ಬೆಂಗಳೂರು, ಮಾ. 23 : ಭೂಮಿ ಕಳೆದುಕೊಳ್ಳುತ್ತಿರುವ ರೈತರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಆತುರದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತಿದ್ದು, ಇದಕ್ಕೆ ಮೇಲ್ವಿಚಾರಣೆ ಸಮಿತಿ ವಿರೋಧ ವ್ಯಕ್ತಪಡಿಸಿದೆ. ಶಿವರಾಮಕಾರಂತ ಬಡಾವಣೆಯ ರಚನೆ ಕುರಿತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆ ಸಮಿತಿಯನ್ನು ರಚಿಸಿದೆ. ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ ನೇತೃತ್ವದಲ್ಲಿ ಸಮಿತಿ ರಚನೆಯಾಗಿದ್ದು, ಈದೀಗ ಬಿಡಿಎನ ಆತುರದ ಪ್ರಕ್ರಿಯೆಗೆ ವಿರೋಧವನ್ನು ವ್ಯಕ್ತಪಡಿಸಿದೆ.
ಈ ಸಮಿತಿಯಲ್ಲಿ ಮೂವರು ಸದಸ್ಯರಿದ್ದಾರೆ. ಇವರ ಸಮ್ಮತಿಯನ್ನು ಪಡೆಯದೆಯೇ ಬಿಡಿಎ ನಿವೇಶನಗಳ ಹಂಚಿಕೆಗೆ ಮುಂದಾಗಿದೆ. ಇಂದು ನಿವೇಶನಗಳನ್ನು ಹಂಚಿಕೆ ಮಾಡುತ್ತಿದ್ದು, ಇದಕ್ಕೆ ವಿರೋಧ ವ್ಯಕ್ತವಾಗಿದೆ. ಸೋಮವಾರ ಸಮಿತಿಯ ನಡಾವಳಿಯಲ್ಲಿ ಈ ಬಗ್ಗೆ ಪ್ರಸ್ತಾಪವಾಗಿತ್ತು. ಹೀಗೆ ಆತುರವಾಗಿ ನಿವೇಶನಗಳನ್ನು ಹಂಚಿಕೆ ಮಾಡುವುದು ಸರಿಯಲ್ಲ. ಇದರಿಂದ ಹಂಚಿಕೆದಾರರಿಗೆ ಮುಂದಿನ ದಿನಗಳಲ್ಲಿ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ ಎಂದು ಸಮಿತಿ ಹೇಳಿದೆ. ಅಷ್ಟೇ ಅಲ್ಲದೇ, ಈ ಹಿಂದೆ ಬಡಾವಣೆ ನಿರ್ಮಾಣವಾಗದೆ ನಿವೇಶನಗಳನ್ನು ಹಂಚಿಕೆ ಮಾಡಿದ್ದರ ಪರಿಣಾಮವನ್ನು ಉದಾಹರಣೆಯಾಗಿ ನೀಡಲಾಗಿದೆ. ಅರ್ಕಾವತಿ ಮತ್ತು ನಾಡಪ್ರಭು ಕೆಂಪೇಗೌಡ ಬಡಾವಣೆಗಳಿಂದ ಆದ ಸಮಸ್ಯೆ ಬಗ್ಗೆ ವಿವರಣೆ ನೀಡಲಾಗಿದೆ.
ಸದ್ಯ ಶಿವರಾಮ ಕಾರಂತ ಬಡಾವಣೆ ನಿರ್ಮಾಣದ ಕಾಮಗಾರಿ ಕೇವಲ ಶೇ.10 ರಷ್ಟು ಮಾತ್ರವೇ ಆಗಿದೆ. ರಸ್ತೆ, ಚರಂಡಿ, ನೀರಿನ ಪೂರೈಕೆ ಇತ್ಯಾದಿ ಮುಗಿದಿದ್ದು, ಒಂಬತ್ತರಲ್ಲಿ ಒಬ್ಬ ಗುತ್ತಿಗೆದಾರರೂ ಬಿಲ್ ಸಲ್ಲಿಕೆ ಮಾಡಿಲ್ಲ. ಇನ್ನು ಬಡಾವಣೆಯ ಮೊದಲ ಹಂತದ ಅವಧಿಯು ಜುಲೈ 2025ಕ್ಕೆ ಮುಕ್ತಾಯಗೊಳ್ಳಲ್ಲಿದೆ. ಇನ್ನೂ ಎರಡನೇ ಹಂತಕ್ಕೆ ಯಾವುದೇ ಟೆಂಡರ್ ಅನ್ನು ಕೂಡ ಕರೆದಿಲ್ಲ ಸಮಿತಿಯು ಎಂದು ನಡಾವಳಿಯಲ್ಲಿ ತಿಳಿಸಿದೆ. ಹೀಗಾಗಿ ಬಡಾವಣೆಯ ಕರಡು ನಕ್ಷೆಯ ಆಧಾರದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಬೇಡಿ ಎಂದು ಸಮಿತಿ ಎಚ್ಚರಿಕೆಯನ್ನೂ ನೀಡಿದೆ.
ಶಿವರಾಮ ಕಾರಂತ ಬಡಾವಣೆಯ ನಿವೇಶನಗಳು ಭೌತಿಕವಾಗಿ ನಿರ್ಮಾಣವಾಗಿಲ್ಲ. ಇನ್ನೂ ನಿವೇಶನಗಳಿಗೆ ಸಂಖ್ಯೆಯನ್ನೂ ನೀಡಿಲ್ಲ. ಚೆಕ್ಕುಬಂದಿ ಇಲ್ಲದೆ ಕಾಗದದ ಮೇಲಿನ ಆಧಾರದಲ್ಲಿ ನಿವೇಶನ ಹಂಚಿಕೆ ಮಾಡಬಾರದು ಎಂದು ಸಮಿತಿಯು ಹೇಳಿದೆ. ಏಳು ಪುಟಗಳ ನಡಾವಳಿಯನ್ನು ಬಿಡಿಎ ಅಧಿಕಾರಿಗಳಿಗೆ ಕಳುಹಿಸಲಾಗಿದ್ದು, ಬಿಡಿಎಯ ನಿವೇಶನ ಹಂಚಿಕೆಯನ್ನು ರದ್ದು ಮಾಡಿ ಅದರ ವರದಿಯನ್ನು ಸಲ್ಲಿಸಬೇಕು ಎಂದು ಸೂಚನೆ ನೀಡಲಾಗಿದೆ.