಅಂತಿಮ ಬಿಡ್‌ನಲ್ಲಿ ಇದ್ದವರಿಗೆ 20,000 ಕೋಟಿ ರೂ.ಗಳ ಕ್ರೋಢೀಕೃತ ನಿವ್ವಳ ಮೌಲ್ಯವನ್ನು ಕೋರಿದೆ ಮತ್ತು ಹೆಚ್ಚಿನ ಬಿಡ್‌ದಾರರಿಗೆ ಯೋಜನೆಯನ್ನು ನೀಡುವ ಮೊದಲು ತಾಂತ್ರಿಕ ಮತ್ತು ಆರ್ಥಿಕ ಅರ್ಹತೆ ಎರಡನ್ನೂ ಮೌಲ್ಯಮಾಪನ ಮಾಡುವ ಸಾಧ್ಯತೆಯಿದೆ.

ವಿಜೇತ ಬಿಡ್‌ದಾರರು ಯೋಜನೆಯನ್ನು ಕಾರ್ಯಗತಗೊಳಿಸಲು ವಿಶೇಷ ಉದ್ದೇಶದ ಯೋಜನೆ (SPV) ರೂಪಿಸುವ ಅಗತ್ಯವಿದೆ ಮತ್ತು ಹೂಡಿಕೆಗಳ ಕಾಲಾವಧಿಯನ್ನು ಸಹ ಸರ್ಕಾರವು ನಿಗದಿಪಡಿಸಿದೆ. ಡೆವಲಪರ್ ಪುನರ್ವಸತಿ, ನವೀಕರಣ, ಸೌಕರ್ಯಗಳು ಮತ್ತು ಮೂಲಸೌಕರ್ಯ ಘಟಕಗಳನ್ನು ನೋಡಿಕೊಳ್ಳಬೇಕು.

ಅದಾನಿ ಗ್ರೂಪ್ ಈಗಾಗಲೇ ದೇಶದಲ್ಲಿ ರಿಯಾಲ್ಟಿ ಕ್ಷೇತ್ರವನ್ನು ಪ್ರವೇಶಿಸಿದೆ. ಇದು ಈಗಾಗಲೇ ಆರ್ಥಿಕ ರಾಜಧಾನಿ ಮುಂಬೈನಲ್ಲಿ ಹಲವು ಯೋಜನೆಗಳನ್ನು ಕಾರ್ಯಗತಗೊಳಿಸಿದೆ ಅಥವಾ ಇನ್ನೂ ಕೆಲವು ಕಾರ್ಯಗತಗೊಳ್ಳುವ ಹಂತದಲ್ಲಿವೆ. ಉಪನಗರ ಘಾಟ್‌ಕೋಪರ್‌ನಲ್ಲಿ ಎರಡು ಹಾಗೂ ಮಧ್ಯ ಮುಂಬೈನ ಬೈಕುಲ್ಲಾದಲ್ಲಿ ನಿರ್ಮಾಣ ಯೋಜನೆಗಳನ್ನು ಪೂರ್ಣಗೊಳಿಸಿದೆ.

Related News

spot_img

Revenue Alerts

spot_img

News

spot_img