ಬೆಂಗಳೂರು, ಜು. 29 : ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಸಮಯ ಮತ್ತೆ ಬಂದಿದೆ. ಕೆಲವರು ಐಟಿಆರ್ ಅನ್ನು ತಾವೇ ಸಲ್ಲಿಕೆ ಮಾಡುತ್ತಾರೆ. ಇಂಥಹವರಿಗೆ ತಿಳಿಯದೇ ಇರುವ ಕೆಲ ವಿಚಾರಗಳ ಬಗ್ಗೆ ಸಂಪೂರ್ಣವಾಗಿ ಈ ಲೇಖನದಲ್ಲಿ ತಿಳಿಸಿಕೊಡಲಾಗುತ್ತಿದೆ. ಅಲ್ಲದೇ, ಮೊದಲ ಬಾರಿಗೆ ಐಟಿಆರ್ ಸಲ್ಲಿಕೆ ಮಾಡುವವರಿಗೂ ಇದು ಸಹಕಾರಿಯಾಗಿರಲಿದೆ. ಭಾರತದಲ್ಲಿ ಐಟಿಆರ್ ಅನ್ನು ಸಲ್ಲಿಸಲು ಸಂಬಳದ ವರ್ಗದ ಜನರು ಸಾಮಾನ್ಯವಾಗಿ ಫಾರ್ಮ್ 16 ಅನ್ನು ಬಳಸುತ್ತಾರೆ.
ಆದರೆ, ಹೂಡಿಕೆ ಮಾಡುವವರು ಸಲ್ಲಿಸುವ ಫಾರ್ಮ್ ಬೇರೆಯೇ ಇರುತ್ತದೆ. ಅಷ್ಟೇ ಅಲ್ಲದೇ, ಉದ್ಯಮಿಗಳ ಫಾರ್ಮ್ ಕೂಡ ಬೇರೆ ಇರುತ್ತದೆ. ಸಂಬಳ ಪಡೆಯುವವರು ಫಾರ್ಮ್ ಒಂದನ್ನು ಬಳಸಿದರೆ, ಹೂಡಿಕೆ ಮಾಡುವವರು ಫಾರ್ಮ್ ಎರಡನ್ನು ಬಳಸಬೇಕು. ಇನ್ನು ಉದ್ಯಮಿಗಳು ತಮ್ಮ ಬಿಸಿನೆಸ್ ನಿಂದ ಬರುವ ಲಾಭದ ವಿಚಾರಕ್ಕೆ ಫಾರ್ಮ್ ಮೂರನ್ನು ಬಳಸಿ ಐಟಿಆರ್ ಫೈಲ್ ಮಾಡಬೇಕು. ಇನ್ನು ಐಟಿಆರ್ ಅನ್ನು ಫೈಲ್ ಮಾಡುವ ಮುನ್ನ ನಿಮ್ಮ ಆದಾಯದ ಲೆಕ್ಕ ಹಾಕಿ.
ನಿಮಗೆ ವೇತನ ಒಂದೇ ಆದಾಯವೇ ಅಥವಾ ಬೇರೆ ಬೇರೆ ಆದಾಯವೂ ಇದೆಯೇ ಎಂಬ ಬಗ್ಗೆ ಖಚಿತ ಮಾಹಿತಿ ಇರಲಿ. ಐಟಿಆರ್ ಫೈಲ್ ಮಾಡುವ ಮುನ್ನ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಫಾರ್ಮ್ 16, 26AS, ಎಐಎಸ್/ಟಿಐಎಸ್, ಬ್ಯಾಂಕ್ ಸ್ಟೇಟ್ ಮೆಂಟ್, ಹೂಡಿಕೆಯ ದಾಖಲೆಗಳು, ಬಾಡಿಗೆಯ ರಶೀದಿ ಹೀಗೆ ಆದಾಯದ ಪ್ರತಿಯೊಂದು ದಾಖಲೆಗಳನ್ನು ಜೊತೆಗಿಟ್ಟುಕೊಳ್ಳಿ. ನಿಮಗೆ ಅನ್ವಯವಾಗುವ ಫಾರ್ಮ್ ಅನ್ನು ಭರ್ತಿ ಮಾಡಿ.
ಐಟಿ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ ರೂ.ವರೆಗಿನ ಕಡಿತ ಮಾಡಬಹುದು. ಲೈಫ್ ಇನ್ಶೂರೆನ್ಸ್ ಪ್ರೀಮಿಯಂ, ಪ್ರಾವಿಡೆಂಟ್ ಫಂಡ್, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ, ವಸತಿ ಸಾಲದ ಪ್ರಿನ್ಸಿಪಾಲ್ ಇತ್ಯಾದಿಗಳಿಗೆ ಮಾಡಿದ ಪಾವತಿಗಳಿಂದಾಗಿ 1,50,000 ರೂ. ಉಳಿತಾಯ ಮಾಡಬಹುದು. ಇದರಿಂದ ಐಟಿಆರ್ ಫೈಲಿಂಗ್ ಮಾಡಿ ರಿಯಾಯಿತಿ ಹಾಗೂ ವಿನಾಯಿತಿಯನ್ನು ಕೂಡ ಪಡೆಯಬಹುದು. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಮನೆಯಲ್ಲಿ ನೀವೇ ಐಟಿಆರ್ ಅನ್ನು ಫೈಲ್ ಮಾಡಬಹುದು.