ಹುಬ್ಬಳ್ಳಿ: ಶ್ರೀ ಸಿದ್ದಾರೂಢ ಸ್ವಾಮಿ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಅಭಿವೃದ್ಧಿಪಡಿಸಿದ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್‌ನ ಅಧಿಕೃತ ಉದ್ಘಾಟನೆಯನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಮಾಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 12 ರಂದು ಹುಬ್ಬಳ್ಳಿ-ಧಾರವಾಡಕ್ಕೆ ಭೇಟಿ ನೀಡಿದಾಗಲೇ ಹುಬ್ಬಳ್ಳಿಯಲ್ಲಿರುವ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್‌ನ್ನು ಅಧಿಕೃತವಾಗಿ ಲೋಕಾರ್ಪಣೆಗೊಳಿಸಲಿದ್ದಾರೆ.ಪ್ರಧಾನಿ ಮೋದಿ ಅವರು ಮಾರ್ಚ್ 12 ರಂದು ಹುಬ್ಬಳ್ಳಿ-ಧಾರವಾಡಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಪ್ಲಾಟ್‌ಫಾರ್ಮ್’ನ್ನು ಲೋಕಾರ್ಪಣೆಗೊಳಿಸಲಿದ್ದಾರೆಂದು ಹೇಳಲಾಗುತ್ತಿದೆ.ಈ ವಾಣಿಜ್ಯ ನಗರಿ ರೈಲು ನಿಲ್ದಾಣ ವಿಶ್ವದಲ್ಲೇ ಅತಿ ಉದ್ದದ ರೈಲ್ವೆ ಪ್ಲಾಟ್ ಫಾರ್ಮ್ ಹೊಂದಿರುವ ಹೆಗ್ಗಳಿಕೆಗೆ ಭಾಜನವಾಗಲಿದೆ
ಐಐಟಿ-ಧಾರವಾಡದ ಶಾಶ್ವತ ಕ್ಯಾಂಪಸ್ ಉದ್ಘಾಟನೆಗೆ ಮೋದಿ ಅವರು ಅವಳಿ ನಗರಕ್ಕೆ ಭೇಟಿ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿಯೇ ವಿಶ್ವದ ಅತಿ ಉದ್ದದ ಹುಬ್ಬಳ್ಳಿ ರೈಲ್ವೆ ಪ್ಲಾಟ್ಫಾರಂನ್ನೂ ಲೋಕಾರ್ಪಣೆಗೊಳಿಸಲಿದ್ದಾರೆಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಹೇಳಿದ್ದಾರೆ.ಶ್ರೀ ಸಿದ್ದಾರೂಢ ಸ್ವಾಮಿ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಇದಕ್ಕೂ ಮುನ್ನ 1ನೇ ಪ್ಲಾಟ್ಫಾರಂ 550 ಮೀಟರ್ ಉದ್ದ ಹೊಂದಿತ್ತು. ಇದೀಗ ಈ ಪ್ಲಾಟ್ಫಾರಂನ್ನು ವಿಸ್ತರಿಸಿ 10 ಮೀಟರ್ ಅಗಲದೊಂದಿಗೆ 1,505 ಮೀಟರ್ಗೆ ವಿಸ್ತರಣೆ ಮಾಡಲಾಗಿದೆ. ಹುಬ್ಬಳ್ಳಿಯಲ್ಲಿ ಈ ಹೊಸ ರೈಲು ಪ್ಲಾಟ್ಫಾರಂ ಲೋಕಾರ್ಪಣೆ ಮಾಡಿದ ನಂತರ 1,366 ಮೀಟರ್ ಉದ್ದದ ಗೋರಖ್‌ಪುರ ರೈಲು ನಿಲ್ದಾಣವನ್ನು ಹಿಂದಿಕ್ಕಲಿದೆ.
ವಿಶ್ವದ ಅತಿ ಉದ್ದದ ಫಾರಂ ಎರಡು ವರ್ಷಗಳ ಹಿಂದೆ ಉದ್ಘಾಟನೆಗೆ ಸಿದ್ಧವಾಗಿತ್ತು. ಕಳೆದ ಅಕ್ಟೋಬರ್‌ನಲ್ಲಿ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವಳಿ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ಲಾಟ್ ಉದ್ಘಾಟನೆ ಮಾಡಲಿದ್ದಾರೆಂದು ಹೇಳಲಾಗುತ್ತಿತ್ತು. ಆದರೆ, ನೈಋತ್ಯ ರೈಲ್ವೆ ಅಧಿಕಾರಿಗಳು ಪ್ರಧಾನಿಯವರು ಲೋಕಾರ್ಪಣೆಗೊಳಿಸಬೇಕೆಂದು ಬಯಸಿದ್ದರು. ಮೋದಿಯವರಿಗೆ ಸಮಯ ಸಿಗದ ಕಾರಣ ಉದ್ಘಾಟನೆಯನ್ನು ಮುಂದೂಡುತ್ತಲೇ ಬರಲಾಗಿತ್ತು. ಇದೀಗ ಉದ್ಘಾಟನೆಗೆ ಕೊನೆಗೂ ಸಮಯ ಕೂಡಿ ಬಂದಿದೆ.